ಅ. 10ರಂದು ರಾಜ್ಯಾದ್ಯಂತ ರೈತ ಸಂಘದಿಂದ ಪ್ರತಿಭಟನೆ

By Sujatha NR  |  First Published Oct 3, 2022, 4:41 AM IST

 ಇದೇ ಅಕ್ಟೋಬರ್‌ 10ರಂದು ರಾಜ್ಯದ ಎಲ್ಲಾ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿಯೂ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದರು.


ತುಮಕೂರು (ಅ.03): ಕೇಂದ್ರ ಸರ್ಕಾರ ವಿದ್ಯುತ್‌ ಖಾಸಗೀಕರಣ ಮಾಡಲು ಸಂಸತ್ತಿನ ಉಪಸಮಿತಿಯ ಮುಂದೆ ಮಂಡಿಸಿರುವ ವಿದ್ಯುತ್‌ ಖಾಸಗೀಕರಣ ಬಿಲ್‌ನ್ನು ಕೂಡಲೇ ವಾಪಸ್‌ ಪಡೆಯಬೇಕು. ರೈತರಿಗೆ ಮಾರಕವಾಗಿರುವ ಎಪಿಎಂಸಿ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗಳನ್ನು ರದ್ದು ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಇದೇ ಅಕ್ಟೋಬರ್‌ 10ರಂದು ರಾಜ್ಯದ ಎಲ್ಲಾ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿಯೂ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದರು.

ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಮಂಡಿಸಿರುವ ವಿದ್ಯುತ್‌ ಖಾಸಗಿ ಬಿಲ್‌ (Bill) ಏನಾದರೂ ಜಾರಿಗೆ ಬಂದರೆ, ಇಡೀ ದೇಶದಲ್ಲಿ ಆಹಾರ (Food) ಸ್ವಾವಲಂಬನೆ ಹಾಳಾಗುವುದಲ್ಲದೆ, ರೈತರು, ಬಡವರು ವಿದ್ಯುತ್‌ ಬಿಲ್‌ ಭರಿಸಲಾಗದೆ ಬೀದಿಗೆ ಬೀಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ಹಾಗಾಗಿ ಪ್ರಥಮ ಹಂತವಾಗಿ ಈ ಹೋರಾಟವನ್ನು ರೈತ ಸಂಘ ಹಮ್ಮಿಕೊಂಡಿದೆ ಎಂದರು.

Tap to resize

Latest Videos

ಕೇಂದ್ರ ಸರ್ಕಾರ ವಿದ್ಯುತ್‌ ಖಾಸಗೀಕರಣದ ಬಗ್ಗೆ ಈಗಾಗಲೇ ರಾಷ್ಟ್ರದಲ್ಲಿರುವ ರಾಜ್ಯಗಳ ಅಭಿಪ್ರಾಯ ಕೇಳಿದ್ದು, ತಮಿಳುನಾಡು (Tamilnadu), ಕೇರಳ, ಮಹಾರಾಷ್ಟ್ರ ಸೇರಿದಂತೆ ದಕ್ಷಿಣ ಭಾರತದ ಬಹುತೇಕ ರಾಜ್ಯಗಳು ಖಾಸಗೀಕರಣಕ್ಕೆ ವಿರೋಧ ವ್ಯಕ್ತಪಡಿಸಿವೆ. ಆದರೆ ಕರ್ನಾಟಕ ಮಾತ್ರ ಇದುವರೆಗೂ ತನ್ನ ಅಭಿಪ್ರಾಯ ತಿಳಿಸಿಲ್ಲ. ಕೂಡಲೇ ರಾಜ್ಯ ಸರ್ಕಾರ ತನ್ನ ಮೌನ ಮುರಿದು ತನ್ನ ಅಭಿಪ್ರಾಯ ತಿಳಿಸಬೇಕು. ಯಾವುದೇ ಕಾರಣಕ್ಕೂ ರೈತರ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸುವುದಿಲ್ಲ ಎಂಬ ಘೋಷಣೆಯನ್ನು ಮಾಡಬೇಕೆಂಬುದು ರಾಜ್ಯದ ರೈತರ ಆಗ್ರಹವಾಗಿದೆ ಎಂದು ಏ.ಗೋವಿಂದರಾಜು ತಿಳಿಸಿದರು.

ದಕ್ಷಿಣ ಭಾರತದಲ್ಲಿ ಕರ್ನಾಟಕ ಮಾತ್ರ:

ರಾಜ್ಯದಲ್ಲಿ ಸುಮಾರು 45 ಲಕ್ಷ ಕೊಳವೆ ಬಾವಿಗಳನ್ನು ಕೊರೆದು ರೈತರು 600 ಟಿಎಂಸಿ ಯಷ್ಟುಅಂತರ ಜಲವನ್ನು ಎತ್ತಿ ಒಂದು ಲಕ್ಷ ಹೆಕ್ಟೇರ್‌ ಪ್ರದೇಶವನ್ನು ನೀರಾವರಿಯಾಗಿಸಿ, ಭತ್ತ, ಕಬ್ಬು ಸೇರಿದಂತೆ ಆಹಾರದ ಬೆಳೆಗಳನ್ನು ಬೆಳೆದು ಜನರಿಗೆ ಅನುಕೂಲ ಕಲ್ಪಿಸಿದ್ದಾರೆ. ಒಂದು ವೇಳೆ ವಿದ್ಯುತ್‌ ಖಾಸಗೀಕರಣವಾಗಿ ಸ್ಮಾರ್ಚ್‌ ಮೀಟರ್‌ ಅಳವಡಿಸಿದರೆ, ಬಿಲ್‌ ಕಟ್ಟಡಲಾಗದೆ ಬಹುತೇಕ ಐಪಿ ಸೆಟ್‌ಗಳು ನಿಂತು ಹೋಗಿ, ಆಹಾರದ ಕೊರತೆಯ ಜೊತೆಗೆ, ತೋಟಗಾರಿಕಾ ಬೆಳೆಗಳ ಮೇಲು ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಅಲ್ಲದೆ, ಹಣ್ಣು, ತರಕಾರಿ, ಹೂವಿನ ಬೆಳೆಗಳ ಮೇಲೂ ದುಷ್ಪರಿಣಾಮ ಉಂಟಾಗಲಿದೆ. ಇದನ್ನು ಸರ್ಕಾರ ಮನಗಂಡು, ವಿದ್ಯುತ್‌ ಖಾಸಗೀಕರಣಕ್ಕೆ ಎಂದಿಗೂ ಮುಂದಾಗಬಾರದು ಎಂಬುದು ರೈತರ ಆಗ್ರಹವಾಗಿದೆ ಎಂದರು.

ಪ್ರಧಾನಿ ಮೋದಿ ಸರ್ಕಾರ ವಿದ್ಯುತ್‌ ಖಾಸಗೀಕರಣದ ಹೆಸರಿನಲ್ಲಿ ಸುಮಾರು 20 ಲಕ್ಷ ಕೋಟಿ ಕೆಪಿಟಿಸಿಎಲ್‌ ಸೇರಿದಂತೆ ವಿದ್ಯುತ್‌ ಸರಬರಾಜು ಕಂಪನಿಗಳ ಆಸ್ತಿಯನ್ನು ತಮ್ಮ ಆಪ್ತರಿಗೆ ವಹಿಸಿಕೊಡಲು ಮುಂದಾಗಿದೆ. ಇದರಿಂದ ದೇಶದ ಅರ್ಥ ವ್ಯವಸ್ಥೆಯ ಮೇಲು ಕೆಟ್ಟಪರಿಣಾಮ ಬೀರಲಿದೆ ಎಂಬುದನ್ನು ಸರ್ಕಾರಗಳು ಅರ್ಥ ಮಾಡಿಕೊಳ್ಳಬೇಕು ಎಂದು ಗೋವಿಂದರಾಜು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ, ವಿವಿಧ ತಾಲೂಕುಗಳ ಅಧ್ಯಕ್ಷರಾದ ಚಿಕ್ಕಬೋರೇಗೌಡ,ನರಸಿಂಹಮೂರ್ತಿ, ಪೂಜಾರಪ್ಪ, ಕೆಂಚಪ್ಪ, ಜಯಣ್ಣ, ರಂಗಹನುಮಯ್ಯ, ಶಬ್ಬೀರ್‌, ಲೋಕೇಶ್‌, ಮಹಿಳಾ ಘಟಕದ ಅಧ್ಯಕ್ಷ ನಾಗರತ್ನಮ್ಮ ಇತರರು ಇದ್ದರು.

ಅಡಕೆ ಆಮದಿನಿಂದ ರೈತರಿಗೆ ಹೊಡೆತ

ಕೇಂದ್ರ ಸರ್ಕಾರ ಅಡಕೆಯನ್ನು ನೆರೆಯ ಭೂತಾನ್‌ ಮತ್ತಿತರ ದೇಶಗಳಿಂದ ಅಮದು ಮಾಡಿಕೊಳ್ಳಲು ಮುಂದಾಗಿದೆ. ಇದರಿಂದ ದೇಶದ ಅಡಕೆ ಬೆಳೆಗಾರರ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಈ ಹಿಂದಿನ ಸರ್ಕಾರಗಳು ನೆರೆಯ ರಾಷ್ಟ್ರಗಳ ಅಡಕೆ ದೇಶಕ್ಕೆ ಬರದಂತೆ ಹೆಚ್ಚಿನ ಸುಂಕ ವಿಧಿಸಿ, ಆಮದಾಗುವುದನ್ನು ತಡೆದಿದ್ದರು. ಆದರೆ ರೈತರ ಅದಾಯ ದ್ವಿಗುಣ ಮಾಡುವುದಾಗಿ ಹೇಳಿಕೊಳ್ಳುವ ಮೋದಿ ಸರ್ಕಾರ, ಅಡಕೆ ಆಮದಿಗೆ ಅವಕಾಶ ನೀಡಿ, ದೇಶದ ಅಡಕೆ ಬೆಳೆಗಾರರ ಬಾಯಿಗೆ ಮಣ್ಣು ಹಾಕಲು ಹೊರಟಿದೆ. ಪ್ರಸುತ ಕ್ವಿಂಟಾಲ್‌ ಅಡಕೆ 56 ಸಾವಿರ ಇದ್ದು, ಮುಂದಿನ ದಿನಗಳಲ್ಲಿ ಇದು 25 ಸಾವಿರಕ್ಕೆ ಕುಸಿದರೂ ಆಶ್ಚರ್ಯವಿಲ್ಲ. ಒಂದು ವೇಳೆ ಹಾಗಾದರೆ ಅಡಕೆ ಬೆಳೆಗಾರರೂ ನಷ್ಟಹೊಂದಿ, ಆತ್ಮಹತ್ಯೆಯೊಂದೇ ಮಾರ್ಗವಾಗಲಿದೆ. ಹಾಗಾಗಿ ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕೆಂದು ರೈತ ಸಂಘ ಆಗ್ರಹಿಸುತ್ತದೆ ಎಂದು ಗೋವಿಂದರಾಜು ಹೇಳಿದರು.

click me!