
ವರದಿ : ವರದರಾಜ್ ದಾವಣಗೆರೆ
ದಾವಣಗೆರೆ, (ಏ.02): ಯುಗಾದಿ ಶುಭ ಕೃತ್ ನಾಮ ಸಂವತ್ಸರದಲ್ಲಿ ಕರ್ನಾಟಕ ಸರ್ಕಾರದ ಆದೇಶದಂತೆ ಮುಂಗಾರು ಮಳೆ ಹಿನ್ನಲೆಯಲ್ಲಿ ಭೂಮಿಯಲ್ಲಿ ನೇಗಿಲು ಹೂಡುವ ಹೊನ್ನಾರು ಕಾರ್ಯಕ್ರಮವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗಿದೆ. ರಾಜ್ಯ ಸರ್ಕಾರದ ಆದೇಶದಂತೆ ಹೊನ್ನಾರು ಕಾರ್ಯಕ್ರಮವನ್ನು ಹರಿಹರ ತಾಲ್ಲೂಕಿನ ಅಮರಾವತಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ನೆರವೇರಿಸಿದರು.
ಮುಂಗಾರು ಪ್ರಾರಂಭಕ್ಕೂ ಗ್ರಾಮಗಳಲ್ಲಿ ಗ್ರಾಮದ ಮುಖ್ಯಸ್ಥರು, ರೈತರು ಮೊದಲು ಹೊಲದಲ್ಲಿ ನೇಗಿಲನ್ನು ಹೊಡೆದು ಪೂಜೆ ಪುನಸ್ಕಾರಗಳನ್ನು ಮಾಡುವುದು ಸಂಪ್ರದಾಯ. ಸರ್ಕಾರ ಈ ಬಾರಿ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ಧಾರ್ಮಿಕ ದಿನಾಚರಣೆ ಮತ್ತು ಹೊನ್ನಾರು ಹೂಡುವ ಕಾರ್ಯಕ್ರಮವನ್ನು ಧಾರ್ಮಿಕ ಮತ್ತು ದತ್ತಿ ಇಲಾಖೆಯ ಮುಖಾಂತರ ಕೈಗೊಳ್ಳಬೇಕೆಂದು ಆದೇಶ ನೀಡಿತ್ತು. ಅದರಂತೆ ಆಯಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಶಾಸಕರು ಹೊನ್ನಾರು ಕಾರ್ಯಕ್ರಮ ನಡೆಸಿದ್ದಾರೆ.
ಹೊನ್ಮಾರು ಸಂಭ್ರಮ
ಕೆಲವೆಡೆ ಮುಂಗಾರು ಮಳೆಯ ಸಿಂಚನವಾಗಿದೆ. ಈ ಮುಂಗಾರು ಮಳೆಯಲ್ಲಿ ರೈತನ ಬೇಸಾಯದ ಚಟುವಟಿಕೆಗಳು ಆರಂಭವಾಗುತ್ತವೆ.ಹೊಸ ವರ್ಷದ ಸಂವತ್ಸರದಲ್ಲಿ ರೈತ ಎತ್ತುಗಳನ್ನು ಸಿಂಗಾರ ಮಾಡಿ ಭೂಮಿ ತಾಯಿಗೆ ಪೂಜೆ ಮಾಡಿ ಹೊನ್ನಾರು ಹೂಡುವುದು ಸಂಪ್ರದಾಯ. ಈ ಹೊನ್ನಾರ ಕಾರ್ಯಕ್ರಮವನ್ನು ಕೆಲ ಗ್ರಾಮಗಳಲ್ಲಿ ರೈತರು ಸಾಮೂಹಿಕವಾಗಿ ಮಾಡುತ್ತಾರೆ.ಇನ್ನು ಕೆಲವಡೆ ಆ ರೈತರು ತಮ್ಮ ಜಮೀನುಗಳಲ್ಲಿ ಈ ಸಂಪ್ರದಾಯ ನೆರೆವೇರಿಸುತ್ತಾರೆ.
ನೇಗಿಲು ಹಿಡಿದ ಡಿಸಿ ಮಹಾಂತೇಶ್ ಬೀಳಗಿ
ಹರಿಹರ ತಾಲ್ಲೂಕಿನ ಅಮರಾವತಿ ಗ್ರಾಮದ ಜಮೀನಿನಲ್ಲಿ ದಾವಣಗೆರೆ ಜಿಲ್ಲಾಧಿಕಾರಿ ತಮ್ಮ ಕುಟುಂಬ ಸಮೇತ ಹೊನ್ನಾರು ಹೂಡಿದರು. ಹೆಗಲಿಗೆ ಹಸಿರು ಶಾಲು ಹಾಕಿಕೊಂಡು , ಎತ್ತುಗಳಿಗೆ ಪೂಜೆ ಸಲ್ಲಿಸಿ ಅವುಗಳಿಗೆ ನೈವೇದ್ಯ ಕೊಟ್ಟು ನೇಗಿಲು ಹಿಡಿದು ಭೂಮಿ ಉಳುಮೆ ಮಾಡಿದರು.ಇದಕ್ಕೆ ಹರಿಹರ ಶಾಸಕ ಎಸ್ ರಾಮಪ್ಪ ಕೂಡ ಸಾಥ್ ನೀಡಿದ್ದರು.
ಟ್ರಾಕ್ಟರ್ ಮೂಲಕ ಹೊನ್ನಾರು ಕಾರ್ಯಕ್ರಮ ಮಾಡಿದ ರೇಣುಕಾಚಾರ್ಯ
ಹೊನ್ನಾಳಿ ಮತಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ಯುಗಾಧಿ ಶುಭಾಶಯ ಹೇಳಿದ ರೇಣುಕಾಚಾರ್ಯ ಕೋಟೆ ಮಲ್ಲೂರಿನಲ್ಲಿ ಟ್ರಾಕ್ಟರ್ ಏರಿ ಹೊಲದಲ್ಲಿ ನಾಲ್ಕೈದು ರೌಂಡ್ ಹಾಕಿ ಹೊನ್ನಾರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಲ್ಲರು ಎತ್ತುಗಳನ್ನು ಸಿಂಗರಿಸಿ ಅವುಗಳಿಗೆ ಪೂಜೆ ಮಾಡಿ ಹೊನ್ನಾರು ಹೂಡಿದ್ರೆ ಟ್ರಾಕ್ಟರ್ ಮೂಲಕ ರೇಣುಕಾಚಾರ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಮಾತ್ರ ವಿಶೇಷ.