
ಬೆಂಗಳೂರು: ಇಡೀ ದೇಶ ನಾಳೆ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೆ ಸಿದ್ಧವಾಗುತ್ತಿದೆ. ಆದರೆ ಸಿಲಿಕಾನ್ ಸಿಟಿಯಲ್ಲಿ ವಿಧ್ವಂಸಕ ಕೃತ್ಯ ಎಸಗಲು ಹೊಂಚು ಹಾಕಿದ್ದ ಶಂಕಿತ ವ್ಯಕ್ತಿಯನ್ನ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಸೆರೆಹಿಡಿದಿದ್ದಾರೆ. ಈ ಬಂಧನದ ಮೂಲಕ ನಗರದಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ಮಟ್ಟದ ವಿಪತ್ತು ತಪ್ಪಿದಂತಾಗಿದೆ.
ಬಂಧಿತ ಶಂಕಿತನನ್ನು ಪಶ್ಚಿಮ ಬಂಗಾಳ ಮೂಲದ ಅಸಾಪೂಲ್ ಮಲ್ಲಿಕ್ (25) ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನ ಹೊರವಲಯದ ಜಿಗಣಿಯಲ್ಲಿ ವಾಸವಿದ್ದು, ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಯಾರಿಗೂ ಅನುಮಾನ ಬರದಂತೆ ಸಾಮಾನ್ಯ ವ್ಯಕ್ತಿಯಂತೆ ಕೆಲಸ ಮಾಡುತ್ತಿದ್ದ ಈತ, ಒಳಗೊಳಗೆ ಉಗ್ರ ಸಂಘಟನೆಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದ ಎಂಬುದು ಈಗ ಬಯಲಾಗಿದೆ.
ಅಸಾಪೂಲ್ ಮಲ್ಲಿಕ್ ಪಾಕಿಸ್ತಾನ ಮೂಲದ ಉಗ್ರ ಸಂಘಟನೆ TTP (Tehreek-e-Taliban Pakistan) ಜೊತೆ ನಂಟು ಹೊಂದಿದ್ದ. ಸೋಷಿಯಲ್ ಮೀಡಿಯಾ ಮೂಲಕ ಅಫ್ಘಾನಿಸ್ತಾನದ TTP ಸದಸ್ಯ ಇಮ್ರಾನ್ ಅಹಿಂದರ್ ಎಂಬಾತನ ಪರಿಚಯ ಮಾಡಿಕೊಂಡಿದ್ದ ಅಸಾಪೂಲ್, ಉಗ್ರ ಸಂಘಟನೆಯ ವಿಚಾರಧಾರೆಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದ. ಇಸ್ರೇಲ್-ಪ್ಯಾಲೆಸ್ಟೈನ್ ವಿವಾದದಲ್ಲಿ ಇಸ್ರೇಲ್ ಪರವಾಗಿ ಪಾಕಿಸ್ತಾನ ಸೇನೆ ಕೆಲಸ ಮಾಡುತ್ತಿದೆ ಎಂದು ಆಕ್ರೋಶಗೊಂಡಿದ್ದ ಈತ, ಪಾಕಿಸ್ತಾನ ಸೇನೆ ಹಾಗೂ ಭಾರತದ ಮೇಲೆ ಪ್ರತಿಕಾರ ತೀರಿಸಿಕೊಳ್ಳಲು ಸಂಚು ರೂಪಿಸಿದ್ದ ಎನ್ನಲಾಗಿದೆ.
ಅಸಾಪೂಲ್ ಮಲ್ಲಿಕ್ ಅಫ್ಘಾನಿಸ್ತಾನಕ್ಕೆ ತೆರಳಿ ಉಗ್ರ ತರಬೇತಿ ಪಡೆಯಲು ಪ್ಲಾನ್ ಮಾಡಿದ್ದ. ಅದಕ್ಕಾಗಿ ಪಾಸ್‌ಪೋರ್ಟ್ ಮಾಡಿಸಿಕೊಂಡು ವೀಸಾಗೆ ಅರ್ಜಿ ಸಲ್ಲಿಸಿದ್ದ. ಅಲ್ಲಿ ತರಬೇತಿ ಪಡೆದು ಮರಳಿ ಭಾರತಕ್ಕೆ ಬಂದು ವಿಧ್ವಂಸಕ ಕೃತ್ಯಗಳನ್ನು ಎಸಗುವ ಸಾಧ್ಯತೆ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ನಾಳೆ ಸ್ವಾತಂತ್ರ್ಯೋತ್ಸವ ಇರುವ ಕಾರಣ ಪೊಲೀಸರು ಸೋಷಿಯಲ್ ಮೀಡಿಯಾಗಳ ಮೇಲೆ ತೀವ್ರ ನಿಗಾ ಇರಿಸಿದ್ದರು. ಕಳೆದ ಒಂದು ತಿಂಗಳಿನಿಂದ ಅಸಾಪೂಲ್ ಮಲ್ಲಿಕ್‌ನ ಪೋಸ್ಟ್‌ಗಳನ್ನು ಗಮನಿಸುತ್ತಿದ್ದ ಪೊಲೀಸರು, ಆತ ದೇಶವಿರೋಧಿ ಚಟುವಟಿಕೆಯಲ್ಲಿ ತೊಡಗಿರುವುದನ್ನು ಖಚಿತಪಡಿಸಿಕೊಂಡಿದ್ದರು. ಡಿಸಿಪಿ ನಾರಾಯಣ್ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಸೋಮಶೇಖರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಿದೆ.
ಅಸಾಪೂಲ್ ಮಲ್ಲಿಕ್ ವಾಸವಿದ್ದ ರೂಮಿನಲ್ಲಿ ಪಶ್ಚಿಮ ಬಂಗಾಳದ ಮತ್ತೊಬ್ಬ ವ್ಯಕ್ತಿ ಇದ್ದ. ಪೊಲೀಸರು ದಾಳಿ ಮಾಡುತ್ತಿದ್ದಂತೆ ಆತ ತಪ್ಪಿಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಅಸಾಪೂಲ್ ಕೆಲವು ಸಂಘಟನೆಗಳಿಗೆ ಹಣವನ್ನೂ ವರ್ಗಾಯಿಸಿರುವುದು ಪತ್ತೆಯಾಗಿದೆ. ಸ್ವಾತಂತ್ರ್ಯೋತ್ಸವದ ಮೊದಲೇ ಪೊಲೀಸರು ತೋರಿದ ಈ ಚಾಣಾಕ್ಷತನದಿಂದಾಗಿ ಬೆಂಗಳೂರಿನಲ್ಲಿ ಸಂಭವಿಸಬಹುದಾಗಿದ್ದ ಭೀಕರ ಅನಾಹುತವೊಂದು ತಪ್ಪಿದಂತಾಗಿದೆ.