ಅಡಿಕೆ ಬೆಳೆಗೆ ಎಲೆಚುಕ್ಕೆ ರೋಗ, ಮೊದಲೇ ಕ್ರಮ ಕೈಗೊಂಡ್ರೆ ಮುಂದಾಗುವ ಅನಾಹುತ ತಡೆಯಬಹುದು: ಡಾ.ನಿರಂಜನ್

By Girish GoudarFirst Published Oct 25, 2022, 12:24 PM IST
Highlights

ಅಡಿಕೆ ಬೆಳೆಗೆ ಎಲೆಚುಕ್ಕೆ ರೋಗದ ಬಗ್ಗೆ ಹಲವೆಡೆ ತರಬೇತಿ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಶಿವಮೊಗ್ಗ ಕೃಷಿ ವಿಜ್ಞಾನ ಕೇಂದ್ರ

ಶಿವಮೊಗ್ಗ(ಅ.25): ಮಲೆನಾಡಿನಲ್ಲಿ ಅಡಿಕೆ ಬೆಳೆಗಾರರು ಎಲೆಚುಕ್ಕೆ ರೋಗದಿಂದ ಕಂಗಾಲಾಗಿ ಹೋಗಿದ್ದಾರೆ. ಮುಂದೇನು ಎನ್ನುವ ಚಿಂತೆ ರೈತರನ್ನು ಕಾಡುತ್ತಿದೆ. ಈ ಬೆನ್ನಲ್ಲೇ ಶಿವಮೊಗ್ಗ ಕೃಷಿ ವಿಜ್ಞಾನ ಕೇಂದ್ರವೂ ಈ ರೋಗದ ಬಗ್ಗೆ ಹಲವೆಡೆ ತರಬೇತಿ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಅಡಿಕೆ ಬೆಳೆಗಾರರಲ್ಲಿ ಈ ರೋಗದ ಬಗ್ಗೆ ಅರಿವು ಮೂಡಿಸಲು ಯತ್ನಿಸುತ್ತಿದ್ದು, ರೋಗದ ಲಕ್ಷಣಗಳು ಕಂಡ ಕೂಡಲೇ ಜಾಗೃತರಾಗುವಂತೆ ತಿಳಿಸಿದೆ. 

ಇಂದು(ಮಂಗಳವಾರ) ಜಿಲ್ಲೆಯ ಮಾಸ್ತಿಕಟ್ಟೆ ಗ್ರಾಮ ಪಂಚಾಯ್ತಿತಿಯಲ್ಲಿ ಕೆವಿಕೆ, ಶಿವಮೊಗ್ಗ, ಹೊಸನಗರದ ತೋಟಗಾರಿಕೆ ಇಲಾಖೆಯ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ನಿರಂಜನ್. ಕೆ.ಎಸ್ ಅವರು, ಅಡಿಕೆ ಬೆಳೆಗಾರರಿಗೆ ತಮ್ಮ ತೋಟದಲ್ಲಿ ಈ ರೋಗದ ಲಕ್ಷಣ ಕಂಡು ಬರುತ್ತಿವುದು ತಡವಾಗಿ ಅರಿವಿಗೆ ಬರುತ್ತಿದೆ. ಅದು ಫಸಲಿನ ಮೇಲೆ ಪರಿಣಾಮ ಬೀರುವ ಮುನ್ನವೇ ಅಗತ್ಯ ಕ್ರಮ ಕೈಗೊಂಡರೆ ಮುಂದಾಗುವ ಅನಾಹುತವನ್ನು ತಡೆಯಬಹುದು ಅಂತ ಎಲೆ ಚುಕ್ಕೆ ರೋಗಕ್ಕೆ ಕಾರಣವಾದ ಅಂಶಗಳ ಬಗ್ಗೆ ವಿವರಣೆ ನೀಡಿದರು. 

ಆಂಜನೇಯನ ಮೂರ್ತಿ ಮೇಲೆ ಕಾಲಿಟ್ಟು ಪೂಜೆ: ಅರ್ಚಕನ ವಿರುದ್ಧ ಭಕ್ತರ ಆಕ್ರೋಶ

ಮಲೆನಾಡಿನ ಪ್ರಮುಖ ಪ್ರದೇಶಗಳಲ್ಲಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಶುರುವಾದ ಮಳೆ ಈಗಲೂ ಮುಂದುವರಿದಿದೆ. ಅಡಿಕೆಗೆ ಅಗತ್ಯವಿರುವಷ್ಟು ಬಿಸಿಲು ಸಿಗುತ್ತಿಲ್ಲ. ನಿರಂತರವಾಗಿ ಸುರಿಯುತ್ತಿರುವ ಮಳೆ ಎಲೆ ಚುಕ್ಕಿ ರೋಗಕ್ಕೆ ಮುಖ್ಯ ಕಾರಣವಾಗಿದೆ. ರೋಗ ಹರಡುವ ಶಿಲೀಂಧ್ರಗಳಾದ ಕೊಲೆಟೋಟ್ರೈಕಮ್, ಫಿಲೋಸ್ಟಿಕ್ಟಾ ಅರೆಕಾ ಮತ್ತು ಪೆಸ್ಟಲೋಸಿಯಾ ಹೇಗೆ ಅಡಿಕೆ ಮರಗಳ ಮೇಲೆ ಪ್ರಭಾವ ಬೀರುತ್ತೆ ಎಂಬುದನ್ನು ವಿವರವಾಗಿ ಮಾಹಿತಿ ನೀಡಿದ್ದಾರೆ. 

ಈ ಸಂದರ್ಭದಲ್ಲಿ ತಜ್ಞರು ಗ್ರಾಮದಲ್ಲಿ ಸೋಂಕು ಬಾಧಿಸುತ್ತಿರುವ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಕೃಷಿಕರಿಗೆ ಅಗತ್ಯ ಸಲಹೆ ನೀಡಿದರೆ. ರೈತರಿಗೆ ರೋಗ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿದರು. ಎಲೆ ಚುಕ್ಕೆ ರೋಗ ಬಾಧಿತ ಸೋಗೆಯ ಕೆಳ ಹಾಗೂ ಮೇಲ್ಭಾಗದಲ್ಲಿ ಹಳದಿ ಮತ್ತು ಕಪ್ಪು ಬಣ್ಣದ ಚುಕ್ಕೆಗಳು ಕಾಣಿಸುತ್ತವೆ. ಇವು ಶೀಘ್ರವಾಗಿ ಒಂದಕ್ಕೊಂದು ಕೂಡಿಕೊಂಡು ಪೂರ್ತಿ ಸೋಗೆಗಳನ್ನು ಆವರಿಸುತ್ತದೆ. ನಂತರ ಸೋಗೆಗಳು ಒಣಗಲು ಶುರುವಾಗುತ್ತವೆ. ಈ ಒಣಗಿದ ಸೋಗೆಗಳು ಜೋತುಬಿದ್ದು ಮರ ಶಕ್ತಿ ಕಳೆದುಕೊಂಡು ಇಳುವರಿ ಕುಂಠಿತಗೊಳ್ಳುತ್ತದೆ ಎಂದು ತಿಳಿಸಿದ್ದಾರೆ. 

ಸಾವರ್ಕರ್‌ ರಕ್ತ ಹಂಚಿಕೊಂಡು ಹುಟ್ಟಿದ್ದೇವೆ: ಈಶ್ವರಪ್ಪ

ಶಿಲೀಂಧ್ರನಾಶಕಗಳಾದ ಸಾಫ್ (SAAF) (2 ಗ್ರಾಂ/1 ಲೀ.ನೀರಿಗೆ) ಅಥವಾ ಹೆಕ್ಸಾಕೊನಜೋಲ್ (1 ಮಿ.ಲೀ/ 1 ಲೀ.ನೀರಿಗೆ) ಅಥವಾ ಪ್ರೊಪಿಯೋಕೋನಾಜೋಲ್ (1 ಮಿ.ಲೀ/1 ಲೀ.ನೀರಿಗೆ) ಇವುಗಳಲ್ಲಿ ಯಾವುದಾದರೂ ಒಂದನ್ನು ಸಿಂಪಡಣೆ ಮಾಡಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಎಲ್ಲರೂ ಸಮೂಹಿಕವಾಗಿ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಡಾ. ಕೆ. ಎಸ್. ನಿರಂಜನ್, ಕ್ಷೇತ್ರ ವ್ಯವಸ್ಥಾಪಕರು, ಕೆ.ವಿ.ಕೆ. ಶಿವಮೊಗ್ಗ, ಕು|| ಸ್ಮಿತ, ಜಿ. ಬಿ., ವಿಜ್ಞಾನಿ (ತೋಟಗಾರಿಕೆ), ಡಾ. ಶ್ರೀಶೈಲ ಸೊನ್ಯಾಳ್, ಸಹಾಯಕ ಪ್ರಾಧ್ಯಾಪಕರು, ರೋಗಶಾಸ್ತ್ರಜ್ಞ, ಡಾ. ಸಚಿನ್, ಸಹಾಯಕ ತೋಟಗಾರಿಕಾ ಅಧಿಕಾರಿ, ಹೊಸನಗರ ಇವರು ಈ ತರಬೇತಿಯಲ್ಲಿ ಉಪಸ್ಥಿತರಿದ್ದು, ಭಾಗವಹಿಸಿದ ರೈತರಿಗೆ ಮಾಹಿತಿ ನೀಡಿದರು.
 

click me!