Singatalur Lift Irrigation: ಎರಡು ದಶಕ ಕಳೆದರೂ ಸಿಗದ ಸೌಲಭ್ಯ

By Kannadaprabha NewsFirst Published Sep 4, 2022, 12:37 PM IST
Highlights
  • ಏತನೀರಾವರಿ ಯೋಜನೆಗೆ ಹತ್ತು ವರ್ಷ: ಆದರೂ ರೈತರಿಗಿಲ್ಲ ಹರುಷ
  • ಏತ ನೀರಾವರಿ ಯೋಜನೆ ಲೋಕಾರ್ಪಣೆಗೊಂಡು ಸೆ. 4ಕ್ಕೆ ದಶಕ
  • ಅರೆಬರೆ ಕಾಮಗಾರಿಯಿಂದ ಯಶ ಕಾಣದ ಯೋಜನೆ

ಚಂದ್ರು ಕೊಂಚಿಗೇರಿ

 ಹೂವಿನಹಡಗಲಿ (ಸೆ.4) : ತ್ರಿವಳಿ ಜಿಲ್ಲೆಗಳ ರೈತರ ಜೀವನಾಡಿ ಸಿಂಗಟಾಲೂರು ಏತ ನೀರಾವರಿ ಯೋಜನೆ ಲೋಕಾರ್ಪಣೆಗೊಂಡು ಸೆ. 4ಕ್ಕೆ ದಶಕ ತುಂಬಲಿದೆ. ಆದರೆ, ಯೋಜನೆ ಮಾತ್ರ ಇನ್ನೂ ಪೂರ್ಣ ಪ್ರಮಾಣದಲ್ಲಿ ಮುಗಿಯದೇ ರೈತರಿಗೆ ಹರುಷವೇ ಇಲ್ಲದಂತಾಗಿದೆ. ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ನನೆಗುದಿಗೆ ಬಿದ್ದಿದ್ದ ಯೋಜನೆಗೆ .450 ಕೋಟಿ ಅನುದಾನ ನೀಡಿ ಪೂರ್ಣಗೊಳಿಸಿದ್ದರು. ನಂತರದಲ್ಲಿ 2012 ಸೆ. 4ರಂದು ಅಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ(Basavaraj Bommai) ಹಾಗೂ ಶಾಸಕರಾಗಿದ್ದ ಚಂದ್ರನಾಯ್ಕ ನೇತೃತ್ವದಲ್ಲಿ ಸಿಂಗಟಾಲೂರು ಏತ ನೀರಾವರಿ(Singataluru Lift irrigation) ಯೋಜನೆ ಲೋಕಾರ್ಪಣೆಗೊಂಡಿತ್ತು. ಯೋಜನೆಯ ವ್ಯಾಪ್ತಿಯ ಬಲದಂಡೆ ಭಾಗದಲ್ಲಿ ಮಾಗಳ, ದಾಸರಹಳ್ಳಿ ಭಾಗದಲ್ಲಿ ಕಾಲುವೆ ಕಾಮಗಾರಿ ಇನ್ನೂ ಅರೆಬರೆಯಾಗಿದ್ದು, ರೈತರ ಜಮೀನುಗಳಿಗೆ ನೀರಿಲ್ಲ, ಕಾಲುವೆಗಳಿಗೆ ಭೂಮಿ ಕಳೆದುಕೊಂಡಿರುವ ರೈತರಿಗೆ ಪರಿಹಾರ ಸಿಕ್ಕಿಲ್ಲ. ಸ್ಥಳಾಂತರಗೊಂಡಿರುವ ಗ್ರಾಮಗಳಲ್ಲಿ ಸೌಲಭ್ಯಗಳ ಕೊರತೆ ಸೇರಿದಂತೆ ಹತ್ತಾರು ಸಮಸ್ಯೆಗಳು ಯೋಜನೆಯನ್ನು ಸುತ್ತಿಕೊಂಡಿವೆ.

ಸಿಂಗಟಾಲೂರು ಏತನೀರಾವರಿಗಾಗಿ ಶೀಘ್ರ ಬೃಹತ್‌ ಹೋರಾಟ

ಯೋಜನೆಯ ಹಿನ್ನೀರಿನಲ್ಲಿ ಮುಳುಗಡೆಯಾಗುವ ವಿಜಯನಗರ(Vijayanagara) ಜಿಲ್ಲೆಯ ಅಲ್ಲಿಪುರ, ಗದಗ(Gadag) ಜಿಲ್ಲೆಯ ಗುಮ್ಮಗೋಳ(Gummagol), ಬಿದರಹಳ್ಳಿ(Bidarahalli) ಮತ್ತು ವಿಠಲಾಪುರ(Vittalapura) ಗ್ರಾಮಗಳ ಸ್ಥಳಾಂತರ ಕಾರ್ಯ ಪೂರ್ಣಗೊಂಡಿಲ್ಲ. ನವ ಗ್ರಾಮಕ್ಕೆ ಸಂತ್ರಸ್ತರು ಹೋಗಲು ಹತ್ತಾರು ಸಮಸ್ಯೆಗಳಿದ್ದು, ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪುನರ್‌ ವಸತಿ ಮತ್ತು ಪುನರ್‌ ನಿರ್ಮಾಣ ಇಲಾಖೆ ಗಮನ ಹರಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.

ಈ ಯೋಜನೆಯಿಂದ ಬಲದಂಡೆ ಭಾಗದಲ್ಲಿ 35791 ಎಕರೆ ಹಾಗೂ ಎಡದಂಡೆ ಭಾಗದಲ್ಲಿ 229471 ಎಕರೆ ನೀರಾವರಿ ಸೇರಿದಂತೆ ಒಟ್ಟು 265261 ಎಕರೆ ಪ್ರದೇಶಕ್ಕೆ ನೀರುಣಿಸಲಿದೆ. ಆದರೆ, ಬಲದಂಡೆ ಭಾಗಕ್ಕೆ ನೀರಾವರಿ ಸೌಲಭ್ಯ ಕಡಿಮೆ ಇದ್ದರೂ ಯಾವೊಬ್ಬ ಜನಪ್ರತಿನಿಧಿಗಳು ಈ ಕುರಿತು ಧ್ವನಿ ಎತ್ತಿಲ್ಲ. ಯೋಜನೆಗೆ ಬಲದಂಡೆ ಭಾಗದಲ್ಲಿ 1666 ಎಕರೆ, ಎಡದಂಡೆಯಲ್ಲಿ 1540 ಎಕರೆ ಭೂಮಿ ಮುಳುಗಡೆಯಾಗಿದೆ. ಗದಗ ಹಾಗೂ ಕೊಪ್ಪಳ ಜಿಲ್ಲೆಗಳ ತಾಲೂಕಿನ ಹಳ್ಳಿಗಳಿಗೆ ನೀರುಣಿಸುವ ಯೋಜನೆಗೆ, ಅತಿ ಹೆಚ್ಚು ಬಲದಂಡೆ ಭಾಗದ ರೈತರೇ ಭೂಮಿ ಕಳೆದುಕೊಂಡಿದ್ದರೂ, ವಿಜಯನಗರ ಜಿಲ್ಲೆಯ ಕೇವಲ ಹೂವಿನಹಡಗಲಿ ತಾಲೂಕಿನ ಕೆಲ ಹಳ್ಳಗಳಿಗೆ ಮಾತ್ರ ನೀರಾವರಿ ಸೌಲಭ್ಯ ಸಿಕ್ಕಿದೆ. ಯೋಜನೆಯ ತಾರತಮ್ಯಯನ್ನು ಪ್ರಶ್ನಿಸುವವರೇ ಇಲ್ಲದಂತಾಗಿದೆ ಎಂಬ ದೂರು ಕೇಳಿ ಬರುತ್ತಿದೆ.

ಯೋಜನೆ ಲೋಕಾರ್ಪಣೆಗೊಂಡು ದಶಕವೇ ಕಳೆದರೂ ಈವರೆಗೂ ಪೂರ್ಣ ಪ್ರಮಾಣದ ನೀರು ನಿಲುಗಡೆ ಮಾಡಲು ಇಲಾಖೆಯಿಂದ ಸಾಧ್ಯವಾಗಿಲ್ಲ. 509 ಮೀಟರ್‌ ಅಂದರೇ 3.12 ಟಿಎಂಸಿ ನೀರು ನಿಲುಗಡೆ ಮಾಡಬೇಕಿದೆ. ಆದರೆ, ಕಳೆದ ಹತ್ತು ವರ್ಷಗಳಿಂದ 1.81 ಟಿಎಂಸಿ ನೀರು ಮಾತ್ರ ನಿಲ್ಲಿಸಲಾಗುತ್ತಿದೆ. ಇದರಿಂದ ಸಾಕಷ್ಟುನೀರು ಪೋಲಾಗುತ್ತಿದೆ. ಜತೆಗೆ ವಿದ್ಯುತ್‌ ಉತ್ಪಾದನೆಗೂ ಅಡ್ಡಿಯಾಗುತ್ತಿದೆ. ಇದರಿಂದ ತುಂಗಭದ್ರಾ ಪವರ್‌ ಹೌಸ್‌ ಕೂಡಾ ಸಾಕಷ್ಟುನಷ್ಟಅನುಭವಿಸುತ್ತಿದೆ.

ಬ್ಯಾರೇಜ್‌(Barrage)ನಲ್ಲಿ ನೀರು ನಿಲುಗಡೆ ಮಾಡಲು ಗ್ರಾಮಗಳ ಸ್ಥಳಾಂತರ ಆಗುತ್ತಿಲ್ಲ. ಅಲ್ಲಿಪುರ, ಬಿದರಹಳ್ಳಿ ಮಾತ್ರ ಶೇ. 80ರಷ್ಟುಸ್ಥಳಾಂತರಗೊಂಡಿವೆ. ಆದರೆ, ಗುಮ್ಮಗೋಳ ಯಾವ ಕುಟುಂಬವೂ ಸ್ಥಳಾಂತರವಾಗಿಲ್ಲ. ಸರಿಯಾದ ಜಾಗಕ್ಕೆ ನಮ್ಮನ್ನು ಸ್ಥಳಾಂತರ ಮಾಡಿ ನೀರು ನಿಲ್ಲಿಸಿ ಎಂದು ಗ್ರಾಮಸ್ಥರು ಪಟ್ಟು ಹಿಡಿದ್ದಾರೆ. ಜತೆಗೆ ಪುನರ್‌ ವಸತಿ ಮತ್ತು ಪುನರ್‌ ನಿರ್ಮಾಣ ಇಲಾಖೆಯ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಬ್ಯಾರೇಜ್‌ 26 ಗೇಟ್‌ ಹೊಂದಿದ್ದು, ಇದರಲ್ಲಿ 22 ಗೇಟ್‌ಗಳು ದುರಸ್ತಿಯಲ್ಲಿವೆ. ಅನುದಾನಕ್ಕಾಗಿ ಸರ್ಕಾರಕ್ಕೆ ಹತ್ತಾರು ಪತ್ರಗಳನ್ನು ಬರೆದರೂ, ನಯಾ ಪೈಸೆ ಹಣ ಬಿಡುಗಡೆ ಮಾಡಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಗೇಟ್‌ ದುರಸ್ತಿಗೆ ಅಂದಾಜು .8 ಕೋಟಿ ಅನುದಾನದ ಬೇಡಿಕೆ ಇದೆ.

ಕೊಪ್ಪಳ: ಹತ್ತು ವರ್ಷವಾದರೂ ಬಾರದ ಹನಿ ನೀರು

ಯೋಜನೆಗೆ 2008ರಲ್ಲೇ ಭೂಮಿ ಕಳೆದುಕೊಂಡಿದ್ದೇವೆ. ಈ ವರೆಗೂ ಪರಿಹಾರ ಬಂದಿಲ್ಲ, ಜತೆಗೆ ನಮ್ಮ ಭಾಗದಲ್ಲಿನ ಕಾಲುವೆ ಕಾಮಗಾರಿ ಅರೆಯಾಗಿವೆ. ಇದರಿಂದ ರೈತರ ಜಮೀನುಗಳಿಗೆ ನೀರು ಬರುತ್ತಿಲ್ಲ. ಹತ್ತು ವರ್ಷದಲ್ಲಿ ಯೋಜನೆ ಯಾವ ಸುಧಾರಣೆ ಕಂಡಿಲ್ಲ.

ಕೋಟೆಪ್ಪ, ಬಸಪ್ಪ ಮಾಗಳ ರೈತರು.

ಯೋಜನೆ ವ್ಯಾಪ್ತಿಯಲ್ಲಿ ಮಾಗಳ, ದಾಸರಹಳ್ಳಿ ಭಾಗದಲ್ಲಿ ಕೆಲ ಕಾಲುವೆ ಕಾಮಗಾರಿ ಬಾಕಿ ಇದೆ. ಅನುದಾನ ಬಂದ ಕೂಡಲೇ ಕಾಮಗಾರಿ ಮಾಡುತ್ತೇವೆ. ಬ್ಯಾರೇಜ್‌ನಲ್ಲಿ ಪೂರ್ಣ ಪ್ರಮಾಣದ ನೀರು ನಿಲುಗಡೆಗೆ ಮುಳುಗಡೆ ಗ್ರಾಮಗಳ ಸ್ಥಳಾಂತರವಾಗಿಲ್ಲ.

- ಐಗೋಳ ಪ್ರಕಾಶ, ಇಇ, ಸಿಂಗಟಾಲೂರು ಏತ ನೀರಾವರಿ ಯೋಜನೆ, ಹೂವಿನಹಡಗಲಿ.

click me!