* ಕಾರವಾರದಲ್ಲಿ ಚಾರಣ ಪ್ರಿಯರಿಗೆ ಅತ್ಯಂತ ಫೇವರೇಟ್ ಸ್ಪಾಟ್ ಗುಡ್ಡಳ್ಳಿ
* ಮೂಲಭೂತ ಸೌಕರ್ಯ ಕೂಡಾ ಹೊಂದಿರದಂತಹ ಗುಡ್ಡದ ಮೇಲಿರುವ ಕುಗ್ರಾಮ
* ಸಮಸ್ಯೆಯ ನಡುವೆಯೂ ಪ್ರವಾಸಿಗರ ಆಕರ್ಷೀಯ ತಾಣವಾಗಿರುವ ಈ ಪ್ರದೇಶ
* ಈ ಪ್ರದೇಶ ಮತ್ತಷ್ಟು ಖ್ಯಾತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಕಲಾವಿದ ವಿಶ್ರಾಮ್ ಬಾಬು ಗೌಡ
ಭರತ್‌ರಾಜ್ ಕಲ್ಲಡ್ಕ, ಕಾರವಾರ
ಕಾರವಾರ(ಏ.03): ಅದು ಮೂಲಭೂತ ಸೌಕರ್ಯ ಕೂಡಾ ಹೊಂದಿರದಂತಹ ಗುಡ್ಡದ ಮೇಲಿರುವ ಕುಗ್ರಾಮ. ಸರಕಾರದಿಂದ ವಿದ್ಯುತ್ ಸಂಪರ್ಕವೇನೋ ನೀಡಿದ್ರೂ, ಅಲ್ಲಿಗೆ ಸಾಗೋಕೆ ಉತ್ತಮವಾದ ರಸ್ತೆಯೇ ಇಲ್ಲ. ಈ ಸಮಸ್ಯೆಯ ನಡುವೆಯೂ ಪ್ರವಾಸಿಗರ ಆಕರ್ಷೀಯ ತಾಣವಾಗಿರುವ ಈ ಪ್ರದೇಶ ಮತ್ತಷ್ಟು ಖ್ಯಾತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಈ ಕಲಾವಿದ. ಬಿದ್ದಂತಹ ಮರಗಳು ಹಾಗೂ ಅವುಗಳ ಬೇರಿನಿಂದಲೇ ಹಲವು ವರ್ಷಗಳಿಂದ ಅತ್ಯದ್ಭುತ ಕಲಾಕೃತಿ ರೂಪಿಸುತ್ತಿರುವ ಈ ಕಲಾವಿದ ತನ್ನ ಕಲೆಯನ್ನು ಇನ್ನಷ್ಟು ಜನರಿಗೆ ತಲುವಂತೆ ಮಾಡುವುದಲ್ಲದೇ ಕಲೆಯನ್ನು ಬೆಳೆಸಿ ಉಳಿಸಲು ತನ್ನದೇ ಕೊಡುಗೆ ನೀಡುತ್ತಿದ್ದಾರೆ.
undefined
ಬಳಸಿದ ವಸ್ತು ದೇವರಿಗೆ ಅರ್ಪಿಸುತ್ತಾರೆ.. ಒಂದು ಕಡೆಯಿಂದ ಇನ್ನೊಂದು ಕಡೆ.. ಕಾರವಾರದ ಆಚರಣೆ!
ಕಾರವಾರದಲ್ಲಿ ಚಾರಣ ಪ್ರಿಯರಿಗೆ ಅತ್ಯಂತ ಫೇವರೇಟ್ ಸ್ಪಾಟ್ ಅಂದ್ರೆ ಅದು ಗುಡ್ಡಳ್ಳಿ. ಕಾರವಾರ ನಗರ ಹೊರಭಾಗದಿಂದ ನಡೆಯಲು ಪ್ರಾರಂಭಿಸಿ ಸುಮಾರು 10-15ಕಿ.ಮೀ. ಗುಡ್ಡದ ಮೇಲ್ಭಾಗದತ್ತ ಸಾಗಿದರೆ ಗುಡ್ಡಳ್ಳಿಯ ತುತ್ತತುದಿಯನ್ನು ತಲುಪಬಹುದು. ಕಾಡಿನ ಮಧ್ಯೆ ಕಡಿದಾದ ದಾರಿಯಲ್ಲಿ ಸಾಗಿ ಗುಡ್ಡಳ್ಳಿ ತುದಿ ಭಾಗದಲ್ಲಿರುವ ಬಂಡೆಗಳ ಮೇಲೆ ಹತ್ತಿ ನೋಡಿದರೆ ನಮಗೆ ಸ್ವರ್ಗ ಕಾಣೋದ್ರಲ್ಲಿ ಎರಡು ಮಾತಿಲ್ಲ. ಯಾಕಂದ್ರೆ, ಈ ತುತ್ತ ತುದಿಯಿಂದ ಕಿಲೋಮೀಟರ್‌ಗಟ್ಟಲೆ ದೂರದ ಸಮುದ್ರ ಭಾಗ, ಮಂಜು ಮುಸುಕಿದ ಸಹ್ಯಾದ್ರಿ ಬೆಟ್ಟ, ಹಚ್ಚಹಸುರಿನ ಕಾನನ, ಸಮುದ್ರಕ್ಕೆ ಸೇರುವ ಕಾಳಿ ನದಿ ಸೇರಿದಂತೆ ಪ್ರಕೃತಿಯ ನಯನ ಮನೋಹರ ದೃಶ್ಯಗಳನ್ನು ಕಾಣಬಹುದಾಗಿದೆ. ಇದೇ ಗುಡ್ಡದ ತಪ್ಪಲಿನಲ್ಲಿ ನೆಲೆಸಿದ್ದಾರೆ ಈ ಅದ್ಬುತ ಕಲಾವಿದ ವಿಶ್ರಾಮ್ ಬಾಬು ಗೌಡ. ಕಡುಬಡತನದ ಕಾರಣ ಶಾಲೆಗೆ ತೆರಳಲು ಅವಕಾಶ ದೊರಯದ್ದರಿಂದ ಇವರಿಗೆ ಓದಲು, ಬರೆಯಲು ಎರಡೂ ಗೊತ್ತಿಲ್ಲ. ಆದರೆ, ಹುಟ್ಟಿನಿಂದಲೂ ಇವರು ಕಲಿತಂತದ್ದು ಒಂದೇ ಕಲೆ ಅದೇ ಸುಂದರ ಕಲಾಕೃತಿಗಳ ನಿರ್ಮಾಣ.
ವಿಶ್ರಾಮ್ ಬಾಬು ಗೌಡ ಅವರ ಅಜ್ಜ ಹಾಗೂ ತಂದೆ ಕಲ್ಲಿನಲ್ಲಿ ಮೂರ್ತಿ ಕೆತ್ತುವಂತಹ ಶಿಲ್ಪಕಾರರಾಗಿದ್ರು. ಅದೇ ಕಲೆ ಇವರಿಗೆ ಬಳುವಳಿಯಾಗಿ ಬಂದಿದ್ದು, ಇವರು ಕಲ್ಲಿನ ಕಲಾಕೃತಿಗಳ ನಿರ್ಮಾಣ ಬಿಟ್ಟು ಮರದ ಕಲಾಕೃತಿಗಳ ನಿರ್ಮಾಣದಲ್ಲಿ ತನ್ನ ಬದುಕನ್ನು ತೊಡಗಿಸಿಕೊಂಡಿದ್ದಾರೆ. ಕೂಲಿ ಕೆಲಸ ಮಾಡಿಕೊಂಡು ತನ್ನ ಜೀವನ ಸಾಗಿಸುತ್ತಿರುವ ಕಲಾವಿದ ವಿಶ್ರಾಮ್ ಬಾಬು ಗೌಡ, ಕಳೆದ 30 ವರ್ಷಗಳಲ್ಲಿ ಸುಮಾರು 25 ಮರದ ಮೂರ್ತಿಗಳನ್ನು ತಯಾರಿಸಿದ್ದಾರೆ. ಗುಡ್ಡಳ್ಳಿಗೆ ಚಾರಣಕ್ಕೆ ಬರುವಂತಹ ಪ್ರವಾಸಿಗರಂತೂ ಇವುಗಳನ್ನು ನೋಡಿ ಆಶ್ವರ್ಯ ಪಡುತ್ತಾರಲ್ಲದೇ, ಎಲೆಮರೆ ಕಾಯಿಯಾಗಿರುವ ಈ ಕಲಾವಿದನ ಜತೆ ಸೆಲ್ಫಿ ತೆಗೆದುಕೊಂಡು ತೆರಳುತ್ತಾರೆ.
ಅಪಾಯದಲ್ಲಿ ಬ್ರಿಟಿಷರ ಕಾಲದ ಸೇತುವೆ: ಬಿರುಕು ಬಿಟ್ಟರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು!
ಅಂದಹಾಗೆ, ಗುಡ್ಡಳ್ಳಿಗೆ ಟ್ರಕ್ಕಿಂಗ್ ಹೋದವರು ಗುಡ್ಡ ಭಾಗದಿಂದ ಇಳಿಯುತ್ತಿದ್ದಂತೇ ವಿಶ್ರಾಮ್ ಬಾಬು ಗೌಡ ಅವರ ಕುಟುಂಬದ ಮನೆ ಸಿಗುತ್ತದೆ. ಇವರ ಮನೆಯ ಅಂಗಣ ಪ್ರವೇಶಿಸುತ್ತಿದ್ದಂತೇ ಮರದ ಗದೆ, ಹಾರ್ನ್‌ಬಿಲ್, ಹುಲಿ, ಹಕ್ಕಿ, ಮೊಸಳೆ, ಕಡವೆ ಮುಂತಾದ ಕಾಡು ಪ್ರಾಣಿ ಹಾಗೂ ಪಕ್ಷಿಗಳು ಪ್ರವಾಸಿಗರನ್ನು ಸ್ವಾಗತಿಸುತ್ತವೆ. ಇನ್ನು ಸ್ವಲ್ಪ ಮುಂದಕ್ಕೆ ಹೋದಂತೆ ಸಿನಿಮಾ ನಟ ಪುನೀತ್ ರಾಜ್ ಕುಮಾರ್, ಪೊಲೀಸರು, ಮದುಮಗಳು ಮುಂತಾದ ಅತ್ಯದ್ಭುತ ಕಲಾಕೃತಿಗಳು ಕೂಡಾ ಇಲ್ಲಿದ್ದು, ಜಿಂಕೆ ತಲೆ, ಖಡ್ಗ, ಕೋವಿಗಳನ್ನು ಕೂಡಾ ಇಲ್ಲಿ ಕಾಣಬಹುದಾಗಿದೆ.
ವಿಶೇಷವೆಂದ್ರೆ ಇವೆಲ್ಲವೂ ಮರದಲ್ಲೇ ಕೆತ್ತಲ್ಪಟ್ಟಿದ್ದು, ನೋಡುಗರ ಹುಬ್ಬೇರಿಸುವಂತೆ ಅತ್ಯಂತ ನಾಜೂಕು ಕೆತ್ತನೆಗಳನ್ನು ಕೂಡಾ ಮಾಡಲಾಗಿದೆ. ಇನ್ನೊಂದು ವಿಶೇಷವೆಂದ್ರೆ, ವಿಶ್ರಾಮ್ ಗೌಡ ಅವರು ತನ್ನ ಅಗಲಿದ ತಂದೆಯವರನ್ನು ಕೂಡಾ ಕಲಾಕೃತಿಯ ಮೂಲಕವೇ ಜೀವಂತವಿರಿಸಿದ್ದಾರೆ. ಅರಣ್ಯಾಧಿಕಾರಿಗಳ ಅನುಮತಿಯೊಂದಿಗೆ ಕಾಡಿನಲ್ಲಿ ಬಿದ್ದಂತಹ ಮರಗಳು ಹಾಗೂ ಅವುಗಳ ಬೇರುಗಳನ್ನು ಮನೆಗೆ ತೆಗೆದುಕೊಂಡು ಬಂದು ಅವುಗಳಿಗೆ ಸುಂದರ ರೂಪ ನೀಡುವ ಕಾರ್ಯ ಮಾಡುವ ಈ ಕಲಾವಿದ ಇದಕ್ಕೆ ತೆಗೆದುಕೊಳ್ಳುವ ಸಮಯ ಬರೋಬ್ಬರಿ 20-25ದಿನ. ಕೂಲಿ ಕೆಲಸದೊಂದಿಗೆ ತನ್ನ ಬಿಡುವಿನ ಸಮಯದಲ್ಲಿ ಇವುಗಳ ನಿರ್ಮಾಣಕ್ಕೆ ತೊಡಗುವ ವಿಶ್ರಾಮ್ ಗೌಡರಿಗೆ ತನ್ನ ಅಣ್ಣ ತಮ್ಮಂದಿರು ಸಾಥ್ ನೀಡುತ್ತಿದ್ದಾರೆ. ಹಲವು ವರ್ಷಗಳಿಂದ ಈ ಮೂರ್ತಿಗಳು ಇವರ ಮನೆಯ ಎದುರಲ್ಲೇ ನಿಲ್ಲಿಸಲ್ಪಟ್ಟಿದ್ದು, ಅವುಗಳನ್ನು ಜಾಗ್ರತೆಯಾಗಿ ನೋಡಿಕೊಳ್ಳುತ್ತಿದ್ದಾರೆ. ಸರಕಾರದಿಂದ ಸಹಾಯ ದೊರಕಿದಲ್ಲಿ ಇವುಗಳಿಗೆ ಶೆಡ್ ನಿರ್ಮಾಣ ಮಾಡಿ ಸಂರಕ್ಷಿಸುವ ಹಾಗೂ ಪ್ರವಾಸಿಗರಿಗೆ ಆಕರ್ಷಣೀಯ ಸ್ಥಾನ ಮಾಡುವ ಯೋಚನೆ ಹೊಂದಿದ್ದಾರೆ.
ಒಟ್ಟಿನಲ್ಲಿ ಗುಡ್ಡಳ್ಳಿಯೆಂಬ ಬೆಟ್ಟದ ಮೇಲೆ ಕಾಡಿನ ನಡುವೆ ಎಲೆಮರೆ ಕಾಯಿಯಂತಿರುವ ಕಲಾವಿದ ವಿಶ್ರಾಮ್ ಗೌಡ ಅವರ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕಿದೆ. ಸರಕಾರ ಇಂತಹ ಕಲಾವಿದರಿಗೆ ಆರ್ಥಿಕವಾಗಿ ನೆರವು ನೀಡಿ ಕಲೆಯನ್ನು ಬೆಳೆಸುವುದರ ಜತೆಗೆ ಪ್ರವಾಸೋದ್ಯಮ ಅಭಿವೃದ್ಧಿಗೂ ಮತ್ತಷ್ಟು ಕೊಡುಗೆ ನೀಡಬೇಕಿದೆ.