ಐಟಿ ದೈತ್ಯ ಕಾಗ್ನಿಜೆಂಟ್‌ನಿಂದ 15,000 ಟೆಕ್ಕಿಗಳ ಲೇಆಫ್‌ಗೆ ಸಿದ್ದತೆ, ಇದರಲ್ಲಿ ಭಾರತೀಯರೇ ಹೆಚ್ಚು!

Published : May 05, 2026, 08:21 PM IST
Cognizant Salary Hike 2024

ಸಾರಾಂಶ

ಐಟಿ ದೈತ್ಯ ಕಾಗ್ನಿಜೆಂಟ್ ತನ್ನ 'ಪ್ರಾಜೆಕ್ಟ್ ಲೀಪ್' ಅಡಿಯಲ್ಲಿ ಜಾಗತಿಕವಾಗಿ 15,000 ಉದ್ಯೋಗಿಗಳನ್ನು ವಜಾಗೊಳಿಸಲು ಸಿದ್ಧತೆ ನಡೆಸಿದೆ, ಇದರಲ್ಲಿ ಹೆಚ್ಚಿನ ಪಾಲು ಭಾರತೀಯರದ್ದಾಗಿದೆ.

ಬೆಂಗಳೂರು (ಮೇ.5): ಐಟಿ ಸೇವಾ ಕ್ಷೇತ್ರದ ಪ್ರಮುಖ ಕಂಪನಿ ಕಾಗ್ನಿಜೆಂಟ್ (Cognizant) ತನ್ನ ಉದ್ಯೋಗಿಗಳಲ್ಲಿ ಭಾರಿ ಪ್ರಮಾಣದ ಕಡಿತಕ್ಕೆ ಮುಂದಾಗುತ್ತಿದೆ. ಜಾಗತಿಕವಾಗಿ ಸುಮಾರು 12,000 ದಿಂದ 15,000 ಉದ್ಯೋಗಿಗಳ ಮೇಲೆ ಇದು ಪರಿಣಾಮ ಬೀರಲಿದ್ದು, ಕಡಿತಗೊಳ್ಳಲಿರುವ ಉದ್ಯೋಗಗಳಲ್ಲಿ ಬಹುಪಾಲು ಭಾರತದಲ್ಲಿವೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ ಘೋಷಿಸಲಾದ 'ಪ್ರಾಜೆಕ್ಟ್ ಲೀಪ್' ಅಡಿಯಲ್ಲಿ ಕಂಪನಿಯು ಸುಮಾರು 230 ಮಿಲಿಯನ್ ಡಾಲರ್‌ನಿಂದ 320 ಮಿಲಿಯನ್ ಡಾಲರ್ ವೆಚ್ಚವಾಗಲಿದೆ ಎಂದು ಅಂದಾಜಿಸಿದೆ. ಇದರಲ್ಲಿ ಸುಮಾರು 200 ರಿಂದ 270 ಮಿಲಿಯನ್ ಡಾಲರ್ ಮೊತ್ತವನ್ನು ಉದ್ಯೋಗಿಗಳ ವಜಾ ವೇಳೆ ನೀಡಲಾಗುವ ಪರಿಹಾರ (Severance Pay) ಮತ್ತು ಇತರ ಸಿಬ್ಬಂದಿ ವೆಚ್ಚಗಳಿಗಾಗಿಯೇ ಮೀಸಲಿಡಲಾಗಿದೆ.

ಕಾಗ್ನಿಜೆಂಟ್ ಪ್ರಸ್ತುತ ಜಾಗತಿಕವಾಗಿ 3.57 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದು, ಈ ಪೈಕಿ 2.50 ಲಕ್ಷಕ್ಕೂ ಹೆಚ್ಚು ಜನರು ಭಾರತದಲ್ಲೇ ಕೆಲಸ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಉದ್ಯೋಗಿಗಳ ಸಂಬಳ ಮತ್ತು ವಜಾ ವೇಳೆ ನೀಡುವ ಪರಿಹಾರದ ಆಧಾರದ ಮೇಲೆ ಈ ಸಂಖ್ಯೆಯನ್ನು ಲೆಕ್ಕಹಾಕಲಾಗಿದೆ.

ಭಾರತದಲ್ಲಿ ಸರಾಸರಿ ವಾರ್ಷಿಕ ವೇತನ ₹15 ಲಕ್ಷ ಎಂದು ಅಂದಾಜಿಸಿದರೆ, ಆರು ತಿಂಗಳ ಪರಿಹಾರವಾಗಿ ₹7.5 ಲಕ್ಷ ನೀಡಬೇಕಾಗುತ್ತದೆ. ಈ ಲೆಕ್ಕಾಚಾರದ ಪ್ರಕಾರ ಭಾರತವೊಂದರಲ್ಲೇ 12,000 ದಿಂದ 13,000 ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ. ಅಮೆರಿಕಾದಲ್ಲಿ ಸರಾಸರಿ ವೇತನ $100,000 ಆಗಿರುವುದರಿಂದ, ಒಬ್ಬ ಉದ್ಯೋಗಿಗೆ ಸುಮಾರು $50,000 ಪರಿಹಾರ ನೀಡಬೇಕಾಗುತ್ತದೆ. ಹೀಗಾಗಿ ಅಲ್ಲಿ ಕಡಿತಗೊಳ್ಳುವ ಉದ್ಯೋಗಿಗಳ ಸಂಖ್ಯೆ ಕಡಿಮೆ ಇರಲಿದೆ.

ಬದಲಾಗುತ್ತಿರುವ ಐಟಿ ವ್ಯವಹಾರದ ಮಾದರಿ

ಈ ಉದ್ಯೋಗ ಕಡಿತಕ್ಕೆ ಕೇವಲ ವೆಚ್ಚದ ಕಡಿತವೊಂದೇ ಕಾರಣವಲ್ಲ, ಬದಲಾಗಿ ಕಂಪನಿಗಳ ಕೆಲಸದ ಶೈಲಿಯಲ್ಲಿ ಉಂಟಾಗುತ್ತಿರುವ ಬದಲಾವಣೆಯೂ ಕಾರಣವಾಗಿದೆ ಗ್ರಾಹಕರು ಇನ್ನು ಮುಂದೆ ಸಾಂಪ್ರದಾಯಿಕ 'ಪಿರಮಿಡ್' ಮಾದರಿಯನ್ನು ಇಷ್ಟಪಡುತ್ತಿಲ್ಲ. ಅಂದರೆ, ಹೆಚ್ಚಿನ ಸಂಖ್ಯೆಯ ಫ್ರೆಶರ್‌ಗಳನ್ನು (Freshers) ತರಬೇತಿಗೊಳಿಸಲು ಅವರು ಹಣ ನೀಡಲು ಸಿದ್ಧರಿಲ್ಲ. ಕಾಗ್ನಿಜೆಂಟ್ ಸಿಇಒ ರವಿ ಕುಮಾರ್ ಎಸ್ ಹೇಳುವಂತೆ, ಕಂಪನಿಯು ಈಗ "ಡಿಜಿಟಲ್ ಶ್ರಮ (Automation/AI) ಮತ್ತು ಮಾನವ ಶ್ರಮ"ದ ಮಿಶ್ರಿತ ಮಾದರಿಗೆ ಬದಲಾಗುತ್ತಿದೆ. ಕೃತಕ ಬುದ್ಧಿಮತ್ತೆ (AI) ಮತ್ತು ಆಟೊಮೇಷನ್ ಬಳಕೆಯಿಂದಾಗಿ ಹೆಚ್ಚಿನ ಕೆಲಸಗಳು ಮನುಷ್ಯರ ಹಸ್ತಕ್ಷೇಪವಿಲ್ಲದೆಯೇ ನಡೆಯಲಿದೆ.

ಐಟಿ ಕ್ಷೇತ್ರದಲ್ಲಿ ಮುಂದುವರಿದ ಕಡಿತ

ಕೇವಲ ಕಾಗ್ನಿಜೆಂಟ್ ಮಾತ್ರವಲ್ಲದೆ, ಇಡೀ ಐಟಿ ಉದ್ಯಮದಲ್ಲಿ ಈ ಟ್ರೆಂಡ್ ಮುಂದುವರಿದಿದೆ. ಟಿಸಿಎಸ್ (TCS) ಜುಲೈ 2025 ರಲ್ಲಿ 12,500 ಉದ್ಯೋಗಿಗಳನ್ನು ವಜಾ ಮಾಡಿತ್ತು. ಅಕ್ಸೆಂಚರ್ (Accenture), ಎಚ್‌ಸಿಎಲ್‌ಟೆಕ್ (HCLTech) ಮತ್ತು ಒರಾಕಲ್ (Oracle) ಕಂಪನಿಗಳು ಕೂಡ ಉದ್ಯೋಗ ಕಡಿತವನ್ನು ನಡೆಸಿವೆ. ಇದು ಕಾಗ್ನಿಜೆಂಟ್‌ನ ಮೊದಲ ರೀಸೆಟ್ ಏನಲ್ಲ. 2023-24ರ 'ನೆಕ್ಸ್ಟ್‌ಜೆನ್' (NextGen) ಕಾರ್ಯಕ್ರಮದ ಅಡಿಯಲ್ಲಿ ಕಂಪನಿಯು ಸುಮಾರು 3,500 ಉದ್ಯೋಗಗಳನ್ನು ಕಡಿತಗೊಳಿಸಿತ್ತು ಮತ್ತು 1.1 ಕೋಟಿ ಚದರ ಅಡಿ ಕಚೇರಿ ಜಾಗವನ್ನು ಖಾಲಿ ಮಾಡಿತ್ತು. ಪ್ರಸ್ತುತ ಹೊಸ ಬದಲಾವಣೆಗಳು ಐಟಿ ವಲಯದಲ್ಲಿ ಉದ್ಯೋಗಿಗಳಿಗೆ ಸವಾಲಿನ ಕಾಲ ಎದುರಾಗಿರುವುದನ್ನು ಸೂಚಿಸುತ್ತಿವೆ.

 

PREV
Read more Articles on
click me!

Recommended Stories

ಬೆಂಗಳೂರಲ್ಲಿ ಐಟಿ ಜಾಬ್ ಪಡೆಯೋದು ಸುಲಭವಲ್ಲ: 15 ದಿನಗಳಲ್ಲಿ ಡೆವೆಲಪರ್ ಹುದ್ದೆಗಳಿಗೆ 34 ಸಾವಿರಕ್ಕೂ ಹೆಚ್ಚು ಅರ್ಜಿ!
Highest Paying Jobs in Bengaluru: ಬೆಂಗಳೂರಲ್ಲಿ ಈ 5 ಕಂಪನಿಗಳು ಫ್ರೆಶರ್‌ಗಳಿಗೆ ಅತಿ ಹೆಚ್ಚು ಸ್ಯಾಲರಿ ನೀಡುತ್ತೆ