ಟಿ. ನರಸೀಪುರ ತಾಲೂಕಿನ ಯಡದೊರೆ ಸರ್ಕಾರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿರುವ ಜಯಪ್ಪ ಸಾಮಾಜಿಕ ಜಾಲತಾಣದ ಮೂಲಕ ಸಹಸ್ರಾರು ಜನರ ಫಾಲೋವರ್ಸ್ ಹೊಂದಿರುವ ಇಂತಹ ಜಯಪ್ಪ ಅವರು ತರಕಾರಿ ಬೆಳೆಯುವ ಮೂಲಕ ಬಂದ ಆದಾಯದಿಂದಲೇ ಎರಡುಮುಕ್ಕಾಲು ಎಕರೆ ಜಮೀನು ಖರೀದಿಸಿದ್ದಾರೆ.
ಅಂಶಿ ಪ್ರಸನ್ನಕುಮಾರ್
ಮೈಸೂರು (ಜು.30) : ಟಿ. ನರಸೀಪುರ ತಾಲೂಕಿನ ಯಡದೊರೆ ಸರ್ಕಾರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿರುವ ಜಯಪ್ಪ ಅವರು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವ ಚಾಮರಾಜನಗರ ಭಾಗದ ಕನ್ನಡ ಭಾಷೆಯ ವಿಡಿಯೋಗಳಿಂದಲೇ ಫೇಮಸ್. ಅದರಲ್ಲೂ ಕೋವಿಡ್ ಸಂದರ್ಭದಲ್ಲಿ ಅವರ ವಿಡಿಯೋಗಳಿಗೆ ಸಹಸ್ರಾರು ಜನರಿಂದ ಮೆಚ್ಚುಗೆ ಸಿಕ್ಕಿವೆ. ಇಂತಹ ಜಯಪ್ಪ ಅವರು ತರಕಾರಿ ಬೆಳೆಯುವ ಮೂಲಕ ಬಂದ ಆದಾಯದಿಂದಲೇ ಎರಡುಮುಕ್ಕಾಲು ಎಕರೆ ಜಮೀನು ಖರೀದಿಸಿದ್ದಾರೆ.
undefined
ಟಿ. ನರಸೀಪುರದ ಭೈರಾಪುರದವರಾದ ಜಯಪ್ಪ ಅವರು ಮೊದಲು ಹುಣಸೂರು ತಾಲೂಕಿನ ಗುರುಪುರದಲ್ಲಿ ದೈಹಿಕ ಶಿಕ್ಷಕರಾಗಿದ್ದರು. ನಂತರ ಸ್ವಗ್ರಾಮದ ಬಳಿಯ ಯಡದೊರೆಗೆ ವರ್ಗಾವಣೆಯಾಯಿತು. ಅವರಿಗೆ ಕೃಷಿಯಲ್ಲಿ ಅಪಾರವಾದ ಆಸಕ್ತಿ. ತಾಯೂರು ರಸ್ತೆಯ ಮನ್ನೇಹುಂಡಿ ಬಳಿ ಒಂದುಕಾಲು ಎಕರೆ ಜಮೀನಿತ್ತು. ಎರಡು ಕೊಳವೆ ಬಾವಿ ಕೊರೆಸಿದರೂ ನೀರು ಬಾರಲಿಲ್ಲ. ಮೂರನೇ ಬಾವಿ ಕೊರೆಸಿದಾಗ ನೀರು ಬಂತು. ಪಕ್ಕದ ಒಂದೂವರೆ ಎಕರೆ ಜಮೀನನನ್ನು ಗುತ್ತಿಗೆಗೆ ಪಡೆದು, ಬಿಡುವಿನ ವೇಳೆಯಲ್ಲಿ ವ್ಯವಸಾಯ ಆರಂಭಿಸಿದರು. ತಂದೆ ಮಹದೇವಪ್ಪ ಅವರು ಇವರಿಗೆ ಸಂಪೂರ್ಣ ಸಾಥ್ ನೀಡಿದರು. 2011 ರಲ್ಲಿ ಮೆಣಸಿನಕಾಯಿ ಹಾಗೂ ಟೊಮ್ಯಾಟೋ ಬೆಳೆದರು. ಮೈಸೂರು ಹಾಗೂ ಟಿ. ನರಸೀಪುರ ಎಪಿಎಂಸಿಯಲ್ಲಿ ಮಾರಾಟ ಮಾಡಿದರು. ಆದರೆ ಸ್ವಲ್ರ ನಷ್ಟವಾಯಿತು.
Raita Ratna Award: ಇವರೇ ಕರುನಾಡಿನ ಅಪೂರ್ವ ಕೃಷಿ ಸಾಧಕರು..!
ನಂತರ ಕೋಸು ಬೆಳೆದರು. 90 ಸಾವಿರ ರೂ. ಲಾಭ ಬಂದಿತು. ಇದಾದ ನಂತರ 2013-14 ರಲ್ಲಿ ಎರಡೂವರೆ ಎಕರೆಯಲ್ಲಿ ಮತ್ತೆ ಮೆಣಸಿನಕಾಯಿ ಬೆಳೆದರು. ಪ್ರತಿ ಕೆಜಿಗೆ 70-80 ರೂ. ಇತ್ತು. ಹೀಗಾಗಿ 17 ಲಕ್ಷ ರೂ. ಆದಾಯ ಬಂದಿತು. ಇದರಿಂದ ಭೈರಾಪುರದಲ್ಲಿ ಹಳೆ ಮನೆಯ ಬದಲು ಹೊಸ ಮನೆ ಕಟ್ಟಿಸಿದರು. ಜೊತೆಗೆ ಒಂದು ಮುಕ್ಕಾಲು ಎಕರೆ ಜಮೀನು ಖರೀದಿಸಿದರು. ಕೇರಳದಲ್ಲಿ ಹೆಚ್ಚಾಗಿ ಬಳಸುವ ಚೊಟ್ಟು (ತರಕಾರಿ) ಬೆಳೆದರು. ಇದರಿಂದ 5.50 ಲಕ್ಷ ರೂ. ಆದಾಯ ಬಂದಿತು. ಮತ್ತೆ ಎರಡೂವರೆ ಎಕರೆಯಲ್ಲಿ ಟೊಮ್ಯಾಟೋ, ಐದೂವರೆ ಎಕರೆ ಗುತ್ತಿಗೆ ಜಮೀನಿನಲ್ಲಿ ಕಬ್ಬು, ಬಾಳೆ ಬೆಳೆದರು. 7.60 ಲಕ್ಷ ರೂ. ಆದಾಯ ಬಂದಿತು. ಮೆಣಸಿನಕಾಯಿ, ಮಂಗಳೂರು ಸೌತೆ, ಸುನಾಮಿ ಕಾಯಿ ಬೆಳೆದರು. 2018 ರಲ್ಲಿ ಮತ್ತೆ ಒಂದು ಎಕರೆ ಜಮೀನು ಖರೀದಿಸಿದರು.
ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎಂದುಕೊಂಡಿದ್ದಾಗ ಮಹಾಮಾರಿ ಕೋವಿಡ್-19 ಎದುರಾಯಿತು. ಲಾಕ್‌ಡೌನ್, ಸೀಲ್‌ಡೌನ್ ಪರಿಣಾಮ ಖರೀದಿಸುವವರು ಇಲ್ಲದೇ ಮೂರ್ನಾಲ್ಕು ಬೆಳೆ ನಷ್ಟವಾಯಿತು. ಇದರಿಂದಾಗಿ ತಾತ್ಕಾಲಿಕವಾಗಿ ಕೃಷಿ ನಿಲ್ಲಿಸಿದರು.
ಕೋವಿಡ್ ಮುಗಿದ ಎಲ್ಲಾ ಸಹಜ ಸ್ಥಿತಿಗೆ ಮರಳಿದರೂ ಸತತ ಬೆಳೆಯಿಂದ ಭೂಮಿಯ ಫಲವತ್ತತೆ ಹಾಳಾಗಿದೆ ಎಂದು ಜಯಪ್ಪ ಏನೂ ಬೆಳೆದಿರಲಿಲ್ಲ. ಇದೀಗ ಮತ್ತೆ ತರಕಾರಿ ಬೆಳೆಯಲು ಸಜ್ಜಾಗಿದ್ದಾರೆ. ಶಾಲೆಗೆ ರಜೆ ಇದ್ದಾಗ ಹಾಗೂ ಸಂಜೆ ವೇಳೆ ಜಯಪ್ಪ ಕೃಷಿಯ ಉಸ್ತುವಾರಿ ನೋಡಿಕೊಂಡರೆ ಉಳಿದಂತೆ ಅವರ ತಂದೆ ಮಹದೇವಪ್ಪ ಅವರು ಜಮೀನಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಸಂಪರ್ಕ ವಿಳಾಸ: ಎಂ. ಜಯಪ್ಪ, ಬೈರಾಪುರ ಹೊಸ ಬಡಾವಣೆ, ಟಿ. ನರಸೀಪುರ, ಮೈಸೂರು ಜಿಲ್ಲೆ, ಮೊ- 96637 48644
ಅಡ್ಡಿಯಾಗದ ಅಂಗವೈಕಲ್ಯ, ಗಾಲಿ ಕುರ್ಚಿಯಲ್ಲಿದ್ದರೂ ಕೃಷಿ ಸಾಧಕ
ಕೆಲವೊಮ್ಮೆ ಕೃಷಿಯಿಂದ ಬರುವ ಆದಾಯವನ್ನೇ ನಂಬಿಕೊಂಡು ವ್ಯವಸಾಯ ಮಾಡಲಾಗದು. ಕೋವಿಡ್ ಸಂದರ್ಭದಲ್ಲಿ ಸತತ ಮೂರು ಬೆಳೆಯಿಂದ ನನಗೆ ನಷ್ಟವಾಯಿತು. ಸರ್ಕಾರಿ ಕೆಲಸ ಇದ್ದಿದ್ದರಿಂದ ಹೇಗೆ ತಡೆದುಕೊಂಡೆ. ಜೊತೆಗೆ ಬಿತ್ತನೆಬೀಜ, ರಸಗೊಬ್ಬರ‚, ಆಳುಕಾಳು ಮೊದಲಾದ ಸಮಸ್ಯೆಗಳಿರುತ್ತವೆ. ಇವುಗಳಿಂದ ಹೊರಬರಬೇಕಾದರೆ ರೈತ ಬೆಳೆಯುವ ಉತ್ಪನ್ನಗಳಿಗೆ ಸ್ಥಿರವಾದ ಬೆಲೆ ದೊರೆಯಬೇಕು.
- ಜಯಪ್ಪ, ಭೈರಾಪುರ