Mandya ಜಿಲ್ಲೆಯಲ್ಲಿ 826.1 ಮಿಮೀ ದಾಖಲೆ ಮಳೆ

By Kannadaprabha NewsFirst Published Nov 16, 2021, 2:29 PM IST
Highlights
  • ಜಿಲ್ಲೆಯಲ್ಲಿ ಈ ಬಾರಿ ವರ್ಷಧಾರೆಯ ವೈಭವ ಎಲ್ಲೆಡೆ ಮೇಳೈಸಿದೆ. ಕೆರೆ-ಕಟ್ಟೆಗಳು ತುಂಬಿ ಕೋಡಿ ಹರಿದಿವೆ.
  • ಜೀವನದಿಗಳೆಲ್ಲಾ ಜೀವ ತುಂಬಿಕೊಂಡು ಹರಿಯುತ್ತಿರುವುದು ಸಂತಸದ ವಿಚಾರವಾದರೆ ಇನ್ನೊಂದೆಡೆ ಮಳೆಯಿಂದ ಹಲವು ಅನಾಹುತಗಳು ಆಗಿವೆ

ವರದಿ : ಮಂಡ್ಯ ಮಂಜುನಾಥ

ಮಂಡ್ಯ (ನ.16): ಜಿಲ್ಲೆಯಲ್ಲಿ ಈ ಬಾರಿ ವರ್ಷಧಾರೆಯ ವೈಭವ ಎಲ್ಲೆಡೆ ಮೇಳೈಸಿದೆ. ಕೆರೆ-ಕಟ್ಟೆಗಳು ತುಂಬಿ ಕೋಡಿ ಹರಿದಿವೆ. ಜೀವನದಿಗಳೆಲ್ಲಾ ಜೀವ ತುಂಬಿಕೊಂಡು ಹರಿಯುತ್ತಿರುವುದು ಸಂತಸದ ವಿಚಾರವಾದರೆ ಇನ್ನೊಂದೆಡೆ ಮಳೆಯಿಂದ (Rain) ಹಲವೆಡೆ ಮನೆಗಳು ಕುಸಿದು ಬಿದ್ದಿವೆ, ಜೀವಹಾನಿ ಸಂಭವಿಸಿದೆ. ರೈತರ ನೂರಾರು ಎಕರೆ ಜಮೀನುಗಳು (Farm land) ಜಲಾವೃತಗೊಂಡು ಬೆಳೆ ನಷ್ಟ ಉಂಟಾಗಿರುವುದು ಸಂಕಟವನ್ನು ಉಂಟುಮಾಡಿದೆ.

2021ರ ಜನವರಿ ಆರಂಭದಿಂದ ಇಲ್ಲಿಯವರೆಗೆ ಮಂಡ್ಯ ಜಿಲ್ಲೆಯಲ್ಲಿ 665.5 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ವಾಸ್ತವದಲ್ಲಿ 826.1 ಮಿ.ಮೀ. ಮಳೆಯಾಗಿದೆ. ವಾಡಿಕೆಗಿಂತ ಈ ವರ್ಷ 160.6 ಮಿ.ಮೀ. ಹೆಚ್ಚುವರಿ ಮಳೆಯಾಗಿದೆ. ಕಳೆದ ವರ್ಷ 420 ಮಿ.ಮೀ. ನಷ್ಟು ಮಾತ್ರ ಮಳೆಯಾಗಿತ್ತು.

ಅಣೆಕಟ್ಟು ಹೆಚ್ಚುವರಿ ನೀರಿನಿಂದ ಪ್ರವಾಹ:

ಮೂರು ವರ್ಷಗಳಿಂದ ಕೊಡಗು (Kodagu), ಕೇರಳದಲ್ಲಿ (Kerala) ಭಾರೀ ಮಳೆಯಾಗಿ ಅಣೆಕಟ್ಟೆಗೆ (Dam) ಹರಿದುಬಂದ ಹೆಚ್ಚುವರಿ ನೀರಿನಿಂದ ಪ್ರವಾಹ ಪರಿಸ್ಥಿತಿ ಜಿಲ್ಲೆಯಲ್ಲಿ ಉಂಟಾಗಿತ್ತು. ಆದರೆ, ಈ ಬಾರಿ ಕೆರೆ-ಕಟ್ಟೆಗಳು ಭರ್ತಿಯಾಗಿ ಅಲ್ಲಿ ಉಕ್ಕಿಹರಿದ ನೀರು ಗ್ರಾಮದ (Village) ಮನೆಗಳಿಗೆ ನುಗ್ಗಿರುವುದು. ಒಂದೇ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗಿರುವುದು. ಒಂದು ತಿಂಗಳಲ್ಲಿ ಬೀಳಬೇಕಾದ ಮಳೆ ಒಂದೇ ದಿನದಲ್ಲಿ ಸುರಿದಿರುವುದು ಹವಾಮಾನ ವೈಪರೀತ್ಯದ (weather ) ಪರಿಣಾಮವಾಗಿದೆ. ವಾಯುಭಾರ ಕುಸಿತದ ಪರಿಣಾಮ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಮಳೆಯಾಗುತ್ತಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ಆಗಸ್ಟ್‌, ಸೆಪ್ಟೆಂಬರ್‌ನಲ್ಲಿ ಕಡಿಮೆ ಮಳೆ:

ಜುಲೈ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿತ್ತು. 59.4 ಮಿ.ಮೀ. ವಾಡಿಕೆ ಮಳೆಗೆ 122.5 ಮಿ.ಮೀ. ಮಳೆಯಾಗಿತ್ತು. ಆಗಸ್ಟ್‌ ತಿಂಗಳಲ್ಲಿ 72.9 ಮಿ.ಮೀ. ವಾಡಿಕೆ ಮಳೆಗೆ 70.6 ಮಿ.ಮೀ. ಮಳೆಯಾಗಿತ್ತು. ಸೆಪ್ಟೆಂಬರ್‌ನಲ್ಲಿ 129.3 ಮಿ.ಮೀ. ವಾಡಿಕೆ ಮಳೆಗೆ ಕೇವಲ 69.9 ಮಿ.ಮೀ. ಮಳೆಯಾಗಿತ್ತು. ಅದೇ ಅಕ್ಟೋಬರ್‌ನಲ್ಲಿ ಮಳೆಯ ಆರ್ಭಟ ಜೋರಾಗಿತ್ತು. 153.6 ಮಿ.ಮೀ. ವಾಡಿಕೆ ಮಳೆಗೆ 275.2 ಮಿ.ಮೀ. ಮಳೆಯಾಗುವುದರೊಂದಿಗೆ ರೌದ್ರಾವತಾರ ತಾಳಿತ್ತು.

ವಾಯುಭಾರ ಕುಸಿತ ಕಾರಣ:

ನವೆಂಬರ್‌ ಮಧ್ಯಭಾಗದ ವೇಳೆಗೆ ಚಳಿ ಶುರುವಾಗಬೇಕಿತ್ತು. ಆದರೆ, ವರ್ಷಧಾರೆ ಮುಂದುವರೆದಿರುವುದಕ್ಕೆ ವಾಯುಭಾರ ಕುಸಿತ ಕಾರಣ ಎನ್ನುವುದು ಹವಾಮಾನ ತಜ್ಞರ (weather experts) ಅಭಿಪ್ರಾಯ. ಅರಬ್ಬೀ ಸಮುದ್ರ (Arabian sea), ಬಂಗಾಳ ಕೊಲ್ಲಿ (Bea of Bengal) ಹಾಗೂ ಅಂಡಮಾನ್‌ - ನಿಕೋಬಾರ್‌ ಪ್ರದೇಶದಲ್ಲಿ ನಿರಂತರವಾಗಿ ವಾಯುಭಾರ ಕುಸಿತವಾಗುತ್ತಿರುವುದರಿಂದ ಮಳೆಯ ಪ್ರಮಾಣ ಹೆಚ್ಚಿದೆ. ಮೋಡಗಳು ಎಲ್ಲಿ ಶೇಖರಣೆಯಾಗಲಿವೆಯೋ ಅಲ್ಲಿ ಹೆಚ್ಚು ಮಳೆಯಾಗುತ್ತಿದೆ. ಸಾಧಾರಣ ಮೋಡಗಳಿರುವ ಕಡೆ ತುಂತುರು ಮಳೆಯಾಗುತ್ತಿದೆ.

ಮುಂಗಾರು (Monsoon) ಹಾಗೂ ಹಿಂಗಾರು ಮಾರುತಗಳನ್ನು ಗಣನೆಗೆ ತೆಗೆದುಕೊಂಡರೆ ಈ ವೇಳೆಗೆ ಮಳೆಯ ಮಾರುತಗಳು ಅಂತ್ಯಗೊಳ್ಳಬೇಕಿತ್ತು. ನವೆಂಬರ್‌ ಮಧ್ಯಭಾಗದಲ್ಲೂ ಮಳೆ ಮುಂದುವರೆದಿರುವುದು ವಾಯುಭಾರ ಕುಸಿತದ ಪರಿಣಾಮ ಎಂದು ಹೇಳಲಾಗುತ್ತಿದೆ.

15 ದಿನಗಳಲ್ಲಿ ಪಾಂಡವಪುರದಲ್ಲಿ ಹೆಚ್ಚು ಮಳೆ

ನ.1 ರಿಂದ 15ರವರೆಗೆ ಪಾಂಡವಪುರ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ ಎಂದು ವಿ.ಸಿ.ಫಾರಂನಲ್ಲಿರುವ ಹವಾಮಾನ ವಿಭಾಗದವರು ತಿಳಿಸಿದ್ದಾರೆ. ನಂತರದಲ್ಲಿ ಶ್ರೀರಂಗಪಟ್ಟಣ ಹಾಗೂ ಕೆ.ಆರ್‌.ಪೇಟೆ ತಾಲೂಕು ಸೇರಿವೆ. ಪಾಂಡವಪುರದಲ್ಲಿ 37 ಮಿ.ಮೀ. ವಾಡಿಕೆ ಮಳೆಗೆ 153 ಮಿ.ಮೀ. ಮಳೆಯಾಗಿದೆ. ಶ್ರೀರಂಗಪಟ್ಟಣದಲ್ಲಿ 27 ಮಿ.ಮೀ. ವಾಡಿಕೆ ಮಳೆಗೆ 146 ಮಿ.ಮೀ. ಮಳೆಯಾಗಿದ್ದರೆ, ಕೆ.ಆರ್‌.ಪೇಟೆಯಲ್ಲಿ 33 ಮಿ.ಮೀ. ವಾಡಿಕೆ ಮಳೆಗೆ 127 ಮಿ.ಮೀ. ಮಳೆಯಾಗಿದೆ ಎಂದು ಹೇಳಿದ್ದಾರೆ. ಅ.1 ರಿಂದ ನ.15ರಿಂದ ಜಿಲ್ಲೆಯಲ್ಲಿ 35.6 ಮಿ.ಮೀ. ವಾಡಿಕೆ ಮಳೆಗೆ 111 ಮಿ.ಮೀ. ಮಳೆ ಸುರಿದಿದೆ. ನವೆಂಬರ್‌ ಆರಂಭದಿಂದ ಇಲ್ಲಿಯವರೆಗೆ ಸುರಿದ ಮಳೆಯಿಂದ ಬೆಳೆದು ನಿಂತಿದ್ದ ಬೆಳೆಗಳು, ಕಟಾವಿನ ಹಂತ ತಲುಪಿದ್ದ ಬೆಳೆಗಳಿಗೆ ಹಾನಿ ಉಂಟಾಗಿದೆ. ಮಳೆ ಬಿಡುವು ಕೊಟ್ಟರೆ ಬೆಳೆಗಳು ಸ್ವಲ್ಪ ಪ್ರಮಾಣದಲ್ಲಿ ಚೇತರಿಸಿಕೊಳ್ಳಲಿವೆ ಎಂದಿದ್ದಾರೆ.

ಜನವರಿಯಿಂದ ನ.11ರವರೆಗೆ ಜಿಲ್ಲೆಯಲ್ಲಿ ಆದ ಮಳೆ

ತಾಲೂಕು ವಾಡಿಕೆ ವಾಸ್ತವ

ಕೆ.ಆರ್‌.ಪೇಟೆ 713.5 ಮಿ.ಮೀ. 738 ಮಿ.ಮೀ.

ಮದ್ದೂರು 726.9 ಮಿ.ಮೀ. 808.7 ಮಿ.ಮೀ.

ಮಳವಳ್ಳಿ 667.5 ಮಿ.ಮೀ. 812.5 ಮಿ.ಮೀ.

ಮಂಡ್ಯ 667.1 ಮಿ.ಮೀ. 829.9 ಮಿ.ಮೀ

ನಾಗಮಂಗಲ 721.2 ಮಿ.ಮೀ. 948.0 ಮಿ.ಮೀ.

ಪಾಂಡವಪುರ 646.6 ಮಿ.ಮೀ. 793.9 ಮಿ.ಮೀ.

ಶ್ರೀರಂಗಪಟ್ಟಣ 604.5 ಮಿ.ಮೀ. 791.7 ಮಿ.ಮೀ.

ಒಟ್ಟು ಮಳೆ 665.5 ಮಿ.ಮೀ. 826.1 ಮಿ.ಮೀ.

ಬಂಗಾಳಕೊಲ್ಲಿಯಿಂದ ವಾಯುಭಾರ ಕುಸಿತದ ಮೇಲ್ಮೈ ಸುಳಿಗಾಳಿ ಅರಬ್ಬಿ ಸಮುದ್ರದ ಕಡೆಗೆ ಸಾಗಿಹೋಗಿವೆ. ಈಗ ನಾಳೆಯಿಂದ ಅಂಡಮಾನ್‌ ಭಾಗದಲ್ಲಿ ವಾಯುಭಾರ ಕುಸಿತವಾಗುವ ಸಾಧ್ಯತೆಗಳಿವೆ. ಇದರಿಂದ ಇನ್ನೊಂದು ವಾರ ಜಿಲ್ಲೆಯಲ್ಲಿ ಇದೇ ರೀತಿಯ ಮೋಡ ಕವಿದ ವಾತಾವರಣವಿದ್ದರೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವುದಿಲ್ಲ. ತುಂತುರು ಹನಿ ಬೀಳುವ ಸಂಭವವಿದೆ.

- ಅರ್ಪಿತಾ, ಕೃಷಿ ಹವಾಮಾನ ತಜ್ಞೆ, ವಿ.ಸಿ.ಫಾರಂ

click me!