ಹನಿ ನೀರಾವರಿ ಸಬ್ಸಿಡಿಗೆ ಜಿಎಸ್ಟಿ ಹೊರೆ, ರೈತರಿಗೆ ಸಂಕಷ್ಟ..!

By Kannadaprabha NewsFirst Published Dec 7, 2023, 8:38 PM IST
Highlights

ನೀರಿನ ಅಭಾವ ಹಾಗೂ ವಿದ್ಯುತ್ ಸಮಸ್ಯೆಯಿಂದ ರೈತರು ತೊಂದರೆಗೆ ಈಡಾಗಬಾರದೆಂದು ಕಡಿಮೆ ನೀರಿನಲ್ಲಿ ಕೃಷಿ ಮಾಡುವ ಕುರಿತು ಕೇಂದ್ರ ಸರ್ಕಾರ ಹನಿ ನೀರಾವರಿ ಪದ್ಧತಿ ಜಾರಿ ಮಾಡಿ, ಇದಕ್ಕೆ ಸಬ್ಸಿಡಿ ನೀಡುತ್ತಿದೆ. ಆದರೆ, ಈಗ ಇದಕ್ಕೆ ಜಿಎಸ್ಟಿ ಹಾಕಿರುವುದು ರೈತರನ್ನು ಚಿಂತೆಗೀಡು ಮಾಡಿದೆ.
 

ಸೋಮರಡ್ಡಿ ಅಳವಂಡಿ

ಕೊಪ್ಪಳ(ಡಿ.07):  ಬರ, ವಿದ್ಯುತ್‌ ಸಮಸ್ಯೆ ನಡುವೆ ಹನಿ ನೀರಾವರಿ ಮೂಲಕ ಬೆಳೆ ಕಾಪಾಡಿಕೊಳ್ಳಲು ಯತ್ನಿಸುತ್ತಿದ್ದ ರೈತರಿಗೆ ಸರ್ಕಾರ ಬಿಗ್ ಶಾಕ್ ನೀಡಿದೆ. ಹನಿ ನೀರಾವರಿ ಯೋಜನೆಯಡಿ ದೊರೆಯುವ ಸಬ್ಸಿಡಿ ಮೇಲೆ ಶೇ.12ರಷ್ಟು ಜಿಎಸ್ ಟಿ ಹೊರೆಯನ್ನು ರೈತರ ಹೆಗಲಿಗೆ ಹಾಕುವ ಮೂಲಕ ಮತ್ತೊಂದು ಬರೆ ಎಳೆದಿದೆ.

ನೀರಿನ ಅಭಾವ ಹಾಗೂ ವಿದ್ಯುತ್ ಸಮಸ್ಯೆಯಿಂದ ರೈತರು ತೊಂದರೆಗೆ ಈಡಾಗಬಾರದೆಂದು ಕಡಿಮೆ ನೀರಿನಲ್ಲಿ ಕೃಷಿ ಮಾಡುವ ಕುರಿತು ಕೇಂದ್ರ ಸರ್ಕಾರ ಹನಿ ನೀರಾವರಿ ಪದ್ಧತಿ ಜಾರಿ ಮಾಡಿ, ಇದಕ್ಕೆ ಸಬ್ಸಿಡಿ ನೀಡುತ್ತಿದೆ. ಆದರೆ, ಈಗ ಇದಕ್ಕೆ ಜಿಎಸ್ಟಿ ಹಾಕಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

ಸಿಎಂ ಸಿದ್ದರಾಮಯ್ಯರಿಂದ ಈಡಿಗ ಸಮುದಾಯ ಒಡೆಯುವ ಕೆಲಸ: ಪ್ರಣವಾನಂದ ಸ್ವಾಮೀಜಿ

ಪ್ರಧಾನಮಂತ್ರಿ ಸಿಂಚಾಯಿ ಯೋಜನೆಯಲ್ಲಿ ಹನಿ ನೀರಾವರಿ ಯೋಜನೆಯಡಿ ಎಸ್ಸಿ/ಎಸ್ಟಿ ಫಲಾನುಭವಿಗಳಿಗೆ ಶೇ.90 ಮತ್ತು ಸಾಮಾನ್ಯರಿಗೆ ಶೇ.75 ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಸಾಧಾರಣವಾಗಿ ಒಂದು ಹೆಕ್ಟೇರಿಗೆ ಡ್ರಿಪ್ ಅಳವಡಿಕೆಗೆ ₹1.17 ಲಕ್ಷ ವೆಚ್ಚ ಆಗುತ್ತದೆ. ಇದರಲ್ಲಿ ಈ ಹಿಂದೆ ರೈತರು ₹ 28-34 ಸಾವಿರ ಪಾವತಿ ಮಾಡಿದರೆ ಸಾಕಾಗುತ್ತಿತ್ತು. ಆದರೆ, ಈಗ ಶೇ.12ರಷ್ಟು ಜಿಎಸ್ಟಿ ಸೇರಿ ಬರೋಬ್ಬರಿ ₹42-45 ಸಾವಿರ ಪಾವತಿ ಮಾಡಬೇಕಾಗಿದೆ. ರೈತರಿಗೆ ಇದು ಕಷ್ಟಕರ ಆಗುವುದರಿಂದ ಹನಿ ನೀರಾವರಿಯಿಂದ ಹಿಂದೆ ಸರಿಯುತ್ತಿದ್ದಾರೆ. ಡ್ರಿಫ್ ಗೆ ರೈತರ ವಂತಿಗೆ ಹೆಚ್ಚಳವಾಗಿದ್ದರಿಂದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ಹಿನ್ನಡೆಯಾಗುತ್ತಿದೆ. ಯೋಜನೆ ಅಳವಡಿಕೊಳ್ಳುವುದಕ್ಕೆ ರೈತರು ಹಿಂದೇಟು ಹಾಕುತ್ತಿದ್ದಾರೆ.

ಈ ಮೊದಲು ಸಾಮಾನ್ಯರಿಗೂ ಶೇ.90ರಷ್ಟು ಸಬ್ಸಿಡಿ ಇತ್ತು. ಬಳಿಕ, ಅದನ್ನು ಶೇ.75ಕ್ಕೆ ಇಳಿಸಲಾಗಿತ್ತು. ಈಗ ಈ ಯೋಜನೆಯಡಿ ಪಾವತಿಸುವ ಹಣಕ್ಕೆ ಜಿಎಸ್ಟಿ ಸೇರಿ ಶೇ.40-50 ರಷ್ಟು ರೈತರೇ ಪಾವತಿ ಮಾಡಬೇಕಾಗುತ್ತದೆ. ಹೀಗಾಗಿ, ಇದು ಬರದ ಬವಣೆಯಲ್ಲಿ ಇರುವ ರೈತರಿಗೆ ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ ರೈತರು.

ಪ್ರಧಾನಮಂತ್ರಿ ಸಿಂಚಾಯಿ ಯೋಜನೆಯಲ್ಲಿ ರೈತರೇ ಜಿಎಸ್ಟಿ ಪಾವತಿಸಬೇಕು ಎನ್ನುವ ಕುರಿತು ಕಳೆದ ತಿಂಗಳು ಆದೇಶ ಮಾಡಿರುವ ತೋಟಗಾರಿಕಾ ಇಲಾಖೆ, ಹನಿ ನೀರಾವರಿಗೆ ಇದುವರೆಗೂ ನೀಡಲಾಗುತ್ತಿದ್ದ ಸಬ್ಸಿಡಿಯಲ್ಲಿ ಮಾರ್ಪಾಡು ಮಾಡಿದೆ. ಈ ಹಿಂದೆ ಸಾಮಗ್ರಿ ಪೂರೈಕೆ ಮಾಡುವ ಕಂಪನಿಗಳು ಜಿಎಸ್ಟಿ ಪಾವತಿಸುತ್ತಿದ್ದವು. ಈಗ ಸಾಮಗ್ರಿ ಪೂರೈಕೆ ಮಾಡುವ ಕಂಪನಿಗಳು ತಮ್ಮ ಸಾಮಗ್ರಿಗೆ ಜಿಎಸ್ಟಿ ಹೊರತುಪಡಿಸಿ ದರ ನಿಗದಿ ಮಾಡಬೇಕು. ಜಿಎಸ್ಟಿಯನ್ನು ರೈತರು ತಮ್ಮ ವಂತಿಗೆಯಲ್ಲಿ ಸೇರಿಸಿ ಪಾವತಿ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಿದೆ.

ದೇಶಕ್ಕೆ ಮೋದಿಯೇ ಗ್ಯಾರಂಟಿ: ಸಂಸದ ಸಂಗಣ್ಣ ಕರಡಿ

ಹನಿ ನೀರಾವರಿ ಯೋಜನೆಯಡಿ ಈ ಬಾರಿ ರೈತರು ತಮ್ಮ ವಂತಿಗೆಯಲ್ಲಿ ಜಿಎಸ್ಟಿ ಪಾವತಿ ಮಾಡಬೇಕಾಗಿದೆ. ಹೀಗಾಗಿ ವಂತಿಗೆ ಹಣ ಹೆಚ್ಚಳವಾಗಿದ್ದರಿಂದ ರೈತರು ಹಿಂದೇಟು ಹಾಕುತ್ತಿದ್ದಾರೆ ಎಂದು ಕೊಪ್ಪಳ ತೋಟಗಾರಿಕಾ ಇಲಾಖೆ ಡಿಡಿ ಕೃಷ್ಣ ಉಕ್ಕುಂದ ಹೇಳಿದ್ದಾರೆ.  

ಸಮರ್ಪಕ ಮಳೆ, ವಿದ್ಯುತ್‌ ಇಲ್ಲ. ಹೀಗಾಗಿ, ಹನಿ ನೀರಾವರಿಯಿಂದ ರೈತರು ಬೆಳೆ ತೆಗೆಯುತ್ತಿದ್ದರು. ಈಗ ಅದಕ್ಕೂ ಜಿಎಸ್ಟಿ ಅಳವಡಿಕೆ ಮಾಡಿದ್ದು ಹೊರೆಯಾಗಿದೆ. ಇದು ರೈತರಿಗೆ ಅಸಾಧ್ಯವಾಗಿದೆ ಎಂದು ಕೊಪ್ಪಳ ರೈತ ಶಂಕ್ರಪ್ಪ ಮಾಟ್ರ ತಿಳಿಸಿದ್ದಾರೆ.  

click me!