ರಾಯಚೂರು: ಜಿಟಿಜಿಟಿ ಮಳೆಗೆ ಸೋರುತ್ತಿವೆ ಸರ್ಕಾರಿ ಶಾಲೆಗಳು..!
ಬಡಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲಿವೆಂದು ಸರ್ಕಾರ ಲಕ್ಷ- ಲಕ್ಷ ಹಣ ನೀಡಿ ಶಾಲೆಗಳ ಕೋಣೆಗಳನ್ನ ನಿರ್ಮಾಣ ಮಾಡುತ್ತಾರೆ. ಆದ್ರೆ ಕೆಲ ಭ್ರಷ್ಟ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ದಿಂದಾಗಿ ಕಳಪೆ ಕೋಣೆಗಳ ನಿರ್ಮಾಣ ಮಾಡಿದ ಭಾಗವಾಗಿ ಸರ್ಕಾರಿ ಶಾಲೆಗಳ ಕೋಣೆಗಳು ಸ್ವಲ್ಪ ಮಳೆಯಾದ್ರೆ ಸಾಕು ಬಚ್ಚಲು ಮನೆ ಆಗುತ್ತಿವೆ. ಅಲ್ಲದೇ ಮಳೆ ಬರುತ್ತಿದ್ರೆ ಶಿಕ್ಷಣ ಇಲಾಖೆ ಅಧಿಕಾರಿಗಳಲ್ಲಿ ಢವಢವ ಶುರುವಾಗುವಂತೆ ಆಗಿವೆ ಸರ್ಕಾರಿ ಶಾಲೆಗಳ ಪರಿಸ್ಥಿತಿ.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣ ನ್ಯೂಸ್
ರಾಯಚೂರು(ಜು.28): ರಾಯಚೂರು ಜಿಲ್ಲೆಯಾದ್ಯಂತ ಕಳೆದ ಒಂದು ವಾದದಿಂದ ಜಿಟಿಜಿಟಿ ಮಳೆ ಆಗುತ್ತಿದೆ. ಮಳೆಯಿಂದಾಗಿ ಸರ್ಕಾರಿ ಶಾಲೆಗಳು ಸೋರಿ ಮಳೆ ನೀರಿನಿಂದ ಬಚ್ಚಲು ಮನೆಗಳಂತೆ ಕಂಗೋಳಿಸುತ್ತಿವೆ. ಕೆಲ ಶಾಲೆಯ ಪರಿಸ್ಥಿತಿ ಅಂತೂ ಹೇಳುವುದೇ ಬೇಡ. ಬಡಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲಿವೆಂದು ಸರ್ಕಾರ ಲಕ್ಷ- ಲಕ್ಷ ಹಣ ನೀಡಿ ಶಾಲೆಗಳ ಕೋಣೆಗಳನ್ನ ನಿರ್ಮಾಣ ಮಾಡುತ್ತಾರೆ. ಆದ್ರೆ ಕೆಲ ಭ್ರಷ್ಟ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ದಿಂದಾಗಿ ಕಳಪೆ ಕೋಣೆಗಳ ನಿರ್ಮಾಣ ಮಾಡಿದ ಭಾಗವಾಗಿ ಸರ್ಕಾರಿ ಶಾಲೆಗಳ ಕೋಣೆಗಳು ಸ್ವಲ್ಪ ಮಳೆಯಾದ್ರೆ ಸಾಕು ಬಚ್ಚಲು ಮನೆ ಆಗುತ್ತಿವೆ. ಅಲ್ಲದೇ ಮಳೆ ಬರುತ್ತಿದ್ರೆ ಶಿಕ್ಷಣ ಇಲಾಖೆ ಅಧಿಕಾರಿಗಳಲ್ಲಿ ಢವಢವ ಶುರುವಾಗುವಂತೆ ಆಗಿವೆ ಸರ್ಕಾರಿ ಶಾಲೆಗಳ ಪರಿಸ್ಥಿತಿ.
ಆತಂಕದಲ್ಲಿಯೇ ಶಿಕ್ಷಕರು ಮಕ್ಕಳಿಗೆ ಪಾಠ:
ರಾಯಚೂರು ಜಿಲ್ಲೆಯಲ್ಲಿ 675 ಕಿರಿಯ ಪ್ರಾಥಮಿಕ ಶಾಲೆಗಳು, 773 ಹಿರಿಯ ಪ್ರಾಥಮಿಕ ಶಾಲೆಗಳು, 227 ಪ್ರೌಢ ಶಾಲೆಗಳು ಇವೆ. ಜಿಲ್ಲೆಯಾದ್ಯಂತ ಒಟ್ಟು 1,675 ಸರ್ಕಾರಿ ಶಾಲೆಗಳಿವೆ. ಈ ಶಾಲೆಗಳಲ್ಲಿ 4,18,322 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮಕ್ಕಳಿಗಾಗಿ ಜಿಲ್ಲೆಯಾದ್ಯಂತ 10, 710 ಕೋಣೆಗಳು ನಿರ್ಮಾಣ ಮಾಡಿದ್ದಾರೆ. ಆ ನಿರ್ಮಾಣ ಮಾಡಿದ ಕೋಣೆಗಳ ಪೈಕಿ ಸುಮಾರು 2 ಸಾವಿರ ಕೋಣೆಗಳಲ್ಲಿ ಪಾಠ ಮಾಡುವ ಶಿಕ್ಷಕರು ಆತಂಕದಲ್ಲಿಯೇ ಬೋಧನೆ ಮಾಡುವ ಪರಿಸ್ಥಿತಿಯಿದೆ. ಕೆಲ ಶಾಲೆಗಳ ಪರಿಸ್ಥಿತಿ ಅಂತೂ ಹೇಳಬಾರದು, ಶಿಕ್ಷಕರು ಪಾಠ ಮಾಡುವ ವೇಳೆಯೇ ಛಾವಣಿಯ ಸಿಮೆಂಟ್ ಕಳಚಿ ಬೀಳುತ್ತಿರುತ್ತದೆ. ಇಂತಹ ಕೋಣೆಗಳಲ್ಲಿ ಮಕ್ಕಳಿಗೆ ನಿತ್ಯ ಬೋಧನೆ ನಡೆಯುತ್ತಿದೆ. ಕೆಲ ಶಾಲೆಗಳ ಕೋಣೆಗಳಲ್ಲಿ ಮೇಲೆ ಜಿಟಿಜಿಟಿ ಮಳೆ ಆಗುತ್ತಿದ್ರೆ, ತರಗತಿಯ ಕೋಣೆಯ ಬಹುತೇಕ ಕಡೆ ಮಳೆ ನೀರು ಬರುತ್ತಿರುತ್ತದೆ. ಅಂತಹ ಕೋಣೆಗಳಲ್ಲಿಯೇ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಬೆಂಗಳೂರು: ಶಿಕ್ಷಣ ಇಲಾಖೆ ಸುಪರ್ದಿಗೆ ಬಿಬಿಎಂಪಿ ಶಾಲೆಗಳು
ಮಳೆ ಬಂದ್ರೆ ಮಕ್ಕಳಿಗೆ ದೇವಸ್ಥಾನವೇ ಪಾಠ ಶಾಲೆ
ಜಿಲ್ಲೆಯಲ್ಲಿ ಕಳೆದ ವಾದದಿಂದ ಮಳೆ ಆಗುತ್ತಿದೆ. ಈ ಮಳೆಯಿಂದಾಗಿ ಜಿಲ್ಲಾಡಳಿತ ಒಂದು ದಿನ ಮಾತ್ರ ಶಾಲೆಗಳಿಗೆ ರಜೆ ಘೋಷಣೆ ಮಾಡಿತ್ತು. ಆದ್ರೆ ಜಿಲ್ಲೆಯ ಕೆಲ ಶಾಲೆಗಳ ಪರಿಸ್ಥಿತಿ ಹೇಳತೀರದಾಗಿದೆ. ಮಳೆ ಬಂದ್ರೆ ಸಾಕು ಮಕ್ಕಳು ಶಾಲೆ ಬಿಟ್ಟು ದೇವಸ್ಥಾನ ಸೇರುವ ಪರಿಸ್ಥಿತಿಯಿದೆ. ಅದರಲ್ಲೂ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನಲ್ಲಿ 1918 ಕೋಣೆಗಳು ಇವೆ. ಆ ಕೋಣೆಗಳ ಪೈಕಿ 1376 ಉತ್ತಮ ಸ್ಥಿತಿಯಲ್ಲಿ ಇವೆ. 235 ಕೋಣೆಗಳು ಸಣ್ಣಪುಟ್ಟ ರಿಪೇರಿಗಾಗಿ ಎದುರು ನೋಡುತ್ತಿವೆ. 307 ಕೋಣೆಗಳ ಛಾವಣಿ ಕಿತ್ತುಹೋಗಿ ಮಳೆ ಬಂದ್ರೆ ಸಾಕು ನೀರು ಕೋಣೆ ತುಂಬ ಆಗುತ್ತೆ, 157ಕ್ಕೂ ಹೆಚ್ಚು ಕೋಣೆಗಳು ಸಂಪೂರ್ಣವಾಗಿ ಶಿಥಿಲಾವ್ಯವಸ್ಥೆಗೆ ತಲುಪಿವೆ. ಇತ್ತ ಲಿಂಗಸೂಗೂರು ತಾಲೂಕಿನ ಪರಿಸ್ಥಿತಿಯೂ ಹಾಗೇ ಇದೆ. 2328 ಕೊಠಡಿಗಳು ಇದ್ದು, 1882 ಕೊಠಡಿಗಳು ಮಾತ್ರ ಉತ್ತಮವಾಗಿವೆ. 200ಕೊಠಡಿಗಳು ಸಣ್ಣಪುಟ್ಟ ರಿಪೇರಿ ಮಾಡಿಸಿದ್ರೆ ಬಳಕೆ ಮಾಡಬಹುದು. ಆದ್ರೆ ರಿಪೇರಿ ಮಾಡಲು ಶಿಕ್ಷಣ ಇಲಾಖೆ ಮೀನಾಮೇಷ ಮಾಡುತ್ತಿದೆ. 246 ಕೊಠಡಿಗಳು ಗೋಡೆಗಳು ಬಿದ್ದು ಹೋಗಿವೆ. 245 ಕೊಠಡಿಗಳು ಸಂಪೂರ್ಣ ಶಿಥಿಲವಾಗಿವೆ. ಹೀಗಾಗಿ ಮಕ್ಕಳು ಪರದಾಟ ನಡೆಸಿದ್ದಾರೆ. ಮಾನ್ವಿ ತಾಲೂಕಿನ ಶಾಲೆಗಳ ಪರಿಸ್ಥಿತಿ ಅಂತೂ ಹೇಳಬಾರದು. ಒಟ್ಟು 2103 ಕೋಣೆಗಳು ಇದ್ದು, ಅದರ ಪೈಕಿ 1750 ಮಾತ್ರ ಬಳಕೆ ಮಾಡುವಂತೆ ಇವೆ. ಇನ್ನುಳಿದ 145 ಕೋಣೆಗಳು ಮೈನರ್ ರಿಪೇರಿ ಆಗಿ ಎದುರು ನೋಡುತ್ತಿವೆ. 208 ಕೋಣೆಗಳು ಮೇಜರ್ ರಿಪೇರಿ ಮಾಡಿದ್ರೆ ಬಳಕೆ ಮಾಡಬಹುದಾಗಿದೆ. ಇತ್ತ 222ಕೋಣೆಗಳು ಸಂಪೂರ್ಣ ಹಾಳಾಗಿ ಶಿಥಿಲಗೊಂಡಿವೆ. ರಾಯಚೂರು ತಾಲೂಕಿನಲ್ಲಿ 2174 ಕೋಣೆಗಳು ಇವೆ. ಅದರಲ್ಲಿ 1860ಕೋಣೆಗಳು ಮಾತ್ರ ತರಗತಿಗಳು ನಡೆಯುತ್ತಿವೆ. ಇನ್ನುಳಿದ 190 ಕೋಣೆಗಳು ಮೈನರ್ ರಿಪೇರಿ ಎಂಬ ಕಾರಣಕ್ಕೆ ತರಗತಿ ಮಾಡಲು ಹಿಂದೇಟು ಹಾಕಲಾಗುತ್ತಿದೆ. 124 ಕೊಠಡಿಗಳು ಕಬ್ಬಿಣದ ರಾಡ್ ಗಳು ಕಾಣಿಸಿಕೊಳ್ಳುತ್ತಿವೆ. 167 ಕೋಣೆಗಳು ಇದ್ದು ಇಲ್ಲದಂತೆ ಹಾಳಾಗಿ ಹೋಗಿವೆ. ಇತ್ತ ಸಿಂಧನೂರು ತಾಲೂಕಿನ ಪರಿಸ್ಥಿತಿಯೂ ಬೇರೆ ಇಲ್ಲ. ಸಿಂಧನೂರು ತಾಲೂಕಿನಲ್ಲಿ 2187 ಕೋಣೆಗಳು ಇವೆ. 1749 ಕೋಣೆಗಳು ಉತ್ತಮ ಸ್ಥಿತಿಯಲ್ಲಿ ಇವೆ. 169 ಕೋಣೆಗಳು ಮೈನರ್ ರಿಪೇರಿ ಮಾಡಿ ಬಳಕೆ ಮಾಡಬಹುದು. 269 ಕೋಣೆಗಳು ಹಾಳಾಗಿ ಹೋಗಿವೆ. 232 ಕೋಣೆಗಳು ಬಿದ್ದು ಶಿಥಿಲಗೊಂಡಿವೆ. ಇಂತಹ ಕೋಣೆಗಳಲ್ಲಿ ಶಿಕ್ಷಕರು ಹಿಡಿಶಾಪ ಹಾಕುತ್ತಾ ಮಕ್ಕಳಿಗೆ ಬೋಧನೆ ಮಾಡುವ ಪರಿಸ್ಥಿತಿ ಇದೆ. ಕೆಲ ಶಾಲೆಯಲ್ಲಿ ಮಳೆ ಬಂದ್ರೆ ಮಕ್ಕಳ ತರಗತಿಗಳು ದೇವಸ್ಥಾನಕ್ಕೆ ಶಿಫ್ಟ್ ಮಾಡಿ ಪಾಠ ಮಾಡುತ್ತಿದ್ದಾರೆ.
ಮಣಿಪುರ ವಿದ್ಯಾರ್ಥಿಗಳಿಗೆ ರಾಜ್ಯದ ಸ್ವಾಗತ: ಸಚಿವ ಮಧು ಬಂಗಾರಪ್ಪ
ಮಾರುತಿನಗರ ಶಾಲೆಯ ಮಕ್ಕಳಿಗೆ ಮಾರುತಿ ಮಂದಿರವೇ ಗತಿ
ಸಿಂಧನೂರು ತಾಲೂಕಿನ ಮಾರುತಿನಗರದಲ್ಲಿ 20ವರ್ಷಗಳ ಹಿಂದೆ ಆರಂಭವಾಗಿರುವ ಶಾಲೆಯಲ್ಲಿ ಎರಡು ಕೋಣೆಗಳು ಇವೆ. ಆ ಎರಡು ಕೋಣೆಗಳು ಈಗ ಸೋರುತ್ತಿವೆ. ಹೀಗಾಗಿ ಮಕ್ಕಳಿಗೆ ಪಾಠ ಕೇಳಲು ಮಾರುತಿ ಮಂದಿರವೇ ಗತಿ ಆಗಿದೆ. ಕೇವಲ ಇದು ಒಂದು ಶಾಲೆಯ ಕಥೆ ಆಗಿದೆ. ಜಿಲ್ಲೆಯ ಕೆಲ ಶಾಲೆಗಳಲ್ಲಿ ಮಳೆ ಬಂತೂ ಅಂದ್ರೆ 2-3 ತರಗತಿಗಳ ಮಕ್ಕಳಿಗೆ ಒಂದೇ ಕೊಠಡಿಯಲ್ಲಿ ಶಿಕ್ಷಕರು ಪಾಠ ಮಾಡುವ ದುಸ್ಥಿತಿಯಿದೆ. ಹೆಚ್ಚಿನ ಕೊಠಡಿಗಳ ನಿರ್ಮಾಣಕ್ಕಾಗಿ ಗ್ರಾಮಸ್ಥರು ಮತ್ತು ಶಿಕ್ಷಕರು ಹಲವು ಬಾರಿ ಕ್ಷೇತ್ರ ಶಿಕ್ಷಣ ಇಲಾಖೆಗೆ ದೂರು ನೀಡಿದ್ರೂ ಅಧಿಕಾರಿಗಳು ಕೇರ್ ಮಾಡುತ್ತಿಲ್ಲ.
ರಾಯಚೂರು ಡಿಡಿಪಿಐ ನಿರ್ಲಕ್ಷ್ಯದಿಂದಾಗಿ ಮಕ್ಕಳು ಹೈರಾಣು
ರಾಯಚೂರು ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರ ಕೋಟಿ ಕೋಟಿ ಹಣ ಖರ್ಚು ಮಾಡುತ್ತಿದೆ. ಆ ಹಣವನ್ನು ಸರಿಯಾಗಿ ಬಳಕೆ ಮಾಡುವಲ್ಲಿ ರಾಯಚೂರು ಶಿಕ್ಷಣ ಇಲಾಖೆಯ ಅಧಿಕಾರಿಗಳು ಫೇಲ್ ಆಗಿದ್ದಾರೆ. ಇದರ ಭಾಗವಾಗಿ ಡಿಡಿಪಿಐ ಕಚೇರಿಯೇ ಮಳೆ ಬಂದ್ರೆ ಸೋರುವ ಪರಿಸ್ಥಿತಿಗೆ ಬಂದು ನಿಂತಿದೆ. ಇನ್ನೂ ರಾಯಚೂರು ಬಿಇಒ ಕಚೇರಿ ಪರಿಸ್ಥಿತಿ ಅಂತೂ ಬಿಡಿಸಿ ಹೇಳುವುದೇ ಬೇಡ..ಏಕೆಂದರೆ ಮಳೆ ಬಂದ್ರೆ ಸಿಬ್ಬಂದಿ ಆಫೀಸ್ ನಲ್ಲಿ ಕುಳಿತು ಕೆಲಸ ಮಾಡಲು ಹೆದರುವ ಪರಿಸ್ಥಿತಿ ಇದೆ. ಇಷ್ಟು ಸಮಸ್ಯೆಗಳ ಮಧ್ಯೆ ಶಿಕ್ಷಣ ಇಲಾಖೆ ನಡೆಯುತ್ತಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಶಾಲೆಗಳ ಹೊಸ ಕೋಣೆಗಳ ನಿರ್ಮಾಣಕ್ಕಾಗಿ ಸಾಕಷ್ಟು ಅನುದಾನವಿದೆ. ಆ ಅನುದಾನ ಬಳಕೆ ಮಾಡುವಲ್ಲಿ ರಾಯಚೂರು ಡಿಡಿಪಿಐ ಕಾಳಜಿವಹಿಸದೇ ನಿರ್ಲಕ್ಷ್ಯ ತೋರಿಸಿದರಿಂದ ಮಕ್ಕಳು ಮಳೆಗಾಲ ಬಂದ್ರೆ ಅಲೆಯುವ ಪರಿಸ್ಥಿತಿ ಬಂದು ನಿಂತಿದೆ. ಇನ್ನೂ ಮುಂದೆ ಆದ್ರೂ ಜಿಲ್ಲಾಡಳಿತ ಮತ್ತು ರಾಯಚೂರು ಜಿಲ್ಲಾ ಪಂಚಾಯತ್ ಅಧಿಕಾರಿಗಳು ಸರ್ಕಾರಿ ಶಾಲೆಗಳ ಕಡೆ ಗಮನಹರಿಸಿ ಅನಾಹುತ ಆಗುವ ಮುನ್ನವೇ ಎಚ್ಚರವಹಿಸಬೇಕಾಗಿದೆ.