Mysuru ಕೋವಿಡ್‌ ಲಸಿಕೆ ಪಡೆದು ಅಸ್ವಸ್ಥರಾಗಿ ವ್ಯಕ್ತಿ ಸಾವು - ವೈದ್ಯರಿಂದ ಸ್ಪಷ್ಟನೆ

By Kannadaprabha NewsFirst Published Nov 16, 2021, 1:34 PM IST
Highlights
  • ಮೈಸೂರಿನಲ್ಲಿ ಕೋವಿಡ್‌ ಲಸಿಕೆ ಪಡೆದ ವ್ಯಕ್ತಿ ಸಾವು
  • ಸೂಕ್ತ ಕ್ರಮ, ಪರಿಹಾರಕ್ಕಾಗಿ ಆಗ್ರಹಿಸಿ ಪ್ರತಿಭಟನೆ
  • ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಕೊಡಿಸುವುದಾಗಿ ಡಿಸಿ ಭರವಸೆ
     

 ಮೈಸೂರು (ನ.16):  ಕೋವಿಡ್‌ ಲಸಿಕೆ (Covid vaccine ) ಪಡೆದು ಅಸ್ವಸ್ಥಗೊಂಡಿದ್ದ ವ್ಯಕ್ತಿ ಮೃತ ಪಟ್ಟಿರುವ ಹಿನ್ನೆಲೆಯಲ್ಲಿ ಈ ಸಂಬಂಧ ಸೂಕ್ತ ಕಾನೂನು ಕ್ರಮ (Legal action) ಜರುಗಿಸಲು ಹಾಗೂ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಲು ಆಗ್ರಹಿಸಿ ಮೃತರ ಕುಟುಂಬದವರು, ಅಶೋಕಪುರಂ ನಿವಾಸಿಗಳು ಇಲ್ಲಿನ ಕೆ.ಆರ್‌. ಆಸ್ಪತ್ರೆಯ (KR Hospital) ಶವಾಗಾರ ಬಳಿ ಸೋಮವಾರ ಪ್ರತಿಭಟಿಸಿದರು.

ಅಶೋಕ ಪುರಂ ನಿವಾಸಿ ಸುರೇಶ್‌(39) ಎಂಬವರೇ ಮೃತ ಪಟ್ಟವರು. ಇವರು ಕೋವಿಡ್‌ ಲಸಿಕೆ ಪಡೆದು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ (Treatment) ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಆದರೆ, ಸುರೇಶ್‌ ಸಾವಿಗೂ ಲಸಿಕೆಗೂ ಸಂಬಂಧ ಇಲ್ಲ ಎಂದು ವೈದ್ಯರು (Doctors) ತಿಳಿಸಿದರು. ಇದಕ್ಕೆ  ಆಕ್ರೋಶ ವ್ಯಕ್ತಪಡಿಸಿದ ಕುಟುಂಬ ಸದಸ್ಯರು, ದಲಿತ ಸಂಘರ್ಷ ಸಮಿತಿಯೊಂದಿಗೆ ಪ್ರತಿಭಟನೆ ನಡೆಸಿ ವೈದ್ಯರು, ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗಿದರು.

ವೈದ್ಯರ ನಿರ್ಲಕ್ಷ್ಯ ತನದಿಂದ ಸುರೇಶ್‌ ಮೃತಪಟ್ಟಿದ್ದಾರೆ. ಈ ಸಂಬಂಧ ಸೂಕ್ತ ಕಾನೂನು ಕ್ರಮ ಜರುಗಿಸಿ ನ್ಯಾಯ ಒದಗಿಸಬೇಕು. ಹಾಗೂ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು. ಈ ಸಂಬಂಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮೃತ ಸುರೇಶ್‌ ತಾಯಿ ಮಹದೇವಮ್ಮ ಅವರು ಅಶೋಕಪುರಂ ಠಾಣೆಯ ಪೊಲೀಸರಿಗೆ ದೂರು (police Complaint) ನೀಡಿದ್ದಾರೆ.

ಈ ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ (DC Dr Bagadi Goutham) ಅವರು ಮನವಿ ಸ್ವೀಕರಿಸಿ, ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.

ಈ ವೇಳೆ ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌, ಮಾಜಿ ಮೇಯರ್‌ ಪುರುಷೋತ್ತಮ, ಮಾಜಿ ಉಪ ಮೇಯರ್‌ ವಿ. ಶೈಲೇಂದ್ರ, ನಗರ ಪಾಲಿಕೆ ಸದಸ್ಯೆ ಪಲ್ಲವಿ ಬೇಗಂ, ಮುಖಂಡರುಗಳಾದ ಜೋಗಿ ಮಹೇಶ್‌, ಶ್ರೀಧರ್‌, ಗುಣಶೇಖರ್‌ ಮೊದಲಾದವರು ಇದ್ದರು.

ಲಸಿಕೆ ಪಡೆದ 10 ನಿಮಿಷದಲ್ಲಿ ಅಸ್ವಸ್ಥ :  ಮೈಸೂರು ಮಹಾನಗರ ಪಾಲಿಕೆ ( Mysuru City Corporation ), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ (Health And Family welfare Department)  ನ.12 ರಂದು ಮನೆ ಮನೆಗೆ ತೆರಳಿ ಕೋವಿಡ್‌ ಲಸಿಕೆ ನೀಡುವ ಅಭಿಯಾನ (Covid vaccination Campaign) ಆಯೋಜಿಸಿತ್ತು. ಅದರಂತೆ ಅಶೋಕಪುರಂ 6ನೇ ಕ್ರಾಸ್‌ನಲ್ಲಿರುವ ಲೇ. ಮಾದಯ್ಯ ಎಂಬವರ ಪುತ್ರ ಸುರೇಶ್‌(39) ಅವರಿಗೆ ಆರೋಗ್ಯ ಇಲಾಖೆಯ (Health Department) ಸಿಬ್ಬಂದಿ ಕೋವಿಡ್‌ ಲಸಿಕೆ ನೀಡಿದ್ದಾರೆ. ಇದಾದ 10 ನಿಮಿಷದಲ್ಲಿ ಸುರೇಶ್‌ ಅಸ್ವಸ್ಥರಾಗಿದ್ದು, ಅವರನ್ನು ಕೆ.ಆರ್‌. ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ನ.14ರ ಸಂಜೆ 5.45ಕ್ಕೆ ಮೃತಪಟ್ಟಿದ್ದಾರೆ.

ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದು, ಇವರಿಗೆ ವಯಸ್ಸಾದ ತಾಯಿ, ಇಬ್ಬರು ಸಹೋದರು ಇದ್ದಾರೆ. ಈ ಕುಟುಂಬಕ್ಕೆ ಸುರೇಶ್‌ ಆಧಾರ ಸ್ತಂಭವಾಗಿದ್ದರು. ಈ ಸಾವಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿ, ಜಿಲ್ಲಾಡಳಿತ ನೇರ ಹೊಣೆಗಾರರಾಗಿದ್ದಾರೆ. ಇವರ ನಿರ್ಲಕ್ಷ್ಯದಿಂದಾಗಿ ಸುರೇಶ್‌ ಮೃತಪಟ್ಟಿದ್ದಾರೆ. ಹೀಗಾಗಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು, ತಮ್ಮ ಕುಟುಂಬಕ್ಕೆ ನ್ಯಾಯ ದೊರಕಿಸಿ ಮತ್ತು ಸೂಕ್ತ ಪರಿಹಾರ ನೀಡಬೇಕು ಎಂದು ಸುರೇಶ್‌ ತಾಯಿ ಮಹದೇವಮ್ಮ ಅವರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

click me!