ರೇಷ್ಮೆ ನಗರಿ ರಾಮನಗರ ಜಿಲ್ಲೆಯಲ್ಲಿ ತಡರಾತ್ರಿ ಸುರಿದ ಮಳೆಗೆ ಇಡೀ ಜಿಲ್ಲೆ ಪ್ರವಾಹದಿಂದ ತತ್ತರಿಸಿ ಹೋಗಿದ್ದು, ಸ್ವತಃ ಸಿಎಂ ಬೊಮ್ಮಾಯಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.
ವರದಿ: ಜಗದೀಶ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ
ರಾಮನಗರ (ಆ.29): ರೇಷ್ಮೆ ನಗರಿ ರಾಮನಗರ ಜಿಲ್ಲೆಯಲ್ಲಿ ತಡರಾತ್ರಿ ಸುರಿದ ಮಳೆಗೆ ಇಡೀ ಜಿಲ್ಲೆ ಪ್ರವಾಹದಿಂದ ತತ್ತರಿಸಿ ಹೋಗಿದ್ದು, ಸ್ವತಃ ಸಿಎಂ ಬೊಮ್ಮಾಯಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಎಲ್ಲೆಲ್ಲೂ ನೀರು, ಮುಳಗಿರುವ ಕಾರ್, ಬಸ್ ಗಳು, ಪ್ರವಾಹದ ಆತಂಕದಲ್ಲಿ ಜನರು, ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು, ರೇಷ್ಮೆ ನಗರಿ ರಾಮನಗರ ಜಿಲ್ಲೆಯಲ್ಲಿ, ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿದೆ.
ಬೆಂಗಳೂರು-ಮೈಸೂರು ಹೆದ್ದಾರಿ ಸಂಪೂರ್ಣ ಜಲಾವೃತವಾಗಿ, ಕಾರ್, ಬಸ್‌ಗಳು ಮುಳುಗಡೆಯಾಗಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು, ಇತ್ತ ರಾಮನಗರ ಬೋಳಪ್ಪನ ಕೆರೆ ಕೋಡಿ ಬಿದ್ದು, ನಗರ ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರವಾಗಿ ಅಲ್ಲಿನ ನಿವಾಸಿಗಳು ಇಡೀ ದಿನ ನೀರನ್ನು ಹೊರಹಾಕಲು ಹರಸಾಹಸ ಪಟ್ರು, ಇತ್ತ ರಾಮನಗರ-ಮಾಗಡಿ ಹೆದ್ದಾರಿಯಲ್ಲಿ ನದಿಯಂತೆ ನೀರು ಹರಿದು ಹೆದ್ದಾರಿ ಪಕ್ಕದಲ್ಲೇ ಇದ್ದ ಆಸ್ಪತ್ರೆ, ಬೈಕ್ ಶೋರಂ, ಎಬಿಆರ್ ಟವರ್ ಗಳ ಸೆಲ್ಲರ್ ಗಳು ಸಂಪೂರ್ಣ ಮುಳುಗಡೆಯಾಗಿ ಲಕ್ಷಾಂತರ ರೂ ನಷ್ಟವಾಗಿದೆ.
Ramanagara: ಮಳೆಹಾನಿ ಪ್ರದೇಶಗಳಿಗೆ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ
ರಾಮನಗರ ಟೌನ್‌ನ ಸೀರಹಳ್ಳ, ಕೇತೊಹಳ್ಳಿ ಕೆರೆಯ ಕೋಡಿ ಬಿದ್ದು ಟಿಪ್ಪು ನಗರ, ಗೌಸಿಯ ನಗರ, ಯಾರಬ್ ನಗರದ ಮನೆಗಳಿಗೆ ನೀರು ನುಗ್ಗಿತ್ತು, ಇತ್ತ ಹೆದ್ದಾರಿಯ ಅಂಡರ್ ಪಾಸ್‌ನಲ್ಲಿ ಖಾಸಗಿ ಬಸ್ ಸಿಲುಕಿ 50 ಕ್ಕೂ ಹೆಚ್ಚು ಪ್ರಯಾಣಿಕರು ಸಂಕಷ್ಟ ಪಡ್ತಿದ್ದರು, ಈ ವೇಳೆ ಅಲ್ಲಿನ ಸ್ಥಳೀಯರು ಅವರನ್ನು ರಕ್ಷಿಸುವ ಕೆಲಸಕ್ಕೆ ಮುಂದಾದ್ರು. ಅತ್ತ ಬೊಂಬೆ ನಗರಿ ಚನ್ನಪಟ್ಟಣದಲ್ಲೂ ಮಳೆರಾಯನ ಅಟ್ಟಾಹಾಸ ಮುಂದುವರಿದು ಕೆರೆ ಕೋಡಿ ಬಿದ್ದು ಬೀಡಿ ಕಾಲೋನಿ, ತಿಟ್ಟಮಾರನಹಳ್ಳಿ, ಗಾಂಧಿ ಗ್ರಾಮಗಳ ಮನೆ ಹಾಗೂ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ.
ಜನರ ಕಷ್ಟಗಳಿಗೆ ಮಿಡಿದ ಹೆಚ್‌ಡಿಕೆ ದಂಪತಿ: ಅಂದಹಾಗೆ ಮಳೆ ಹಾನಿಯಿಂದ ಸಮಸ್ಯೆಯಾಗಿದ್ದ ಪ್ರದೇಶಗಳಿಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಭೇಟಿ ನೀಡಿ ಹೆದ್ದಾರಿ ಅಧಿಕಾರಿಗಳಿಗೆ ಬೆವರು ಇಳಿಸಿದ್ರು, ವಾಹನ ಸವಾರರ ಸಮಸ್ಯೆಗಳನ್ನು ಆಲಿಸಿ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ರು, ಜೊತೆಗೆ ಸಿಎಂ ಬೊಮ್ಮಾಯಿಗೆ ಪ್ರವಾಹದ ಸಂಪೂರ್ಣ ಮಾಹಿತಿ ನೀಡಿದ್ರು. ಈ ವೇಳೆ ಕುಮಾರಸ್ವಾಮಿ ಮನವಿಗೆ ಸ್ಪಂದಿಸಿದ ಸಿಎಂ ರಾಮನಗರ ಪ್ರವಾಸ ಹಮ್ಮಿಕೊಂಡಿದ್ರು, ಸಚಿವರಾದ, ಆರ್ ಅಶೋಕ್, ಅಶ್ವಥ್ ನಾರಾಯಣ ಜೊತೆ ತಮ್ಮ ಅಧಿಕಾರಿಗಳನ್ನು ಕರೆದುಕೊಂಡು ರಾಮನಗರ ಮಳೆ ಹಾನಿ ಪ್ರದೇಶಗಳಾದ ಭಕ್ಷಿ ಕೆರೆ, ಟಿಪ್ಪು ನಗರ, ಚನ್ನಪಟ್ಟಣದ ಶೇರ್ವಾ ಸರ್ಕಲ್, ಗಾಂಧಿ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆ ಆಲಿಸಿದರು.
ಬೊಂಬೆನಗರಿ ಚನ್ನಪಟ್ಟಣದಲ್ಲಿ ಮಳೆ ಅವಾಂತರ: 200ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು
ಮಳೆ ಹಾನಿಯಿಂದಾಗಿ, ರೇಷ್ಮೆ, ರೀಲಿಂಗ್ ಮಿಷನ್‌ಗಳು, ಮನೆ ಕಳೆದುಕೊಂಡ ನಿರಾಶ್ರಿತರನ್ನು ಮಾತನಾಡಿಸಿ, ಗಂಜಿ ಕೇಂದ್ರಗಳಿಗೆ ಭೇಟಿ ನೀಡಿ ಆದಷ್ಟು ಬೇಗ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ರು, ಇತ್ತ ಸಿಎಂಗೆ ಮಾಜಿ ಸಿಎಂ ಹೆಚ್‌ಡಿಕೆ ಮಳೆಯಿಂದಾಗ ಸಮಸ್ಯೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ರು. ಒಟ್ಟಾರೆ ಸ್ವಲ್ಪ ಬ್ರೇಕ್ ನೀಡಿದ್ದ ಮಳೆರಾಯ ಇದೀಗ ತನ್ನ ಅಟ್ಟಹಾಸವನ್ನು ಮುಂದಿವರಿಸಿದ್ದಾನೆ. ಇತ್ತ ಮಳೆಯಿಂದಾಗಿ ಜಿಲ್ಲೆಯ ಜನರು ಹೈರಾಣಾಗಿದ್ದು, ಮುಂದೆ ಇದೇ ರೀತಿ ಮಳೆ ಮುಂದುವರಿದರೆ ನಮ್ಮ ಪರಿಸ್ಥಿತಿ ಏನು ಎಂದು ಯೋಚಿಸುತ್ತಿದ್ದಾರೆ.