
ಧಾರವಾಡ: ಶ್ರಾವಣ ಬಂದರೆ ಹಬ್ಬಗಳ ಸರಮಾಲೆ. ಅದರಲ್ಲೂ ಶ್ರಾವಣದ ಮೊದಲ ಹಬ್ಬವಾದ ನಾಗರ ಪಂಚಮಿಯ ಮಹತ್ವವನ್ನು ಯುವ ಪೀಳಿಗೆಗೆ ತಿಳಿಸಲು ಧಾರವಾಡದ ಜಾನಪದ ಸಂಶೋಧನಾ ಸಂಸ್ಥೆಯು ಶುಕ್ರವಾರ ಉಂಡಿ ಹಬ್ಬದ ಹೆಸರಿನಲ್ಲಿ ಸಡಗರದಿಂದ ಆಚರಿಸಿತು.
ಶೇಂಗಾ ಉಂಡಿ, ರವೆ ಉಂಡಿ, ಎಳ್ಳುಂಡಿ, ಬೇಸನ್ ಉಂಡಿ, ಚುರುಮುರಿ ಉಂಡಿ, ಅಂಟಿನ ಉಂಡಿ, ಕೊಬ್ಬರಿ ಉಂಡಿ... ಒಂದಾ ಎರಡಾ... ತರಹೇವಾರಿ ಉಂಡಿಗಳು ಬಾಯಲ್ಲಿ ನೀರು ತರಿಸಿದವು. ಅದರೊಂದಿಗೆ ಚಕ್ಕಲಿ ಹಾಗೂ ವಿವಿಧ ಬಗೆಯ ಕಾಳುಗಳು ಸೊಗಸು ಇತ್ತು. ಬಗೆ-ಬಗೆಯ ತಿನಿಸುಗಳ ಸಮಾಗಮಕ್ಕೆ ರಂಗಾಯಣದ ಆವರಣ ಸಾಕ್ಷಿಯಾಯಿತು. ಶ್ರಾವಣ ಮಾಸದ ಎರಡನೇ ದಿನವನ್ನು ಉಂಡಿ ಹಬ್ಬವನ್ನಾಗಿ ಆಚರಿಸುವ ಪದ್ಧತಿ ಇದ್ದು ಜಾನಪದ ಸಂಶೋಧನಾ ಸಂಸ್ಥೆಯಿಂದ ಮಹಿಳೆಯರು ಉಂಡಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಹೊಸ ಸೀರೆಗಳನ್ನುಟ್ಟು ಮಹಿಳೆಯರು ತಮ್ಮ ಮನೆಗಳಿಂದ ಬಗೆ-ಬಗೆಯ ಉಂಡಿ ತೆಗೆದುಕೊಂಡು ಬಂದಿದ್ದರು. ಸಾಂಪ್ರದಾಯಿಕ ಶೈಲಿಯ ಆಭರಣ ಧರಿಸಿದ್ದ ಮಹಿಳೆಯರು, ಆವರಣದಲ್ಲಿ ನಾಗರ ಮೂರ್ತಿಗೆ ಹಾಲೆರೆದರು. ನಂತರ ಪಂಚಮಿಯ ಗೀತೆಗಳಿಗೆ ದನಿಯಾದರು. ಮರವೊಂದಕ್ಕೆ ಕಟ್ಟಲಾಗಿದ್ದ ಜೋಕಾಲಿ ಜೀಕಿದರು.
ಬರೀ ನಾಗರ ಪಂಚಮಿ ಅಲ್ಲದೇ ಹಿಂದೂಗಳ ಪ್ರಮುಖ ಹಬ್ಬಗಳ ಸಂಪ್ರದಾಯದ ಮಹತ್ವ ಸಾರುವ ಹಾಗೂ ಯುವ ಪೀಳಿಗೆಗೆ ಹಬ್ಬಗಳ ಮಹತ್ವ, ಪದ್ಧತಿ ತಿಳಿಸಲು ಸಂಸ್ಥೆಯು ಹಲವು ವರ್ಷಗಳಿಂದ ಇಂತಹ ಆಚರಣೆಗಳನ್ನು ಮಾಡುತ್ತಿದೆ. ಜನಪದ ಕಲಾವಿದ ಬಸವಲಿಂಗಯ್ಯ ಹಿರೇಮೇಠ ಅವರು ಈ ಸಂಪ್ರದಾಯ ಹುಟ್ಟು ಹಾಕಿದ್ದು, ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂದು ಸಂಸ್ಥೆಯ ವಿಶ್ವೇಶ್ವರಿ ಹಿರೇಮಠ ತಿಳಿಸಿದರು.
ಇದನ್ನೂ ಓದಿ: ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ್‌ಗೆ ಬಿಗ್ ಶಾಕ್; 2110 ಕೋಟಿ ರಹಸ್ಯ
ನಾಗರ ಪಂಚಮಿ ಎಂದರೆ ಪೂಜೆ ಮಾತ್ರವಲ್ಲದೆ ಅಲ್ಲಿನ ಖಾದ್ಯಗಳ ಸಂಭ್ರಮವೇ ಬೇರೆ. ಆದ್ದರಿಂದ ಜಾನಪದ ಕೇಂದ್ರ ಆಯೋಜಿಸುತ್ತಿರುವ ಇಂತಹ ಹಬ್ಬಗಳಿಗೆ ಪ್ರತಿ ಬಾರಿ ಸದಸ್ಯತ್ವ ಹೊಂದಿರುತ್ತೇವೆ. ಎಲ್ಲರೂ ಕೂಡಿ ಹಬ್ಬ ಆಚರಿಸಿ, ಖಾದ್ಯ ಸೇವಿಸಿ ಪರಸ್ಪರ ಖುಷಿ ಹಂಚಿಕೊಳ್ಳುತ್ತೇವೆ ಎಂದು ವಿದ್ಯಾ ದೇಸಾಯಿ ಹೇಳಿದರು.
ಇದನ್ನೂ ಓದಿ: BPL Card: ಬಿಪಿಎಲ್ ಕಾರ್ಡ್ ರದ್ದತಿಗೆ ತಾತ್ಕಾಲಿಕ ಸ್ಥಗಿತ! ಆಹಾರ ಸಚಿವ ರಿಜ್ವಾನ್ ಅರ್ಷದ್ ಮಹತ್ವದ ಘೋಷಣೆ!