ಹಾವೇರಿಯ ರಸ್ತೆ ಗುಂಡಿಗೆ 228 ಜನ ಬಲಿ: ಕಿತ್ತುಹೋದ ರೋಡ್‌ಗಳಿಂದ ಅಪಘಾತ ಸಂಖ್ಯೆ ಹೆಚ್ಚಳ

By Kannadaprabha News  |  First Published Oct 25, 2022, 11:36 AM IST

ಹಾವೇರಿ ಜಿಲ್ಲೆಯಲ್ಲಿ ಕಿತ್ತುಹೋದ ರಸ್ತೆಗಳಿಂದ ಅಪಘಾತ ಸಂಖ್ಯೆ ಹೆಚ್ಚಳ, ಹಾಳಾದ ರಸ್ತೆಯಲ್ಲಿ ನಿತ್ಯವೂ ನಡೆಯುತ್ತಿದೆ ಅವಘಡ


ನಾರಾಯಣ ಹೆಗಡೆ

ಹಾವೇರಿ(ಅ.25):  ಕೆರೆಯೋ, ಗಟಾರವೋ ಗೊತ್ತಾಗದ ರೀತಿಯಲ್ಲಿ ಜಿಲ್ಲೆಯ ಪ್ರಮುಖ ರಸ್ತೆಗಳೆಲ್ಲ ಗುಂಡಿ ಬಿದ್ದು ಹಳ್ಳ ಹಿಡಿದಿವೆ. ಇದರಿಂದ ಜಿಲ್ಲೆಯಲ್ಲಿ ಅಪಘಾತ ಸಂಖ್ಯೆ ಹೆಚ್ಚುತ್ತಿದ್ದು, ಕಳೆದ 10 ತಿಂಗಳಲ್ಲಿ 228 ಜನರು ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ!

Tap to resize

Latest Videos

undefined

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರಸ್ತೆ ಹಾಳಾಗಿವೆ ಎಂಬುದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮಾತು. ಇದು ಸತ್ಯವಾಗಿದ್ದರೂ ಮಳೆಗಾಲಕ್ಕಿಂತ ಮೊದಲು ಜಿಲ್ಲೆಯ ಅನೇಕ ರಸ್ತೆಗಳೆಲ್ಲ ಉತ್ತಮವಾಗಿಯೇನು ಇರಲಿಲ್ಲ ಎಂಬುದೂ ವಾಸ್ತವ. ಮೊದಲೇ ಹಾಳಾಗಿದ್ದ ರಸ್ತೆ ಅತಿಯಾದ ಮಳೆಯಿಂದ ಮತ್ತಷ್ಟುಹಾಳಾಗಿದ್ದು, ವಾಹನ ಸಂಚಾರವೇ ದುಸ್ತರವಾಗಿದೆ. ಡಾಂಬರು ಕಿತ್ತು ರಸ್ತೆಯ ಕುರುಹು ಸಹ ಇಲ್ಲದ ರೀತಿಯಲ್ಲಿ ಹಾಳಾಗಿವೆ. ಗುಂಡಿ ಇಳಿದು ಹತ್ತಿ ಏದುಸಿರು ಬಿಡುತ್ತಲೇ ವಾಹನ ಸವಾರಿ ಮಾಡುವಂತಹ ಪರಿಸ್ಥಿತಿ ಜಿಲ್ಲೆಯ ಜನರದ್ದಾಗಿದೆ. ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ನಿತ್ಯವೂ ಹಾಳಾದ ರಸ್ತೆಯಲ್ಲಿ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಗಾಯಗೊಂಡು ಆಸ್ಪತ್ರೆ ಸೇರುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ.

ಚಿತ್ರದುರ್ಗ: ದೀಪಾವಳಿ ಹಬ್ಬದಂದೇ ಜವರಾಯನ ಅಟ್ಟಹಾಸ, ಡಿವೈಡರ್‌ಗೆ ಕಾರು ಡಿಕ್ಕಿ, ಸ್ಥಳದಲ್ಲೇ ಮೂವರ ಸಾವು

10 ತಿಂಗಳಲ್ಲಿ 228 ಜನ ಸಾವು

ಜಿಲ್ಲೆಯಲ್ಲಿ ಕಳೆದ 10 ತಿಂಗಳಲ್ಲಿ 206 ಮಾರಣಾಂತಿಕ ಅಪಘಾತಗಳಾಗಿದ್ದರೆ, 434 ಅಲ್ಪಪ್ರಮಾಣದ ಅಪಘಾತಗಳು ಸೇರಿದಂತೆ 640 ಅಪಘಾತಗಳು ಸಂಭವಿಸಿವೆ. ಬರೋಬ್ಬರಿ 228 ಜನರು ಪ್ರಾಣ ಕಳೆದುಕೊಂಡಿದ್ದರೆ, 1100 ಜನರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಒಟ್ಟಾರೆ 1328 ಜನರು ರಸ್ತೆ ಅಪಘಾತದಲ್ಲಿ ಸಮಸ್ಯೆ ಎದುರಿಸಿದ್ದಾರೆ.

ಜನವರಿ ತಿಂಗಳಲ್ಲಿ 79 ಅಪಘಾತಗಳು ಸಂಭವಿಸಿದ್ದು, 30 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಫೆಬ್ರವರಿಯಲ್ಲಿ 37 ಜನ, ಮಾಚ್‌ರ್‍ನಲ್ಲಿ 22, ಏಪ್ರಿಲ್‌ನಲ್ಲಿ 29 ಜನರು ಮೃತಪಟ್ಟಿದ್ದಾರೆ. ಮೇ ತಿಂಗಳಲ್ಲಿ 25, ಜೂನ್‌ನಲ್ಲಿ 25, ಜುಲೈನಲ್ಲಿ 13, ಆಗಸ್ಟ್‌ನಲ್ಲಿ 15, ಸೆಪ್ಟೆಂಬರ್‌ನಲ್ಲಿ 18 ಹಾಗೂ ಅಕ್ಟೋಬರ್‌ನಲ್ಲಿ ಈವರೆಗೆ 14 ಜನರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅಪಘಾತಗಳಿಗೆ ಹಲವು ಕಾರಣಗಳಿದ್ದರೂ ರಸ್ತೆ ಹಾಳಾಗಿರುವುದು ಪ್ರಮುಖ ಕಾರಣವಾಗಿದೆ.

ರಸ್ತೆ ಸಂಪೂರ್ಣ ಹಾಳು

ಗ್ರಾಮೀಣ, ನಗರ ಪ್ರದೇಶ ಸೇರಿದಂತೆ ಜಿಲ್ಲೆಯ ಎಲ್ಲ ಪ್ರಮುಖ ರಸ್ತೆಗಳು ಗುಂಡಿ ಬಿದ್ದು ಸಂಚಾರವೇ ದುಸ್ತರವೆನಿಸುತ್ತಿದೆ. ಜಿಲ್ಲಾದ್ಯಂತ ಸುಮಾರು 1600 ಕಿಲೋ ಮೀಟರ್‌ಗೂ ಅಧಿಕ ರಸ್ತೆ ಮಳೆಯಿಂದ ಕೆಟ್ಟು ಕರಾಬ್‌ ಆಗಿದೆ. ಪ್ರಯಾಣಕ್ಕಿಂತ ಮೊದಲು ಯಾವ ರಸ್ತೆಯಲ್ಲಿ ಹೋಗೋದು ಎಂಬುದೇ ಚರ್ಚೆಯ ವಿಷಯವಾಗುತ್ತಿದೆ. ಆದರೆ, ಎಲ್ಲಾ ಪ್ರಮುಖ ರಸ್ತೆಗಳ ಸ್ಥಿತಿ ಒಂದೇ ರೀತಿಯಾಗಿದ್ದು, ಹೇಗೆ ಹೋದರೂ ತೆವಳುತ್ತಲೇ ಸಾಗಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

ನಿರಂತರ ಮಳೆಯಿಂದ ರಸ್ತೆಗಳೆಲ್ಲ ದೊಡ್ಡ ದೊಡ್ಡ ಹೊಂಡ ಬಿದ್ದು ಸಂಪೂರ್ಣ ಹಾಳಾಗಿದೆ. 97 ಕಿಲೋ ಮೀಟರ್‌ ರಾಜ್ಯ ಹೆದ್ದಾರಿ ಹಾಳಾಗಿದೆ. 218 ಕಿಲೋ ಮೀಟರ್‌ ಜಿಲ್ಲಾ ಮುಖ್ಯ ರಸ್ತೆಗಳು ಹಾಗೂ 67 ಸೇತುವೆಗಳಿಗೆ ಹಾನಿಯಾಗಿದೆ. ಇನ್ನು ಗ್ರಾಮೀಣ ರಸ್ತೆಗಳ ಸ್ಥಿತಿಯಂತೂ ಯಾರಿಗೂ ಬೇಡ ಎಂಬಂತಾಗಿದೆ. ಬರೋಬ್ಬರಿ 1361 ಕಿಲೋ ಮೀಟರ್‌ ಗ್ರಾಮೀಣ ರಸ್ತೆ, ಈ ಮಾರ್ಗಗಳಲ್ಲಿನ 140 ಸೇತುವೆ ಹಾಳಾಗಿದೆ. ಸುಸ್ಥಿತಿಯಲ್ಲಿರುವ ರಸ್ತೆ ಯಾವುದು ಎಂದು ಹುಡುಕಿದರೂ ಸಿಗದಂತಾಗಿದೆ. ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಿಟ್ಟು ಇಳಿದರೆ ಯಾವ ರಸ್ತೆಯಲ್ಲೂ ಸಂಚರಿಸಲು ಸಾಧ್ಯವಿಲ್ಲದಷ್ಟುಹಾಳಾಗಿದೆ.

Bengaluru: ಡಿವೈಡರ್ ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಬೈಕ್ ಸವಾರ ಭೀಕರ ಅಂತ್ಯ

ರಾಷ್ಟ್ರೀಯ ಹೆದ್ದಾರಿ ಸರ್ವೀಸ್‌ ರಸ್ತೆಯಂತೂ ಎಲ್ಲಿಯೂ ಸಂಚರಿಸಲು ಸಾಧ್ಯವಿಲ್ಲದಷ್ಟು ಹಾಳಾಗಿದೆ. ಸರ್ವೀಸ್‌  ರಸ್ತೆಗೆ ಇಳಿಯುವ ಭಾರೀ ವಾಹನಗಳು ಅಲ್ಲಿಯೇ ಸಿಕ್ಕಿಹಾಕಿಕೊಳ್ಳುತ್ತಿವೆ.

ಜಿಲ್ಲೆಯ ಬಹುತೇಕ ಎಲ್ಲ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಗುತ್ತಲ, ಸವಣೂರು, ಬಂಕಾಪುರ, ಬ್ಯಾಡಗಿ, ರಟ್ಟೀಹಳ್ಳಿ ಸೇರಿದಂತೆ ಗ್ರಾಮೀಣ ರಸ್ತೆಗಳಂತೂ ಇಲ್ಲವೇ ಇಲ್ಲ. ಇದರಿಂದ ವಾಹನ ಅಪಘಾತ ಹೆಚ್ಚುತ್ತಿದೆ. ಸಾರ್ವಜನಿಕರು ಸರ್ಕಾರಕ್ಕೆ ಹಿಡಿಶಾಪ ಹಾಕುವಂತಾಗಿದೆ. ಆದಷ್ಟುಬೇಗ ಜಿಲ್ಲೆಯ ರಸ್ತೆ ದುರಸ್ತಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಅಂತ ಸಾಮಾಜಿಕ ಕಾರ್ಯಕರ್ತ ರಮೇಶ ಆನವಟ್ಟಿ ತಿಳಿಸಿದ್ದಾರೆ. 
 

click me!