ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಭರವಸೆ ಕೊಟ್ಟು ಮರೆತ ಸಿಎಂ, ಚುನಾವಣೆ ಬಹಿಷ್ಕಾರದ ಎಚ್ಚರಿಕೆ

By Suvarna News  |  First Published Aug 29, 2022, 10:27 PM IST

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಭರವಸೆ ನೀಡಿ ಮರೆತುಬಿಟ್ಟ ಸಿಎಂ ಬೊಮ್ಮಾಯಿ/  ಚುನಾವಣೆ ಮುನ್ನ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಹಾಕಿಲ್ಲಂದ್ರೆ ಚುನಾವಣೆಯೇ ಬ್ಯಾನ್/ ಹೆಣದ ಮೇಲೆ ರಾಜಕೀಯ ಮಾಡ್ತಿದ್ದಾರೆಂದು ಜಿಲ್ಲೆಯ ಜನರ ಆಕ್ರೋಶ


ವರದಿ: ಭರತ್‌ರಾಜ್ ಕಲ್ಲಡ್ಕ 

ಕಾರವಾರ, (ಆಗಸ್ಟ್.29):
ಉತ್ತರಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಬೇಕು ಅನ್ನೋ ಕೂಗು ದಶಕಗಳಿಂದ ಕೇಳಿ ಬರುತ್ತಿದೆ. ಅದರಲ್ಲೂ ಕಳೆದ ತಿಂಗಳು ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳುತ್ತಿದ್ದ ಕುಟುಂಬವೊಂದು ಶಿರೂರಿನಲ್ಲಿ ನಡೆದ ಅಂಬ್ಯುಲೆನ್ಸ್ ಅಪಘಾತದಲ್ಲಿ ದುರಂತ ಸಾವು ಕಂಡ ಬಳಿಕ ಆಸ್ಪತ್ರೆಗಾಗಿ ಹೋರಾಟ ಮತ್ತೆ ತೀವ್ರಗೊಂಡಿತ್ತು. ಕಳೆದ ಬಾರಿ ಜಿಲ್ಲೆಗೆ ಭೇಟಿ ನೀಡಿದ್ದ ಸಿಎಂ ಕೆಲವೇ ದಿನಗಳಲ್ಲಿ ಮತ್ತೆ ಆಗಮಿಸಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕುರಿತು ಪರಿಶೀಲಿಸಿ ಜನರ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಆದ್ರೆ, ಸಿಎಂ ಹೇಳಿಕೆ ನೀಡಿ ತಿಂಗಳು ಕಳೆಯುತ್ತಾ ಬಂದರೂ ಭರವಸೆ ಮಾತ್ರ ಈಡೇರಿಲ್ಲ.

ಈ ಕಾರಣದಿಂದ ಮತ್ತೆ ಹೋರಾಟದ ಸಿದ್ಧತೆಗಳನ್ನು ನಡೆಸುತ್ತಿರುವ ಜನರು, ಮುಂದಿನ ದಿನಗಳಲ್ಲಿ ಚುನಾವಣೆ ಬಹಿಷ್ಕಾರ ಮಾಡುವ ಎಚ್ಚರಿಕೆ ನೀಡಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ.

Tap to resize

Latest Videos

ಭರವಸೆ ಕೊಟ್ಟ ಮರೆತ ಸಿಎಂ
ಹೌದು, ಉತ್ತರಕನ್ನಡ‌ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆ ಸಾಕಷ್ಟು ವರ್ಷಗಳಿಂದ ಕೇಳಿ ಬರುತ್ತಿತ್ತು. ಉಡುಪಿಯ ಶಿರೂರಿನಲ್ಲಿ ಹೊನ್ನಾವರದ ಕುಟುಂಬಗಳು ಸಾವಿಗೀಡಾದ ಬಳಿಕ ಬೃಹತ್ ಟ್ವಿಟ್ಟರ್ ಅಭಿಯಾನ, ಪ್ರಧಾನಿ ಮೋದಿಯವರಿಗೆ ರಕ್ತಪತ್ರ ಚಳುವಳಿ, ಹಾಗೂ ಸಾಕಷ್ಟು ಪ್ರತಿಭಟನೆಗಳು ನಡೆದಿತ್ತು. ನಂತರ ಇದೇ ಆಗಸ್ಟ್ 3ರಂದು ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮುಟ್ಟಳ್ಳಿ ಗ್ರಾಮದ ಗುಡ್ಡ ಕುಸಿತವಾಗಿ ನಾಲ್ವರು ಸಾವಿಗೀಡಾಗಿದ್ದ ಸಂದರ್ಭ ತುರ್ತು ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಧ್ಯಮಗಳ ಮುಂದೆ ಆಸ್ಪತ್ರೆ‌ ನಿರ್ಮಾಣದ ಭರವಸೆ ನೀಡಿದ್ದರು. 

ಸುಸಜ್ಜಿತ ಆಸ್ಪತ್ರೆಗಾಗಿ ಪ್ರಧಾನಿಗೆ ರಕ್ತದಲ್ಲಿ ಪತ್ರ

ಜಿಲ್ಲೆಯಲ್ಲಿ ಎಮರ್ಜೆನ್ಸಿ ಆಸ್ಪತ್ರೆ ನಿರ್ಮಾಣಕ್ಕೆ ವ್ಯವಸ್ಥೆ ಮಾಡೋದಲ್ಲದೇ, ಕೆಲವೇ ದಿನಗಳಲ್ಲಿ ಜಿಲ್ಲೆಗೆ ಮತ್ತೆ ಭೇಟಿ ನೀಡಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕುರಿತು ಪರಿಶೀಲಿಸಿ ಜನರ ಬೇಡಿಕೆಯನ್ನು ಈಡೇರಿಸುವ ಭರವಸೆಯನ್ನು ನೀಡಿದ್ದರು. ಸಿಎಂ ನೀಡಿದ್ದ ಈ ಭರವಸೆ ಹೋರಾಟ ಕೈಗೊಂಡಿದ್ದವರ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ, ಸಿಎಂ ಮಾತು ಕೊಟ್ಟು ತಿಂಗಳು ಕಳೆಯಿತಾದರೂ ಈವರೆಗೆ ಜಿಲ್ಲೆಗೆ ಭೇಟಿ ನೀಡಿಲ್ಲ. ಜನರಿಗೆ ಕೊಟ್ಟ ಮಾತು ಇದೀಗ ಸಿಎಂ ಮರೆತಿರೋದ್ರಿಂದ ಜನರು ಆಕ್ರೋಶಗೊಂಡಿದ್ದಾರೆ. ಜಿಲ್ಲೆಯಲ್ಲಿ ಇನ್ನೊಂದು ಹೆಣ ಬೀಳದೆ ಸರಕಾರ ಯಾವುದೇ ಕ್ರಮ ಕೈಗೊಳ್ಳಲ್ಲ. ಇವರು ಹೆಣದ ಮೇಲೆ ರಾಜಕಾರಣ ಮಾಡುತ್ತಿದ್ದಾರೆ.

ಮುಂದಿನ ಚುನಾವಣೆಯ ಒಳಗಾಗಿ ಸಿಎಂ ಜಿಲ್ಲೆಗೆ ಬಂದು ತಾವು ನೀಡಿದ ಭರವಸೆಯ ಹಿನ್ನೆಲೆ ಯೋಜನೆಗೆ ಶಂಕುಸ್ಥಾಪನೆ ಹಾಕದಿದ್ದಲ್ಲಿ ಬೃಹತ್ ರ್ಯಾಲಿ ನಡೆಸಿ ಬಳಿಕ ಜಿಲ್ಲೆ ಬಂದ್‌ಗೆ ಕರೆ ನೀಡಲಾಗುವುದು. ಅದಕ್ಕೂ ಯಾವುದೇ ಸ್ಪಂದನೆ ದೊರಕದಿದ್ದಲ್ಲಿ ಮನೆ ಮನೆಗಳಿಗೆ ತೆರಳಿ ಕರಪತ್ರ ಹಂಚುವ ಮೂಲಕ ಈ ಬಾರಿ ಜನರ ಸಹಾಯದಿಂದ ಚುನಾವಣೆಯನ್ನೇ ಬ್ಯಾನ್ ಮಾಡೋದಾಗಿ ಹೋರಾಟಗಾರರು ಎಚ್ಚರಿಸಿದ್ದಾರೆ. 

ಅಂದಹಾಗೆ, ಬಿಜೆಪಿ ಮುಖಂಡರೇನೋ ಸಿಎಂಗೆ ಬಿಡುವಿಲ್ಲದ ಕೆಲಸದ ಕಾರಣ ಭೇಟಿ ನೀಡಿಲ್ಲ. ಆದರೆ, ಸಿಎಂ ನೀಡಿದ ಭರವಸೆ ಈಡೇರಿಸುತ್ತಾರೆ ಎಂದು ವಾದ ಮಂಡಿಸುತ್ತಾರೆ. ಆದರೆ, ಜನಸಾಮಾನ್ಯರು ಮಾತ್ರ ಇದಕ್ಕೆ ವಿರುದ್ಧವಾಗಿದ್ದು, ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಉತ್ತರಕನ್ನಡ ಜಿಲ್ಲೆಯಂದ್ರೆ ಉತ್ತರ ಕಾಣದ ಜಿಲ್ಲೆಯಾಗಿದ್ದು, ಶಿಕ್ಷಣ, ಆರೋಗ್ಯ ಹಾಗೂ ಇತರ ಹಲವು ಸೌಲಭ್ಯದಲ್ಲಿ ಜಿಲ್ಲೆ ಹಿಂದಿದೆ. ಜಿಲ್ಲೆಯ 25ರಿಂದ 30 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಘಟಾನುಘಟಿ ರಾಜಕಾರಣಿಗಳಿದ್ದಾರೆ. ಈ ಜನಪ್ರತಿನಿಧಿಗಳು ಮತಕ್ಕಾಗಿ ಭರವಸೆ ಮಾತ್ರ ನೀಡ್ತಾರೆ ಹೊರತು ಯಾವುದನ್ನೂ ಈಡೇರಿಸುವುದಿಲ್ಲ. ಜಿಲ್ಲೆಯಲ್ಲಿ ಎದ್ದಿದ್ದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕೂಗನ್ನು ಹತ್ತಿಕ್ಕುವ ಉದ್ದೇಶದಿಂದ ಜನಪ್ರತಿನಿಧಿಗಳು ಸಿಎಂ ಕರೆಸುವುದಾಗಿ ಹೇಳಿ ಇದೀಗ ಸುಮ್ಮನಾಗಿದ್ದಾರೆ ಎನ್ನುವ ಆರೋಪ ಜನಸಾಮಾನ್ಯರಿಂದ ವ್ಯಕ್ತವಾಗಿದೆ. 

ಒಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆಯನ್ನು ಮುಂದಿರಿಸಿದ್ದ ಜನರು ‌ಸಿಎಂ ಜಿಲ್ಲೆಗೆ ಭೇಟಿ ನೀಡಿ ಸಿಹಿ ಸುದ್ದಿ ಕೊಡುತ್ತಾರೆ ಎಂದು ಕಾದು ಕುಳಿತಿದ್ದರು. ಆದರೆ, ಇದೀಗ ಜನರಿಗೆ ನಿರಾಶೆಯಾಗಿರೋದ್ರಿಂದ ಅಸಮಾಧಾನ ವ್ಯಕ್ತಪಡಿಸಿದ್ದಾರಲ್ಲದೇ, ಮುಂದಿನ ಚುನಾವಣೆ ಒಳಗಾಗಿ ಬೇಡಿಕೆ ಈಡೇರದಿದ್ದಲ್ಲಿ ಜಿಲ್ಲೆ ಬಂದ್‌ಗೆ ಘೋಷಣೆ ಮಾಡೋದಲ್ಲದೇ, ಚುನಾವಣೆ ಬಹಿಷ್ಕಾರ ಮಾಡೋದಾಗಿ ಎಚ್ಚರಿಸಿದ್ದಾರೆ. ಈ ಹಿನ್ನೆಲೆ ಸರಕಾರ ಜನರ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನ ಕೈಗೊಳ್ಳಬೇಕಿದೆ.

click me!