ಶಿವಮೊಗ್ಗ (ನ.16): ಜಿಲ್ಲಾದ್ಯಂತ ಕಳೆದೆರಡು ದಿನಗಳಿಂದ ಬಿಟ್ಟೂ ಬಿಡದೇ ಸುರಿಯುತ್ತಿದ್ದ ಮಳೆ (Rain) ಭಾನುವಾರ ರಾತ್ರಿ ಅತಿಯಾಗಿ ಸುರಿದ ಪರಿಣಾಮ ಅಲ್ಲಲ್ಲಿ ಅವಾಂತರಗಳು ಸೃಷ್ಠಿಯಾಗಿವೆ.
ನಗರದ ಹಲವು ತಗ್ಗು ಪ್ರದೇಶಗಲ್ಲಿ ಮಳೆ ನೀರು ತುಂಬಿಕೊಂಡು ಅವಾಂತರ ಸೃಷ್ಠಿಯಾಗಿತ್ತು. ಮನೆಯೊಳಗೆ ರಾತ್ರಿ ನೀರು ಹರಿದ ಕಾರಣ ಜನರು ತೀವ್ರ ಸಂಕಷ್ಟ ಎದುರಿಸುವಂತಾಯಿತು.
undefined
ಮಲೆನಾಡಿನಾದ್ಯಂತ (Malnad) ಭಾನುವಾರ ಇಡೀ ದಿನ ಸುರಿದ ಮಳೆ ಒಂದೆಡೆಯಾದರೆ, ಇನ್ನೊಂದೆಡೆ ರಾತ್ರಿ 8 ಗಂಟೆಯಿಂದ ಮಧ್ಯರಾತ್ರಿಯವರೆಗೆ ಗುಡುಗು ಸಿಡಿಲಿನೊಂದಿಗೆ ಭಾರೀ ಪ್ರಮಾಣದ ಮಳೆಯಾಗಿದೆ. ಇದರಿಂದ ಗದ್ದೆ, ತೋಟಗಳು ಜಲಾವೃತಗೊಂಡವು. ಕೊಯ್ಲಿಗೆ ಬಂದ ಫಸಲಿನ (Crop) ಮೇಲೆ ನೀರು ನುಗ್ಗಿದೆ. ರಸ್ತೆಗಳು ಕೊಚ್ಚಿ ಹೋಗಿವೆ.
ಬೆಳೆಗಳು ಹಾನಿ: ತೀರ್ಥಹಳ್ಳಿ, ಹೊಸನಗರ (Hosanagara), ರಿಪ್ಪನ್‌ಪೇಟೆ, ಸಾಗರ (Sagar), ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ ಪ್ರದೇಶ, ಭದ್ರಾವತಿ, ಶಿಕಾರಿಪುರ, ಶಿರಾಳಕೊಪ್ಪ ಸೇರಿದಂತೆ ಜಿಲ್ಲೆಯೆಲ್ಲೆಡೆ ಗುಡುಗು, ಮಿಂಚು, ಸಿಡಿಲು ಸಹಿತ ಬಾರಿ ವರ್ಷಧಾರೆಯಾಗಿದೆ. ಪರಿಣಾಮ ಹಲವೆಡೆ ಕೋಯ್ಲಿಗೆ ಬಂದಿದ್ದ ಬೆಳೆಗಳು ನೀರಿನಲ್ಲಿ ತೇಲುವಂತಾಗಿದೆ. ಅಲ್ಲದೇ, ಬಿಟ್ಟೂಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಅಡಕೆ ಕೊಯ್ಲು ಮಾಡಲಾಗದೆ ರೈತರು ಕಂಗಾಲಾಗಿದ್ದಾರೆ. ಕೆಲವೆಡೆ ಅಡಗೆ, ಬಾಳೆ, ರಾಗಿ, ಜೋಳ, ಹತ್ತಿ, ತರಕಾರಿ, ಜೋಳದ ಬೆಳೆಗಳು ಮಳೆಯಿಂದಾಗಿ ಹಾನಿಗೊಳಗಾಗಿದೆ.
ಜೋರಾಗಿ ಸುರಿದ ಮಳೆಯಿಂದಾಗಿ ಶಿವಮೊಗ್ಗದ (Shivamogga) ಅಣ್ಣಾನಗರದ ಕೆಲ ಮನೆಗಳಿಗೆ ನೀರು ನುಗ್ಗಿದೆ. ಮೋರಿಯಲ್ಲಿನ ಕಸವನ್ನು ತೆಗೆಯದ ಕಾರಣ ನೀರು ಸರಿಯಾಗಿ ಹರಿಯದೇ ಈ ಅವಾಂತರ ಸೃಷ್ಟಿಯಾಗಿದೆ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ. ಇನ್ನು ನಗರದ ಕೆಎಸ್‌ಸಿಎ ಕ್ರೀಡಾಂಗಣವು ತಗ್ಗುಪ್ರದೇಶ ಆಗಿರುವುದರಿಂದ ಮಳೆಯ ನೀರಿನಿಂದಾಗಿ ಸಂಪೂರ್ಣವಾಗಿ ಜಲಾವೃತಗೊಂಡಿತ್ತು. ತುಂಗಾ ನಗರದ ಹಲವು ಪ್ರದೇಶಗಳಲ್ಲಿ ಮನೆಯೊಳಗೆ ನೀರು ನುಗ್ಗಿತು. ರಸ್ತೆಗಳಲ್ಲಿ ನೀರು ಉಕ್ಕಿ ಹರಿದು ಜನಸಂಚಾರಕ್ಕೆ ತೊಂದರೆಯಾಯಿತು.
ನಗರದಲ್ಲಿ ಸ್ಮಾರ್ಟ್‌ಸಿಟಿ (Smart city ) ಕಾಮಗಾರಿಗಳು ನಡೆಯುತ್ತಿದ್ದು, ಪೂರ್ಣಗೊಳ್ಳದ ಕಾರಣ ಅಲ್ಲಿಯೂ ಮಳೆನೀರು ತುಂಬಿಕೊಂಡು ವಾಹನ ಸವಾರರು ಹಾಗೂ ಪಾದಚಾರಿಗಳು ಸಂಚರಿಸಲು ಹರಸಾಹಸ ಪಡಬೇಕಾಯಿತು. ಇನ್ನು ಕೆಲವೆಡೆ ಸ್ಮಾರ್ಟ್‌ಸಿಟಿ ಕಾಮಗಾರಿ ಗುಂಡಿಗಳಲ್ಲಿ ವಾಹನಗಳು ಸಿಲುಕಿಕೊಂಡು ವಾಹನಗಳು ಹೊರ ತೆಗೆಯುವುದೇ ಒಂದು ಸಾಹಸವಾಗಿತ್ತು. ಇದರಿಂದಾಗಿ ವಾಹನಗಳ ಸಂಚಾರ ವ್ಯತ್ಯಯಗೊಂಡಿತು.
ನಗರದ ರೈಲ್ವೆ ನಿಲ್ದಾಣಕ್ಕೆ ಹೋಗುವ 100 ಅಡಿ ರಸ್ತೆಯು ಸಂಪೂರ್ಣವಾಗಿ ಹಾಳಾಗಿದೆ. ತಗ್ಗುಪ್ರದೇಶವಾಗಿ ನಿರ್ಮಾಣವಾಗಿದೆ. ಇಲ್ಲಿ ಬಿಸಿಲಿನ ಸಂದರ್ಭದಲ್ಲಿ ಧೂಳಿನ ಸಮಸ್ಯೆ ಇದ್ದರೆ, ಇನ್ನು ಮಳೆ ಸಂದರ್ಭದಲ್ಲಿ ತಗ್ಗುಪ್ರದೇಶದಲ್ಲಿ ನೀರು ನಿಲ್ಲುವುದರಿಂದ ಪಾದಚಾರಿಗಳು ವಾಹನ (Vehicle) ಸವಾರರು ಸಂಚರಿಸಲು ಪರದಾಡುವಂತಾಗಿತ್ತು.
ಅಧಿಕ ಮಳೆಯಿಂದಾಗಿ ಶಿವಮೊಗ್ಗ ತಾಲೂಕಿನ ಬಸವನಗಂಗೂರು ಕೆರೆ ಸಂಪೂರ್ಣ ಭರ್ತಿಯಾಗಿದ್ದು, ಕಾಲುವೆ ಅವ್ಯವಸ್ಥೆಯಿಂದ ತಗ್ಗು ಪ್ರದೇಶದಲ್ಲಿರುವ ಕೆ.ಎಚ್.ಬಿ. ಪ್ರೆಸ್ ಕಾಲೋನಿಗೆ ನೀರು ನುಗ್ಗಿದೆ. ಅಲ್ಲದೇ, ಕೆರೆ ಹಿನ್ನೀರಿನಲ್ಲಿ ಇಲ್ಲಿನ ಕೃಷಿ ಭೂಮಿ ಜಲಾವೃತವಾಗಿದೆ. ಸುಮಾರು 25 ಎಕರೆಗೂ ಅಧಿಕ ಮೆಕ್ಕೆಜೋಳ ಹಾಗೂ ಭತ್ತದ ಬೆಳೆ ಕೆರೆ ನೀರಿನಲ್ಲಿ ಜಲಾವೃತವಾಗಿದೆ.
ಕೋಡಿ ಬಿದ್ದ ಕೆರೆ: ಸುರಿದ ಭಾರಿ ಮಳೆಗೆ ಶಿವಮೊಗ್ಗ ತಾಲೂಕಿನ ಬಸವನಗಂಗೂರು ಹಿರೇಕೆರೆ ಕೋಡಿ ಬಿದ್ದ ಪರಿಣಾಮ ಅಪಾರ ಪ್ರಮಾಣದ ನೀರು ಹರಿದುಹೋಗಿದೆ. ಇದರಿಂದಾಗಿ ತಗ್ಗು ಪ್ರದೇಶದಲ್ಲಿರುವ ಸೋಮಿನಕೊಪ್ಪದ ಕೆಎಚ್‌ಬಿ ಕಾಲೋನಿಗೆ ನೀರು ನುಗ್ಗಿದೆ. ಬಡಾವಣೆ ಜಲಾವೃತಗೊಂಡಿತ್ತು. ಕೆರೆ ನೀರು ಹರಿದು ಹೋಗುವುದಕ್ಕೆ ಕಾಲುವೆ ಇಲ್ಲದೇ ಇರುವುದರಿಂದ ಬಡಾವಣೆಗೆ ಭಾರೀ ಪ್ರಮಾಣದ ನೀರು ನುಗ್ಗಿದೆ.