
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ (ಅ. 14): ಅದು ಬಿಸಿಲ ನಾಡಾಗಿದ್ದರೂ ಅಲ್ಲಿ ಪ್ರತಿವರ್ಷ ಪಕ್ಷಿಗಳ ಲೋಕವೇ ಮೈದಳೆಯುತ್ತಿತ್ತು, ದೇಶ ವಿದೇಶಗಳಿಂದ ಸಾವಿರಾರು ಪಕ್ಷಿಗಳು ಅಲ್ಲಿ ಬಂದು ನೆರೆಯುತ್ತಿದ್ದವು, ಗೋವಾದಂತಹ ಬೀಚ್ನ ಚಿತ್ರಣ, ರಂಗನತಿಟ್ಟಿನಂತಹ ಹಕ್ಕಿಗಳ ಕಲರವ ಮೂಡಿ ಬರುತ್ತಿದ್ದವು, ಹೀಗಾಗಿ ಕಳೆದ ಹಲವು ದಶಕಗಳಿಂದ ಇಲ್ಲಿ ಪಕ್ಷಿಧಾಮ ನಿರ್ಮಾಣವಾಗಬೇಕೆಂಬ ಕೂಗು ಕೇಳಿ ಬರುತ್ತಿತ್ತು, ಆದರೆ ಇದೀಗ ಸಿಎಂ ಬೊಮ್ಮಾಯಿ (Basavaraj Bommai) ನೇತೃತ್ವದ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಸರ್ಕಾರ ಪಕ್ಷಿಧಾಮಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು, ಪಕ್ಷಿಪ್ರೇಮಿಗಳ ಸಂತಸಕ್ಕೆ ಕಾರಣವಾಗಿದೆ.
ಸಾಮಾನ್ಯವಾಗಿ ಇಲ್ಲಿ ಎತ್ತ ನೋಡಿದರೂ ಸಾಕು ಅತ್ತ ಕಣ್ಮನ ಸೆಳೆಯೋ ಹಿನ್ನೀರಿನ ಪ್ರದೇಶ, ಎಲ್ಲೆಂದರಲ್ಲಿ ವಿವಿಧ ಬಣ್ಣ, ಆಕಾರ, ಇಂಪಾದ ಧ್ವನಿಯ ಮೂಲಕ ಆಕರ್ಷಿತವಾಗುವ ದೇಶ ವಿದೇಶದ ಹಕ್ಕಿಗಳು, ಪ್ರಕೃತಿ ಸೋಜಿಗದ ಮಧ್ಯೆ ಗಮನ ಸೆಳೆಯೋ ಬೆಟ್ಟ ಗುಡ್ಡ. ಪ್ರತಿವರ್ಷ ಆಲಮಟ್ಟಿ ಹಿನ್ನೀರಿನಿಂದ ಅಗಸ್ಟ ತಿಂಗಳಿಂದ ಭರಪೂರ ನೀರಿದ್ದರೆ ಫೆಬ್ರುವರಿ ವೇಳೆಗೆ ನೀರು ಇಳಿಮುಖವಾಗುತ್ತಾ ಹೋಗುತ್ತೇ. ಈ ಸಂದರ್ಭದಲ್ಲಿ ಹಿತಕರ ಹವಾಗುಣ ಮತ್ತು ಸಂರಕ್ಷಿತ ಪ್ರದೇಶವಾಗಿರೋದ್ರಿಂದ ಅನ್ಯರಾಜ್ಯಗಳ ಸೇರಿದಂತೆ ದೇಶ ಹೊರದೇಶಗಳಿಂದಲೂ ಆಗಮಿಸಿದ್ದ ವಿವಿಧ ಪ್ರಕಾರದ ಪಕ್ಷಿಗಳು ನಿಗ೯ಮಿಸೋ ದೃಶ್ಯಗಳು ಗಮನ ಸೆಳೆಯುತ್ತವೆ.
ಅದರಲ್ಲಿ ಆಸ್ಟ್ಟೇಲಿಯಾದಿಂದ ಬರುವ ಓರಿಯಂಟಲ್ ಪ್ಯಾಟಿಂಕೋಲ್ ಮತ್ತು ರಷ್ಯಾ, ಮಂಗೋಲಿಯಾದಿಂದ ಬರುವ ಬಾರೆಡೆಡ್ ಗೀಜ್, ಟಿಬೆಟ್ನ ಬ್ರಾಹ್ಮಿನಿ ಡೆಕ್ಕೋ, ಬಾಂಗ್ಲಾದೇಶ ಮತ್ತು ಹಿಮಾಲಯ ತಪ್ಪಲು ಪ್ರದೇಶದ ಉಡ್ಪೆಕ್ಕರ್, ಗುಜರಾತದ ಗ್ರೇಟೋ ಸ್ಥಳೀಯವಾಗಿ ಬರುವ ವ್ಯಾಗಡೋನ್, ಗ್ರೇಹರೆಂಟ್, ಹುಲಿನೆಕ್ಸ್ಟಾರ್, ಐಬೀಸ್ ಪಕ್ಷಿಗಳು ಸೇರಿದಂತೆ ದೇಶ ವಿದೇಶದ 34 ಜಾತಿಯ ಪಕ್ಷಿಗಳು ಇಲ್ಲಿ ಕಾಣಸಿಗುತ್ತವೆ. ಹೀಗಾಗಿ ಇಂತಹ ಪ್ರದೇಶದಲ್ಲಿ ಪಕ್ಷಿಧಾಮ ಆಗಬೇಕೆಂಬ ಕೂಗು ಬಹಳ ದಿನಗಳಿಂದ ಇತ್ತು, ಆದರೆ ಇದೀಗ ಸರ್ಕಾರ ಪಕ್ಷಿಧಾಮ ನಿರ್ಮಾಣಕ್ಕೆ ಮುಂದಾಗಿದೆ.
ರಂಗನತಿಟ್ಟು ಪಕ್ಷಿಧಾಮಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ: ರಾಮ್ಸರ್ ಪಟ್ಟಿಗೆ ಸೇರ್ಪಡೆ
ಸಿಎಂ ನೇತೃತ್ವದ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಗ್ರೀನ್ ಸಿಗ್ನಲ್: ಬಾಗಲಕೋಟೆ ಜಿಲ್ಲೆಯಲ್ಲಿ ಪಕ್ಷಿಧಾಮ ನಿರ್ಮಿಸಲು ಕೂಗು ಕೇಳಿ ಬರುತ್ತಲೇ ಇತ್ತು. ಈ ಬಗ್ಗೆ ಆಗಾಗ ಚರ್ಚೆ ಸಹ ಆಗುತ್ತಿತ್ತು. ಇವುಗಳ ಮಧ್ಯೆ ರಾಜ್ಯ ಸರ್ಕಾರ ಈ ಸಂಭಂದ ಇಚ್ಚಾಶಕ್ತಿ ಹೊಂದಲು ಮುಂದಾಯಿತು. ಇದರಿಂದ ಸಿಎಂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದದಲ್ಲಿ ರಾಜ್ಯ ವನ್ಯಜೀವಿ ಮಂಡಳಿ ಸಭೆ ನಡೆಸಲಾಯಿತು. ಸಭೆಯಲ್ಲಿ ಆಲಮಟ್ಟಿ ಹಿನ್ನೀರು ಪ್ರದೇಶದಲ್ಲಿ ಪಕ್ಷಿಧಾಮ ರೂಪಿಸಲು ಗ್ರೀನ್ ಸಿಗ್ನಲ್ ನೀಡಲಾಯಿತು. ಇದರ ಬೆನ್ನಲ್ಲೆ ಅರಣ್ಯ ಇಲಾಖೆಯಿಂದ ಈ ಸಂಬಂಧ ಅಧಿಸೂಚನೆ ಹೊರಡಿಸುವಂತೆ ಬಾಗಲಕೋಟೆ ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಈ ಸಂಬಂಧ ಕಾರ್ಯಗತಗೊಳಿಸುತ್ತಿದ್ದೇವೆ ಎಂಉ ಬಾಗಲಕೋಟೆ ಡಿಎಫ್ಓ ಪ್ರಶಾಂತ ಸಂಖಿನಮಠ ಹೇಳಿದ್ದಾರೆ.
ಜಗತ್ತಿನಲ್ಲೇ ಅತಿಹೆಚ್ಚು ರಿವರ್ಟನ್ ಪಕ್ಷಿಗಳ ಗೂಡು: ಇನ್ನು ಪ್ರತಿವರ್ಷ ದೇಶ ವಿದೇಶದ ಪಕ್ಷಿಗಳು ಬಾಗಲಕೋಟೆಯ ಹಿನ್ನೀರು ಪ್ರದೇಶಕ್ಕೆ ಬರುತ್ತಿರುವುದರ ಮಧ್ಯೆಯೇ ಉತ್ತರ ಪ್ರದೇಶದಿಂದ ಅತಿಹೆಚ್ಚಿನ ಸಂಖ್ಯೆಯಲ್ಲಿ ಬರುವ ರಿವರ್ಟನ್ ಪಕ್ಷಿ ಕೂಡಾ ಒಂದಾಗಿದ್ದು, ಈ ಪಕ್ಷಿಗಳ ಅಂದಾಜು 20 ಸಾವಿರಕ್ಕೂ ಅಧಿಕ ಗೂಡುಗಳು ಆಲಮಟ್ಟಿ ಹಿನ್ನೀರಿನಲ್ಲಿ ಕಂಡು ಬಂದಿದ್ದು, ಇದು ಜಗತ್ತಿನ ಅತಿಹೆಚ್ಚು ರಿವರ್ಟನ್ ಪಕ್ಷಿಗಳ ಗೂಡು ಇರುವ ಪ್ರದೇಶವೆಂದು ಗುರುತಿಸಲಾಗಿದೆ.
ಹೀಗಾಗಿ ಎಲ್ಲ ವಿಶೇಷತೆಗಳ ಮಧ್ಯೆ ಪಕ್ಷಿಗಳ ಬರುವಿಕೆಯನ್ನ ಗಮನದಲ್ಲಿರಿಸಿಕೊಂಡು ಪಕ್ಷಿಗಳಿಗೆ ಯಾವುದೇ ತೊಂದರೆಯಾಗದಂತೆ ಜಿಲ್ಲೆಯ ಚಿಕ್ಕಸಂಗಮ ಬಳಿ ಪಕ್ಷಿಧಾಮ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಹಿನ್ನೀರಿನಲ್ಲಿ ಬೋಟಿಂಗ್ ಮಾಡುವ ಮೂಲಕವು ಪಕ್ಷಿಧಾಮ ವೀಕ್ಷಿಸುವ ನಿಟ್ಟಿನಲ್ಲಿಯೂ ವ್ಯವಸ್ಥೆ ಮಾಡಬೇಕೆಂಬ ಉದ್ದೇಶವನ್ನ ಹೊಂದಿರುವ ಅಧಿಕಾರಿಗಳು ಸರ್ಕಾರದ ಆದೇಶದಂತೆ ಅಧಿಸೂಚನೆ ಹೊರಡಿಸಲು ಸಿದ್ದತೆಗೆ ಮುಂದಾಗಿದ್ದಾರೆ.
ಪಕ್ಷಿಗಳ ಕಲರವದ ಮಧ್ಯೆ ಕಂಗೊಳಿಸುವ ಹಿನ್ನೀರಿನ ಪ್ರಕೃತಿ ಸೌಂದರ್ಯ: ಇನ್ನು ಸುತ್ತಲೂ ಗುಡ್ಡಬೆಟ್ಟಗಳ ಮಧ್ಯೆ ನೀರು ನಿಂತಿರುವ ಹಿನ್ನೀರಿನ ದೃಶ್ಯಗಳು ಮತ್ತು ತೆಂಗಿನಮರಗಳು ನಮಗೆ ಮಲೆನಾಡಿನ ಸೌಂದರ್ಯವನ್ನು ಕಣ್ಮುಂದೆ ತಂದಿಡುತ್ತವೆ, ಅದ್ರಲ್ಲೂ ಸಂಗೊಂದಿ ಗ್ರಾಮದ ಬಳಿ ಇರುವ ನುಣಪಾದ ಕಲ್ಲಿನ ಗುಡ್ಡವು ಒಂದು ರೀತಿಯ ಪ್ರವಾಸಿ ತಾಣವಾದ ಯಾಣವನ್ನೇ ಕಣ್ಮುಂದೆ ತಂದಂತಾಗುತ್ತದೆ. ದೇಶದ ಗಡಿಗಳ್ನ ದಾಟಿ ಕೆಲವು ತಿಂಗಳವರೆಗೆ ಈ ಹಿನ್ನೀರಿನ ಪ್ರದೇಶದಲ್ಲಿದ್ದು ಜನೇವರಿ- ಫೆಬ್ರುವರಿ ತಿಂಗಳಲ್ಲಿ ಮರಳಿ ತಮ್ಮ ತವರಿಗೆ ಮರಳುವ ಹಕ್ಕಿಗಳ ಲೋಕದ ಬದುಕು ನಿಜಕ್ಕೂ ವಿಸ್ಮಯಕಾರಿಯಾದದ್ದು, ಈ ಪಕ್ಷಿಗಳು ನಿರಂತರವಾಗಿ ಜೀವಿಸುತ್ತಾ ಒಂದೊಮ್ಮೆ ರಂಗನತಿಟ್ಟನ್ನೇ ಸೃಷ್ಠಿಸಿದಂತೆ ಭಾಸವಾಗುತ್ತದೆ.
ಮರ ಏರಿ ಕುಳಿತ ವಲಸೆ ಹಕ್ಕಿಗಳು... ಮನಮೋಹಕ ದೃಶ್ಯ ವೈರಲ್
ವಿಶೇಷವಾಗಿ ಹಳದಿ, ಬಿಳಿ, ಕಂದು, ಕೆಂಪು, ಬೂದು ಬಣ್ಣದಲ್ಲಿ ಪಕ್ಷಿಗಳು ಕಂಡು ಬಂದು ನದಿಯ ಇಕ್ಕೆಲಗಳಲ್ಲಿ ಹಾರಾಡುತ್ತಾ ಇಲ್ಲವೆ ಮರದ ಮೇಲೆ ಕುಳಿತಿದ್ದರೆ ನಮ್ಮ ಕಣ್ಣೆ ನಮ್ಗೆ ಮೋಸ ಹೋದಂತೆ ಭಾಸವಾಗುತ್ತೇ. ಇದ್ರಿಂದ ಪ್ರಕೃತಿ ಸೌಂದಯ ನೋಡುವುದೇ ಒಂದು ಸೌಭಾಗ್ಯ. ಒಟ್ಟಿನಲ್ಲಿ ವರ್ಷಕ್ಕೆ ಎರಡು ಬಾರಿ ಜನರ ಮನಸ್ಸಿಗೆ ಮುದ ನೀಡುವಂತಾ ಪ್ರಕೃತಿ ಮತ್ತು ಪಕ್ಷಿಲೋಕವೇ ಆಲಮಟ್ಟಿ ಹಿನ್ನೀರಿನಿಂದ ಬಾಗಲಕೋಟೆಯಲ್ಲಿ ನಿರ್ಮಾಣವಾಗುತ್ತದೆ. ಈ ಮಧ್ಯೆ ಬಹಳ ದಿನಗಳಿಂದ ಇದ್ದ ಪಕ್ಷಿಧಾಮದ ಬೇಡಿಕೆಗೆ ಸರ್ಕಾರ ಸ್ಪಂದನೆ ನೀಡಿದ್ದು, ಆದಷ್ಟು ಬೇಗ ಅಧಿಸೂಚನೆ ಹೊರಡಿಸಿ ಪಕ್ಷಿಧಾಮ ನಿರ್ಮಾಣವಾಗುವಂತಾಗಲಿ ಎಂಬ ಆಶಯವನ್ನ ಸ್ಥಳೀಯರಾದ ಬಸವರಾಜ್ ಧರ್ಮಂತಿ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಸುಂದರ ಪ್ರಕೃತಿ ಮಧ್ಯೆ ಸೋಜಿಗವನ್ನ ಸೃಷ್ಟಿಸುತ್ತಿದ್ದ ಪಕ್ಷಿಗಳ ಸಂರಕ್ಷಣೆಗಾಗಿ ಸರ್ಕಾರ ಬಾಗಲಕೋಟೆ ಜಿಲ್ಲೆಯ ಚಿಕ್ಕಸಂಗಮ ಬಳಿ ಪಕ್ಷಿಧಾಮ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು, ಆದಷ್ಟು ಬೇಗ ಅಧಿಸೂಚನೆ ಹೊರಡಿಸಿ ಪಕ್ಷಿಧಾಮ ನಿರ್ಮಾಣವಾಗಲಿ ಅನ್ನೋದೆ ಎಲ್ಲರ ಆಶಯ.