ವರದಿ : ವಿಘ್ನೇಶ್ ಎಂ. ಭೂತನಕಾಡು
ಮಡಿಕೇರಿ (ಮೇ.31): ಇನ್ನೇನು ಕೆಲವೇ ದಿನಗಳಲ್ಲಿ ಮುಂಗಾರು ಮಳೆ ಆಗಮನವಾಗುವುದರಿಂದ ಮಳೆಗಾಲದ ಸಂಬಂಧ ಜಿಲ್ಲಾಡಳಿತದಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಅದರಂತೆ ಮಡಿಕೇರಿ ನಗರದ ಬೆಟ್ಟದ ಮೇಲೆ ಅಪಾಯದ ಮನೆಗಳಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಮಡಿಕೇರಿ ನಗರಸಭೆ ಮಳೆಗಾಲದಲ್ಲಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸುಮಾರು 600ಕ್ಕೂ ಅಧಿಕ ಮನೆಗಳಿಗೆ ನೋಟಿಸ್ ನೀಡಿದೆ.
undefined
ಮಡಿಕೇರಿಯ ಇಂದಿರಾ ನಗರ, ಚಾಮುಂಡೇಶ್ವರಿ ನಗರ ಹಾಗೂ ಮಂಗಳಾದೇವಿ ನಗರದಲ್ಲಿ ಹಲವು ಮನೆಗಳು ಅಪಾಯಕಾರಿ ಸ್ಥಳದಲ್ಲಿವೆ ಎಂದು ಗುರುತಿಸಲಾಗಿದ್ದು, ಮಡಿಕೇರಿ ನಗರದ ಅಪಾಯದಂಚಿನಲ್ಲಿರುವ ಮನೆಯ ನಿವಾಸಿಗಳು ಮುಂಗಾರು ಮಳೆಯ ಸಂದರ್ಭದಲ್ಲಿ ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಸೂಚಿಸಿ, ನೋಟಿಸ್ ನೀಡಲಾಗಿದೆ. ಮುಂಗಾರು ಮಳೆಯ ಅಬ್ಬರ ಜೋರಾಗಿ ಅಪಾಯ ಸಂಭವಿಸುವ ಸಾಧ್ಯತೆ ಕಂಡುಬಂದರೆ, ಪರಿಹಾರ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಳೆದ ವರ್ಷವೂ ಮಳೆಗಾಲದ ಸಂದರ್ಭದಲ್ಲಿ ನೋಟಿಸ್ ಜಾರಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮಡಿಕೇರಿಯಲ್ಲಿ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಜಿಲ್ಲೆಯಲ್ಲಿ ಕಳೆದ ಮೂರು ವರ್ಷವೂ ಸತತವಾಗಿ ಭಾರೀ ಮಳೆಯಿಂದ ಪ್ರಕೃತಿ ವಿಕೋಪ ಸಂಭವಿಸಿ ಅಪಾರ ಪ್ರಮಾಣದಲ್ಲಿ ನಷ್ಟಸಂಭವಿಸಿತ್ತು. ಜನ ಜಾನುವಾರುಗಳನ್ನು ಕಳೆದುಕೊಳ್ಳುವಂತಾಯಿತು. ಆದರೆ ಮಡಿಕೇರಿ ನಗರದ ಬೆಟ್ಟದ ಮೇಲೆ ಇರುವ ಮಂಗಳಾದೇವಿ ನಗರ, ಇಂದಿರಾ ನಗರ ಹಾಗೂ ಚಾಮುಂಡೇಶ್ವರಿ ನಗರ ಮತ್ತಿತರ ಬಡಾವಣೆಗಳಲ್ಲಿ ಪ್ರತಿ ಮಳೆಗಾಲದ ಸಂದರ್ಭ ಆತಂಕ ಮನೆ ಮಾಡುತ್ತದೆ. ಮಳೆಗಾಲದಲ್ಲಿ ಬರೆ ಜರಿಯುವುದು, ಮನೆ ಕುಸಿಯುವ ಭೀತಿ ಜರನ್ನು ಆತಂಕ್ಕಕ್ಕೆ ತಳ್ಳಿದೆ. ಈ ಹಿನ್ನೆಲೆಯಲ್ಲಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ನಗರಸಭೆಯಿಂದ ನೋಟಿಸ್ ಜಾರಿ ಮಾಡುವ ಮೂಲಕ ಮಳೆಗಾಲ ಸಂಬಂಧ ಕ್ರಮ ಕೈಗೊಳ್ಳಲಾಗುತ್ತಿದೆ.
ಇದು ಕಾಶ್ಮೀರವಲ್ಲ ಕೊಡಗು... ಆಲಿಕಲ್ಲು ಮಳೆಗೆ ರೈತರು ಹೈರಾಣ .
2018ರಲ್ಲಿ ಆಗಸ್ಟ್‌ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮಡಿಕೇರಿಯ ಮುತ್ತಪ್ಪ ದೇವಾಲಯದ ಸಮೀಪದ ಮನೆಯೊಂದು ಜಾರಿ ನೆಲಸಮವಾಗಿತ್ತು. ಮನೆ ಜಾರಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಲ್ಲದೆ ನಗರದ ಅಲ್ಲಲ್ಲಿ ಮನೆಗಳಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿತ್ತು. ಮನೆ ಕಳೆದುಕೊಂಡ ಸಂತ್ರಸ್ತರು ಇಂದಿಗೂ ಬಾಡಿಗೆ ಮನೆಯಲ್ಲೇ ವಾಸವಾಗಿದ್ದು, ಸರ್ಕಾರದಿಂದ ನೀಡಲಾಗುತ್ತಿರುವ ಮನೆಗಳಿಗಾಗಿ ಎದುರು ನೋಡುತ್ತಿದ್ದಾರೆ. ಇದರಿಂದ ಮಳೆಗಾಲ ಎಂದರೆ ಬೆಟ್ಟದ ಮೇಲಿನ ಮನೆಗಳಲ್ಲಿ ವಾಸಿಸುವವರಿಗೆ ರಾತ್ರಿ ನಿದ್ದೆ ಬರುವುದು ಕೂಡ ಕಷ್ಟ.
ಹೊಸ ಮನೆಗೆ ಹೋಗಿ : 2018ರಲ್ಲಿ ಮಳೆಗೆ ಹಾನಿಯಾಗಿ, ಅಪಾಯದಂಚಿನಲ್ಲಿರುವ ಕಾರಣ ಸರ್ಕಾರದಿಂದ ಮಳೆಹಾನಿ, ಪ್ರಕೃತಿ ವಿಕೋಪದಲ್ಲಿ ಹಾನಿಯಾದ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಗುರುತಿಸಿದಂತೆ ಬಿಳಿಗೇರಿಯಲ್ಲಿ ಮನೆ ಮಂಜೂರು ಮಾಡಲಾಗಿದೆ. ಆದ್ದರಿಂದ ಮಳೆಗಾಲದ ಮುಂಚಿತವಾಗಿ ಮಳೆಗೆ ಹಾನಿಗೀಡಾದ ಮನೆಯನ್ನು ತೆರವುಗೊಳಿಸಿ ಛಾಯಾಚಿತ್ರವನ್ನು ನೀಡುವಂತೆ ನಗರಸಭೆಯ ನೋಟಿಸ್‌ನಲ್ಲಿ ಸೂಚನೆ ನೀಡಲಾಗಿದೆ. ಇಲ್ಲದಿದ್ದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಜೂನ್‌ನಿಂದ ಮಳೆ ಪ್ರಾರಂಭವಾಗುವುದರಿಂದ ವಿಳಂಬ ಮಾಡದಂತೆ ನಗರಸಭೆ ತಿಳಿಸಿದೆ.
ಸರ್ಕಾರದಿಂದ ಪರಿಹಾರ: 2018ರಲ್ಲಿ ಪ್ರಕೃತಿ ವಿಕೋಪ ಸಂಭವಿಸಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಜಂಬೂರು, ಬಿಳಿಗೇರಿಯಲ್ಲಿ ಮನೆಗಳನ್ನು ಸರ್ಕಾರದಿಂದ ನಿರ್ಮಿಸಿಕೊಡಲಾಗಿದೆ. 2019, 2020ರಲ್ಲಿ ಮನೆ ಕಳೆದುಕೊಂಡವರಿಗೆ ಸರ್ಕಾರದಿಂದ ಪರಿಹಾರ ನೀಡಲಾಗಿದೆ.
ಬಾಡಿಗೆ ಮನೆ ಸಿಗುವುದ ಕಷ್ಟ: ಇದೀಗ ಕೊರೋನಾ ಸೋಂಕು ಹಾಗೂ ಲಾಕ್‌ಡೌನ್ ಇರುವ ಪರಿಣಾಮ ಬಾಡಿಗೆ ಮನೆಗಳು ಸಿಗುವುದು ಕಷ್ಟಎಂಬಂತಾಗಿದೆ. ಮಡಿಕೇರಿಯಲ್ಲಿ ಮೊದಲೇ ಬಾಡಿಗೆಗೆ ಮನೆಗಳು ಸಿಗುವುದು ತೀರಾ ಕಷ್ಟ. ಇದೀಗ ಮಳೆಗಾಲದ ಹಿನ್ನೆಲೆಯಲ್ಲಿ ಅಪಾಯದಂಚಿನಲ್ಲಿರುವ ಮನೆಗಳಲ್ಲಿ ವಾಸಿಸುವವರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಿದ್ದು, ಹಲವಾರು ಮಂದಿ ಮನೆ ದೊರಕದೆ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆಯಿದೆ. ಲಾಕ್‌ಡೌನ್ ಅವಧಿಯಲ್ಲಿ ಕೆಲಸ ಕೂಡ ಇಲ್ಲದಿರುವುದರಿಂದ ಮನೆಯ ಬಾಡಿಗೆ ಹೇಗೆ ಪಾವತಿಸಬೇಕೆಂಬ ಚಿಂತೆಯಲ್ಲಿದ್ದಾರೆ. ಮಡಿಕೇರಿಯಲ್ಲಿ ಬಾಡಿಗೆ ಮನೆಗಳಿಗೆ ಹೆಚ್ಚಿನ ಹಣ ಕೂಡ ಪಾವತಿಸಬೇಕಾಗಿರುವುದರಿಂದ ಮತ್ತೆ ಮಳೆಗಾಲದಲ್ಲಿ ಅಪಾಯದಂಚಿನಲ್ಲಿರುವ ಮನೆಗಳ ಜನರು ಸಮಸ್ಯೆ ಎದುರಿಸುವಂತಾಗಿದೆ.
ಮಳೆಗಾಲ ಆರಂಭವಾಗುವುದರಿಂದ ಕಳೆದ ಬಾರಿ ಮಳೆಯಿಂದ ಹಾನಿಗೀಡಾದ ಮನೆಯನ್ನು ಬಿಟ್ಟು ಬಿಳಿಗೇರಿಯಲ್ಲಿ ಸಂತ್ರಸ್ತರಿಗೆ ನೀಡಲಾಗಿರುವ ಮನೆಗೆ ತೆರಳುವಂತೆ ನಗರಸಭೆಯಿಂದ ನೋಟಿಸ್ ನೀಡಿದ್ದಾರೆ. ಆದರೆ ಹೊಸ ಮನೆಯ ಕೀ ಇನ್ನೂ ನಮಗೆ ಸಿಕ್ಕಿಲ್ಲ. ಇದರಿಂದ ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ
-ಹೇಮಾ, ಇಂದಿರಾ ನಗರ ನಿವಾಸಿ ಮಡಿಕೇರಿ.