ಗೌನ್‌ ತಿರಸ್ಕರಿಸಿದ ಧಾರವಾಡ ಪಾಲಿಕೆ ಮೇಯರ್‌

By Kannadaprabha News  |  First Published Sep 29, 2022, 1:35 PM IST
  • ಸಾಮಾನ್ಯ ಸಭೆಯಲ್ಲೂ ಗೌನ್‌ ಧರಿಸಲ್ಲವಂತೆ ಅಂಚಟಗೇರಿ
  • 40 ಮೇಯರ್‌ ಕಂಡಿರುವ ಪಾಲಿಕೆಯಲ್ಲಿ ಹೊಸ ಸಂಪ್ರದಾಯ

ಶಿವಾನಂದ ಗೊಂಬಿ

 ಹುಬ್ಬಳ್ಳಿ (ಸೆ.29) : ರಾಷ್ಟ್ರಪತಿ, ಮುಖ್ಯಮಂತ್ರಿಗಳ ಸ್ವಾಗತಕ್ಕೆ ಗೌನ್‌ ಧರಿಸದೇ ಹಾಗೆ ಸ್ವಾಗತಿಸಿದ್ದ ಮೇಯರ್‌ ಈರೇಶ ಅಂಚಟಗೇರಿ ಇದೀಗ ಸೆ. 30ರಂದು ನಡೆಯಲಿರುವ ಪಾಲಿಕೆಯ ಸಾಮಾನ್ಯ ಸಭೆಯಲ್ಲೂ ಗೌನ್‌ ಧರಿಸದೇ ಭಾಗವಹಿಸಲು ನಿರ್ಧರಿಸಿದ್ದಾರೆ. ಈ ಮೂಲಕ ಹೊಸ ಸಂಪ್ರದಾಯಕ್ಕೆ ಮುಂದಡಿ ಇಟ್ಟಿದ್ದಾರೆ. ಇಡೀ ರಾಜ್ಯದಲ್ಲಿ ಗೌನ್‌ ತಿರಸ್ಕರಿಸಿದÜ ಮೊದಲ ಮೇಯರ್‌ ಇವರಾಗಲಿದ್ದಾರೆ.

Tap to resize

Latest Videos

ಮೇಯರ್ ಈರೇಶ ಅಂಚಟಗೇರಿ ಧಾರವಾಡದ ಅಮಿತ್ ಷಾ ಆಗಲಿಕ್ಕೆ ಹೊರಟಿದ್ದಾರೆ!

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ತನ್ನದೇ ಆದ ಇತಿಹಾಸವಿದೆ. ಪಾಲಿಕೆಯಾಗಿ ರಚನೆಯಾಗುವ ಮುನ್ನ ಹುಬ್ಬಳ್ಳಿ-ಧಾರವಾಡ ಪ್ರತ್ಯೇಕ ಪುರಸಭೆಗಳಿದ್ದವು. 1855ರಲ್ಲಿ ಹುಬ್ಬಳ್ಳಿ ಪುರಸಭೆ ಅಸ್ತಿತ್ವಕ್ಕೆ ಬಂದಿತು. ಜಿಲ್ಲೆಯ ಕಲೆಕ್ಟರ್‌ಗಳೇ ಅಧ್ಯಕ್ಷರಾಗಿದ್ದರು. ಆಗ ಬರೀ 18 ಜನ ಸದಸ್ಯರಿದ್ದರು. ಈ ಸದಸ್ಯರೆಲ್ಲರೂ ಸರ್ಕಾರದಿಂದ ನಾಮನಿರ್ದೇಶಿತರಾಗಿರುತ್ತಿದ್ದರು. 1856ರಲ್ಲಿ ಧಾರವಾಡ ಪುರಸಭೆ ಅಸ್ತಿತ್ವಕ್ಕೆ ಬಂದಿತ್ತು. ಹೀಗೆ 1962ರ ವರೆಗೂ ಪ್ರತ್ಯೇಕ ಪುರಸಭೆಗಳೇ ಇದ್ದವು. 1962ರಲ್ಲಿ ಪ್ರತ್ಯೇಕವಾಗಿದ್ದ ಈ ಪುರಸಭೆಗಳನ್ನು ಒಗ್ಗೂಡಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಎಂದು ರಚಿಸಿತು. 1962ರಿಂದ ಈ ವರೆಗೆ ಬರೋಬ್ಬರಿ 40 ಮೇಯರ್‌ಗಳನ್ನು ಪಾಲಿಕೆ ಕಂಡಿದೆ. ಜಿ.ಆರ್‌. ನಲವಡಿ ಮೊದಲ ಮೇಯರ್‌. ಇವರು ಚುನಾಯಿತ ಸದಸ್ಯರಾಗಿರಲಿಲ್ಲ. ಸರ್ಕಾರದಿಂದ ನಾಮನಿರ್ದೇಶಿತ ಸದಸ್ಯರಾಗಿದ್ದವರು. 1968ರಿಂದ ಚುನಾಯಿತ ಸದಸ್ಯರೇ ಮೇಯರ್‌ಗಿರಿ ಅನುಭವಿಸಿದ್ದಾರೆ. ಅಲ್ಲಿಂದ ಈ ವರೆಗೆ ಪಾಂಡುರಂಗ ಪಾಟೀಲ, ಐ.ಎಂ. ಜವಳಿ, ಎಸ್‌.ಎಸ್‌. ಶೆಟ್ಟರ್‌, ವೀರಣ್ಣ ಸವಡಿ, ಅನಿಲಕುಮಾರ ಪಾಟೀಲ ಹೀಗೆ 40 ಮೇಯರ್‌ಗಳನ್ನು ಕಂಡಂತಹ ಪಾಲಿಕೆಯಿದು.

ಅಂಚಟಗೇರಿ ಹೊಸ ಸಂಪ್ರದಾಯ:

ಈಗ ಮೇಯರ್‌ರಾಗಿರುವ ಈರೇಶ ಅಂಚಟಗೇರಿ 40ನೇ ಮೇಯರ್‌. ಈ ಹಿಂದೆ ಆಡಳಿತ ನಡೆಸಿರುವ 39 ಮೇಯರ್‌ಗಳು ಗೌನ್‌ ಧರಿಸಿಕೊಂಡೆ ಸಾಮಾನ್ಯಸಭೆ ನಡೆಸಿದವರು. ಮುಖ್ಯಮಂತ್ರಿ, ರಾಜ್ಯಪಾಲರು, ರಾಷ್ಟ್ರಪತಿ ಹೀಗೆ ನಗರಕ್ಕೆ ಯಾರೇ ಗಣ್ಯಾತಿಗಣ್ಯರು ಆಗಮಿಸಿದರೂ ಗೌನ್‌ ಧರಿಸಿಕೊಂಡೇ ಸ್ವಾಗತಿಸಿದವರು.

ಆದರೆ ಇದೀಗ ಈರೇಶ ಅಂಚಟಗೇರಿ ಈ ಗೌನ್‌ ಧರಿಸುವುದಕ್ಕೆ ಇತಿಶ್ರೀ ಹಾಡಿದ್ದಾರೆ. ಕಳೆದ ಒಂದೂವರೆ ತಿಂಗಳ ಹಿಂದೆ ಮುಖ್ಯಮಂತ್ರಿಗಳನ್ನು ಸ್ವಾಗತಿಸುವ ವೇಳೆ ಗೌನ್‌ ಧರಿಸಿರಲಿಲ್ಲ. ಜತೆಗೆ ಗೌನ್‌ ಧರಿಸುವುದು ಬ್ರಿಟಿಷ್‌ ಆಡಳಿತದ ಪ್ರತೀಕ ಎನಿಸುತ್ತಿದೆ. ಆದಕಾರಣ ಇನ್ಮುಂದೆ ತಾವು ಗೌನ್‌ ಧರಿಸುವುದಿಲ್ಲ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಬಳಿಕ ಕಳೆದ ಎರಡು ದಿನಗಳ ಹಿಂದೆಯಷ್ಟೇ ನಗರಕ್ಕೆ ಆಗಮಿಸಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಗೌಸ್‌ ಧರಿಸದೇ ಸ್ವಾಗತ ಮಾಡಿದ್ದುಂಟು. ಜತೆಗೆ ರಾಷ್ಟ್ರಪತಿಗಳ ಪೌರಸನ್ಮಾನ ಕಾರ್ಯಕ್ರಮದಲ್ಲೂ ಗೌನ್‌ ಧರಿಸಿರಲಿಲ್ಲ. ಇದೀಗ ಸಾಮಾನ್ಯಸಭೆಯಲ್ಲೂ ಗೌನ್‌ ಧರಿಸುವುದಿಲ್ಲ. ಸೆ. 30ರಂದು ಹುಬ್ಬಳ್ಳಿಯಲ್ಲಿ ಪಾಲಿಕೆಯ ಸಾಮಾನ್ಯಸಭೆ ನಡೆಯಲಿದೆ. ಸಭೆಯಲ್ಲಿ ತಾವು ಗೌನ್‌ ಧರಿಸುವುದಿಲ್ಲ. ಗೌನ್‌ ಧರಿಸುವುದನ್ನು ಬಿಟ್ಟು ಬಿಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಇದರಿಂದ ಇಡೀ ರಾಜ್ಯದಲ್ಲೇ ಗೌನ್‌ ಧರಿಸದೇ ಸಾಮಾನ್ಯ ಸಭೆ ನಡೆಸಲಿರುವ ಮೊದಲ ಮೇಯರ್‌ ಇವರಾಗಲಿದ್ದಾರೆ. ಈ ಮೂಲಕ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯೂ ಹೊಸ ಸಂಪ್ರದಾಯವನ್ನು ಹಾಕಿದಂತಾಗಿದೆ.

ಆದರೆ ಇದಕ್ಕೆ ಸ್ವಪಕ್ಷದಲ್ಲೇ ಕೆಲ ಸದಸ್ಯರು ಆಕ್ಷೇಪಿಸಿರುವುದುಂಟು. ಗೌನ್‌ ಧರಿಸುವುದು ಮೇಯರ್‌ ಹುದ್ದೆಯ ಗೌರವ ಸೂಚಕ ಇದನ್ನು ಬಿಡುವುದು ಸರಿಯಲ್ಲ. ಇದೊಂದು ಪದ್ಧತಿಯೂ ಆಗಿದೆ. ಆದಕಾರಣ ಸಾಮಾನ್ಯಸಭೆಯಲ್ಲಿ ಮೇಯರ್‌ ಗೌನ್‌ ಧರಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಧಾರವಾಡ: 4 ವರ್ಷದಿಂದ‌ ಕರ್ತವ್ಯಕ್ಕೆ ಹಾಜರಾಗದ 3 ಪೋಲಿಸರು ವಜಾ: ಎಸ್ಪಿ ಜಗಲಾಸರ್

ಗೌನ್‌ ಧರಿಸುವುದು ಬ್ರಿಟಿಷ್‌ ಆಡಳಿತದ ಪದ್ಧತಿ. ಗೌನ್‌ ಧರಿಸಬೇಕು ಎಂಬ ನಿಯಮಗಳಿಲ್ಲ. ಆದಕಾರಣ ನಾನು ಗೌನ್‌ ಧರಿಸುತ್ತಿಲ್ಲ. ರಾಷ್ಟ್ರಪತಿ, ಮುಖ್ಯಮಂತ್ರಿಗಳ ಸ್ವಾಗತವನ್ನೂ ಗೌನ್‌ ಧರಿಸದೇ ಮಾಡಿದ್ದೇನೆ. ರಾಷ್ಟ್ರಪತಿಗಳ ಕಾರ್ಯಕ್ರಮದಲ್ಲೂ ಗೌನ್‌ ಧರಿಸಿರಲಿಲ್ಲ. ಇದೀಗ ಸಾಮಾನ್ಯಸಭೆಗಳಲ್ಲೂ ಗೌನ್‌ ಧರಿಸುವುದಿಲ್ಲ.

ಈರೇಶ ಅಂಚಟಗೇರಿ, ಮೇಯರ್‌

click me!