Gadag: ಹದ್ಲಿ ಗ್ರಾಮದಲ್ಲಿ ಶೌಚಕ್ಕೆ ಬಯಲೇ ಗತಿ; ಮಹಿಳೆಯರ ಗೋಳು ಕೇಳೋರಿಲ್ಲ!

By Kannadaprabha NewsFirst Published Sep 4, 2022, 12:04 PM IST
Highlights

"ಬಯಲು ಬಹಿರ್ದೆಸೆ ಮುಕ್ತ ಗ್ರಾಮ’ ಇದು. ಈ ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದೇ ಮಹಿಳೆಯರು ಶೌಚಕ್ಕೆ ಬಯಲನ್ನೇ ಆಶ್ರಯಿಸಿದ್ದಾರೆ!

ಎಸ್‌.ಜಿ. ತೆಗ್ಗಿನಮನಿ

 ನರಗುಂದ (ಸೆ.4): ಬಯಲು ಬಹಿರ್ದೆಸೆ ಮುಕ್ತ ಗ್ರಾಮ’ ಇದು. ಇಲ್ಲೀಗ ಸಾರ್ವಜನಿಕ ಶೌಚಾಲಯ ಇಲ್ಲದೇ ಜನತೆ ಶೌಚಕ್ಕೆ ಬಯಲನ್ನೇ ಆಶ್ರಯಿಸಿದ್ದಾರೆ! ತಾಲೂಕಿನ ಹದ್ಲಿ ಗ್ರಾಮದ ಕಥೆ ಇದು. ಇಲ್ಲಿ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಇಲ್ಲದೇ ಮಹಿಳೆಯರು ನಿತ್ಯ ಶೌಚಕ್ಕೆ ಬಯಲನ್ನೇ ಆಶ್ರಯಿಸಬೇಕಾದ ದುಸ್ಥಿತಿ ಇದೆ. ಗ್ರಾಮ ಪ್ರವೇಶ ಮಾಡಿದರೆ ರಸ್ತೆ ಅಕ್ಕ ಪಕ್ಕ ತಿಪ್ಪೆಗಳ ದರ್ಶನ. ಮೂಗು ಮುಚ್ಚಿಕೊಂಡೇ ಹೋಗಬೇಕು. ಹಾಗಿದೆ ಇಲ್ಲಿನ ಅವಾಂತರ.

ಟಾಯ್ಲೆಟ್‌ನಲ್ಲಿ ಮೊಬೈಲ್ ಬಳಸೋ ಅಭ್ಯಾಸವಿದ್ಯಾ ? ಪೈಲ್ಸ್ ಕಾಡ್ಬೋದು ಹುಷಾರ್‌ !

ಈ ಗ್ರಾಮದಲ್ಲಿ ಯಾವುದೇ ರೀತಿಯ ಮೂಲಭೂತ ಸೌಲಭ್ಯಗಳಿಲ್ಲ. ಒಳಚರಂಡಿ ವ್ಯವಸ್ಥೆ ಇಲ್ಲದೇ ಇಲ್ಲಿ ಬಯಲು ಬಹಿರ್ದೆಸೆ ಸಾಮಾನ್ಯ ಎಂಬಂತಿದೆ. ಮಳೆ ಬಂದರಂತೂ ಮಹಿಳೆಯರ ಗೋಳು ಹೇಳತೀರದು. ಗ್ರಾಮ ಪ್ರವೇಶ ಮಾಡುತ್ತಲೇ ಶಿರೋಳ ರಸ್ತೆ ಕೊನೆಯವರೆಗೂ ಎಡಬದಿಯಲ್ಲಿ ತಿಪ್ಪೆಗಳು ಹೆಚ್ಚಾಗಿದ್ದು, ಇಲ್ಲಿ ವಾಹನಗಳು ಪರಸ್ಪರ ಎದುರಿಗೆ ಸಂಚರಿಸದ ಸ್ಥಿತಿ ಇದೆ.

ಚರಂಡಿ, ಕಾಂಕ್ರೀಟ್‌ ರಸ್ತೆಗಳಿಲ್ಲ ಗ್ರಾಮದ ಚಿದಾನಂದಮಠದ(Chidananda Math) ಸಮೀಪ ಕುಲಕರ್ಣಿಯವರ ಪ್ಲಾಟ್‌, ಗಣೇಶ ನಗರದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೇ ಚರಂಡಿ ನೀರು ಹೊರಹೋಗುತ್ತಿಲ್ಲ. ಇದರಿಂದ ಸೊಳ್ಳೆಗಳ ಉತ್ಪತ್ತಿ ಸಹಜವಾಗಿದೆ. ಕಾಂಕ್ರಿಟ್‌ ರಸ್ತೆಗಳು ಕೆಲವೆಡೆ ನಿರ್ಮಾಣಗೊಂಡಿದ್ದು, ಪೂರ್ಣ ಪ್ರಮಾಣದಲ್ಲಿ ಇಲ್ಲದಿರುವುದರಿಂದ ಮಳೆ ಬಂದರೆ ಕೆಸರಿನಲ್ಲಿಯೇ ಸಂಚರಿಸಬೇಕು. ಗ್ರಾಮದ ತುಂಬೆಲ್ಲಾ ಹಂದಿಗಳ ಹಾವಳಿ ಹೆಚ್ಚಾಗಿದ್ದು, ರೈತರ ಬಣವಿಗಳಿಗೆ ನುಗ್ಗಿ ಹೊಟ್ಟು, ಮೇವು ಚೆಲ್ಲಾಪಿಲ್ಲಿಯಾಗಿಸುತ್ತವೆ. ಅಲ್ಲಿಯೇ ವಾಸಸ್ಥಾನ ಮಾಡಿಕೊಂಡಿದ್ದರಿಂದ ರೈತರು ಜಾನುವಾರುಗಳಿಗೆ ಮೇವು ತೆಗೆಯಲು ಆಗುತ್ತಿಲ್ಲ.

ಹದ್ಲಿ(Hadli Village)ಗೆ ತೆರಳಲು ಹೆಚ್ಚಿನ ಬಸ್‌ಗಳಿಲ್ಲ. ಜತೆಗೆ ರೋಣ- ನರಗುಂದ ಮಾರ್ಗ ಮಧ್ಯದಲ್ಲಿ ಹದ್ಲಿ ಕ್ರಾಸ್‌ ಇದ್ದು, ಅಲ್ಲಿಗೆ ಇಳಿದು ಮೂರು ಕಿಮೀ ನಡೆದುಕೊಂಡು ತೆರಳಬೇಕು. ಈ ಆರಂಭದ ಒಂದು ಕಿ.ಮೀ. ರಸ್ತೆಯ ಕಾಮಗಾರಿ ಅಪೂರ್ಣಗೊಂಡಿದೆ. ಹದ್ಲಿ ಕ್ರಾಸ್‌ ಬಳಿ ಬಸ್‌ ತಂಗುದಾಣ ಸಂಪೂರ್ಣ ಶಿಥಿಲಗೊಂಡಿದೆ.

ಅಬ್ಬಬ್ಬಾ...! ಇಲ್ಲಿ ಮದುವೆಯಾದ 3 ದಿನಗಳವರೆಗೆ ವಧು, ವರ ಟಾಯ್ಲೆಟ್‌ಗೆ ಹೋಗುವಂತಿಲ್ಲ!

ಗ್ರಾಮಕ್ಕೆ ಶೌಚೌಲಯ, ಚರಂಡಿ, ರಸ್ತೆ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳನ್ನು ಮಾಡಬೇಕೆಂದು ಹಲವಾರು ಬಾರಿ ಗ್ರಾಪಂ ಮನವಿ ಮಾಡಿಕೊಂಡರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ.

ಆನಂದಮ್ಮ ಹಿರೇಮಠ, ಕರವೇ ಮಹಿಳಾ ಗ್ರಾಮ ಘಟಕದ ಅಧ್ಯಕ್ಷೆ

ನಾನು ಹೊಸದಾಗಿ ಬಂದು ಚಾಜ್‌ರ್‍ ತೆಗೆದುಕೊಂಡಿದ್ದೇನೆ. ಎರಡು ದಿನಗಳಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಪಂ ಆಡಳಿತ ಮಂಡಳಿ ಮತ್ತು ಗ್ರಾಪಂ ಅಭಿವೃದ್ಧಿ ಅಧಿಕಾರಿ ಜೊತೆ ಮಾತನಾಡಿ ಮೂಲಭೂತ ಸೌಲಭ್ಯ ಕಲ್ಪಿಸಲಾಗುವುದು.

ಮಂಜುಳಾ ಹಕಾರಿ, ತಾಪಂ ಅಧಿಕಾರಿ

click me!