* ಲಾಕ್‌ಡೌನ್ ಮತ್ತೆ ವಿಸ್ತರಣೆ ಸಾಧ್ಯತೆ?
* ನೂಕು ನುಗ್ಗಲಾದರೆ ಸೋಂಕು ಹಬ್ಬುವ ಸಾಧ್ಯತೆ
* ಸಾಮಾಜಿಕ ಅಂತರ ನಿರ್ಲಕ್ಷ್ಯಿಸಿದರೆ ಕೊರೋನಾಕ್ಕೆ ಆಹ್ವಾನ
ಬಳ್ಳಾರಿ(ಮೇ.31): ಜೂನ್ 7ರ ವರೆಗೆ ವಿಸ್ತರಿಸಿರುವ ಪೂರ್ಣ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮೇ 31 ಹಾಗೂ ಜೂನ್ 1ರಂದು ಅಗತ್ಯ ವಸ್ತುಗಳ ಖರೀದಿಗಾಗಿ ಜಿಲ್ಲಾಡಳಿತ ಅವಕಾಶ ನೀಡಿದೆ. ಹಾಗಂತ ಮುಗಿಬಿದ್ದು ವ್ಯಾಪಾರ ನಡೆಸಿದರೆ ಕೊರೋನಾ ಸೋಂಕು ತಗುಲುವ ಅಪಾಯವಿದೆ ಎಂದು ಎಚ್ಚರಿಸಿರುವ ವೈದ್ಯಕೀಯ ವಲಯ, ಸಾಮಾಜಿಕ ಅಂತರದಲ್ಲಿ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡರೆ ಮಾತ್ರ ಹೆಚ್ಚು ಸುರಕ್ಷಿತ ಎಂದು ಹೇಳಿದೆ.
ಸಂಪೂರ್ಣ ಲಾಕ್‌ಡೌನ್ ನಡುವೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗುತ್ತಿದೆ. ಬೆಳಗ್ಗೆ 6ರಿಂದ 12ರ ವರೆಗೆ ಎರಡು ದಿನಗಳ ಕಾಲ ಜನರು ನಿತ್ಯ ಬಳಕೆಯ ದಿನಸಿ, ತರಕಾರಿ, ಹಣ್ಣು, ಮದ್ಯ, ಮಾಂಸ, ಬೇಕರಿ ತಿನಿಸುಗಳನ್ನು ಖರೀದಿಸಬಹುದು. ಆದರೆ, ಈಗಾಗಲೇ ಲಾಕ್‌ಡೌನ್ ನಡುವೆ ನೀಡಿದ್ದ ಸಮಯದಲ್ಲಿ ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿ ಖರೀದಿಗಾಗಿ ಮುಗಿಬಿದ್ದರು. ಬೆಳಿಗ್ಗೆಯಿಂದಲೇ ತರಕಾರಿ ಮಾರುಕಟ್ಟೆಗಳು ಜನರಿಂದ ತುಂಬಿಕೊಂಡಿದ್ದವು. ಸಾಮಾಜಿಕ ಅಂತರ, ಮಾಸ್ಕ್ ಬಳಕೆಯ ನಿಯಮವನ್ನು ಸಂಪೂರ್ಣ ನಿರ್ಲಕ್ಷಿಸಲಾಯಿತು. ಈ ರೀತಿಯ ಜನರ ವರ್ತನೆಯಿಂದ ಸೋಂಕು ಹರಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಅದೆಷ್ಟೋ ಜನರಿಗೆ ಸೋಂಕಿನ ಲಕ್ಷಣವಿದ್ದರೂ ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿರುವುದಿಲ್ಲ. ಕೆಲವರಿಗೆ ಲಕ್ಷಣವಿಲ್ಲದಿದ್ದರೂ ಸೋಂಕು ಇರುವುದು ದೃಢಗೊಂಡಿದೆ. ಸೋಂಕುಳ್ಳ ಅನೇಕರು ಮಾರುಕಟ್ಟೆಗೆ ಬಂದಿರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಜನರು ತಮ್ಮ ವೈಯುಕ್ತಿಕ ಸುರಕ್ಷತೆಗೆ ಕಡೆಗೆ ಗಮನ ಹರಿಸಬೇಕು. ತಪ್ಪದೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತಾಗಬೇಕು. ಒಂದು ವೇಳೆ ಮೈ ಮರೆತು ಓಡಾಡಿದರೆ, ಸೋಂಕು ಹರಡುವಿಕೆಯನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ ಎಂಬುದು ವೈದ್ಯಾಧಿಕಾರಿಗಳ ಎಚ್ಚರಿಕೆ ಕಿವಿಮಾತು.
ಬಳ್ಳಾರಿ: ಕೊರೋನಾ ಗೆದ್ದು ಬಂದ ಶತಾಯುಷಿ ದಂಪತಿ..!
ಸೋಂಕು ಇಳಿದರೂ ಸಾವು ನಿಂತಿಲ್ಲ:
ಅವಳಿ ಜಿಲ್ಲೆಯಲ್ಲಿ ಕೊರೋನಾ ಸೋಂಕು ಇಳಿಮುಖವಾಗುತ್ತಿದೆ. ಆದರೆ, ಮರಣ ಪ್ರಮಾಣದಲ್ಲಿ ಇಳಿಕೆಯಾಗಿಲ್ಲ. ಯುವಕರು, ಮಧ್ಯವಯಸ್ಕರು, ವೃದ್ಧರು ಸೇರಿದಂತೆ ಎಲ್ಲ ವಯೋಮಾನದವರಿಗೆ ಸೋಂಕು ಕಾಣಿಸಿಕೊಂಡಿದ್ದು ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಈ ಪೈಕಿ ಅನೇಕರು ಸೋಂಕು ಉಲ್ಬಣದಿಂದ ಸಾವಿಗೀಡಾಗುತ್ತಿದ್ದಾರೆ. ಎರಡು ಜಿಲ್ಲೆಯಲ್ಲಿ ಸೋಂಕು ಇಳಿಮುಖವಾಗುತ್ತಿದೆ. ಇನ್ನು ಯಾವ ಅಪಾಯವಿಲ್ಲ ಎಂದು ವಿನಾಕಾರಣ ಓಡಾಡಿದರೆ ಅಥವಾ ಗುಂಪಿನಲ್ಲಿ ತಿರುಗಾಡಿದರೆ ಕೊರೋನಾಕ್ಕೆ ಮುಕ್ತ ಆಹ್ವಾನ ನೀಡಿದಂತೆಯೇ ಎಷ್ಟೇ ಸುರಕ್ಷಿತಾ ಕ್ರಮಗಳನ್ನು ಅನುಸರಿಸಿದರೂ ಸೋಂಕಿನ ಆತಂಕ ಇದ್ದೇ ಇದೆ. ಎರಡನೇ ಅಲೆ ಯಾವ ರೀತಿಯಾಗಿ ತನ್ನ ಸ್ವರೂಪ ಬದಲಾಯಿಸಿಕೊಂಡಿದೆ ಎಂಬುದು ನಿಗೂಢವಾಗಿಯೇ ಇದೆ. ಹೀಗಾಗಿಯೇ ಮೊದಲ ಅಲೆಗಿಂತ ಎರಡನೇ ಅಲೆಯಲ್ಲಿ ಸಾವಿನ ಪ್ರಮಾಣ ಏರಿಕೆ ಕಂಡಿದೆ ಎನ್ನುತ್ತಾರೆ ವೈದ್ಯರು.
ಲಾಕ್‌ಡೌನ್ ಮತ್ತೆ ವಿಸ್ತರಣೆ ಸಾಧ್ಯತೆ?
ಎರಡು ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಪೂರ್ಣ ಇಳಿಕೆ ಕಾಣಬೇಕು. ಸಾವಿನ ಸಂಖ್ಯೆಯಲ್ಲೂ ತೀವ್ರ ಇಳಿಮುಖ ಕಂಡುಕೊಳ್ಳಬೇಕು. ಆಗ ಮಾತ್ರ ಲಾಕ್‌ಡೌನ್‌ನಿಂದ ಜನರಿಗೆ ಮುಕ್ತ ಸಿಗಲಿದೆ. ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದೆ ಎಂಬ ನೆಮ್ಮದಿ ಒಂದೆಡೆಯಾದರೆ, ಜನರ ನಿರ್ಲಕ್ಷ್ಯದಿಂದ ಮತ್ತೆ ಏರಿಕೆಯಾದರೆ ಲಾಕ್‌ಡೌನ್ ಮತ್ತೆ ಮುಂದುವರಿಯುವ ಸಾಧ್ಯತೆಯೂ ಇದೆ. ಹೀಗಾಗಿ ಜನರು ಸೋಂಕು ನಿಯಂತ್ರಿಸುವ ಜಿಲ್ಲಾಡಳಿತದ ಕಾರ್ಯಕ್ಕೆ ಸಹಕರಿಸಬೇಕು ಎನ್ನುತ್ತಾರೆ ಜಿಲ್ಲಾಡಳಿತದ ಕೆಲವು ಅಧಿಕಾರಿಗಳು.
ಬಳ್ಳಾರಿಗೆ ಕರಿಮಾರಿಯ ಭೀತಿ: ಆತಂಕದಲ್ಲಿ ಜನತೆ
ಕಠಿಣ ಲಾಕ್‌ಡೌನ್ ನಡುವೆಯೂ ಅನೇಕರು ವಿನಾಕಾರಣ ಹೊರ ಬರುತ್ತಿದ್ದಾರೆ. ಖರೀದಿ ಕೇಂದ್ರಗಳ ಮುಂದೆ ನೂರಾರು ಸಂಖ್ಯೆಯಲ್ಲಿ ನುಗ್ಗುತ್ತಾರೆ. ಸಾಮಾಜಿಕ ಅಂತರದ ಕಡೆ ಗಮನ ಹರಿಸುವುದಿಲ್ಲ. ನಿರಂತರ ಜನರಲ್ಲಿ ಅರಿವು ಮೂಡಿಸಿದರೂ ಕೆಲವರಲ್ಲಿ ಯಾವ ಬದಲಾವಣೆ ಕಂಡು ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸುವ ಅಧಿಕಾರಿಗಳು, ಸೋಂಕು ಹಾಗೂ ಸಾವಿನ ನಿಯಂತ್ರಣಕ್ಕೆ ಲಾಕ್‌ಡೌನ್ ಹೊರತುಪಡಿಸಿ; ಬೇರೆ ಮಾರ್ಗವೇ ಇಲ್ಲ ಎಂದು ಹೇಳುತ್ತಾರೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನೂಕುನುಗ್ಗಲು ಮಾಡಿಕೊಂಡರೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಇದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಇಷ್ಟಾಗಿಯೂ ಜನರು ಖರೀದಿಗಾಗಿ ಮುಗಿ ಬೀಳುತ್ತಾರೆ ಎಂದು ಬಳ್ಳಾರಿ ಡಿಎಚ್‌ಒ ಡಾ. ಜನಾರ್ದನ್ ತಿಳಿಸಿದ್ದಾರೆ.
ಲಾಕ್‌ಡೌನ್ ವಿಸ್ತರಣೆ ಮಾಡಿರುವುದು ಒಳ್ಳೆಯದು. ಖರೀದಿಗಾಗಿ ಜನರು ಅಷ್ಟೇಕೆ ಆತುರ ಮಾಡುತ್ತಾರೆ ಎಂಬುದೇ ಗೊತ್ತಾಗುತ್ತಿಲ್ಲ. ಎರಡು ದಿನ ಸಮಯ ಕೊಟ್ಟಿದ್ದರೂ ವಿನಾಕಾರಣ ನೂಕು ನುಗ್ಗಲು ಮಾಡುವುದೇಕೆ? ಎಂದು ಬಳ್ಳಾರಿ ಗ್ರಹಂ ರಸ್ತೆ ವ್ಯಾಪಾರಿ ತುಮಟಿ ರಾಜಣ್ಣ ಹೇಳಿದ್ದಾರೆ.
ತರಕಾರಿ, ದಿನಸಿಗೆ ಜನ ಮುಗಿಬೀಳುವುದರಿಂದ ನಮಗೂ ಅಪಾಯವಿದೆ. ನಾವು ಸಹ ಮನುಷ್ಯರಲ್ಲವೇ? ಜನರೇಕೆ ಅರ್ಥ ಮಾಡಿಕೊಳ್ಳುವುದಿಲ್ಲ. ವಿನಾಕಾರಣ ಮುಗಿಬೀಳುತ್ತಿರುವುದರಿಂದ ನಮಗೂ ಆತಂಕವಿದೆ ಎಂದು ಬಳ್ಳಾರಿ ದೇವಿನಗರ ತರಕಾರಿ ವ್ಯಾಪಾರಿ ವಿಜಯಲಕ್ಷ್ಮಿ ತಿಳಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona