*ಅಪ್ಪು ಪೋಟೋ ಸಮೇತ ಕೆಂಡ ಹಾಯ್ದ ಅಭಿಮಾನಿ
*ದೇವರ ಪಲ್ಲಕ್ಕಿ ಜೊತೆಗೆ ಅಪ್ಪು ಪೋಟೋ ಕೂಡ ಮೆರವಣಿಗೆ
*ಕೋಲ್ಹಾರ ವೀರಭದ್ರೇಶ್ವರ ಜಾತ್ರೆಯಲ್ಲಿ ಅಪ್ಪು ಅಜರಾಮರ
*ಅಕ್ಕನ ಆಸೆಯಂತೆ ಅಭಿಮಾನಿಗಳ ದೇವರನ್ನ ಹೊತ್ತು ಮೆರೆಸಿದ ಸಹೋದರ
ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ (ಏ 04): ಕರ್ನಾಟಕ ರತ್ನ, ಪ್ರತಿ ಕನ್ನಡಿಗರ ಮನದಲ್ಲಿ ಅಚ್ಚಳಿಯದೆ ಉಳಿದಿರುವ ಪುನೀತ್ ರಾಜ್‌ಕುಮಾರ್ (Puneeth Rajkumar) ನಮ್ಮೆಲ್ಲರನ್ನ ಅಗಲಿ 6 ತಿಂಗಳುಗಳೇ ಕಳೆದು ಹೋಗಿವೆ. ಆದ್ರೆ ಅಪ್ಪು ನೆನಪು ಎಲ್ಲರನ್ನು ಕಾಡುತ್ತಲೆ ಇದೆ. ಮಕ್ಕಳಿಂದ ಹಿಡಿದು ವೃದ್ದರವರೆಗೂ ಎಲ್ಲರ ಮನಸ್ಸಲ್ಲಿಯು ಅಪ್ಪು ಅಜರಾಮರವಾಗಿ ಉಳಿದಿದ್ದಾರೆ. ಸದ್ಯ ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುತ್ತಿರುವ ಜಾತ್ರೆಗಳಲ್ಲೂ ಪುನೀತ್ ರಾಜಕುಮಾರ್ ಸ್ಮರಣೆ ನಡೆಯುತ್ತಲೇ ಇದೆ.
ಅಪ್ಪು ಪೋಟೋ ಹಿಡಿದು ಕೆಂಡ ಹಾಯ್ದ ಅಭಿಮಾನಿ: ವಿಜಯಪುರ ಜಿಲ್ಲೆಯ ಕೋಲ್ಹಾರ (Kolhar) ಪಟ್ಟಣದಲ್ಲಿ ನಡೆದ ವೀರಭದ್ರೇಶ್ವರ ಜಾತ್ರೆಯಲ್ಲಿ ಅಭಿಮಾನಿಯೊಬ್ಬ ಅಪ್ಪು ಫೋಟೋ ಹಿಡಿದು ಕೆಂಡ ಹಾಯುವ ಮೂಲಕ ಅಪ್ಪು ಅಜರಾಮರ ಅನ್ನೋದನ್ನ ಸಾರಿದ್ದಾನೆ. ಪ್ರತಿ ವರ್ಷ ನಡೆಯೋ ವೀರಭದ್ರ ಜಾತ್ರೆಯಲ್ಲಿ ಕೆಂಡ ಹಾಯೋದು ವಾಡಿಕೆ.
ಈ ವರ್ಷವು ಪಟ್ಟಣದ ಜನರು ಕೆಂಡ ಹಾಯ್ದು ವೀರಭದ್ರ ದೇವರಿಗೆ ಭಕ್ತಿ ಸಮರ್ಪಿಸಿದ್ದಾರೆ. ಈ ನಡುವೆ ಕೋಲ್ಹಾರ ಪಟ್ಟಣ ನಿವಾಸಿ ಹರೀಶ ಕೊಠಾರಿ ಅಪ್ಪು ಪೋಟೊ ಸಮೇತ ಕೆಂಡ ಹಾಯ್ದಿದ್ದಾರೆ. ಅಪ್ಪು ಮತ್ತೆ ಹುಟ್ಟಿ ಬರಲಿ ಎಂದು ವೀರಭದ್ರ ದೇವರಲ್ಲಿ ಈ ಮೂಲಕ ಪ್ರಾರ್ಥನೆ ಮಾಡಿದ್ದಾರೆ.
ದೇವರ ಜಾತ್ರೆಯಲ್ಲಿ ಅಭಿಮಾನಿಗಳ ದೇವರಾದ ಅಪ್ಪು: ಇನ್ನು ಕೆಂಡ ಹಾಯುವ ಧಾರ್ಮಿಕ ಕಾರ್ಯ ನಡೆಯುವ ಮೊದಲು ಕೋಲ್ಹಾರ ಪಟ್ಟಣದಲ್ಲಿ ವೀರಭದ್ರೆ ದೇವರ ಪಲ್ಲಕ್ಕಿ ಉತ್ಸವ ನಡೆದಿದೆ. ಊರಿನ ಮುಖ್ಯ ಬೀದಿಗಳಲ್ಲಿ ದೇವರ ಕಳಶ ಮೆರವಣಿಗೆಯು ನಡೆದಿದೆ. ಹರೀಶ ಕೊಠಾರಿ ಇಡೀ ಮೆರವಣಿಗೆಯಲ್ಲಿ ಅಪ್ಪು ಫೋಟೋ ಸಮೇತವಾಗಿಯೇ ಪಾಲ್ಗೊಂಡಿದ್ದಾರೆ.
ಇದನ್ನೂ ಓದಿ: ಸಿಲಿಕಾನ್ ಸಿಟಿ ತುಂಬೆಲ್ಲಾ ಪವರ್ ಸ್ಟಾರ್ ಅಪ್ಪು ಹವಾ!
ಭಕ್ತರು ಪಲ್ಲಕ್ಕಿ ಹೊತ್ತುಕೊಂಡಂತೆ, ಮತ್ತೊಂದು ಕಡೆಗೆ ತಲೆ ಮೇಲೆ ಕಳಶ ಹೊತ್ತು ಸಾಗಿದಂತೆ ಹರೀಶ್ ಕೂಡ ಅಪ್ಪು ಫೋಟೋವನ್ನು ತಲೆ ಮೇಲೆ ಹೊತ್ತು ಮೆರವಣಿಗೆ ನಡೆಸಿದ್ದಾರೆ. ಒಂದು ಅರ್ಥದಲ್ಲಿ ದೇವರ ಜಾತ್ರೆಯಲ್ಲಿ ಅಪ್ಪು ಅಭಿಮಾನಿಗಳ ದೇವರಾಗಿ ಮಿಂಚಿದ್ದಾರೆ.
ಅಕ್ಕನ ಆಸೆ ಪುರೈಸಿತ ಸಹೋದರ: ಅಪ್ಪು ಪೋಟೊ ಸಮೇತ ಕೆಂಡ ಹಾಯ್ದ ಹರೀಶ್ ಕೊಠಾರಿ ಹರಕೆ ತೀರಿಸೋದರ ಹಿಂದೆ ಅಕ್ಕನ ಆಸೆ ಅಡಗಿದೆ. ಹರೀಶ್ ಅಕ್ಕ ಸಾವಿತ್ರಿ ಕೊಠಾರಿ ವೀರಭದ್ರ ದೇವರ ಜಾತ್ರೆಯಲ್ಲಿ ಅಪ್ಪು ಫೋಟೋ ಮೆರವಣಿಗೆ ಆಗಬೇಕು, ಕೆಂಡ ಹಾಯಬೇಕು ಅನ್ನೋ ಆಸೆ ಇತ್ತಂತೆ. ಇದೆ ಆಸೆಯನ್ನ ಸಾವಿತ್ರಿ ಹರೀಶ್ ಎದುರು ಹೇಳಿಕೊಂಡಿದ್ದಾಳೆ. ಅಕ್ಕನ ಆಸೆಯನ್ನ ತೀರಿಸಲು ಹರೀಶ ಅಪ್ಪು ಪೋಟೊ ಸಮೇತ ಕೆಂಡ ಹಾಯ್ದಿದ್ದಾನೆ. ಜೊತೆಗೆ ಮೆರವಣಿಗೆಯಲ್ಲು ಪಾಲ್ಗೊಂಡು ಅಕ್ಕನ ಆಸೆ ಪೂರೈಸಿದ್ದಾನೆ ಸಹೋದರ ಹರೀಶ್.
ಅಪ್ಪು ಕಟ್ಟಾ ಅಭಿಮಾನಿಗಳು ಅಕ್ಕ-ತಮ್ಮ: ಕೋಲ್ಹಾರ ಪಟ್ಟಣ ನಿವಾಸಿಗಳಾದ ಹರೀಶ್ ಕೊಠಾರಿ ಹಾಗೂ ಅಕ್ಕ ಸಾವಿತ್ರಿ ಕಟ್ಟಾ ಅಪ್ಪು ಅಭಿಮಾನಿಗಳು. ಅಪ್ಪು ಅಂದ್ರೆ ಇಬ್ಬರಿಗು ಪಂಚಪ್ರಾಣ. ಅಪ್ಪು ಅಗಲಿಕೆ ಬಳಿಕ ಇಬ್ಬರಲ್ಲೂ ನೋವು ಮಡುಗಟ್ಟಿತ್ತು. ಅಪ್ಪು ಮತ್ತೆ ಹುಟ್ಟಿಬರಬೇಕು ಅನ್ನೋ ಆಸೆ ಸಾವಿತ್ರಿಯದ್ದು, ಹೀಗಾಗಿ ಊರ ದೇವರಾದ ವೀರಭದ್ರೇಶ್ವರ ಸ್ವಾಮಿಯ ಜಾತ್ರೆಯಲ್ಲಿ ಅಪ್ಪು ಮತ್ತೆ ಹುಟ್ಟಿ ಬರಲಿ ಎಂದು ಪ್ರಾರ್ಥಿಸಿ ಹರಕೆಯನ್ನ ತೀರಿಸಿದ್ದಾರಂತೆ. ಅಪ್ಪು ಪೋಟೊ ಹಿಡಿದು ಪಲ್ಲಕ್ಕಿ ಜೊತೆಗೆ ಮೆರವಣಿಗೆಯನ್ನು ಮಾಡಿ ಅಪ್ಪು ಮರುಜನ್ಮಕ್ಕೆ ದೇವರಲ್ಲಿ ಬೇಡಿಕೊಂಡಿದ್ದಾರೆ.
ಇದನ್ನೂ ಓದಿ: ಇಡೀ ಕುಟುಂಬ ಜೇಮ್ಸ್ ಫಸ್ಟ್ ಡೇ ಫಸ್ಟ್ ಶೋ ವೀಕ್ಷಿಸಿದೆ: ಅಶ್ವಿನಿ ಪುನೀತ್ ರಾಜ್‌ಕುಮಾರ್
ಆಂಧ್ರದ ಶ್ರೀಶೈಲ ಕ್ಷೇತ್ರದಲ್ಲಿ ಅಪ್ಪು ಫೋಟೋ: ಆಂಧ್ರ ಪ್ರದೇಶದ ಶ್ರೀಶೈಲಕ್ಕೆ ಮಲ್ಲಿಕಾರ್ಜುನನ ದರ್ಶನಕ್ಕೆ ಹೋದ ಕರ್ನಾಟಕದ ಭಕ್ತರು ಅಪ್ಪು ಪೋಟೋ ಸಮೇತ ತೆರಳಿದ್ದರು. ಆತ್ಮಾಪುರದಿಂದ ಶ್ರೀಶೈಲ ಮಲ್ಲಿಕಾರ್ಜುನ ದೇವರ ದರ್ಶನದ ವರೆಗು ಅಪ್ಪು ಪೋಟೋ ಸಮೇತವಾಗಿಯೇ ಬೆಟ್ಟ ಹತ್ತಿದ್ದಾರೆ. ಸುಮಾರು 60 ಕಿ.ಮೀ ವರೆಗಿನ ಕಾಡು-ಬೆಟ್ಟಗಳಲ್ಲಿ ನಡೆದುಕೊಂಡು ಸಾಗಿದ ಅಭಿಮಾನಿಗಳ ತಂಡವೊಂದು ಅಪ್ಪು ಫೋಟೋ ಸಮೇತವೇ ಪಾದಯಾತ್ರೆ ಮಾಡಿದ್ದಾರೆ. ಈ ಪೋಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.