ಕುಂದಾನಗರಿಯಲ್ಲಿ ಮೂರು ವರ್ಷಗಳ ಬಳಿಕ ಅತೀ ವಿಜೃಂಭಣೆಯಿಂದ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ರಾಜ್ಯೋತ್ಸವಕ್ಕೂ ಮುನ್ನ ಕರಾಳ ದಿನ ಆಚರಿಸುತ್ತೇವೆ ಬೆಳಗಾವಿಗೆ ನುಗ್ಗುತ್ತೇವೆ ಎಂದಿದ್ದ ಮಹಾಪುಂಡರ ಹೇಳಿಕೆ ಟುಸ್ ಪಟಾಕಿ ಆಗಿತ್ತು.
ಬೆಳಗಾವಿ: ಕುಂದಾನಗರಿಯಲ್ಲಿ ಮೂರು ವರ್ಷಗಳ ಬಳಿಕ ಅತೀ ವಿಜೃಂಭಣೆಯಿಂದ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ರಾಜ್ಯೋತ್ಸವಕ್ಕೂ ಮುನ್ನ ಕರಾಳ ದಿನ ಆಚರಿಸುತ್ತೇವೆ ಬೆಳಗಾವಿಗೆ ನುಗ್ಗುತ್ತೇವೆ ಎಂದಿದ್ದ ಮಹಾಪುಂಡರ ಹೇಳಿಕೆ ಠುಸ್ ಪಟಾಕಿ ಆದ್ರೆ ಇಂದಿನ ಬೆಳಗಾವಿಯ ಅದ್ಧೂರಿ ರಾಜ್ಯೋತ್ಸವ ಅಕ್ಷರಶಃ ಅಪ್ಪು ಉತ್ಸವ ಆಗಿತ್ತು. ಅಷ್ಟೇ ಅಲ್ಲದೇ ಬೆಳಗಾವಿಯ ರಾಜ್ಯೋತ್ಸವ ಈ ಬಾರಿ ದಾಖಲೆ ನಿರ್ಮಿಸಿದ್ದು ಹೇಗೆ ಗೊತ್ತಾ? ಈ ಸ್ಟೋರಿ ನೋಡಿ...
ಗಡಿಜಿಲ್ಲೆ ಬೆಳಗಾವಿಯಲ್ಲಿ (Belagavi) ಮೂರು ವರ್ಷಗಳ ಬಳಿಕ ಅದ್ಧೂರಿ ಕರ್ನಾಟಕ ರಾಜ್ಯೋತ್ಸವ (Karnataka Rajyotsava) ಆಚರಿಸಲಾಯಿತು. ಮಧ್ಯರಾತ್ರಿ 12 ಗಂಟೆಯಿಂದಲೇ ಸಂಭ್ರಮಾಚರಣೆ ಶುರುವಾಗಿತ್ತು. ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಮಧ್ಯರಾತ್ರಿ 12 ಗಂಟೆಗೆ ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅಪ್ಪು ಭಾವಚಿತ್ರದ ಕೇಕ್ ಕಟ್ ಮಾಡಿ ಸಂಭ್ರಮಾಚರಣೆಗೆ ಚಾಲನೆ ನೀಡಲಾಯಿತು. ರಾತ್ರಿ ಸಾವಿರಾರು ಸಂಖ್ಯೆಯಲ್ಲಿ ಸಂಭ್ರಮಾಚರಣೆಗೆ ಸೇರಿದ್ದ ಅಭಿಮಾನಿಗಳ ಸಂಖ್ಯೆ ಮಧ್ಯಾಹ್ನ ಹೊತ್ತಿಗೆ ಲಕ್ಷದ ಗಡಿ ದಾಟಿದೆ. ಬೆಳಗ್ಗೆ 10.30ಕ್ಕೆ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ (Govinda Karajola) ಪೂಜೆ ಸಲ್ಲಿಸಿ ಬಳಿಕ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ರಾಜ್ಯೋತ್ಸವ ಸಂದೇಶ ನೀಡಿದರು.
undefined
ಇವರು ನವೆಂಬರ್ 1 ಕನ್ನಡಿಗ ಅಲ್ಲ; ನಂಬರ್ ಒನ್ ಕನ್ನಡಿಗ!
ಈ ವೇಳೆ ಬೆಳಗಾವಿ ಬಿಜೆಪಿ ಸಂಸದೆ ಮಂಗಲ ಅಂಗಡಿ, ಬಿಜೆಪಿ ಶಾಸಕರಾದ ಅನಿಲ್ ಬೆನಕೆ (Anil Benake), ಅಭಯ್ ಪಾಟೀಲ್ (Abhaya Patil), ಡಿಸಿ ನಿತೇಶ್ ಪಾಟೀಲ್ (Nitesh Patil), ಎಸ್‌ಪಿ ಡಾ.ಸಂಜೀವ್ ಪಾಟೀಲ್, ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ (Boralingaia), ಜಿ.ಪಂ.ಸಿಇಒ ದರ್ಶನ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬೆಳಗಾವಿಯ 14 ಜನರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಳಿಕ ಬೆಂಗಳೂರಿಗಿಂತ ಬೆಳಗಾವಿಯ ರಾಜ್ಯೋತ್ಸವ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಆದ್ರೆ ಬೆಂಗಳೂರಿನ ಕನ್ನಡ ಸಂಘಟನೆಗಳಿಗೆ ನೀಡುವ ಅನುದಾನ ಬೆಳಗಾವಿಯ ಕನ್ನಡ ಸಂಘಟನೆಗಳಿಗೆ ಏಕೆ ನೀಡಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಸಚಿವ ಗೋವಿಂದ ಕಾರಜೋಳ ಹಾರಿಕೆ ಉತ್ತರ ನೀಡಿದರು.
ಕನ್ನಡ ರಾಜ್ಯೋತ್ಸವದ ದಿನ ಕನ್ನಡದಲ್ಲೇ ಮಾತನಾಡಿದ ರಜಿನಿ, ಜೂ. ಎನ್‌ಟಿಆ ...
ಇದಾದ ಬಳಿಕ ನೂರಕ್ಕೂ ಹೆಚ್ಚು ಸ್ತಬ್ಧಚಿತ್ರಗಳ ಮೆರವಣಿಗೆಗೆ ಚಾಲನೆ ನೀಡಲಾಯಿತು. ರಾಜ್ಯೋತ್ಸವ ಮೆರವಣಿಗೆಯಲ್ಲಿ ಎಲ್ಲಿ ನೋಡಿದರೂ ಅಪ್ಪು ಫೋಟೋಗಳೇ ರಾರಾಜಿಸುತ್ತಿದ್ದವು. ಕೈಯಲ್ಲಿ ಅಪ್ಪು ಫೋಟೋ ಮೈ ಮೇಲೆ ಅಪ್ಪು ಚಿತ್ರದ ಟೀ ಶರ್ಟ್ ಅಪ್ಪು ಗತ್ತು ದೇಶಕ್ಕೆ ಗೊತ್ತು ಬೆಳಗಾವಿ ಎಂದೆಂದೂ ಕನ್ನಡಿಗರ ಸ್ವತ್ತು ಎಂಬ ಬರಹದ ಟೀಶರ್ಟ್ ತೊಟ್ಟು ಅಭಿಮಾನಿಗಳು ಸಂಭ್ರಮಿಸಿದರು. ಅಷ್ಟೇ ಅಲ್ಲದೇ ಬೆಳಗಾವಿ ಫೇಸ್‌ಬುಕ್ ಪೇಜ್... ಹಾಗೂ ಬೆಂಗಳೂರಿನ ಕನ್ನಡ ಮನಸುಗಳು ತಂಡ 10 ಸಾವಿರ ಅಡಿ ಉದ್ದದ ಕನ್ನಡ ಬಾವುಟ ಹಿಡಿದು ಸುಮಾರು ಮೂರು ಕಿಲೋಮೀಟರ್‌ವರೆಗೆ ಯುವಕರು ಹೆಜ್ಜೆ ಹಾಕಿದರು.
ಇನ್ನು ಈ ಬಾರಿಯ ರಾಜ್ಯೋತ್ಸವಕ್ಕೆ ಹುಕ್ಕೇರಿ ಹಿರೇಮಠ (Hukkeri Hiremutt) ವತಿಯಿಂದ ಒಂದು ಲಕ್ಷ ಹೋಳಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ರಾಜ್ಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸಿದ ಲಕ್ಷಾಂತರ ಜನರಿಗೆ ಹೋಳಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ (Chandrashekara Swamiji) ನೇತೃತ್ವದಲ್ಲಿ ನೆರವೇರಿದ ಹೋಳಿಗೆ ದಾಸೋಹ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಉದ್ಘಾಟಿಸಿದರು.
ಇತ್ತ ಕಾರ್ಯಕ್ರಮಕ್ಕೆ ಆಗಮಿಸಿದ ಡೈಲಾಗ್ ಕಿಂಗ್ ಸಾಯಿ ಕುಮಾರ್ (Saikumar) ನೋಡಲು ಅಭಿಮಾನಿಗಳು ಮುಗಿಬಿದ್ರು. ಖುದ್ದು ತಾವೇ ಮುಂದೆ ನಿಂತು ಸಾಯಿಕುಮಾರ್ ಅಭಿಮಾನಿಗಳಿಗೆ ಹೋಳಿಗೆ ಊಟ ಬಡಿಸಿದರು. ಇದೇ ವೇಳೆ ಮಾತನಾಡಿದ ನಟ ಸಾಯಿಕುಮಾರ್, 'ಕರ್ನಾಟಕ ಇಲ್ಲ ಅಂದ್ರೆ ನಾನಿಲ್ಲ. ನಿಮಗೆಲ್ಲ ಗೊತ್ತು ನನ್ನ ಮಾತೃಭಾಷೆ ತೆಲುಗು ಆದ್ರೆ ನನ್ನ ಜೀವನ ಭಾಷೆ ಕನ್ನಡ. ಹಣ ಇದ್ರೆ ಕುಬೇರ ಗುಣ ಇದ್ರೆ ನಮ್ಮ ಪುನೀತ ರಾಜಕುಮಾರ. ಕರ್ನಾಟಕ ಸರ್ಕಾರ ಇಂದು ಪುನೀತ್ ರಾಜಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತಿದ್ದಾರೆ ಸರ್ಕಾರಕ್ಕೆ ನನ್ನ ಅಭಿನಂದನೆ. ನನ್ನ ಮಗಳು ಬೆಳಗಾವಿಯಲ್ಲಿಯೇ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾಳೆ. ನನ್ನ ಮಗ ಈಗ ತೆಲುಗು ಚಿತ್ರರಂಗದಲ್ಲಿದ್ದು ಮುಂದಿನ ವರ್ಷ ಕನ್ನಡ ಚಿತ್ರರಂಗಕ್ಕೆ ಬರ್ತಾನೆ. ನಾನು ನನ್ನ ಸಹೋದರರು ಇಷ್ಟು ದೊಡ್ಡ ವೇದಿಕೆಯಲ್ಲಿ ನಿಲ್ಲಲು ಅವಕಾಶ ನೀಡಿದ್ದು ಕನ್ನಡ ತಾಯಿ ಭುವನೇಶ್ವರಿ. ಬೆಂಗಳೂರಿಗೆ ಅಣ್ಣಮ್ಮ, ಸವದತ್ತಿಗೆ ಯಲ್ಲಮ್ಮ ನಮ್ಮ ಬೆಳಗಾವಿಗೆ ಕಿತ್ತೂರು ರಾಣಿ ಚನ್ನಮ್ಮ ಎನ್ನುತ್ತಾ ಅಗ್ನಿ ಚಲನಚಿತ್ರದ ಡೈಲಾಗ್ ಹೇಳಿ ಅಭಿಮಾನಿಗಳನ್ನು ನಟ ಸಾಯಿಕುಮಾರ್ ರಂಜಿಸಿದರು.
ಇನ್ನು ಪ್ರತಿ ವರ್ಷದಂತೆ ಈ ಸಲವೂ ಬೆಳಗಾವಿಯಲ್ಲಿ ಎಂಇಎಸ್ (MES) ಕರಾಳ ದಿನ (Dark day) ಆಯೋಜಿಸಿತ್ತು. ಇಲ್ಲಿನ ಎಂಇಎಸ್ ಮುಖಂಡರು ಮಹಾರಾಷ್ಟ್ರದ ಹಲವು ನಾಯಕರಿಗೆ ಆಹ್ವಾನ ನೀಡಿದ್ರು. ಎಂಇಎಸ್ ಮುಖಂಡರ ಆಹ್ವಾನಕ್ಕೆ ಮಹಾರಾಷ್ಟ್ರದ (Maharashtra) ಬಹುತೇಕ ನಾಯಕರು ಸೊಪ್ಪು ಹಾಕಲಿಲ್ಲ. ಆದ್ರೆ ಶಿವಸೇನೆ ಕೊಲ್ಲಾಪುರ ಜಿಲ್ಲಾಧ್ಯಕ್ಷ ವಿಜಯ ದೇವಣೆ ಕರಾಳ ದಿನದಲ್ಲಿ ಭಾಗವಹಿಸಲು ಕಾಗಲ್ ಮಾರ್ಗವಾಗಿ ಕುಗನೊಳ್ಳಿ ಚೆಕ್ ಪೋಸ್ಟ್‌ಗೆ ಬಂದರೂ ಪೊಲೀಸರು ಪ್ರವೇಶ ನೀಡಲಿಲ್ಲ. ಬಳಿಕ ಶಿನ್ನೊಳಿ ಮಾರ್ಗವಾಗಿ ಬೆಳಗಾವಿ ಪ್ರವೇಶಕ್ಕೆ ಮುಂದಾದ ವಿಜಯ ದೇವಣೆಗೆ ನಗರ ಪೊಲೀಸರು ಅವಕಾಶ ಕೊಡಲಿಲ್ಲ.
ಹೀಗಾಗಿ ರಸ್ತೆ ಮೇಲೆ ಕುಳಿತು ಹೈಡ್ರಾಮಾ ಮಾಡಿ ಕೆಲಹೊತ್ತಿನ ಬಳಿಕ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸಾಗಿದ್ದಾರೆ. ಇತ್ತ ಎಂಇಎಸ್ ಪ್ರತಿ ವರ್ಷದಂತೆ ಸಂಭಾಜಿ ಉದ್ಯಾನದಲ್ಲಿ ಸೇರಿ ಅಲ್ಲಿಂದ ನಾಡದ್ರೋಹಿ ಘೋಷಣೆ ಕೂಗಿ ಮೆರವಣಿಗೆ ಮೂಲಕ ಮರಾಠಾ ಮಂದಿರಕ್ಕೆ ತೆರಳಿ ಪ್ರತಿಭಟನಾ ಸಭೆ ಮಾಡಿದ್ದಾರೆ. ಒಂದು ಕಾಲದಲ್ಲಿ ಬೆಳಗಾವಿಯಲ್ಲಿ ಐವರು ಎಂಇಎಸ್ ಶಾಸಕರಿದ್ದರು. ಮಹಾನಗರ ಪಾಲಿಕೆಯೂ ಎಂಇಎಸ್ ವಶದಲ್ಲಿತ್ತು. ಈಗ ಸಂಪೂರ್ಣ ಸೋತು ಸುಣ್ಣಾಗಿರುವ ಎಂಇಎಸ್ ಅಸ್ತಿತ್ವಕ್ಕಾಗಿ ಹೆಣಗಾಡುತ್ತಿದೆ. ಮೆರವಣಿಗೆಯಿಂದ ದೂರ ಉಳಿಯುವ ಮೂಲಕ ಯುವಸಮೂಹ ಎಂಇಎಸ್ ನಾಯಕರಿಗೆ ನಿರಾಸೆ ಮೂಡಿಸಿದ್ದಂತೂ ಸುಳ್ಳಲ್ಲ.
ಕ್ಯಾಮರಾಮೆನ್ ಅದಿವೇಶ್ ಪಾಟೀಲ್ ಜೊತೆ ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ