ಎಸ್‌ಡಿಪಿಐ ಹಾಗೂ ಪಿಎಫ್ಐ ಕಚೇರಿಗಳ ಮೇಲೆ ಸರ್ಚ್ ವಾರೆಂಟ್ ನೊಂದಿಗೆ ದಾಳಿ ನಡೆಸಿರುವ ಚಿಕ್ಕಮಗಳೂರು ಪೊಲೀಸರು. ನಗರದ ಮಲ್ಲಂದೂರು ರಸ್ತೆಯಲ್ಲಿರುವ ಎಸ್ ಡಿಪಿಐ ಕಛೇರ. ಎಸ್ ಡಿಪಿಐ ಜಿಲಾಧ್ಯಕ್ಷ ಮುನೀರ್ ಹಾಗೂ ಅತನ ಪುತ್ರನನ್ನು ವಶಕ್ಕೆ ಪಡೆದಿದ್ದ ಪೊಲೀಸರು. ಬಾಂಡ್ ಮೇಲೆ ಜಾಮೀನು ಪಡೆದು ಬಿಡುಗಡೆಗೊಳಿಸಿದ್ದ ಪೊಲೀಸರು.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಸೆ.29) : ಪಿಎಫ್ ಐ ಸಂಘಟನೆ ನಿಷೇಧದ ಬೆನ್ನೇಲ್ಲೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಪೊಲೀಸರು ನಿಷೇಧಿತ ಸಂಘಟನೆ ಮುಖಂಡರಿಗೆ ಶಾಕ್ ನೀಡಿದ್ದಾರೆ. ಪೊಲೀಸ್ ಠಾಣೆಗೆ ಹಾಜರಾಗದೇ ಇದ್ದ ಕಾರಣದ ಜೊತೆಗೆ ಮಾಹಿತಿ ಸಂಗ್ರಹ ಮಾಡುವ ನಿಟ್ಟಿನಲ್ಲಿ ಚಿಕ್ಕಮಗಳೂರು ನಗರ ಹಾಗೂ ಆಲ್ದೂರು ಪಟ್ಟಣಗಳಲ್ಲಿ ಎಸ್ಡಿಪಿಐ ಹಾಗೂ ಪಿಎಫ್ಐ ಕಚೇರಿಗಳ ಮೇಲೆ ಪೊಲೀಸರು ಏಕ ಕಾಲದಲ್ಲಿ ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದ್ದಾರೆ. ಪಿಎಫ್ಐ ಸೇರಿದಂತೆ ಅದರ ಇತರ ಅಂಗಸಂಸ್ಥೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದ್ದ ಹಿನ್ನೆಲೆಯಲ್ಲಿ ಮೊನ್ನೆ ವಶಕ್ಕೆ ಪಡೆಯಲಾಗಿದ್ದ ಈ ಸಂಘಟನೆಗಳ ಮುಖಂಡರಿಗೆ ಪೊಲೀಸ್ ಠಾಣೆಗೆ ಹಾಜರಾಗುವಂತೆ ನೀಡಲಾಗಿದ್ದ ಸೂಚನೆಯನ್ನು ನಿರ್ಲಕ್ಷಿಸಿದ್ದಲ್ಲದೆ, ಠಾಣೆಗೂ ಬಾರದ ಹಿನ್ನೆಲೆಯಲ್ಲಿ ಗುರುವಾರ ಪೊಲೀಸರು ಜಿಲ್ಲಾಧಿಕಾರಿಗಳಿಂದ ಸರ್ಚ್ ವಾರೆಂಟ್ ಪಡೆದು ಸಂಘಟನೆ ಮುಖಂಡರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದರು. ನಗರದ ವಿಜಯಪುರ ಬಡಾವಣೆಯಲ್ಲಿರುವ ಪಿಎಫ್ಐ ಜಿಲ್ಲಾಧ್ಯಕ್ಷ ಚಾಂದ್ ಪಾಷ ಮನೆಗೆ ಬೆಳೆಗ್ಗೆ ಆಗಮಿಸಿದ ಬಸವನಹಳ್ಳಿ ಠಾಣೆ ಪೊಲೀಸರು ಪರಿಶೀಲನೆಗೆ ಮುಂದಾದರು.
ಈ ವೇಳೆ ಚಾಂದ್ ಪಾಷಾ ನನ್ನ ಮನೆ ಏಕೆ ರೇಡ್ ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸರು ಹೆಚ್ಚು ಮಾತನಾಡುವ ಅವಶ್ಯಕತೆ ಇಲ್ಲ. ಎಂದು ಖಡಕ್ ಎಚ್ಚರಿಕೆ ನೀಡಿದರು. ನಮಗೆ ಆದೇಶ ಇದೆ ನಿಮ್ಮ ಮನೆಯನ್ನ ಸರ್ಚ್ ಮಾಡುತ್ತೇವೆ ಎಂದ ಪೊಲೀಸರು ಮನೆ ಬಾಗಿಲು ತೆಗೆದ ಮೇಲೆ ತನಿಖೆ ಆರಂಭಿಸಿ ಕೆಲವು ದಾಖಲೆ ಪತ್ರಗಳನ್ನು ವಶಕ್ಕೆ ಪಡೆದರು.
ನಿಷೇಧಿತ ಸಿಮಿ ಸಂಘಟನೆ ನಾಯಕರಿಂದ ಹುಟ್ಟಿದ ಪಿಎಫ್ಐ ಬ್ಯಾನ್, 2017ರಲ್ಲಿ ನೀಡಿತ್ತು ವರದಿ!
ಎಸ್ ಡಿಪಿಐ ಕಛೇರಿ ಮೇಲೆಯೂ ದಾಳಿ: ಇದೇ ವೇಳೆ ನಗರದ ಮಲ್ಲಂದೂರು ರಸ್ತೆ ಮುನೀರ್ ಕಾಂಪ್ಲೆಕ್ಸ್ನಲ್ಲಿರುವ ಎಸ್ಡಿಪಿಐ ಕಚೇರಿಗೂ ಪೊಲೀಸರು ದಾಳಿ ನಡೆಸಿದರು. ನಿಷೇಧಿತ ಪಿಎಫ್ಐ ಕಚೇರಿಯು ಎಸ್ಡಿಪಿಐ ಕಚೇರಿಯಲ್ಲೇ ಕಾರ್ಯಾಚರಿಸುತ್ತಿತ್ತು ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದು ಈ ದಾಳಿ ನಡೆಸಿದ್ದರು. ಆದರೆ ಪೊಲೀಸರ ಪರಿಶೀಲನೆ ವೇಳೆ ಅಲ್ಲಿ ಯಾವುದೇ ರೀತಿಯ ದಾಖಲೆ, ಪತ್ರಗಳು ಲಭ್ಯವಾಗಲಿಲ್ಲ ಎಂದು ತಿಳಿದುಬಂದಿದೆ.
PFI Ban: ಮತಾಂಧ ಸಂಘಟನೆ ಪಿಎಫ್‌ಐ ಬ್ಯಾನ್‌ಗೆ ಏಳು ಪ್ರಮುಖ ಕಾರಣಗಳು..!
ಇದೇ ವೇಳೆ ಆಲ್ದೂರು ಪಟ್ಟಣದ ವಗಾರ್ ರಸ್ತೆಯಲ್ಲಿರುವ ಪಿಎಫ್ಐ ಕಾರ್ಯಕರ್ತ ಆರೀಫ್ ಎಂಬಾತನ ಮನೆ ಮೇಲೆ ಆಲ್ದೂರು ಪೊಲೀಸರು ಗುರುವಾರ ಬೆಳಗ್ಗೆ ದಾಳಿ ನಡೆಸಿದರು. ಆರೀಫ್ ಸಹ ಪೊಲೀಸ್ ಠಾಣೆಗೆ ಆಗಮಿಸಬೇಕು ಎನ್ನುವ ಸೂಚನೆಯನ್ನು ಧಿಕ್ಕರಿಸಿದ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮಕ್ಕೆ ಮುಂದಾದರು. ಆಲ್ದೂರು ವೃತ್ತನಿರೀಕ್ಷಕ ಸತ್ಯನಾರಾಯಣ, ಪಿಎಸ್ಐಗಳಾದ ಸಜಿತ್, ಕೀರ್ತಿ ಕುಮಾರ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಕೆಲವು ದಾಖಲೆಗಳನ್ನು ಪರಿಶೀಲಿಸಿದರು. ಪೊಲೀಸರಿಗೆ ಕಂದಾಯ ಇಲಾಖೆ ಅಧಿಕಾರಿಗಳು ಸಹಕಾರ ನೀಡಿದರು.