ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಲು ಗಮನಹರಿಸಿ: ಸತೀಶ್‌ ಜಾರಕಿಹೊಳಿ ಸಲಹೆ

By Govindaraj SFirst Published Aug 30, 2022, 12:29 AM IST
Highlights

ನಾಯಕ ಸಮಾಜ ಮೌಢ್ಯತೆಗಳಿಂದ ಹೊರಬಂದು ಮಕ್ಕಳಿಗೆ ಶಿಕ್ಷಣವನ್ನು ಕಡ್ಡಾಯವಾಗಿ ನೀಡುವ ಕುರಿತು ಗಮನಹರಿಸಬೇಕು ಎಂದು ಮಾಜಿ ಸಚಿವ ಸತೀಶ್‌ ಜಾರಕಿಹೊಳಿ ಸೂಚಿಸಿದರು. 

ಹುಣಸೂರು (ಆ.30): ನಾಯಕ ಸಮಾಜ ಮೌಢ್ಯತೆಗಳಿಂದ ಹೊರಬಂದು ಮಕ್ಕಳಿಗೆ ಶಿಕ್ಷಣವನ್ನು ಕಡ್ಡಾಯವಾಗಿ ನೀಡುವ ಕುರಿತು ಗಮನಹರಿಸಬೇಕು ಎಂದು ಮಾಜಿ ಸಚಿವ ಸತೀಶ್‌ ಜಾರಕಿಹೊಳಿ ಸೂಚಿಸಿದರು. ಪ.ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನ್ಯಾಯಾಧೀಶರ ವಸತಿ ಸಮುಚ್ಛಯದ ಬಳಿ ಭಾನುವಾರ ವಾಲ್ಮೀಕಿ ಸಮುದಾಯ ಭವನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ದೇಶದ ಸ್ವಾತಂತ್ರ್ಯಕ್ಕೂ ಮುನ್ನ ನಾಯಕ ಸಮಾಜ ಶಿಕ್ಷಣ ಪಡೆಯಲು ಆಗದ ಸ್ಥಿತಿ ಇತ್ತು. ಆದರೆ ಇಂದು ಸಂವಿಧಾನ ನಮಗೆ ಶಿಕ್ಷಣ ಪಡೆಯುವ ಹಕ್ಕನ್ನು ನೀಡಿದೆ. 

ಸಮಾಜದ ಪಾಲಕರು ತಮ್ಮ ಮಕ್ಕಳಿಗೆ ಕೌಶಲಭರಿತ ಶಿಕ್ಷಣ ನೀಡುವತ್ತ ಗಮನಹರಿಸಬೇಕು. ಮೌಢ್ಯತೆ ಒಳಗಾಗಿ ದುಂದುವೆಚ್ಚ ಮಾಡಿ ಸಮಯ ಮತ್ತು ಹಣ ಪೋಲು ಮಾಡಿಕೊಳ್ಳಬಾರದು. ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಹಣ ಖರ್ಚುಮಾಡಲು ಹಿಂಜರಿಯಬೇಡಿರಿ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅಗತ್ಯ ತರಬೇತಿಗಳನ್ನು ಪಡೆಯಿರಿ. ಈ ಹಿಂದೆ ಶೇ. 40-50ರ ಪ್ರಮಾಣದ ಅಂಕಗಳಿದ್ದರೆ ಸಾಕಿತ್ತು. ಈಗ ಶೇ. 90ಕ್ಕೂ ಹೆಚ್ಚು ಅಂಕ ಗಳಿಸಿದರೆ ಮಾತ್ರ ಉತ್ತಮ ಸ್ಥಾನ ಪಡೆಯಲು ಸಾಧ್ಯ ಎಂದರು. ಎಚ್‌.ಡಿ. ಕೋಟೆ ಶಾಸಕ ಅನಿಲ್‌ ಚಿಕ್ಕಮಾದು ಮಾತನಾಡಿ, ವಾಲ್ಮೀಕಿ ಸಮುದಾಯ ಭವನ ನಿರ್ಮಾಣವು ನಮ್ಮ ತಂದೆಯವರ ಕನಸಾಗಿತ್ತು. 

ಬಿಜೆಪಿ ಸರ್ಕಾರದಿಂದ ಜನರ ಜೀವನದ ಜೊತೆ ಚೆಲ್ಲಾಟ: ಆರ್‌.ಧ್ರುವನಾರಾಯಣ್‌

ಅದನ್ನು ಇಂದಿನ ಶಾಸಕ ಎಚ್‌.ಪಿ. ಮಂಜುನಾಥ್‌ ನೆರವೇರಿಸಿದ್ದಾರೆ. ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ಅನುದಾನವನ್ನು ಒಟ್ಟಾಗಿ ತಂದು ಅಭಿವೃದ್ಧಿಪಡಿಸೋಣ ಎಂದು ಅವರು ಹೇಳಿದರು. ಅಧ್ಯಕ್ಷತೆವಹಿಸಿದ್ದ ಶಾಸಕ ಎಚ್‌.ಪಿ. ಮಂಜುನಾಥ್‌ ಮಾತನಾಡಿ, ನಮ್ಮ ತಾಲೂಕಿನ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾದ ದಿವಂಗತ ಎಸ್‌. ಚಿಕ್ಕಮಾದು ಅವರ ಆಶಯದಂತೆ ಇಂದು ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ನಾಂದಿ ಹಾಡಲಾಗಿದೆ. ಸರ್ಕಾರದಿಂದ ಅಗತ್ಯವಿರುವ ಎಲ್ಲಾ ಅನುದಾನವನ್ನು ನಾನು ತರುತ್ತೇನೆ. ನಾನೆಂದು ನಿಮ್ಮೊಂದಿಗಿದ್ದೇನೆ ಎಂದರು. 

ಕಾರ್ಯಕ್ರಮದಲ್ಲಿ ನಗರಸಭಾಧ್ಯಕ್ಷೆ ಗೀತಾ ನಿಂಗರಾಜು, ಉಪಾಧ್ಯಕ್ಷೆ ಆಶಾ, ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಡಾ. ಪುಷ್ಪಾವತಿ ಅಮರನಾಥ್‌, ಮುಖಂಡರಾದ ಕಟ್ಟನಾಯಕ, ದೇವರಾಜ್‌, ನಾರಾಯಣ್‌, ಚೌಡನಾಯ್ಕ, ಪ್ರಸನ್ನ, ಗವಿನಾಯಕ, ಪ್ರಭಾಕರ್‌, ದೇವನಾಯಕ, ಹರವೆ ಶಿವಣ್ಣ, ಪ್ರಸಾದ್‌, ತಾಪಂ ಆಡಳಿತಾಧಿಕಾರಿ ನಂದ, ಪ. ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ್‌, ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಬಸವರಾಜು ಇದ್ದರು. ಇದೇ ವೇಳೆ ಸಮಾಜದ ಹಿರಿಯರನ್ನು ಸನ್ಮಾನಿಸಲಾಯಿತು.

ಮೀಸಲಾತಿಯಿಂದ ಹೊರ ಬನ್ನಿ: ನಾಯಕ ಸಮುದಾಯ ಸಾಮಾನ್ಯ ವರ್ಗದಿಂದಲೇ ಸ್ಪರ್ಧೆ ಮಾಡಿ ಅವಕಾಶ ಪಡೆಯುವ ಮೂಲಕ ಮೀಸಲಾತಿಯಿಂದ ಹೊರ ಬರಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸತೀಶ್‌ ಜಾರಕಿಹೊಳಿ ಕರೆ ನೀಡಿದರು. ವಿಜಯನಗರ 2ನೇ ಹಂತದಲ್ಲಿರುವ ವಾಲ್ಮೀಕಿ ಭವನದಲ್ಲಿ ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ, ರವಿ ಡಿ. ಚನ್ನಣ್ಣನವರ್‌ ಅಭಿಮಾನಿ ಬಳಗ ಮತ್ತು ಸತೀಶ್‌ ಜಾರಕಿಹೊಳಿ ಅಭಿಮಾನಿ ಬಳಗದ ವತಿಯಿಂದ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಕಾಂಗ್ರೆಸ್‌ನಿಂದ ಗುಲಾಮ್‌ ನಬಿ ನಿರ್ಗಮನ ವಿಷಾದನೀಯ: ಎಚ್‌.ಸಿ.ಮಹದೇವಪ್ಪ

ಇತ್ತೀಚೆಗೆ ಹಿಂದುಳಿದ ವರ್ಗಗಳಿಗೆ ನೀಡಲಾಗುವ ಮೀಸಲಾತಿ ಪ್ರಮಾಣ ಕಡಿಮೆಯಾಗುತ್ತಿದೆ. ಈ ರೀತಿಯ ಬದಲಾವಣೆಗಳನ್ನು ಎದುರಿಸಲು ಸಮುದಾಯದ ಜನತೆ ಸಿದ್ಧರಾಗಬೇಕು. ಸಾಮಾನ್ಯ ವರ್ಗದ ಕೋಟಾದಲ್ಲಿ ಸ್ಪರ್ಧಿಸಿ ಸವಲತ್ತುಗಳನ್ನು ಪಡೆಯುವ ಸಾಮರ್ಥ್ಯ ಹಾಗೂ ಮನೋಭಾವ ಸೃಷ್ಟಿಸಿಕೊಳ್ಳಬೇಕು. ಸರ್ಕಾರಿ ಉದ್ಯೋಗವನ್ನೇ ಕಾಯದೆ ಉದ್ಯಮಿಗಳಾಗಿ 4- 5 ಜನರಿಗೆ ಉದ್ಯೋಗ ಕೊಡುವಂತಾಗಬೇಕು. ಇಲ್ಲದಿದ್ದರೆ ಮುಂದೆ ಎದುರಾಗುವ ಸವಾಲುಗಳನ್ನು ಎದುರಿಸಲು ಕಷ್ಟಕರವಾಗಲಿದೆ ಎಂದು ಅವರು ಎಚ್ಚರಿಸಿದರು.

click me!