ಅರಶಿನಗುಂಡಿ ಜಲಪಾತ ದುರಂತ, ಕೊನೆಗೂ 1 ವಾರದ ಬಳಿಕ ಶರತ್ ಮೃತದೇಹ ಪತ್ತೆ

By Gowthami K  |  First Published Jul 30, 2023, 1:08 PM IST

ಕೊಲ್ಲೂರು ಸಮೀಪದ ಅರಶಿನಗುಂಡಿ ಜಲಪಾತದಲ್ಲಿ ಆಕಸ್ಮಿಕ ಕಾಲು ಜಾರಿ ಬಿದ್ದು ನೀರುಪಾಲಾದ ಭದ್ರಾವತಿ ಮೂಲದ ಶರತ್‌ ಕುಮಾರ್‌ ಮೃತದೇಹ ಪತ್ತೆಯಾಗಿದೆ.


ಉಡುಪಿ (ಜು.30):  ಕೊಲ್ಲೂರು ಸಮೀಪದ ಅರಶಿನಗುಂಡಿ ಜಲಪಾತದಲ್ಲಿ ಆಕಸ್ಮಿಕ ಕಾಲು ಜಾರಿ ಬಿದ್ದು ನೀರುಪಾಲಾದ ಭದ್ರಾವತಿ ಮೂಲದ ಶರತ್‌ ಕುಮಾರ್‌ ಮೃತದೇಹ ಪತ್ತೆಯಾಗಿದೆ. ಶರತ್ ಮೃತದೇಹ ಅರಶಿನ ಗುಂಡಿ‌ ಜಲಪಾತದಿಂದ 200 ಮೀಟರ್ ಕೆಳಗಡೆ   ಪತ್ತೆಯಾಗಿದೆ. ಕೊಲ್ಲೂರು ಪೊಲೀಸರು, ಅಗ್ನಿಶಾಮಕ ದಳ, ಸ್ಥಳೀಯರು ಕಾರ್ಯಚರಣೆ ನಡೆಸಿದ್ದು, ಬಂಡೆ ಕಲ್ಲಿನ ಒಳಗಡೆ ಶರತ್ ಮೃತದೇಹ ಸಿಲುಕಿ ಹಾಕಿಕೊಂಡಿತ್ತು. ಜುಲೈ 23ರಂದು ಕಾಲು ಜಾರಿ‌  ಶರತ್ ಬಿದ್ದಿದ್ದರು.

ಶರತ್‌ ಪತ್ತೆಗಾಗಿ ಕೊಲ್ಲೂರು ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ, ಸ್ಥಳೀಯರು, ಶರತ್‌ ಸ್ನೇಹಿತರು ಸೇರಿದಂತೆ ಅನೇಕರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಅಲ್ಲದೇ ಡ್ರೋನ್‌ ಕ್ಯಾಮೆರಾ ಸಹಾಯದ ಮೂಲಕ ಹುಡುಕಾಟ ನಡೆಸಲಾಯಿತು. ಆದರೂ ಶರತ್‌ ಪತ್ತೆಯಾಗಿರಲಿಲ್ಲ.

Latest Videos

undefined

ಉತ್ತರ ಕನ್ನಡ: ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಬ್ಯಾನ್

ಕೊಲ್ಲೂರು ದೇವಳಕ್ಕೆ ಬಂದಿದ್ದ ಶರತ್‌ ಸ್ನೇಹಿತನೊಂದಿಗೆ ಅರಿಶಿನಗುಂಡಿ ಜಲಪಾತಕ್ಕೆ ತೆರಳಿದ್ದರು. ಜಲಪಾತದಲ್ಲಿ ನೀರು ಧುಮ್ಮಿಕ್ಕುವ ದೃಶ್ಯ ನೋಡುತ್ತಿದ್ದ ವೇಳೆ ಆಕಸ್ಮಿಕ ಕಾಲು ಜಾರಿ ನೀರು ಪಾಲಾಗಿದ್ದರು. ಶರತ್‌ ಸ್ನೇಹಿತ ಜಲಪಾತದ ದೃಶ್ಯಗಳನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದ್ದು, ಶರತ್‌ ಬೀಳುವ ದೃಶ್ಯಾವಳಿಯೂ ಮೊಬೈಲ್‌ ನಲ್ಲಿ ಸೆರೆಯಾಗಿತ್ತು. ಶರತ್‌ ನೀರುಪಾಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟುವೈರಲ್‌ ಆಗಿತ್ತು.

ಭಾನುವಾರ ಸಂಜೆಯಿಂದ ನಿರಂತರವಾಗಿ ಶರತ್‌ಗಾಗಿ ಹುಡುಕಾಟ ನಡೆಸಲಾಗಿತ್ತು. ಕೊಲ್ಲೂರು ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿಗಳು, ಅಗ್ನಿಶಾಮಕ ಸಿಬ್ಬಂದಿ, ಎಸ್‌ಡಿಆರ್‌ಎಫ್‌, ಸ್ಥಳೀಯ ಯುವಕರು, ಈಜುಪಟು ಈಶ್ವರ್‌ ಮಲ್ಪೆ ಶರತ್‌ ಪತ್ತೆಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದರು. ಕಾರ್ಯಾಚರಣೆ ವೇಳೆ ಈಶ್ವರ್‌ ಮಲ್ಪೆ ಕೂಡ ಜಾರಿ ಬಿದ್ದಿದ್ದು, ಅಪಾಯದಿಂದ ಪಾರಾಗಿದ್ದರು. ಆದರೂ ಶರತ್‌ ಪತ್ತೆಯಾಗದ ಹಿನ್ನೆಲೆ ಚಿತ್ರದುರ್ಗದ ಜ್ಯೋತಿ ರಾಜ್‌ ಅವರನ್ನು ಕರೆಸಲಾಗಿತ್ತು. ಮಳೆ ಆರ್ಭಟ ಹೆಚ್ಚಾಗಿದ್ದರಿಂದ ಕಾರ್ಯಾಚರಣೆಗೆ ತೊಡಕಾಗಿತ್ತು.

ಪ್ರವಾಸಿಗರಿಗೊಂದು ಮನವಿ: ಮಳೆ ನಿಲ್ಲೋವರೆಗೂ ಚಿಕ್ಕಮಗಳೂರು ಪ್ರವಾಸಕ್ಕೆ ಬರಬೇಡಿ

ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ  ಸುಣ್ಣದಹಳ್ಳಿ ನಿವಾಸಿ ಶರತ್‌ ಕುಮಾರ್‌ (23) ಮೇಸ್ತ್ರಿ ಮುನಿಸ್ವಾಮಿ ಎಂಬ​ವರ ಪುತ್ರ. ತಂದೆಯ ಅಡಕೆ ತಟ್ಟೆ ತಯಾರಿಕ ಘಟಕ ನೋಡಿಕೊಳ್ಳುತ್ತಿದ್ದ ಶರತ್‌ಕುಮಾರ್‌ ಘಟನೆ ನಡೆಯುದಕ್ಕೂ  2-3 ದಿನಗಳ ಹಿಂದೆ ಸ್ವಂತ ಕಾರಿನಲ್ಲಿ ಜಲ​ಪಾತ ವೀಕ್ಷ​ಣೆಗೆ ಪ್ರವಾಸ ಹೊರಟಿದ್ದರು ಎನ್ನಲಾಗಿದೆ. ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!