
ಉತ್ತರ ಕನ್ನಡ (ಫೆ.09): ರಾಜ್ಯವನ್ನೇ ಬೆಚ್ಚಿಬೀಳಿಸಿದ ಸಿದ್ದಾಪುರದ ಅವರೆಕೊಪ್ಪ ವಸಂತ ನಾಯ್ಕ್ ಹತ್ಯೆ ಪ್ರಕರಣದ ತನಿಖೆ ಆಳಕ್ಕಿಳಿಯುತ್ತಿದ್ದಂತೆ, ಆರೋಪಿಗಳಾದ ಕಮಲಾಕರ ಭಟ್ ಮತ್ತು ಸುಚಿತ್ರಾಳ ಅಕ್ರಮ ಸಂಬಂಧದ ಬಗ್ಗೆ ರೋಚಕ ಹಾಗೂ ಅಷ್ಟೇ ಆಘಾತಕಾರಿ ಸಂಗತಿಗಳು ಹೊರಬಿದ್ದಿವೆ. ಈ ಜೋಡಿಯ ಸಂಬಂಧ ಕೇವಲ ಪ್ರೀತಿಗೆ ಸೀಮಿತವಾಗಿರದೆ, ಅದರ ಹಿಂದೆ ದೊಡ್ಡದೊಂದು 'ಬ್ಲ್ಯಾಕ್‌ಮೇಲ್' (Blackmail) ಮತ್ತು 'ಹನಿಟ್ರ್ಯಾಪ್' (Honeytrap) ಜಾಲವಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ಸುಚಿತ್ರಾಳ ಪತಿ ಮಹೇಶ್ ಜಟ್ಯಾ ನಾಯ್ಕ್ ಅವರೇ ಖುದ್ದು ಏಷ್ಯಾನೆಟ್ ಸುವರ್ಣ ನ್ಯೂಸ್ ಎದುರು ಬಿಚ್ಚಿಟ್ಟಿದ್ದಾರೆ.
ಮಹೇಶ್ ನಾಯ್ಕ್ ನೀಡಿರುವ ಮಾಹಿತಿಯ ಪ್ರಕಾರ, ಆರೋಪಿ ಸುಚಿತ್ರಾ ಹಾಗೂ ಕಮಲಾಕರ ಭಟ್ ನಡುವಿನ ಸಂಬಂಧ ಆಕಸ್ಮಿಕವಾಗಿ ನಡೆದಿದ್ದಲ್ಲ. ಕಮಲಾಕರ ಭಟ್ ಸಂಪರ್ಕಕ್ಕೆ ಬಂದ ನಂತರ, ಆತನ ಹಿನ್ನೆಲೆ, ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಸುಚಿತ್ರಾ ಸುಮಾರು ಒಂದು ವಾರಗಳ ಕಾಲ ಕೂಲಂಕಷವಾಗಿ 'ಸ್ಟಡಿ' ಮಾಡಿದ್ದಳು. ಆರಂಭದಲ್ಲಿ ಕೇವಲ 1 ರಿಂದ 2 ಲಕ್ಷ ರೂಪಾಯಿ ಹಣದ ಆಸೆಗಾಗಿ ಆಕೆ ಕಮಲಾಕರ ಭಟ್ ಜೊತೆ ದೈಹಿಕ ಸಂಬಂಧ ಬೆಳೆಸಲು ಮುಂದಾಗಿದ್ದಳು. ಆದರೆ, ಅಸಲಿ ಆಟ ಶುರುವಾಗಿದ್ದೇ ಅಲ್ಲಿಂದ. ಕಮಲಾಕರ ಭಟ್ ಜೊತೆ ಏಕಾಂತದಲ್ಲಿದ್ದಾಗ, ಆತನಿಗೆ ತಿಳಿಯದಂತೆ ಸುಚಿತ್ರಾ ಆ ದೃಶ್ಯಗಳನ್ನು ತನ್ನ ಮೊಬೈಲ್‌ನಲ್ಲಿ ಗುಪ್ತವಾಗಿ ವಿಡಿಯೋ ಮಾಡಿಕೊಂಡಿದ್ದಳು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಕಮಲಾಕರ ಭಟ್ ಟಿವಿ ಚಾನೆಲ್‌ಗಳ ಮೂಲಕ ರಾಜ್ಯದ ಜನತೆಗೆ ಜ್ಯೋತಿಷ್ಯ ಹೇಳುತ್ತಾ ಸಾಕಷ್ಟು ಹೆಸರು ಮತ್ತು ಖ್ಯಾತಿ ಗಳಿಸಿದ್ದ ವ್ಯಕ್ತಿ. ಆತ ನಡೆಸುತ್ತಿದ್ದ ಐಷಾರಾಮಿ ಜೀವನವನ್ನು ಕಂಡ ಸುಚಿತ್ರಾ, ತನ್ನ ಬಳಿ ಇದ್ದ ಅಶ್ಲೀಲ ವಿಡಿಯೋವನ್ನೇ ಅಸ್ತ್ರವನ್ನಾಗಿ ಬಳಸಿಕೊಂಡಿದ್ದಳು. 'ನನ್ನನ್ನು ಮತ್ತು ನನ್ನ ಮಕ್ಕಳನ್ನು ನೀನೇ ಸಾಕ್ಬೇಕು, ನನ್ನನ್ನು ಚೆನ್ನಾಗಿ ನೋಡಿಕೊಳ್ಳದಿದ್ದರೆ ನಿನ್ನ ಮಾನ ಮರ್ಯಾದೆ ಹರಾಜು ಹಾಕುತ್ತೇನೆ, ವಿಡಿಯೋ ಲೀಕ್ ಮಾಡುತ್ತೇನೆ' ಎಂದು ಆಕೆ ಕಮಲಾಕರನಿಗೆ ಬೆದರಿಕೆ ಹಾಕಿದ್ದಳು ಎನ್ನಲಾಗಿದೆ.
ಸಮಾಜದಲ್ಲಿ ತಾನು ಗಳಿಸಿದ್ದ ಹೆಸರಿಗೆ ಎಲ್ಲಿ ಕುತ್ತು ಬರುತ್ತದೆಯೋ ಎಂಬ ಭಯಕ್ಕೆ ಬಿದ್ದ ಕಮಲಾಕರ ಭಟ್, ಸುಚಿತ್ರಾಳ ಬ್ಲ್ಯಾಕ್‌ಮೇಲ್‌ಗೆ ಮಣಿದಿದ್ದ. ಪರಿಣಾಮವಾಗಿ, ಆಕೆಯನ್ನು ಮತ್ತು ಆಕೆಯ ಮಕ್ಕಳನ್ನು ಕರೆದುಕೊಂಡು ಬಂದು ಶಿವಮೊಗ್ಗ ಸೇರಿದಂತೆ ಬೇರೆಡೆ ಪ್ರತ್ಯೇಕ ಮನೆ ಮಾಡಿಟ್ಟುಕೊಂಡು ವಾಸವಾಗಿದ್ದ. ಹೀಗೆ ಹಣ ಮತ್ತು ವಿಡಿಯೋ ಬ್ಲ್ಯಾಕ್‌ಮೇಲ್‌ನಿಂದ ಆರಂಭವಾದ ಸಂಬಂಧ, ಅಂತಿಮವಾಗಿ ಅಮಾಯಕ ವಸಂತ ನಾಯ್ಕ್ ಅವರ ಬರ್ಬರ ಹತ್ಯೆಯಲ್ಲಿ ಅಂತ್ಯ ಕಂಡಿದೆ.
ಪತಿ ಮಹೇಶ್ ನಾಯ್ಕ್ ಅವರ ಈ ಹೇಳಿಕೆ ಪ್ರಕರಣಕ್ಕೆ ಹೊಸ ಆಯಾಮ ನೀಡಿದ್ದು, ಪೊಲೀಸರು ಈ 'ಬ್ಲ್ಯಾಕ್‌ಮೇಲ್' ಆಯಾಮದಲ್ಲೂ ತನಿಖೆ ಚುರುಕುಗೊಳಿಸಿದ್ದಾರೆ. ಒಟ್ಟಾರೆಯಾಗಿ, ಜ್ಯೋತಿಷ್ಯ ಹೇಳುತ್ತಿದ್ದವನು ಮಹಿಳೆಯೊಬ್ಬಳ ಬಲೆಯಲ್ಲಿ ಬಿದ್ದು ಈಗ ಕೊಲೆ ಆರೋಪಿಯಾಗಿ ಜೈಲು ಸೇರುವಂತಾಗಿರುವುದು ವಿಪರ್ಯಾಸ.