
ಬೆಂಗಳೂರು(ಅ.14): ನಗರದ ರಸ್ತೆಗಳಲ್ಲಿ ಗುಂಡಿ ಸಾಮಾನ್ಯ. ಆದರೆ, ದೀರ್ಘಕಾಲ ಬಾಳಿಕೆ ಬರಲಿದೆ ಎಂದು ಬಿಬಿಎಂಪಿ ಅತ್ಯಂತ ದುಬಾರಿ ವೆಚ್ಚ ಹಾಗೂ ವಿದೇಶಿ ಮಾದರಿಯಲ್ಲಿ ನಿರ್ಮಿಸಲಾದ ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿ ಗುಂಡಿ ಬಿದ್ದಿವೆ.
ಬಿಬಿಎಂಪಿಯು ಟೆಂಡರ್ ಶ್ಯೂರ್ ಯೋಜನೆಯಡಿ ಬರೋಬ್ಬರಿ 18 ಕೋಟಿ ವೆಚ್ಚದಲ್ಲಿ 750 ಮೀಟರ್ ಉದ್ದದ ರಸ್ತೆ ನಿರ್ಮಿಸಿ 2018ರಲ್ಲಿ ಸಂಚಾರ ಮುಕ್ತಗೊಳಿಸಿದ ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿ ಗುಂಡಿ ಬಿದ್ದಿವೆ. ಬೆಂಗಳೂರಿನ ಮೊದಲ ಬಾರಿಗೆ ಕಾಬೂಲ್ ಸ್ಟೋನ್ ಬಳಸಿ ಚರ್ಚ್ ಸ್ಟ್ರೀಟ್ ರಸ್ತೆಯನ್ನು ವಿದೇಶಿ ಮಾದರಿಯಲ್ಲಿ ನಿರ್ಮಿಸಲಾಗಿತ್ತು. ಕೇವಲ ನಾಲ್ಕೇ ವರ್ಷದಲ್ಲಿ ರಸ್ತೆಯ ಮೇಲ್ಭಾಗದಲ್ಲಿ ಅಳವಡಿಸಿದ್ದ ಕಾಬೂಲ್ ಸ್ಟೋನ್‌ಗಳು ಕಿತ್ತು ಹೋಗಿವೆ.
ಗಾರ್ಡನ್ ಸಿಟಿ ಬೆಂಗಳೂರಲ್ಲಿ ದೇಶದ ಚೊಚ್ಚಲ ಕ್ಲೀನ್ ಏರ್ ಸ್ಟ್ರೀಟ್‌ಗೆ ಚಾಲನೆ
ಸಿಲಿಂಡರ್ ಎಸೆಯುವುದರಿಂದ ಕಲ್ಲು ಕಿತ್ತು ಹೋಗಿದೆ: ಪಾಲಿಕೆ
ಚರ್ಚ್ ಸ್ಟ್ರೀಟ್ ರಸ್ತೆ ಸೇರಿದಂತೆ ಟೆಂಡರ್ ಶ್ಯೂರ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾದ ನಗರದ 12 ರಸ್ತೆಗಳನ್ನು ಒಟ್ಟು .4.80 ಕೋಟಿ ವೆಚ್ಚದಲ್ಲಿ ವಾರ್ಷಿಕ ನಿರ್ವಹಣೆಗೆ ಟೆಂಡರ್ ಆಹ್ವಾನಿಸಿ ಗುತ್ತಿಗೆದಾರರನ್ನು ನೇಮಿಸಲಾಗಿದೆ. ಆದರೆ, ಇನ್ನೂ ಕಾರ್ಯಾದೇಶ ನೀಡಿಲ್ಲ. ರಸ್ತೆಯಲ್ಲಿ ಗ್ಯಾಸ್ ಸಿಲಿಂಡರ್‌ಗಳನ್ನು ನೆಲಕ್ಕೆ ಎಸೆಯಲಾಗುತ್ತದೆ. ಈ ಕಾರಣಕ್ಕೆ ಕಾಬೂಲ್ ಸ್ಟೋನ್ ಕಿತ್ತು ಹೋಗಿವೆ. ರಸ್ತೆ ಅಭಿವೃದ್ಧಿ ಪಡಿಸಿದ ಸಂಸ್ಥೆಯ ನಿರ್ವಹಣೆ ಅವಧಿ ಈಗಾಗಲೇ ಮುಕ್ತಾಯಗೊಂಡಿದೆ. ಆದರೂ ಆದೇ ಸಂಸ್ಥೆ ದುರಸ್ತಿ ಮಾಡುವುದಾಗಿ ಹೇಳಿದೆ. ಶೀಘ್ರದಲ್ಲಿ ದುರಸ್ತಿ ಪಡಿಸಲಾಗುವುದು ಎಂದು ಬಿಬಿಎಂಪಿ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ಲೋಕೇಶ್ ಮಾಹಿತಿ ನೀಡಿದ್ದಾರೆ.