ಕಾರಣವಿಲ್ಲದೆ ವೆಚ್ಚದಲ್ಲಿ ಹೆಚ್ಚಳ, ಎರಡೆರಡು ಬಾರಿ ವೆಚ್ಚ ಪರಿಷ್ಕರಿಸಿದರೂ ಸಕಾರಣ ನೀಡಲಾಗಿಲ್ಲ: ಶಾಸಕ ಪ್ರಿಯಾಂಕ್ ಖರ್ಗೆ
ಕಲಬುರಗಿ(ಸೆ.04): ನಗರದ ಪ್ರಬುದ್ಧ ಪೆಟ್ರೋಲ್ ಬಂಕ್‌ನಿಂದ ಕಲಬುರಗಿ-ಸೇಡಂ ರಸ್ತೆಯವರೆಗೆ ಮೇಲ್ಸೆತುವೆ ನಿರ್ಮಾಣದ ಯೋಜನೆಯ ಅಂದಾಜು ವೆಚ್ಚ ಕಾಮಗಾರಿ ಶುರುವಾಗುವ ಮುನ್ನವೇ ಎರಡೆರಡು ಬಾರಿ ಪರಿಷ್ಕರಿಸಲ್ಪಟ್ಟಿದೆ. ಹಲವು ಐಟಂ ಸೇರ್ಪಡೆಯಾಗಿಲ್ಲ, ವೆಚ್ಚದಲ್ಲಿ ಭಾರಿ ಏರಿಕೆ ಮಾಡಲಾಗಿದೆ. ಇದಕ್ಕೆ ಸಕಾರಣ ನೀಡಿಲ್ಲ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ದೂರಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೆಚ್ಚ ಪರಿಷ್ಕರಣೆಯ ಹಿಂದೆ ಕಾಣದ ಕೈಗಳಿವೆ. ಇದರಿದಾಗಿ ಜನರ ತೆರಿಗೆ ಹಣ ಅಪವ್ಯಯವಾಗುತ್ತಿದೆ. ಕಾಮಗಾರಿಯ ಒಟ್ಟು ಮೊತ್ತ 49 ಕೋಟಿಗೆ ನಿಗದಿಯಾಗಿದೆ. ಆದರೆ, ಡಿಪಿಆರ್‌ನಲ್ಲಿ ಯಾಕೆ ಮೇಲ್ಸೆತುವೆ ಬೇಕು ಎಂದು ವಿವರವಾಗಿ ಎಲ್ಲಿಯೂ ಹೇಳಿಲ್ಲ ಎಂದರು.
ಕೆಲವರೇ ಸೇರಿ ಇಂತಹ ಯೋಜನೆ ಬೇಕೆಂದು ನಿರ್ಣಯಿಸಿ ಮುಂದಾಗುತ್ತಾರೆ. ಇದು ಅಚ್ಚರಿಯ ಸಂಗತಿಯೇ ಸರಿ. ಪಿಡಬ್ಲ್ಯೂಡಿ ಅವರು ಆಡಳಿತಾತ್ಮಕ ಒಪ್ಪಂದ ನೀಡಿರುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯುತ್ತಾರೆ. ಆದರೆ ಜಿಲ್ಲಾಧಿಕಾರಿ ಅನುಮತಿ ಪಡೆದಿರುವುದಿಲ್ಲ. ಹಾಗಾಗಿ, ಜಿಲ್ಲಾಧಿಕಾರಿಯವರು, ಪಿಡಬ್ಲೂ$್ಲಡಿ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಆಡಳಿತಾತ್ಮಕ ಅನುಮೋದನೆ ಪಡೆಯದೆ ಡಿಪಿಆರ್ ಕಾಮಗಾರಿ ಟೆಂಡರ್ ಕರೆಯಲಾಗಿದೆ. ನಿಯಮಾನುಸಾರ ಆಡಳಿತಾತ್ಮಕ ಅನುಮೋದನೆ ಪಡೆಯದೇ ಟೆಂಡರ್ ಕರೆದಿರುವುದು, ನಿಯಮ ಉಲ್ಲಂಘನೆಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಮೇಲೆ ಶಿಸ್ತು ಕ್ರಮಕ್ಕೆ ಕೋರಿದ್ದಾರೆ ಎಂದು ಹೇಳಿದರು.
ಕಲಬುರಗಿಯಲ್ಲಿ ಅತಿದೊಡ್ಡ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜನೆ: ಯಶವಂತ ವಿ. ಗುರುಕರ್
ವೆಚ್ಚ ಹೆಚ್ಚಳದ ಬಗ್ಗೆ ಕಾರಣ ನೀಡಿಲ್ಲ:
ಫ್ಲೈ ಓವರ್ ಕಾಮಗಾರಿ ಒಟ್ಟು 49 ಕೋಟಿಗೆ ನಿಗದಿಪಡಿಸಿದ್ದರೂ ಈ ಹಿಂದೆ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ 20 ಕೋಟಿಗೆ ಅಂದರೆ ಒಟ್ಟು 69 ಕೋಟಿಗೆ ಪರಿಷ್ಕೃತ ಆಡಳಿತಾತ್ಮಕ ಅನುಮೋದನೆಗಾಗಿ ಮತ್ತೊಮ್ಮೆ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿದೆ. ಯಾಕೆ ಹೀಗೆ ಎಂದರೆ ಸಕಾರಣ ಯಾವ ಹಂತದಲ್ಲಿಯೂ ನೀಡಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಕಾರ ನಾಲ್ಕು ಲೇನ್ ಉಳ್ಳ 1.5 ಕಿಮಿ ರಸ್ತೆ ನಿರ್ಮಾಣಕ್ಕೆ ಒಟ್ಟು 29.52 ಕೋಟಿ ರು. ಆಗುತ್ತದೆ. ಆದರೆ ಮೇಲ್ಸೆತುವೆಗೆ 49 ಕೋಟಿ ನಿಗದಿ ಮಾಡಿ, ನಂತರ 69 ಕೋಟಿಗೆ ಪರಿಷ್ಕರಿಸಲಾಗಿದೆ. ಇವರು ನಿರ್ಮಿಸುವ ಕಾಮಗಾರಿ ರಾಷ್ಟ್ರೀಯ ಹೆದ್ದಾರಿ ನಿಗದಿತ ಬೆಲೆಗಿಂತಲೂ ಹೆಚ್ಚೆ? ಅಲ್ಲಿನ ಗುಣಮಟ್ಟಕ್ಕಿಂತಲೂ ಹೆಚ್ಚೆ? ಇವೆಲ್ಲ ಗೊಂದಲಮಯವಾಗಿವೆ ಎಂದರು.
ಗೊಂದಲ ಪರಿಹರಿಸಬೇಕು:
ಕಾಮಗಾರಿಯ ಟೆಂಡರ್ ಕರೆದಿರುವುದು ಕೇವಲ 39 ಕೋಟಿಗೆ. ಇದಲ್ಲದೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮದ ಪ್ರಕಾರ ಪ್ರತಿನಿತ್ಯ 51,000 ವಾಹನಗಳು ಓಡಾಡಿದರೆ ಮಾತ್ರ ಮೇಲ್ಸೆತುವೆ ಕಟ್ಟಬೇಕು. ಆದರೆ ಉದ್ದೇಶಿತ ಹುಮನಾಬಾದ್-ರಾಮಮಂದಿರ ರಸ್ತೆಯಲ್ಲಿ 40,751 ವಾಹನ ಓಡಾಡುತ್ತವೆ. ಸಂಚಾರ ದಟ್ಟಣೆ ಕಡಿಮೆ ಮಾಡಲು ಮೇಲ್ಸೇತುವೆ ಕಟ್ಟಲಾಗುತ್ತದೆ. ಆದರೆ ಇಲ್ಲಿ ಕಡಿಮೆ ಸಂಚಾರ ದಟ್ಟಣೆ ಜಾಗದಲ್ಲಿ ಮೇಲ್ಸೇತುವೆ ಕಟ್ಟಲಾಗುತ್ತಿದೆ. ನಗರದ ಪ್ರಮುಖ ಯೋಜನೆಗಳು ಹೀಗಾದರೆ ಹೇಗೆ? ಈ ಯೋಜನೆಗಳ ಗೊಂದಲಗಳನ್ನು ಕೆಕೆಆರ್‌ಡಿಬಿ ಕಾರ್ಯದರ್ಶಿ ಪರಿಹರಿಸಲಿ ಎಂದರು.
ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ: ವಿಜೃಂಭಣೆಯ ಆಚರಣೆಗೆ ಸಕಲ ಸಿದ್ಧತೆ
ನಾನೇನು ಅಂತ ಚಿತ್ತಾಪುರ ಜನತೆಗೆ ಗೊತ್ತಿಗೆ
ಬಿಜೆಪಿಯವರು ಪ್ರಿಯಾಂಕ್ ಖರ್ಗೆ ಅವರ ಪಾಪದ ಕೊಡ ತುಂಬಿದೆ ಈ ಸಲ ಸೋಲುತ್ತಾರೆ ಎಂದಿದ್ದಾರೆ ಎಂಬ ಹೇಳಿಕೆಗೆ ಉತ್ತರಿಸಿದ ಖರ್ಗೆ, ಸವದಿ, ಚಿಂಚನಸೂರು ಅವರೇ ಸ್ವತಃ ಸೋತಿದ್ದಾರೆ. ಯಾರ ಪಾಪದ ಕೊಡ ತುಂಬಿದೆ. ಹಾಗೆ ಪಾಪದ ಕೊಡ ತುಂಬಿದವರು ಮನೆಯಲ್ಲಿ ಕುಳಿತಿದ್ದಾರೆ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ನಾನು ಏನು ಎನ್ನುವುದು ಚಿತ್ತಾಪುರ ಜನತೆಗೆ ಗೊತ್ತಿದೆ. ನಾನು ರಾಜಕೀಯದಲ್ಲಿ ಸಕ್ರೀಯವಾಗಿದ್ದಕ್ಕೆ ಚಿಂಚನಸೂರು ಅವರನ್ನು ಎಂಎಲ್‌ಸಿ ಮಾಡಿದ್ದಾರೆ. ಬಿಜೆಪಿಗರಿಗೆ ಕೋಲಿ ಸಮಾಜದ ಮೇಲೆ ಪ್ರೀತಿ ಇದ್ದಾಗ ಚಿಂಚನಸೂರು ಅವರನ್ನು ಮೊದಲೇ ಎಂಎಲ್‌ಸಿ ಮಾಡಬೇಕಿತ್ತು ಎಂದು ಕುಟುಕಿದರು.
ಸರ್ಕಾರದ ಭ್ರಷ್ಟಾಚಾರ, ಪಿಎಸ್‌ಐ ಹಗರಣ, ಕೆಪಿಟಿಸಿಎಲ್ ನೇಮಕಾತಿ ಹಗರಣ ಬಗ್ಗೆ ಮಾತನಾಡಿದ್ದಕ್ಕೆ ನನ್ನನ್ನೇ ಟಾರ್ಗೆಟ್ ಮಾಡಲಾಗುತ್ತಿದೆ. ಯಾವ ಹಗರಣದ ತನಿಖೆಯಾಗಿಲ್ಲ. ಐಎಎಸ್, ಐಪಿಎಸ್, ಕೆಪಿಟಿಸಿಎಲ್ ಅಧಿಕಾರಿಗಳು ಸಸ್ಪೆಂಡ್ ಆಗಿರುವುದು ನಮ್ಮ ಹೋರಾಟದಿಂದಾಗಿ. ಬಿಜೆಪಿಗರು ವಿಧಾನಸೌಧವನ್ನು ವ್ಯಾಪಾರಸೌಧ ಮಾಡಿದ್ದಾರೆ. ತಮ್ಮ ಕಾಲದಲ್ಲಿ 20-25 ಐಎಎಸ್ ಅಧಿಕಾರಿಗಳು ಇದ್ದರು. ಈಗ ಬರೀ ಕೆಎಎಸ್ ಅಧಿಕಾರಿಗಳೇ ಇದ್ದಾರೆ ಎಂದು ಅಕ್ಷೇಪ ವ್ಯಕ್ತಪಡಿಸಿದ ಅವರು, ಕೆಕೆಆರ್‌ಡಿಬಿ ಕಾರ್ಯದರ್ಶಿಯನ್ನು ಹಲವು ಕಡೆ ವರ್ಗಾವಣೆ ಮಾಡಲಾಗಿದೆ. ಇದರಿಂದ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ. ಕೆಕೆಆರ್‌ಡಿಬಿ ಎನ್ನುವುದು ಬಿಜೆಪಿ ಶಾಸಕರ ಕಾಮಧೇನು ಆಗಿದ್ದು, ಅಲ್ಲದೇ ಅವರ ಸ್ವಯಂ ಅಭಿವೃದ್ಧಿ ಮಂಡಳಿ ಆಗಿದೆ. ಯಾರು ದುಡ್ಡು ಕೊಡುತ್ತಾರೋ ಅವರೇ ಕಾಮಗಾರಿ ಗುತ್ತಿಗೆ ಕೊಡಲಾಗುತ್ತಿದೆ. ಡಿಪಿಆರ್ ಆದಮೇಲೆ ಡಿಸಿಗಳಿಗೆ ಹೋಗುತ್ತವೆ. ಆದರೆ ಬೋರ್ಡ್‌ಗೆ ಹೋಗದೇ ಕಾಮಗಾರಿ ನಡೆಯುತ್ತಿದೆ ಎಂದು ಆರೋಪಿಸಿದರು.