ಪ್ರಧಾನಮಂತ್ರಿ ನರೇಂದ್ರ ಮೋದಿ ಆಡಳಿತದಿಂದ ದೇಶದಲ್ಲಿ ಅಸಮಾನತೆ, ಭ್ರಷ್ಟಾಚಾರ, ಬೆಲೆ ಏರಿಕೆ ಮಿತಿಮೀರಿದೆ. ಅದನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರವು ಸಂಪೂರ್ಣ ವಿಫಲವಾಗಿದೆ: ಸಿಎಫ್ಡಿ ಅಧ್ಯಕ್ಷ ಎಸ್.ಆರ್. ಹಿರೇಮಠ
ರಾಯಚೂರು(ಆ.01): ಮುಂಬರುವ ಲೋಕಸಭಾ ಹಾಗೂ ದೇಶದ ವಿವಿಧ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳಲ್ಲಿ ಕೋಮುವಾದಿ, ಪ್ರಜಾಪ್ರಭುತ್ವ ವಿರೋಧಿ ಬಿಜೆಪಿ ಸೋಲಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಲು ಸೆ.23ರಿಂದ 25ರ ವರೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ಅಖಿಲ ಭಾರತ ಅನುಭವ ಮಂಟಪವನ್ನು ಆಯೋಜಿಸಲಾಗಿದೆ ಎಂದು ಸಿಟಿಜನ್ಸ್ ಫಾರ್ ಡೆಮಾಕ್ರಸಿ (ಸಿಎಫ್ಡಿ)ಯ ಅಧ್ಯಕ್ಷ ಎಸ್.ಆರ್. ಹಿರೇಮಠ ತಿಳಿಸಿದರು.
ಈ ಸಂಬಂಧ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಆಡಳಿತದಿಂದ ದೇಶದಲ್ಲಿ ಅಸಮಾನತೆ, ಭ್ರಷ್ಟಾಚಾರ, ಬೆಲೆ ಏರಿಕೆ ಮಿತಿಮೀರಿದೆ. ಅದನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರವು ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.
undefined
ರಾಯಚೂರು: ಜಿಟಿಜಿಟಿ ಮಳೆಗೆ ಸೋರುತ್ತಿವೆ ಸರ್ಕಾರಿ ಶಾಲೆಗಳು..!
ದೇಶ ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರಿ, ಸಮಾಜದಲ್ಲಿ ಕೋಮು ಕಿಚ್ಚನ್ನು ಹಚ್ಚಿ, ಅಶಾಂತಿಯ ವಾತಾವರಣ ಸೃಷ್ಟಿಸಿದ್ದ ಬಿಜೆಪಿಯ ದುರಾಡಳಿತವನ್ನು ರಾಜ್ಯದ ಜನರು ಕೊನೆಗಾಣಿಸಿದ್ದಾರೆ. ಅದೇ ಪ್ರೇರಣೆಯಿಂದ ಲೋಕಸಭಾ ಹಾಗೂ ವಿವಿಧ ರಾಜ್ಯಗಳಲ್ಲಿ ಚುನಾವಣೆಗಳಲ್ಲಿಯೂ ಸಹ ಬಿಜೆಪಿ ಹಾಗೂ ಸಂಘ ಪರಿವಾರದವರನ್ನು ಸೋಲಿಸುವ ನಿಟ್ಟಿನಲ್ಲಿ ಸಮಾನ ಮನಸ್ಕರು ಒಗ್ಗೂಡಿ ರೂಪಿಸಬೇಕಾದಂತಹ ಜನಜಾಗೃತಿ, ಆಂದೋಲನಗಳ ಬಗ್ಗೆ ಮೂರು ದಿನಗಳ ಅನುಭವ ಮಂಟಪದಲ್ಲಿ ಕೂಲಂಕುಷವಾಗಿ ಚರ್ಚಿಸಲಾಗುವುದು ಎಂದರು.
ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳ ರದ್ದತಿಗಾಗಿ ಇಡೀ ದೇಶದಾದ್ಯಂತ ನಡೆದ ಐತಿಹಾಸಿಕ ಹೋರಾಟಕ್ಕೆ ಮಣಿದು ಕೇಂದ್ರ ಕಾಯ್ದೆಗಳನ್ನು ವಾಪಸ್ ಪಡೆದಿದೆ. ಇದೀಗ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಮೂರು ಕಾಯ್ದೆಗಳನ್ನು ಹಿಂಪಡೆದು ಬದ್ಧತೆ ಪ್ರದರ್ಶಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸಮಾಲಿ ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎಪಿಎಂಸಿ ಕಾಯ್ದೆಯನ್ನು ಹಿಂಪಡೆದಿದೆ. ಆದರೆ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಜಾನುವಾರ ಹತ್ಯೆ ನಿಷೇಧ ಕಾಯ್ದೆಯನ್ನು ಹಿಂಪಡೆದಿಲ್ಲ. ಈಗಾಗಲೇ ಮುಖ್ಯ ಮಂತ್ರಿಗಳ ಗಮನಕ್ಕೆ ತರಲಾಗಿದೆ. ಕೂಡಲೇ ರೈತರು, ಕಾರ್ಮಿಕ ಸಂಘಟನೆಗಳೊಂದಿಗೆ ಚರ್ಚಿಸಿ ರೈತ ರಹಿತ ಕಾಯುವ ಕಾಯ್ದೆ ರೂಪಿಸಬೇಕು, ರೈತರನ್ನು ಬೀದಿಗೆ ತಳ್ಳುವ ಕಾಯ್ದೆಗಳನ್ನು ಸುತಾರಾಮ್ ಅಂಗೀಕರಿಸಕೂಡದು ಎಂದು ಒತ್ತಾಯಿಸಿದರು.
ರಾಯಚೂರು: ಗೃಹಲಕ್ಷ್ಮಿ ಅರ್ಜಿ ಹಾಕಲು ಬಡವರಿಂದ ಹಣ ವಸೂಲಿ, ಒಂದೊಂದು ಕೇಂದ್ರದಲ್ಲಿ ಒಂದೊಂದು ರೇಟ್..!
ಜನಾಂದೋಲಗಳ ಮಹಾ ಮೈತ್ರಿ ಸಂಘಟನೆ ಸಂಚಾಲಕ ರಾಘವೇಂದ್ರ ಕುಷ್ಟಗಿ ಮಾತನಾಡಿ, ಆರ್‌ಎಸ್‌ಎಸ್ ಸಹ ಸಂಘಟನೆಯಾಗಿರುವ ಬಿಜೆಪಿ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಹುನ್ನಾರ ಹೂಡಿದೆ. 2025ಕ್ಕೆ ಆರ್‌ಎಸ್‌ಎಸ್ ಜನ್ಮ ತಾಳಿ ನೂರು ವರ್ಷಗಳು ಕಳೆಯಲಿದೆ. ಈಗಾಗಲೇ ಸಂಘಟನೆಗಳು ಹಿಂದು ರಾಷ್ಟ್ರ ನಿರ್ಮಾಣ ಸಂಕಲ್ಪ ಮಾಡಿವೆ. ಹಿಂದು ಧರ್ಮವೇ ಅಲ್ಲ, ಆದರೂ ಭಾವನೆಗಳನ್ನು ಕೆರಳಿಸುವ ಕೆಲಸ ನಡೆಯುತ್ತಿರುವುದನ್ನು ತಡೆಯಬೇಕಿದೆ. ಹಿಂದು ಮತ್ತು ಮುಸ್ಲಿಂರಲ್ಲಿ ಭಾರತ ಪಾಕಿಸ್ತಾನ ಎಂದು ಸಮಾಜವನ್ನು ಒಡೆಯುವ ಕೆಲಸ ಮಾಡಲಾಗುತ್ತಿದೆ. ಬರುವ ಎಂಪಿ ಎಲೆಕ್ಷನ್ನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ನಿರಂಕುಶ ಪ್ರಭುತ್ವ ರೂಪುಗೊಳ್ಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ದೇಶದಲ್ಲಿ ಪ್ರತಿಗಾಮಿ ಸಾಂಸ್ಕೃತಿಕ ರಾಜಕೀಯ ಚಳವಳಿ ರೂಪಿಸುವ ಜರೂರಿ ಒದಗಿ ಬಂದಿದ್ದು, ಅದಕ್ಕಾಗಿ ಎಲ್ಲ ಸಂಘಟನೆಗಳು ಒಗ್ಗೂಡಿ ಮುಂದಿನ ಹೋರಾಟ, ಸಾಂಸ್ಕೃತಿಕ ಅಪಾಯದಿಂದ ಪಾರಾಗಬೇಕಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮೂರು ದಿನಗಳಕಾಲ ಅಖಿಲ ಭಾರತ ಅನುಭವ ಮಂಟಪ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ನ್ಯಾಯಮೂರ್ತಿ ನಾಗಮೋಹನ ದಾಸ್ ಅವರು ಇದನ್ನು ಉದ್ಘಾಟಿಸಲಿದ್ದಾರೆ. ರಾಜೇಂದ್ರ ಚೆನ್ನಿ ದಿಕ್ಕೂಚಿ ಭಾಷಣಮಾಡಲಿದ್ದು, ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳ ವಿವಿಧ ಸಂಘಟನೆಗಳ ಜಂಟಿ ಸಭೆಗಳು ನಡೆಯಲಿದ್ದು, 20 ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘಟನೆ ಮುಖಂಡರಾದ ಜಾನ್ ವೆಸ್ಲಿ ಖಾತರಕಿ, ವೇಣುಗೋಪಾಲ ಭಟ್, ಖಲಿಲುಲ್ಲಾ ಸೇರಿ ಇತರರು ಇದ್ದರು.