ಮಾರ್ಜಾಲದ ಮಹಿಮೆ: ಬೆಕ್ಕೇ ಈ ಊರ ಗ್ರಾಮ ದೇವತೆ, ಗದ್ದುಗೆ ನಿರ್ಮಿಸಿ ಗ್ರಾಮಸ್ಥರ ಪೂಜೆ

Published : Jul 04, 2022, 08:48 PM ISTUpdated : Jul 05, 2022, 09:28 AM IST
ಮಾರ್ಜಾಲದ ಮಹಿಮೆ: ಬೆಕ್ಕೇ ಈ ಊರ ಗ್ರಾಮ ದೇವತೆ, ಗದ್ದುಗೆ ನಿರ್ಮಿಸಿ ಗ್ರಾಮಸ್ಥರ ಪೂಜೆ

ಸಾರಾಂಶ

ಹೋಗುವ ದಾರಿಗೆ ಬೆಕ್ಕು ಅಡ್ಡ ಬಂದರೆ ಅಪಶಕುನ, ಅಂದುಕೊಂಡ ಕೆಲಸ ಆಗಲ್ಲ ಎಂಬ ಮೂಢನಂಬಿಕೆ ಕೆಲವರಲ್ಲಿದೆ. ಆದ್ರೆ ಮಂಡ್ಯದ ಬೆಕ್ಕಳೆಲೆ ಗ್ರಾಮದಲ್ಲಿ ಬೆಕ್ಕಿಗೆ ವಿಶೇಷ ಸ್ಥಾನ ನೀಡಲಾಗಿದೆ. ಮಾರ್ಜಾಲಕ್ಕೆ ದೇವಾಲಯವನ್ನು ಕಟ್ಟಿ ಭಕ್ತಿ ಭಾವದಿಂದ ಪೂಜೆ ಮಾಡಲಾಗುತ್ತದೆ.

ಮಂಡ್ಯ: ಬೆಕ್ಕು ಮನೆ ಮಂದಿಯ ಮುದ್ದಿನ ಸಾಕು ಪ್ರಾಣಿ. ಹಲವರು ಬೆಕ್ಕನ್ನು ಮನೆ ಸದಸ್ಯನಂತೆ ಸಾಕಿ ಸಲುಹುತ್ತಾರೆ. ಆದ್ರೆ ಕೆಲವರಿಗೆ ಈ ಬೆಕ್ಕು ಅಪಶಕುನ. ಹೋಗುವ ದಾರಿಗೆ ಬೆಕ್ಕು ಅಡ್ಡ ಬಂದರೆ ಅಪಶಕುನ. ಅಂದುಕೊಂಡ ಕೆಲಸ ಆಗಲ್ಲ ಎಂಬ ಮೂಢನಂಬಿಕೆ ಕೆಲವರಲ್ಲಿದೆ. ಆದ್ರೆ ಮಂಡ್ಯದ ಬೆಕ್ಕಳೆಲೆ ಗ್ರಾಮದಲ್ಲಿ ಬೆಕ್ಕಿಗೆ ವಿಶೇಷ ಸ್ಥಾನ ನೀಡಲಾಗಿದೆ. ಮಾರ್ಜಾಲಕ್ಕೆ ದೇವಾಲಯವನ್ನು ಕಟ್ಟಿ ಭಕ್ತಿ ಭಾವದಿಂದ ಪೂಜೆ ಮಾಡಲಾಗುತ್ತದೆ.

ಮಂಗಮ್ಮ ಹೆಸರಲ್ಲಿ ಬೆಕ್ಕಿನ ಗದ್ದುಗೆಗೆ ಪೂಜೆ

ಮಂಡ್ಯ (Mandya) ಜಿಲ್ಲೆ ಮದ್ದೂರು (Maddur) ತಾಲೂಕಿನ ಬೆಕ್ಕಳಲೆ (Bekkalele) ಗ್ರಾಮದಲ್ಲಿ ಬೆಕ್ಕಿಗೆ ಪೂಜ್ಯಸ್ಥಾನ ನೀಡಲಾಗಿದೆ. ಬೆಕ್ಕು ಗ್ರಾಮದೇವತೆ ಆಗಿರುವುದರಿಂದ ಈ ಗ್ರಾಮಕ್ಕೆ ಬೆಕ್ಕಳಲೆ ಎಂಬ ಹೆಸರು ಬಂದಿದೆ. ಬೆಕ್ಕಿಗೆ ದೇವಾಲಯವನ್ನೇ ಕಟ್ಟಿರುವ ಗ್ರಾಮಸ್ಥರು ಬೆಕ್ಕಿನ ಮಂಗಮ್ಮ ಹೆಸರಲ್ಲಿ ಪ್ರತಿ ಮಂಗಳವಾರ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಮೆರೆಯುತ್ತಾರೆ. ಹಲವು ವರ್ಷಗಳ ಹಿಂದೆ ಸಮಾಧಿ ಮಾಡಲಾದ ಬೆಕ್ಕಿನ ಗದ್ದುಗೆಗೆ ಗ್ರಾಮಸ್ಥರು ಪೂಜೆ ಮಾಡುತ್ತಾರೆ. ವರ್ಷಕ್ಕೊಮ್ಮೆ ಜಾತ್ರೆ ಕೂಡ ಇಲ್ಲಿ ನಡೆಯುತ್ತದೆ. ಹಬ್ಬ ಹರಿದಿನಗಳಲ್ಲಿ ಬೆಕ್ಕಿಗೆ ಎಡೆಕೊಟ್ಟು ಬೆಕ್ಕು ಬಿಟ್ಟ ಎಂಜಲನ್ನೇ ಪ್ರಸಾದವಾಗಿ ಸ್ವೀಕರಿಸುವ ಸಂಪ್ರದಾಯ ಕೂಡ ಇದೆ. ಬೆಕ್ಕನ್ನೇ ದೇವರೆಂದು ಕೊಂಡಿರುವ ಈ ಜನರು ಪ್ರತಿದಿನ ಕೆಲಸಕ್ಕೆ ಹೋಗುವ ಮುನ್ನ ಬೆಕ್ಕಿನ ದರ್ಶನ ಪಡೆಯುವುದನ್ನ ರೂಢಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹಾಲುಗಲ್ಲದ ಕೂಸಿಗೆ ಮಸಾಜ್ ಮಾಡುವ ಬೆಕ್ಕು: ವಿಡಿಯೋ ವೈರಲ್

ಸಾವನ್ನಪ್ಪಿದ ಬೆಕ್ಕಿಗೆ ಮನುಷ್ಯರಂತೆ ಅಂತ್ಯಸಂಸ್ಕಾರ

ಬೆಕ್ಕು ಅನಿಷ್ಟ ಪ್ರಾಣಿ ಅಂತಲೇ ಭಾವಿಸಿರುವವರ ಮಧ್ಯೆ ಬೆಕ್ಕಳಲೆ ಗ್ರಾಮಸ್ಥರು ವಿಭಿನ್ನ. ಬೆಕ್ಕನ್ನೆ ದೇವರೆಂದು ಪೂಜಿಸುವ ಇವರು, ಗ್ರಾಮದಲ್ಲಿ ಯಾವುದೇ ಬೆಕ್ಕು ಸತ್ತರು ಮನುಷ್ಯರಂತೆ ಅಂತ್ಯಸಂಸ್ಕಾರ (Final rituals) ನೆರವೇರಿಸುತ್ತಾರೆ. ಅಷ್ಟೇ ಅಲ್ಲದೇ ಬೆಕ್ಕಿಗೆ ಹೊಡೆಯುವುದು ಬಡಿಯುವುದು ಈ ಗ್ರಾಮದಲ್ಲಿ ನಿಷೇಧ. ಯಾರಾದರೂ ಬೆಕ್ಕು ಹಿಂಸಿಸಿದ್ರೆ ತೊಂದರೆ ಅನುಭವಿಸ್ತಾರೆ ಅನ್ನೋದು ಇಲ್ಲಿನ ಜನರ ನಂಬಿಕೆ.

ಇದನ್ನೂ ಓದಿ: ಕಲ್ಲಿನ ಪ್ರತಿಮೆಯ ಮಡಿಲಲ್ಲಿ ಮಲಗಿ ಆಟವಾಡ್ತಿರುವ ಮಾರ್ಜಾಲ : ವಿಡಿಯೋ ವೈರಲ್

ಬೆಕ್ಕಿನ ಮಂಗಮ್ಮ ಪೂಜಿಸಿದ್ರೆ ಇಷ್ಟಾರ್ಥ ಸಿದ್ಧಿ

ಬೆಕ್ಕಳಲೆ ಗ್ರಾಮದ ಬೆಕ್ಕಿನ ಮಂಗಮ್ಮ ದೇವರು ಸುತ್ತಮುತ್ತಲಿನ ಗ್ರಾಮಸ್ಥರ ಕುಲ ದೇವತೆ. ಹಬ್ಬ ಹರಿದಿನಗಳಲ್ಲಿ ಗ್ರಾಮಸ್ಥರು ಬಂದು ವಿಶೇಷ ಪೂಜೆ ಸಲ್ಲಿಸುತ್ತಾರೆ. ಭಕ್ತಿ ಭಾವದಿಂದ ಪೂಜೆ ಸಲ್ಲಿಸಿ ಪ್ರಾರ್ಥಿಸಿದರೆ ಬೆಕ್ಕಿನ ಮಂಗಮ್ಮ ಇಷ್ಟಾರ್ಥ ನೆರವೇರಿಸುತ್ತಾರೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಆರೋಗ್ಯ ಸಮಸ್ಯೆ, ಮನೆ ಸಮಸ್ಯೆ, ವೈವಾಹಿಕ ಸಮಸ್ಯೆ ಹೀಗೆ ಯಾವುದೇ ಸಮಸ್ಯೆ ಇದ್ದರು ಹರಕೆ ಹೊತ್ತು ಶುದ್ಧ ಮನಸ್ಸಿನಿಂದ ಬೇಡಿದ್ರೆ ಬೆಕ್ಕಿನ ಮಂಗಮ್ಮ ಈಡೇರಿಸುತ್ತಾಳೆ ಎಂಬ ನಂಬಿಕೆ. ಹಾಗಾಗಿ ದೂರದ ಊರುಗಳಿಂದ ಬೆಕ್ಕಳಲೆ ಗ್ರಾಮಕ್ಕೆ ಆಗಮಿಸುವ ಜನರು ಬೆಕ್ಕಿನ ಮಂಗಮ್ಮ ದೇವರಿಗೆ ಭಕ್ತಿ ಸಮರ್ಪಿಸಿ ಹೋಗುತ್ತಾರೆ.

PREV
Read more Articles on
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ