
ಮಡಿಕೇರಿ (ಆ.15): ರಾಜ್ಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ನಲಪಾಡ್(Mohammad Nalapad) ಅವರ ಎರಡನೇ ವಿವಾಹ ಕೊಡಗಿನ ಪ್ರತಿಷ್ಠಿತ ರೆಸಾರ್ಟ್‌ನಲ್ಲಿ ನಡೆಯಲಿದೆ. ಆಗಸ್ಟ್ 16ರಿಂದ 20ರವರೆಗೆ ಮಡಿಕೇರಿ ಹೊರವಲಯದ ಮೇಕೇರಿ ಗ್ರಾಮದಲ್ಲಿರುವ ಮಾಜಿ ಸಚಿವ ಟಿ.ಜಾನ್ ಕುಟುಂಬಸ್ಥರ ಒಡೆತನದ ರೆಸಾರ್ಟ್‌ನಲ್ಲಿ ಮದುವೆ ನಡೆಯಲಿದೆ.
16ರಂದು ಮಧ್ಯಾಹ್ನ 12 ಗಂಟೆಗೆ ನಿಕಾಹ್ ನಡೆಯಲಿದ್ದು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇರಳ ಮುಖ್ಯಮಂತ್ರಿ ಸತೀಶನ್, ನಟರಾದ ಸುದೀಪ್, ಯಶ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಮೊಹಮ್ಮದ್ ನಲಪಾಡ್, ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ.ಹ್ಯಾರಿಸ್ ಅವರ ಪುತ್ರ. ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಐ.ಮುನೀರ್ ಅಹಮ್ಮದ್ ಅವರ ಮೂರನೇ ಪುತ್ರಿ ಮಲಿಹಾ ಫಾತಿಮಾ ಅವರನ್ನು ನಲಪಾಡ್ ವಿವಾಹವಾಗಲಿದ್ದಾರೆ.
16ರಂದು ನಡೆಯಲಿರುವ ನಿಕಾಹ್ ಕಾರ್ಯಕ್ರಮದಲ್ಲಿ ಎರಡೂ ಕುಟುಂಬಗಳ ಸದಸ್ಯರು ಹಾಗೂ ಕೆಲವೇ ಕೆಲವು ಆಹ್ವಾನಿತ ಗಣ್ಯರು ಭಾಗವಹಿಸಲಿದ್ದಾರೆ. 17ರಂದು ವಿವಾಹ ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು, ಇದಕ್ಕೂ ಎರಡೂ ಕುಟುಂಬಗಳ ಸದಸ್ಯರು ಹಾಗೂ ಆಹ್ವಾನಿತರಿಗೆ ಮಾತ್ರ ಅವಕಾಶ ಇರಲಿದೆ. ಐದು ದಿನಗಳ ಮದುವೆ ಸಂಭ್ರಮಕ್ಕಾಗಿ ನಲಪಾಡ್ ಮತ್ತು ಮಲಿಹಾ ಫಾತಿಮಾ ಅವರ ಕುಟುಂಬಸ್ಥರು ರೆಸಾರ್ಟ್‌ನಲ್ಲಿ ತಂಗಲಿದ್ದು, ಈ ಅವಧಿಗೆ 104 ಕೊಠಡಿಗಳನ್ನು ಬುಕ್ ಮಾಡಲಾಗಿದೆ.