
ಬಾಗಲಕೋಟೆ: ಹುಬ್ಬಳ್ಳಿಯಿಂದ ಇಳಕಲ್ಲಗೆ ರಾತ್ರಿ ಸಂಚರಿಸುತ್ತಿದ್ದ ಗುಳೇದಗುಡ್ಡ ಡಿಪೋದ ಕೊನೆಯ ಬಸ್ ಸಂಚಾರ ಬಂದ್ ಮಾಡಿರುವುದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಹಲವು ವರ್ಷಗಳಿಂದ ಸಂಚರಿಸುತ್ತಿದ್ದ ಹುಬ್ಬಳ್ಳಿ-ಇಳಕಲ್ಲ ಬಸ್ ಎರಡು ತಿಂಗಳಿಂದ ಕಾರಣವಿಲ್ಲದೇ ಬಂದ್ ಮಾಡಿದ್ದಾರೆ. ಇದರಿಂದ ಕೆಲಸ ಮುಗಿಸಿಕೊಂಡು ತಡವಾಗಿ ಬರುತ್ತಿದ್ದ ಹಲವು ಪ್ರಯಾಣಿಕರಿಗೆ ತೊಂದರೆಯಾಗಿದೆ. ಬಸ್ ಪುನಃ ಆರಂಭವಾಗುವ ಲಕ್ಷಣಗಳು ಕಾಣುತ್ತಿಲ್ಲ. ಕೇಳಿದರೆ ಯಾರೊಬ್ಬರೂ ಸರಿಯಾದ ಉತ್ತರ ಕೊಡುತ್ತಿಲ್ಲ ಎಂದು ಪ್ರಯಾಣಿಕರು ಅಳಲು ತೋಡಿಕೊಂಡಿದ್ದಾರೆ.
ಗುಳೇದಗುಡ್ಡ ಡಿಪೋದಿಂದ ಹೊರಡುವ ಬಸ್ ಮಧ್ಯಾಹ್ನ 2 ಗಂಟೆಗೆ ಹುಬ್ಬಳ್ಳಿಗೆ ತಲುಪಿ ರಾತ್ರಿ 8 ಗಂಟೆಗೆ ಹುಬ್ಬಳ್ಳಿಯಿಂದ ರಾತ್ರಿ 11.30ಕ್ಕೆ ಗುಳೇದಗುಡ್ಡಕ್ಕೆ ತಲುಪಿ, ಮುಂದೆ ಇಳಕಲ್ ಗೆ ತೆರಳುತ್ತಿತ್ತು. ಹುಬ್ಬಳ್ಳಿ ಮಾರ್ಗದ ಈ ಬಸ್ ನಿಂದ ಇಳಕಲ್ಲ ನಗರದಿಂದ ಬಾದಾಮಿ ಮಾರ್ಗದವರಿಗೆ ಸಂಚರಿಸುತ್ತಿದ್ದ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಿತ್ತು. ಅದರಲ್ಲೂ ಇಳಕಲ್ಲ, ಗುಳೇದಗುಡ್ಡ ಪಟ್ಟಣಗಳ ವ್ಯಾಪಾರಸ್ಥರಿಗೆ ರಾತ್ರಿ ಸಮಯದಲ್ಲಿ ಬರಲು ಸಹಾಯಕವಾಗಿತ್ತು. ಆದರೆ, ಬಸ್ ಬಂದ್ ಮಾಡಿದ್ದರ ಪರಿಣಾಮ ವ್ಯಾಪಾರಸ್ಥರು, ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.
ಬಸ್ ಬಂದ್ ಮಾಡಿದ್ದರಿಂದ ಹುಬ್ಬಳ್ಳಿ ಘಟಕದಿಂದ ಬಸ್ ಓಡಿಸಲು ಆರಂಭಿಸಲಾಯಿತು. ಆದರೆ, ಇಳಕಲ್ಲ ಬಸ್ ನಿಲ್ದಾಣದಲ್ಲಿ ಬೆಳಗ್ಗೆ ಇಳಕಲ್ಲದಿಂದ ವಾಪಸ್ ತೆರಳಲು ಸಮಯ ನೀಡದ ಕಾರಣ ಆ ಬಸ್ ಸಹ ಸ್ಥಗಿತಗೊಳಿಸಲಾಗಿದೆ. ಕೂಡಲೇ ಅಧಿಕಾರಿಗಳು ಹುಬ್ಬಳ್ಳಿಯಿಂದ ರಾತ್ರಿ 8 ಗಂಟೆ ಬರುತ್ತಿದ್ದ ಬಸ್ ಪುನಃ ಆರಂಭಿಸಿ, ಪ್ರಯಾಣಿಕರಿಗೆ ಅನುಕೂಲ ಮಾಡಬೇಕೆಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
ಈ ಬಗ್ಗೆ ಸಾರಿಗೆ ಇಲಾಖೆ ಜಿಲ್ಲಾ ಅಧಿಕಾರಿಗಳನ್ನು ದೂರವಾಣಿ ಮೂಲಕ ಕೇಳಿದಾಗ, ಹುಬ್ಬಳ್ಳಿ ಮಾರ್ಗದ ಬಸ್ ಬಂದ್ ಆಗಿರುವ ಬಗ್ಗೆ ಜಿಟಿಒ ಅವರಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆ: ಭ್ರೂಣಲಿಂಗ ಪತ್ತೆ, ಗರ್ಭಿಣಿ ಸಾವು ಪ್ರಕರಣ, ದೆಹಲಿ ವಿಶೇಷ ಅಧಿಕಾರಿಗಳ ತಂಡದಿಂದ ದಾಳಿ
ಗುಳೇದಗುಡ್ಡದಿಂದ ಹುಬ್ಬಳ್ಳಿಗೆ ರಾತ್ರಿ ಸಂಚರಿಸುತ್ತಿದ್ದ ಬಸ್ ನಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಿತ್ತು. ಆದರೆ, ಅದನ್ನು ಬಂದ್ ಮಾಡಿದ್ದು ಸರಿಯಲ್ಲ. ಇದರಿಂದ ವ್ಯಾಪಾರಸ್ಥರಿಗೆ ತೊಂದರೆಯಾಗಿದ್ದು, ಕೂಡಲೇ ಈ ರೂಟ್ ಬಸ್ ಆರಂಭಿಸಬೇಕು ಎಂದು ಗುಳೇದಗುಡ್ಡ ನಗರ ಹಿತರಕ್ಷಣಾ ಸಮಿತಿಯ ಕಾರ್ಯದರ್ಶಿ ಅಶೋಕ ಹೆಗಡೆ ಒತ್ತಾಯಿಸಿದ್ದಾರೆ.
ಹುಬ್ಬಳ್ಳಿಯಿಂದ ರಾತ್ರಿ ಬರುತ್ತಿದ್ದ ಬಸ್ ನಿಂದ ವ್ಯಾಪಾರಸ್ಥರಿಗೆ, ದೂರು ಊರುಗಳಿಗೆ ತೆರಳುತ್ತಿದ್ದ ಪ್ರಯಾಣಿಕರಿಗೆ ಅನುಕೂಲವಾಗಿತ್ತು. ಅದನ್ನು ಬಂದ್ ಮಾಡಿದ್ದರಿಂದ ವ್ಯಾಪಾರಸ್ಪರಿಗೆ ತೊಂದರೆಯಾಗಿದ್ದು, ಅಧಿಕಾರಿಗಳು ಪುನಃ ಹುಬ್ಬಳ್ಳಿಯಿಂದ ರಾತ್ರಿ 8 ಗಂಟೆಗೆ ಬಸ್ ಆರಂಭಿಸಬೇಕು ಪುರಸಭೆ ಮಾಜಿ ಉಪಾಧ್ಯಕ್ಷರಾದ ಶ್ರೀಕಾಂತ ಹುನಗುಂದ ಹೇಳುತ್ತಾರೆ.
ಇದನ್ನೂ ಓದಿ: 100 ವರ್ಷದಿಂದ ಸಿಗದ ಮನೆ ಅಡಿಸ್ಥಳದ ಹಕ್ಕು ಪತ್ರ: 16 ಕುಟುಂಬ, ಮೂರು ತಲೆಮಾರಿನ ಹೋರಾಟ