
ಶಿವಮೊಗ್ಗ (ಫೆ.09): ಹಣದಾಸೆಗಾಗಿ ಮಹಿಳೆಯರನ್ನು ಬಳಸಿಕೊಂಡು ಕಾನೂನುಬಾಹಿರವಾಗಿ ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದ ಜಾಲವೊಂದನ್ನು ಭೇದಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಭದ್ರಾವತಿಯ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ದೋಷಿಗಳೆಂದು ಸಾಬೀತಾದ 3 ಮಹಿಳೆಯರಿಗೆ ಬರೋಬ್ಬರಿ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಲಕ್ಷಾಂತರ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು ಈ ತೀರ್ಪು ಪ್ರಕಟಿಸಿದ್ದಾರೆ. ಭದ್ರಾವತಿ ಹೊಸೂರು ಜೇಡಿಕಟ್ಟೆಯ ನಿವಾಸಿ ಚಂದ್ರಕಲಾ ಅಲಿಯಾಸ್ ಶ್ವೇತಾ (31), ಉಜ್ಜನಿಪುರದ ಎಸ್. ಶಿಲ್ಪಾ (35) ಹಾಗೂ ಹೊಸ ಸಿದ್ಧಾಪುರದ ಕವಿತಾ (40) ಶಿಕ್ಷೆಗೆ ಗುರಿಯಾದ ಅಪರಾಧಿಗಳು.
ಭದ್ರಾವತಿ ಪಟ್ಟಣದ ಉಜ್ಜನಿಪುರದ ಮಾರಿಯಮ್ಮ ದೇವಸ್ಥಾನದ ಹಿಂಭಾಗದ 3ನೇ ಕ್ರಾಸ್‌ನಲ್ಲಿರುವ ಮನೆಯೊಂದರಲ್ಲಿ ಗುಟ್ಟಾಗಿ ಸಮಾಜಘಾತುಕ ಕೃತ್ಯಗಳು ನಡೆಯುತ್ತಿವೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಆರೋಪಿಗಳಾದ ಚಂದ್ರಕಲಾ ಮತ್ತು ಶಿಲ್ಪಾ, ಮತ್ತೋರ್ವ ಆರೋಪಿ ಕವಿತಾಳೊಂದಿಗೆ ಸೇರಿಕೊಂಡು ಹಣ ಸಂಪಾದನೆಯ ದುರುದ್ದೇಶದಿಂದ ಶಿಲ್ಪಾಳ ಮನೆಯನ್ನೇ ದಂಧೆಯ ಕೇಂದ್ರವನ್ನಾಗಿ ಮಾಡಿಕೊಂಡಿದ್ದರು. ಅಲ್ಲಿಗೆ ಬೇರೆ ಕಡೆಯಿಂದ ಹೆಣ್ಣುಮಕ್ಕಳನ್ನು ಕರೆಸಿ, ಅವರನ್ನು ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದರು ಎಂಬುದು ತನಿಖೆಯಲ್ಲಿ ದೃಢಪಟ್ಟಿತ್ತು.
2021ರ ಡಿಸೆಂಬರ್ 24ರಂದು ಅಂದಿನ ಎಎಸ್‌ಪಿ (ASP) ಜಿತೇಂದ್ರಕುಮಾರ್ ದಯಾಮ ನೇತೃತ್ವದ ಪೊಲೀಸ್ ತಂಡವು ಈ ಮನೆಯ ಮೇಲೆ ಹಠಾತ್ ದಾಳಿ ನಡೆಸಿತ್ತು. ಈ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದರು. ಪೇಪರ್‌ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ತನಿಖಾಧಿಕಾರಿ ಇನ್ಸ್‌ಪೆಕ್ಟರ್ ಇ.ಒ. ಮಂಜುನಾಥ್ ಅವರು ಪ್ರಕರಣದ ಆಳವಾದ ತನಿಖೆ ನಡೆಸಿ, ಸಾಕ್ಷ್ಯಾಧಾರಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ (Charge Sheet) ಸಲ್ಲಿಸಿದ್ದರು.
ಸುದೀರ್ಘ ವಿಚಾರಣೆಯ ನಂತರ, ಆರೋಪಿಗಳ ಮೇಲಿನ ಸಾಕ್ಷ್ಯಗಳು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ತೀರ್ಪು ಪ್ರಕಟಿಸಿದ್ದಾರೆ. ಮೂವರು ಅಪರಾಧಿಗಳಿಗೆ ತಲಾ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ಪ್ರತಿಯೊಬ್ಬರಿಗೂ ತಲಾ 1.61 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಲಾಗಿದೆ. ಸರ್ಕಾರದ ಪರವಾಗಿ ಹಿರಿಯ ಸರ್ಕಾರಿ ಅಭಿಯೋಜಕಿ (Public Prosecutor) ಪಿ. ರತ್ನಮ್ಮ ಅವರು ಸಮರ್ಥವಾಗಿ ವಾದ ಮಂಡಿಸಿದ್ದರು. ಈ ತೀರ್ಪು ಅಕ್ರಮ ದಂಧೆಕೋರರಿಗೆ ಎಚ್ಚರಿಕೆಯ ಸಂದೇಶವಾಗಿದೆ.