ಮೈಸೂರು (ನ.14): ಸತತ ಮಳೆಯಿಂದಾಗಿ (Rain) ಹಾನಿಗೆ ಒಳಗಾದ ಚಾಮುಂಡಿ (Chamundi hill) ಬೆಟ್ಟದ ನಂದಿ (nandi) ಮಾರ್ಗವನ್ನು ಜಿಯೋ ಟ್ರಯಲ್ ತಂತ್ರಜ್ಞಾನದ (jio trail technology) ಮೂಲಕ ದುರಸ್ತಿಪಡಿಸುವುದಾಗಿ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಹೇಳಿದರು.
ಚಾಮುಂಡಿ ಬೆಟ್ಟಕ್ಕೆ ತೆರಳಿ ಕುಸಿದಿರುವ ರಸ್ತೆ (road) ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಸಿದಿರುವ ಸ್ಥಳದಲ್ಲಿ ರಿಟೇನಿಂಗ್ ವಾಲ್ (wall) ಕಟ್ಟಿ ರಸ್ತೆ ದುರಸ್ತಿಪಡಿಸಲಾಗುವುದು. ಈ ಸಂಬಂಧ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ವರದಿ ನೀಡಿದ್ದು, ಜಿಯೋ ಟ್ರಯಲ್ ತಂತ್ರಜ್ಞಾನದಂತೆ ಕಲ್ಲು ಹಾಕಿ, ಜಿಯೋ ಮೆಸ್ ಹಾಕಿ ರಿಟೇನಿಂಗ್ ವಾಲ್ ನಿರ್ಮಿಸಿದರೆ ಮುಂದಿನ ದಿನಗಳಲ್ಲಿ ಮಣ್ಣು ಕುಸಿಯುವುದಿಲ್ಲ. ಈ ತಂತ್ರಜ್ಞಾನ ಬಳಸುತ್ತಿರುವುದು ಕರ್ನಾಟಕದಲ್ಲಿ ಇದೇ ಮೊದಲು ಎಂದರು.
ಗುಡ್ಡಗಾಡು ಪ್ರದೇಶದಲ್ಲಿ ಹರಿಯುವ ನೀರು ಇಂಗುವುದರಿಂದ ತೇವಾಂಶ ಮೇಲೆ ಬಂದಾಗ ಮಣ್ಣು (soil) ಸಡಿಲವಾಗುತ್ತದೆ. ಅದರ ಮೇಲೆ ನೀರು ಹರಿದಾಗ ಇಂತಹ ಪ್ರಕರಣ ಸಾಮಾನ್ಯ. ಮಳೆ, ರಸ್ತೆ ಕುಸಿತಕ್ಕೂ ನಮ್ಮ ಸರ್ಕಾರಕ್ಕೂ ಅನ್ಯೂನ್ಯ ಸಂಬಂಧ ಇರಬೇಕು. ಮಡಿಕೇರಿಯಲ್ಲಿಯೂ (Madikeri) ಮಳೆ ಬಂದು ಸಾಕಷ್ಟುಸಮಸ್ಯೆ ಉಂಟಾಯಿತು. ಅಲ್ಲಿ ರಿಟರ್ನಿಂಗ್ ವಾಲ್ ನಿರ್ಮಿಸಲಾಗಿದೆ ಎಂದು ಅವರು ತಿಳಿಸಿದರು.
ಕೂಡಲೇ ಕಾಮಗಾರಿ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆದಷ್ಟು ಬೇಗ ಈ ರಸ್ತೆಯನ್ನು ಭಕ್ತರು ಮತ್ತು ಸಾರ್ವಜನಿಕರ ಉಪಯೋಗಕ್ಕೆ ಬಿಡಲಾಗುವುದು. ಆದಷ್ಟುಬೇಗ ಅನುದಾನ ಬಿಡುಗಡೆಗೊಳಿಸಲಾಗುವುದು. ಈ ಚುನಾವಣಾ ನೀತಿ ಸಂಹಿತೆ ಇರುವುದರಿಂದ ಮಾತನಾಡುತ್ತಿಲ್ಲ. ಈಗ ಸಮೀಪದ ಕೆ.ಆರ್. ಮಿಲ್- ಕೆಸರೆ ಬಳಿಯ ಸೇತುವೆ ಕೂಡ ಕುಸಿದಿದೆ. ಅದನ್ನೂ ಕೂಡ ಸದ್ಯದಲ್ಲಿಯೇ ದುರಸ್ತಿಪಡಿಸುವುದಾಗಿ ಅವರು ಹೇಳಿದರು.
ಸಿಎಂ ಬಸವರಾಜ ಬೊಮ್ಮಾಯಿ (Basavaraja Bommai) ಅವರ ವಿರುದ್ಧದ ಆರೋಪಕ್ಕೆ ಅವರೇ ಉತ್ತರ ನೀಡಿದ್ದಾರೆ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಅದರ ಬಗ್ಗೆ ಮಾತನಾಡುವುದಿಲ್ಲ. ಬಿಟ್ ಕಾಯಿನ್ ಸಂಬಂಧ ಪ್ರಿಯಾಂಕ ಖರ್ಗೆ ಅವರು ಐದು ಪ್ರಶ್ನೆಗಳನ್ನು ಎತ್ತಿದ್ದರು. ಇದಕ್ಕೆ ಕೋರ್ಟ್ ಛೀಮಾರಿ ಹಾಕಿ, 5 ಸಾವಿರ ದಂಡ ಕಟ್ಟಿಸಿಕೊಂಡಿದೆ. ಚುನಾವಣೆ ಬಂದಾಗ ಕಾಂಗ್ರೆಸ್ ಇಂತಹ ಆರೋಪ ಮಾಡುತ್ತಲೆ ಬಂದಿದೆ. ಈಗಾಗಲೇ ತನಿಖಾ ಸಂಸ್ಥೆ ನೇಮಿಸುವುದಾಗಿ ಸಿಎಂ ಹೇಳಿದ್ದಾರೆ. ಇಷ್ಟಕ್ಕೂ ಶ್ರೀಕಿ ಬಂಧಿಸಿದ್ದು ನಮ್ಮ ಸರ್ಕಾರವೇ ಎಂದರು.
ಈ ವೇಳೆ ಸಂಸದ ಪ್ರತಾಪ ಸಿಂಹ, ಶಾಸಕರಾದ ಜಿ.ಟಿ. ದೇವೇಗೌಡ, ಎಸ್.ಎ. ರಾಮದಾಸ್, ಎಲ್. ನಾಗೇಂದ್ರ.ಎಂಡಿಎ ಅಧ್ಯಕ್ಷ ಎಚ್.ವಿ. ರಾಜೀವ್, ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್. ಶ್ರೀವತ್ಸ ಇದ್ದರು.
ಚಾಮುಂಡಿಬೆಟ್ಟದ ರಸ್ತೆ ದುರಸ್ತಿಗೆ ತಜ್ಞರ ಸಮಿತಿ ರಚಿಸಲು ಎಂಜಿನಿಯರುಗಳ ಸಂಸ್ಥೆ ನಿರ್ಧಾರ : ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಕುಸಿದಿರುವ ರಸ್ತೆ ದುರಸ್ತಿ ಕಾರ್ಯ ಸಂಬಂಧ ಎಂಜಿನಿರುಗಳ ಸಂಸ್ಥೆ ವತಿಯಿಂದ ತಜ್ಞರ ಸಮಿತಿ ರಚಿಸಲು ನಿರ್ಧರಿಸಲಾಯಿತು.
ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ಎಂಜಿನಿಯರಿಂಗ್ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಚಾಮುಂಡಿಬೆಟ್ಟದಲ್ಲಿ ರಸ್ತೆ ಕುಸಿದಿರುವುದರ ಬಗ್ಗೆ ತಾಂತ್ರಿಕ ಸಲಹೆಗಳನ್ನು ನೀಡಲು ಕರೆಯಲಾಗಿದ್ದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಈ ವೇಳೆ ಸಂಸ್ಥೆಯ ರಾಜ್ಯಾಧ್ಯಕ್ಷ ಎಂ. ಲಕ್ಷ್ಮಣ ಮಾತನಾಡಿ, ನಿವೃತ್ತ ಮೇಜರ್ ಜನರಲ್ ಒಂಬತ್ಕೆರೆ ನೇತೃತ್ವದ ತಜ್ಞರ ಸಮಿತಿಯು ಚಾಮುಂಡಿಬೆಟ್ಟದಲ್ಲಿ ಕುಸಿದಿರುವ ರಸ್ತೆಯನ್ನು ಪರಿಶೀಲನೆ, ಯಾವ ಮಾದರಿಯಲ್ಲಿ ದುರಸ್ತಿ ಕಾರ್ಯ ನಡೆಸಬಹುದು ಎಂಬುದರ ಬಗ್ಗೆ ವರದಿ ಸಿದ್ಧಪಡಿಸಿ, ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು. ಒಂದು ವೇಳೆ ಸರ್ಕಾರ ನಿರ್ಲಕ್ಷ್ಯವಹಿಸಿದರೆ ಕೋರ್ಟ್ ಮೊರೆ ಹೋಗೋಣ ಎಂದರು. ಇದಕ್ಕೆ ಎಲ್ಲಾ ಸದಸ್ಯರು ಒಪ್ಪಿಗೆ ಸೂಚಿಸಿದರು.
ಮಹದೇಶ್ವರ ಬೆಟ್ಟದ ಮಾದರಿಯಲ್ಲಿ ಚಾಮುಂಡಿ ಬೆಟ್ಟಕ್ಕೂ ಪ್ರಾಧಿಕಾರ ರಚಿಸಬೇಕು. ಈ ಸಲಹೆಯನ್ನು ಸಹ ಸರ್ಕಾರಕ್ಕೆ ಮುಟ್ಟಿಸಿ, ಪ್ರಾಧಿಕಾರದ ರಚಿಸುವ ಪ್ರಯತ್ನ ಸಂಸ್ಥೆಯಿಂದ ಮಾಡಬೇಕಿದೆ ಎಂದರು.
ಮೈಸೂರು ಗ್ರಾಹಕರ ಪರಿಷತ್‌ನ ಭಾಮಿ ಶೆಣೈ, ನಿವೃತ್ತ ಇಇ ಕಿಶೋರ್ ಚಂದ್ರ, ಎಂಜಿನಿಯರುಗಳ ಸಂಸ್ಥೆಯ ಕಾರ್ಯದರ್ಶಿ ಎಚ್.ಎಸ್. ಸುರೇಶ್ ಬಾಬು, ಜಗದೀಶ್, ಚಕ್ರವರ್ತಿ, ಶ್ರೀನಿವಾಸ್ ಪ್ರಸಾದ್ ಮೊದಲಾದವರು ಇದ್ದರು.