Kodagu: ಕಾಡು ದಾಟಿ ರಸ್ತೆಗೆ ಬರುವುದನ್ನು ಪತ್ತೆಹಚ್ಚಲು ರೆಡಿಯಾಯ್ತು ಆನೆ ಕ್ರಾಸಿಂಗ್ ಸಿಗ್ನಲ್

By Suvarna News  |  First Published Feb 6, 2023, 9:07 PM IST

ಕೊಡಗು ಅರಣ್ಯ ಇಲಾಖೆ ಆನೆ ಕ್ರಾಸಿಂಗ್ ಸಿಗ್ನಲ್ ಅಳವಡಿಸುವ ಮೂಲಕ ಆನೆ ದಾಳಿಗಳಿಂದ ರೈತರನ್ನು ಕಾಪಾಡಲು ಅತ್ಯಾಧುನಿಕ ಆನೆ ಕ್ರಾಸಿಂಗ್ ಸಿಗ್ನಲ್ ಅಳವಡಿಸಿದೆ.


ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣನ್ಯೂಸ್ 

ಕೊಡಗು (ಫೆ.6):  ಆನೆಗಳು ರೋಡ್ ಕ್ರಾಸ್ ಮಾಡುವುದಕ್ಕೆ ಸಿಗ್ನಲ್ ಮಾಡಲಾಗಿದೆ. ಇದು ಅಚ್ಚರಿ ಎನಿಸಿದರು ಸತ್ಯ. ಹಿಂದಿನಿಂದ ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿರುವ ವನ್ಯಜೀವ ಮತ್ತು ಮಾನವ ಸಂಘರ್ಷ ವರ್ಷಗಳು ಕಳೆದಂತೆ ಇನ್ನಷ್ಟು ತೀವ್ರಗೊಳ್ಳುತ್ತಲೇ ಇದೆ. ಅದರಲ್ಲೂ ಕಾಡಾನೆಗಳ ದಾಳಿಯಿಂದ ಜಿಲ್ಲೆಯಲ್ಲಿ ಹಲವು ಜನರು ಪ್ರಾಣ ಕಳೆದುಕೊಂಡಿದ್ದರೆ, ಸಾಕಷ್ಟು ಜನರು ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ. ಆನೆ ಮಾನವ ಸಂಘರ್ಷ ತಪ್ಪಿಸಲು ಆನೆ ಕಂದಕ ತೆಗೆದಿದ್ದ ಅರಣ್ಯ ಇಲಾಖೆ ಬಳಿಕ ಸೋಲಾರ್ ಫೆನ್ಸ್ ಕೂಡ ಮಾಡಿತ್ತು. ಅವುಗಳು ಅಷ್ಟೊಂದು ಫಲ ನೀಡದ ಹಿನ್ನೆಲೆಯಲ್ಲಿ ರೈಲ್ವೇ ಬ್ಯಾರಿಕೇಡ್ ಅನ್ನು ನಿರ್ಮಿಸಿತ್ತು. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಅರಣ್ಯ ಇಲಾಖೆ ಆನೆ ಕ್ರಾಸಿಂಗ್ ಸಿಗ್ನಲ್ ಅಳವಡಿಸುವ ಮೂಲಕ ಆನೆ ದಾಳಿಗಳಿಂದ ರೈತರನ್ನು ಕಾಪಾಡಲು ಅತ್ಯಾಧುನಿಕ ಆನೆ ಕ್ರಾಸಿಂಗ್ ಸಿಗ್ನಲ್ ಅಳವಡಿಸಿದೆ.

Tap to resize

Latest Videos

undefined

ಕೊಡಗು ಜಿಲ್ಲೆಯಲ್ಲಿ ಅರಣ್ಯಗಳಿಂದ ಕಾಡಾನೆಗಳು ಹೊರ ಬಂದು ರೈತರ ಕಾಫಿತೋಟ, ಹೊಲಗದ್ದೆಗಳಿಗೆ ನುಗ್ಗುತ್ತಿವೆ. ಆನೆಗಳು ಕಾಡಿನಿಂದ ಹೊರ ಬರುವ ಜಾಗಗಳಲ್ಲಿ ಆನೆ ಕ್ರಾಸಿಂಗ್ ಸಿಗ್ನಲ್ ಅಳವಡಿಸಿರುವುದರಿಂದ ಕಾಡು ಬಿಟ್ಟು ರಸ್ತೆಗೆ ಬರುತ್ತಿದ್ದಂತೆ ಅರ್ಧ ಕಿಲೋಮೀಟರ್ ದೂರದಲ್ಲೇ ಆನೆ ಚಿತ್ರವಿರುವ ಸಿಗ್ನಲ್ ಬೆಳಗುತ್ತದೆ. ಆ ಮೂಲಕ ಈ ರಸ್ತೆಯಲ್ಲಿ ಆನೆ ದಾಟುತ್ತಿದೆ ಎನ್ನುವ ಸಂದೇಶವನ್ನು ಜನರಿಗೆ ನೀಡುತ್ತದೆ. ಇದರಿಂದ ಆ ಮಾರ್ಗದಲ್ಲಿ ಜನರು ನಡೆದುಕೊಂಡು ಹೋಗುವುದಾಗಲಿ ಅಥವಾ ವಾಹನಗಳಲ್ಲಿ ಓಡಾಡುವುದನ್ನಾಗಲಿ ನಿಲ್ಲಿಸಿ, ಆನೆ ಅಲ್ಲಿಂದ ಹೋದ ಮೇಲೆ ಆ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾರೆ.

ಇದು ಆನೆಗಳು ಹಠಾತ್ತಾನೆ ಅಟ್ಯಾಕ್ ಮಾಡುವುದರಿಂದ ಜನರು ತಪ್ಪಿಸಿಕೊಳ್ಳಲು ಅನುಕೂಲವಾಗಿದೆ ಎನ್ನುತ್ತಿದ್ದಾರೆ ಮೆಟ್ಟಿನಹಳ್ಳ ಗ್ರಾಮದ ನಿವಾಸಿ ಹಸೈನ್. ಅರೋಸಾ ಇಂಡಿಯಾ ಎಂಬ ಸಂಸ್ಥೆಯ ದಿಲೀಪ್ ಎಂಬುವವರು 20 ಸಾವಿರ ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ಈ ಎಲಿಫೆಂಟ್ ಕ್ರಾಸಿಂಗ್ ಸಿಗ್ನಲ್ ಡಿಟೋನೇಟರ್ ಅನ್ನು ಅರಣ್ಯ ಇಲಾಖೆ ಸದ್ಯ ಕೊಡಗಿನ ಆರು ಭಾಗಗಳಲ್ಲಿ ಆನೆಗಳು ಕಾಡಿನಿಂದ ಹೊರಬಂದು ರಸ್ತೆ ದಾಟುವ ಸ್ಥಳಗಳಲ್ಲಿ ಅಳವಡಿಸಿದೆ. ಕಾಡು ದಾಟುವ ಸ್ಥಳದ ಒಂದು ಭಾಗದಲ್ಲಿ ಟ್ರಾನ್ಸ್‍ಮೀಟರ್ ಅಳವಡಿಸಿದ್ದರೆ, ಮತ್ತೊಂದು ಭಾಗದಲ್ಲಿ ಲೇಸರ್ ಲೈಟ್ ಅಳವಡಿಸಲಾಗಿದೆ. ಅಲ್ಲದೆ ಟ್ರಾನ್ಸ್‍ಮೀಟರ್‍ನಲ್ಲಿ ಸಿಮ್ ಕಾರ್ಡ್ ಅಳವಡಿಸಲಾಗಿದೆ.

ಹಾಸನದಲ್ಲಿ ನಿಲ್ಲದ ಕಾಡಾನೆಗಳ ಉಪಟಳ: ಕಾಫಿ ತೋಟದಲ್ಲಿ ಗಜಪಡೆ ಪರೇಡ್..!

ಆನೆ ಕಾಡುದಾಟುವ ಸ್ಥಳದಿಂದ ಅರ್ಧ ಕಿಲೋಮೀಟರ್ ದೂರದಲ್ಲಿಯೇ ಎಲಿಫೆಂಡ್ ಕ್ರಾಸಿಂಗ್ ಸಿಗ್ನಲ್ ಅಳವಡಿಸಲಾಗಿದೆ. ಸೋಲಾರ್ ಲೈಟ್ ಮತ್ತು ಟ್ರಾನ್ಸ್‍ಮೀಟರ್ ನಡುವೆ ಆನೆ ದಾಟುತ್ತಿದ್ದಂತೆ ಅರ್ಧ ಕಿಲೋಮೀಟರ್ ದೂರದಲ್ಲಿರುವ ಸಿಗ್ನಲ್‍ಗೆ ಸಿಮ್‍ಕಾರ್ಡ್‍ನಿಂದ ತಕ್ಷಣವೇ ಮೆಸೇಜ್ ರವಾನೆಯಾಗುತ್ತದೆ. ಹೀಗಾಗಿ ಸಿಗ್ನಲ್ ಬೆಳಗಲು ಶುರುಮಾಡುತ್ತದೆ. ಇದರಿಂದ ಆನೆಗಳು ಆ ರಸ್ತೆಯಲ್ಲಿ ಓಡಾಡುತ್ತಿರುವ ಸಂದರ್ಭದಲ್ಲಿ ಜನರು ಹೋಗದಂತೆ ಎಚ್ಚರ ವಹಿಸಲು ಅನುಕೂಲವಾಗುತ್ತದೆ. ಆ ಮೂಲಕ ಸಂಭವಿಸಬಹುದಾದ ಆನೆ ದಾಳಿಯನ್ನು ತಪ್ಪಿಸಲು ಅನುಕೂಲವಾಗಿದೆ. ಇಷ್ಟೇ ಅಲ್ಲ, ಆನೆ ಕಾಡುಬಿಟ್ಟು ರಸ್ತೆ ದಾಟುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮೊಬೈಲ್‍ಗೂ ಕೂಡ ಮೆಸೇಜ್ ರವಾನೆಯಾಗುತ್ತದೆ. ಇದರಿಂದ ರೈತರ ತೋಟ, ಹೊಲಗದ್ದೆಗಳಿಗೆ ಆನೆಗಳು ಹೋಗಿ ನಷ್ಟ ಮಾಡದಂತೆ ತಕ್ಷಣವೇ ಕಾರ್ಯಾಚರಣೆ ಮಾಡಿ ಆನೆಗಳನ್ನು ಕಾಡಿಗೆ ಅಟ್ಟಲು ಅನುಕೂಲವಾಗಿದೆ ಎನ್ನುತ್ತಿದ್ದಾರೆ ಆನೆಕಾಡುವ ಉಪವಲಯ ಅರಣ್ಯ ಅಧಿಕಾರಿ ದೇವಯ್ಯ.

ಕೊನೆಗೂ ಕಾಡಾನೆ ತಡೆಗೆ ಚಾಮರಾಜನಗರದಲ್ಲಿ ಟಾಸ್ಕ್ ಫೋರ್ಸ್, ನಿಟ್ಟುಸಿರು ಬಿಟ್ಟ ಕಾಡಾಂಚಿನ ರೈತರು

ಇದಕ್ಕೂ ಮೊದಲು ಕಾಡಿನಿಂದ ಆನೆಗಳು ಹೊರಗೆ ಬರುವ ಜಾಗದಲ್ಲಿ ಮರಗಳ ಮೇಲೆ ಮಾಡಿರುವ ಅಟ್ಟಣಿಗೆಗಳ ಮೇಲೆ ಕುಳಿತು ಅರಣ್ಯ ಇಲಾಖೆ ಸಿಬ್ಬಂದಿ ಕಾಯಬೇಕಾಗಿತ್ತು. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ದಾಳಿಯನ್ನು ತಪ್ಪಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದ ಅರಣ್ಯ ಇಲಾಖೆ ಅವುಗಳು ಯಾವುವೂ ಪೂರ್ಣಪ್ರಮಾಣದ ಫಲ ನೀಡದ ಹಿನ್ನೆಲೆ ಇದೀಗ ಆನೆ ಕ್ರಾಸಿಂಗ್ ಸಿಗ್ನಲ್ ಘಟಕ ಸ್ಥಾಪನೆ ಮಾಡಲಾಗಿದ್ದು, ಒಂದಷ್ಟು ಫಲ ನೀಡಿರುವುದಂತು ಸತ್ಯ. ಈ ಪ್ರಯೋಗ ಸಫಲವಾದಲ್ಲಿ ಜಿಲ್ಲೆಯ ಎಲ್ಲೆಡೆ ಈ ಯೋಜನೆಯನ್ನು ಜಾರಿಗೆ ತರಲು ಅರಣ್ಯ ಇಲಾಖೆ ಮುಂದಾಗಲಿದೆ.

click me!