ತೂಗು ಸೇತುವೆ ಮೇಲೆ ಕಾರು ಚಲಾಯಿಸಿ ಪ್ರವಾಸಿಗರ ಹುಚ್ಚಾಟ!

By Ravi Janekal  |  First Published Nov 1, 2022, 10:09 PM IST

ಗುಜರಾತ್‌ನ ಮೊರ್ಬಿಯಲ್ಲಿ ತೂಗುಸೇತುವೆ ಕುಸಿದು ನೂರಾರು ಮಂದಿ ಮೃತಪಟ್ಟ ಘಟನೆ ಇನ್ನೂ ಕಣ್ಮುಂದೆಯೇ ಇದೆ. ಇದರ ನಡುವೆ ಉತ್ತರಕನ್ನಡ ಜಿಲ್ಲೆಯ ತೂಗು ಸೇತುವೆಯಲ್ಲಿ ಪ್ರವಾಸಿಗರು ಹುಚ್ಚಾಟ ಮೆರೆದಿರುವ ಘಟನೆ ನಡೆದಿದೆ.


ಭರತ್‌ರಾಜ್ ಕಲ್ಲಡ್ಕ ಜತೆ ಕ್ಯಾಮೆರಾಮ್ಯಾನ್ ಗಿರೀಶ್ ನಾಯ್ಕ್, ಏಷಿಯಾನೆಟ್ ಸುವರ್ಣ ನ್ಯೂಸ್ ಕಾರವಾರ

ಉತ್ತರ ಕನ್ನಡ (ನ.1) : ಗುಜರಾತ್‌ನ ಮೊರ್ಬಿಯಲ್ಲಿ ತೂಗುಸೇತುವೆ ಕುಸಿದು ನೂರಾರು ಮಂದಿ ಮೃತಪಟ್ಟ ಘಟನೆ ಇನ್ನೂ ಕಣ್ಮುಂದೆಯೇ ಇದೆ. ಇದರ ನಡುವೆ ಉತ್ತರಕನ್ನಡ ಜಿಲ್ಲೆಯ ತೂಗು ಸೇತುವೆಯಲ್ಲಿ ಪ್ರವಾಸಿಗರು ಹುಚ್ಚಾಟ ಮೆರೆದಿದ್ದಾರೆ. ಸೂಕ್ತ ನಿರ್ವಹಣೆ ಕಾಣದೇ ಶಿಥಿಲಗೊಂಡಿರುವ ತೂಗು ಸೇತುವೆಯ ಮೇಲೆ ಪ್ರವಾಸಿಗರ ಗುಂಪೊಂದು ಕಾರನ್ನು ಓಡಿಸುವ ಪ್ರಯತ್ನ ಮಾಡಿರೋದು ಇದೀಗ ಜಿಲ್ಲೆಯಾದ್ಯಂತ ತೀವ್ರ ಟೀಕೆಗೆ ಗುರಿಯಾಗಿದೆ. 

Latest Videos

undefined

ಮೊರ್ಬಿ ತೂಗು ಸೇತುವೆ ದುರಂತ ಸ್ಥಳ ಪರಿಶೀಲಿಸಿದ ಮೋದಿ, ಅಧಿಕಾರಿಗಳ ವಿರುದ್ಧ ಗರಂ!

ಗುಜರಾತ್‌ನ ಮೊರ್ಬಿಯಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ತೂಗು ಸೇತುವೆ ಕುಸಿದು ನೂರಾರು ಮಂದಿ ಧಾರುಣವಾಗಿ ಸಾವನ್ನಪ್ಪಿದ ಘಟನೆ ಸಂಭವಿಸಿತ್ತು. ಈ ಘಟನೆ ಇನ್ನೂ ಸಹ ಕಣ್ಮುಂದೆ ಇರುವಾಗಲೇ ಉತ್ತರಕನ್ನಡ ಜಿಲ್ಲೆಯಲ್ಲೂ ಸಹ ಕೆಲ ಯುವಕರು ತೂಗುಸೇತುವೆ ಮೇಲೆ ಕಾರು ಚಲಾಯಿಸುವ ದುಸ್ಸಾಹಸ ಮಾಡಿದ್ದಾರೆ. ಇಂತಹದ್ದೊಂದು ಘಟನೆ ನಡೆದಿರೋದು ಜೋಯಿಡಾ ಹಾಗೂ ಯಲ್ಲಾಪುರ ತಾಲ್ಲೂಕಿನ ಗಡಿಗ್ರಾಮವಾದ ಶಿವಪುರದಲ್ಲಿ. 

ಯಲ್ಲಾಪುರದ ಸಾತೊಡ್ಡಿಯಿಂದ ಶಿವಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಇಲ್ಲಿನ ಕಾಳಿ ನದಿಗೆ ಅಡ್ಡಲಾಗಿ ತೂಗುಸೇತುವೆಯನ್ನು ನಿರ್ಮಿಸಲಾಗಿದೆ. ಈ ಸೇತುವೆ ನಿರ್ಮಾಣಗೊಂಡು ಸುಮಾರು 8 ವರ್ಷಗಳೇ ಕಳೆದಿದ್ದು, ಸೂಕ್ತ ನಿರ್ವಹಣೆ ಕಾಣದೇ ವರ್ಷಗಳೇ ಕಳೆದಿವೆ. ಕೇವಲ ಬೈಕ್ ಓಡಾಟವನ್ನು ತಡೆದುಕೊಳ್ಳಬಹುದಾದ ಸೇತುವೆ ಮೇಲೆ ಕೆಲವು ಯುವಕರು ಕಾರು ಓಡಿಸಲು ಮುಂದಾಗಿದ್ದು, ಸೇತುವೆ ಮೇಲೆ ಅರ್ಧಕ್ಕೆ ಕೊಂಡೊಯ್ದಿದ್ದಾರೆ. ಈ ವೇಳೆ ಸ್ಥಳೀಯರು ಗಮನಿಸಿ ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದು, ಬಳಿಕ ಕಾರನ್ನು ವಾಪಸ್ ತೆಗೆದುಕೊಂಡು ಹೋಗಿದ್ದಾರೆ. 

ಉತ್ತರಕನ್ನಡ ಜಿಲ್ಲೆಯಲ್ಲಿ ಈ ಹಿಂದೆ ಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಮೂರು ಸೇತುವೆಗಳು ನೆರೆಯ ಸಂದರ್ಭದಲ್ಲಿ ನದಿ ಪ್ರವಾಹದಲ್ಲಿ ಕೊಚ್ಚಿಹೋಗಿದ್ದು ಉಳಿದ ಸೇತುವೆಗಳಿಗೆ ಸೂಕ್ತ ನಿರ್ವಹಣೆ ಇಲ್ಲ. ಆದರೂ, ಸೇತುವೆಯೇ ಸಂಚಾರಕ್ಕೆ ಆಧಾರವಾಗಿರುವುದರಿಂದ ಜನರು ಜೀವ ಕೈಯಲ್ಲಿ ಹಿಡಿದು ಅದೇ ಸೇತುವೆಗಳ ಮೇಲೆ ಪ್ರತಿನಿತ್ಯ ಓಡಾಟ ನಡೆಸುತ್ತಾರೆ. ಇಂತಹ ಸೇತುವೆ ಮೇಲೆ ಪ್ರವಾಸಕ್ಕೆ ಬಂದವರು ಈ ರೀತಿಯ ದುಸ್ಸಾಹಸ ಮಾಡುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡುವಂತಿದ್ದು, ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ ಸೇತುವೆಗಳ ದುರಸ್ತಿ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇನ್ನು ಜಿಲ್ಲೆಯಲ್ಲಿ ತೂಗುಸೇತುವೆಗಳನ್ನು ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಉಡುಪಿಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್ ಭಾರದ್ವಜ್ ಅವರು ನಿರ್ಮಿಸಿದ್ದರು. ಅದರ ನಿರ್ವಹಣೆಯನ್ನ ಸರ್ಕಾರವೇ ಮಾಡಬೇಕು ಎಂದು ಆಯಾ ಗ್ರಾಮ ಪಂಚಾಯತ್‌ಗಳಿಗೆ ಜವಾಬ್ದಾರಿ ಹಸ್ತಾಂತರಿಸಲಾಗಿತ್ತು. ಆದರೆ, ಈವರೆಗೂ ಸೇತುವೆ ನಿರ್ವಹಣೆ ಮಾಡದ ಕಾರಣ ಸದ್ಯ ಹೊನ್ನಾವರದ ಕರ್ಕಿ, ಕುದ್ರಗಿ ಹಾಗೂ ಶಿವಪುರ ಬಳಿಯಿರುವ ಮೂರೂ ಸೇತುವೆಗಳೂ ದುರಸ್ಥಿಗೆ ತಲುಪಿವೆ. ತೂಗು ಸೇತುವೆಯ ರೋಪ್‌ಗಳು ತುಕ್ಕು ಹಿಡಿದಿದ್ದು ಸೇತುವೆಯ ಲಿಂಕ್‌ಗಳು ಅಲ್ಲಲ್ಲಿ ಮುರಿದು ಹೋಗಿವೆ. ಇದರಿಂದ ಪ್ರತಿ ದಿನ ಈ ಸೇತುವೆಯಲ್ಲಿ ಓಡಾಡುವ ಜನ ಆತಂಕದಲ್ಲೇ ತೆರಳಬೇಕಿದೆ. ಇನ್ನು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು, ಕೇಳಿದ್ರೆ ಅಧಿಕಾರಿಗಳಿಂದ ಅಧ್ಯಯನ ನಡೆಸಿ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಮೊರ್ಬಿ ಸೇತುವೆ ದುರಂತ, ಪರಿಸ್ಥಿತಿ ಅವಲೋಕಿಸಲು ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ!

 ಒಟ್ಟಿನಲ್ಲಿ ಜನರ ಉಪಯೋಗಕ್ಕೆಂದು ನಿರ್ಮಿಸಿದ ತೂಗು ಸೇತುವೆಗಳು ಇದೀಗ ನಿರ್ವಹಣೆಯ ನಿರ್ಲಕ್ಷ್ಯದಿಂದ ಜನರ ಬಲಿಗೆ ಕಾದುನಿಂತಂತಾಗಿವೆ. ದೊಡ್ಡ ದುರ್ಘಟನೆ ನಡೆಯುವ ಮುನ್ನ ಸರಕಾರ ಕೂಡಲೇ ಎಚ್ಚೆತ್ತುಕೊಂಡು ಸರಿಪಡಿಸಬೇಕಿದೆ.

click me!