ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್ಸಲ್ಲಿ ಎಲ್ಲ ರಸ್ತೆ ಬಂದ್‌ ಇಲ್ಲ...!

By Kannadaprabha News  |  First Published Oct 14, 2022, 12:30 PM IST

ಮರಿಯಪ್ಪನ ಪಾಳ್ಯ, ನಾಗರಬಾವಿ ಕರೆಯ ಪ್ರವೇಶ ದ್ವಾರ ಬಂದ್‌, ಮೈಸೂರು ರಸ್ತೆ-ಮಲ್ಲತ್ತಹಳ್ಳಿ ಸಂಚಾರ ಯತಾಸ್ಥಿತಿ, 2 ರಸ್ತೆಯಲ್ಲಿ ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ಬಂದ್‌ 


ಬೆಂಗಳೂರು(ಅ.14):  ಜ್ಞಾನಭಾರತಿ ಕ್ಯಾಂಪಸ್‌ ರಸ್ತೆಗಳಲ್ಲಿ ಖಾಸಗಿ ಹಾಗೂ ಸಾರ್ವಜನಿಕ ವಾಹನ ಸಂಚಾರಕ್ಕೆ ನಿರ್ಬಂಧ ಹೇರುವಂತೆ ಬೆಂಗಳೂರು ವಿವಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಪರಿಣಾಮ ಸದ್ಯ ಕ್ಯಾಂಪಸ್‌ನ ಎರಡು ಉಪರಸ್ತೆಗಳಲ್ಲಿ ರಾತ್ರಿ ವೇಳೆಯ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

ಕ್ಯಾಂಪಸ್‌ನಲ್ಲಿ ಅಪಘಾತ ಪ್ರಕರಣಗಳು ಮರುಕಳಿಸದಂತೆ ತಡೆಯಲು ಬೆಂಗಳೂರು ವಿಶ್ವವಿದ್ಯಾಲಯ ಪೊಲೀಸರು, ಬಿಬಿಎಂಪಿ ಹಾಗೂ ಬಿಎಂಟಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸಂಚಾರ ನಿಯಂತ್ರಣಕ್ಕೆ ಕೆಲವೊಂದು ನಿರ್ಧಾರಗಳನ್ನು ಕೈಗೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಗುರುವಾರದಿಂದಲೇ ಮರಿಯಪ್ಪನಪಾಳ್ಯ ಹಾಗೂ ನಾಗರಬಾವಿ ಕಡೆಯಿಂದ ಕ್ಯಾಂಪಸ್‌ ಪ್ರವೇಶಿಸುವ ರಸ್ತೆ ದ್ವಾರಗಳನ್ನು ಮುಚ್ಚಿ, ರಾತ್ರಿ 10 ಗಂಟೆಯಿಂದ ಬೆಳಗ್ಗೆ 5ಗಂಟೆವರೆಗೆ ವಾಹನ ಹಾಗೂ ಜನ ಸಂಚಾರದ ಮೇಲೆ ನಿಷೇಧ ಹೇರಲಾಗಿದೆ.

Tap to resize

Latest Videos

ಬೆಂಗಳೂರು ವಿವಿ ವಿದ್ಯಾರ್ಥಿನಿ ಮೇಲೆ ಹರಿದ ಬಿಎಂಟಿಸಿ ಬಸ್‌: ಸ್ಥಿತಿ ಗಂಭೀರ, ಮುಂದುವರಿದ ಪ್ರತಿಭಟನೆ

ಈ ಸಂಬಂಧ ಪ್ರವೇಶ ದ್ವಾರದಲ್ಲೇ ಪೊಲೀಸರು ಹಾಗೂ ವಿವಿಯ ಆಡಳಿತ ವರ್ಗ ‘ಸಾರ್ವಜನಿಕ ಸೂಚನಾ ಫಲಕ’ ಹಾಕಿದ್ದಾರೆ. ಆದರೆ, ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗುವ ಹಿನ್ನೆಲೆಯಲ್ಲಿ ಮೈಸೂರು ರಸ್ತೆಯಿಂದ ಮಲ್ಲತ್ತಹಳ್ಳಿ ಕಡೆಗೆ ಸಾಗುವ ಕ್ಯಾಂಪಸ್‌ನ ಮುಖ್ಯ ರಸ್ತೆಯು ರಾತ್ರಿ ವೇಳೆಯೂ ಸಂಚಾರಕ್ಕೆ ಮುಕ್ತವಾಗಿರಿಸಿದೆ. ಈ ರಸ್ತೆಯ ಬಂದ್‌ ಬಗ್ಗೆ ಪೊಲೀಸರಾಗಲಿ, ವಿವಿ ಆಡಳಿತ ಮಂಡಳಿಯಾಗಲಿ ನಿರ್ಧಾರ ಕೈಗೊಳ್ಳಲಾಗುವುದಿಲ್ಲ ಎನ್ನಲಾಗಿದ್ದು, ಹಾಗಾಗಿ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿ ಸೂಚನೆ ಬಂದರೆ ಮಾತ್ರ ಪಾಲಿಸಲು ನಿರ್ಧರಿಸಲಾಗಿದೆ ಎಂದು ವಿವಿ ಮೂಲಗಳು ತಿಳಿಸಿವೆ.

ಡ್ರಿಂಕ್‌ ಆ್ಯಂಡ್‌ ಡ್ರೈವ್‌ ತಪಾಸಣೆಗೆ ವಿವಿ ಅಸ್ತು

ಗುರುವಾರ ರಾತ್ರಿಯಿಂದಲೇ ಬೆಂ.ವಿವಿಯ ಕ್ಯಾಂಪಸ್‌ನಲ್ಲೂ ‘ಡ್ರಿಂಕ್‌ ಆ್ಯಂಡ್‌ ಡ್ರೈವ್‌’ ಪರಿಶೀಲಿಸಲು ಪೊಲೀಸರು ಮುಂದಾಗಿದ್ದಾರೆ. ಅಲ್ಲದೆ, ಇನ್ನು ಮುಂದೆ ಸಾಮಾನ್ಯ ರಸ್ತೆಗಳಲ್ಲಿ ಪೊಲೀಸರು ವಾಹನಗಳ ತಪಾಸಣೆ ಮಾಡುವ ರೀತಿಯಲ್ಲೇ ಬೆಂ.ವಿವಿ ಕ್ಯಾಂಪಸ್‌ನಲ್ಲೂ ತಪಾಸಣೆ ಮಾಡಲಿದ್ದಾರೆ. ಇದರಿಂದ ವಿವಿಯ ವಿದ್ಯಾರ್ಥಿಗಳು ಕ್ಯಾಂಪಸ್‌ ಒಳಗೆ ಸಂಚಾರ ಮಾಡಿದರೂ ಹೆಲ್ಮೆಟ್‌ ಧರಿಸುವುದು ಕಡ್ಡಾಯವಾಗಿದೆ. ಇಷ್ಟು ವರ್ಷ ಕ್ಯಾಂಪಸ್‌ ಒಳಗೆ ಪೊಲೀಸರ ತಪಾಸಣೆಗೆ ವಿವಿ ಅವಕಾಶ ಕಲ್ಪಿಸಿರಲಿಲ್ಲ.
 

click me!