
ಬೆಂಗಳೂರು (ಸೆ.17): ವೇಗವಾಗಿ ಚಲಿಸುವ ಇಂದಿನ ತಂತ್ರಜ್ಞಾನ ಜಗತ್ತಿನಲ್ಲಿ, ಸ್ಯಾಲರಿ ಬಗ್ಗೆ ಚರ್ಚೆ ಅಂದರೆ ಅದೊಂದು ಜಟಿಲ ವಿಷಯ ಎಂದೇ ತಿಳಿದುಕೊಳ್ಳುತ್ತಾರೆ. ಆದರೆ, ಒಬ್ಬ ಹಿರಿಯ ಸಾಫ್ಟ್‌ವೇರ್ ಇಂಜಿಯರ್ ಪಾಲಿಗೆ, ಶೇ. 10ರಷ್ಟು ಸಂಬಳ ಹೆಚ್ಚು ಕೇಳಿದ್ದು, ಕಂಪನಿಯಲ್ಲಿ ವಿವಿಧ ಘಟನೆಗಳ ಸರಮಾಲೆಗೆ ಕಾರಣವಾಯಿತು. ಕೊನೆಗೆ, ಸ್ಯಾಲರಿ ಹೈಕ್ ಕೇಳಿದ್ದಕ್ಕಾಗಿ ಸಾಫ್ಟ್‌ವೇರ್ ಇಂಜಿನಿಯರ್‌ನನ್ನು ಕೆಲಸದಿಂದ ವಜಾ ಮಾಡಿದ್ದ ಬಾಸ್‌ನನ್ನೇ ಕಂಪನಿ ಕೆಲಸದಿಂದ ತೆಗೆದುಹಾಕಿದೆ.
ಕಳೆದ ಆರು ವರ್ಷಗಳಿಂದ ಸಾಫ್ಟ್‌ವೇರ್ ಇಂಜಿನಿಯರ್ ಪ್ರಖ್ಯಾತ ಟೆಕ್ ಕಂಪನಿಗಾಗಿ ಕೆಲಸ ಮಾಡುತ್ತಿದ್ದ. ಏಕಾಂಗಿಯಾಗಿ ಕಂಪನಿಯ ಅತ್ಯಂತ ಸಂಕೀರ್ಣ ಬ್ಯಾಕ್‌ಎಂಡ್ ಸಿಸ್ಟಮ್‌ಗಳನ್ನು ನಿರ್ವಹಣೆ ಮಾಡುತ್ತಿದ್ದರು. ಡ್ರಾಪ್ ಬಾಕ್ಸ್ ಡೇಟಾ ಸಿಂಕ್ರೋನೈಜೇಷನ್‌ಗಾಗಿ ಮಾಡುತ್ತಿದ್ದ ಕೆಲಸವನ್ನೇ ಇವರು ಮಾಡುತ್ತಿದ್ದರು. ಯಾವುದೇ ಟೀಮ್ ಇಲ್ಲದೆ ಕಂಪನಿಯಲ್ಲಿ ನಿರ್ಣಾಯಕ ಪಾತ್ರವನ್ನು ನಿರ್ವಹಿಸುತ್ತಿದ್ದರೂ, ಅದೇ ಕಂಪನಿಯಲ್ಲಿರುವ ಹಿರಿಯ ಇಂಜಿನಿಯರ್‌ಗಳಿಗಿಂತ ಶೇ. 10ರಷ್ಟು ಕಡಿಮೆ ವೇತನ ಪಡೆಯುತ್ತಿರುವುದು ಅವರಿಗೆ ಗೊತ್ತಾಗಿತ್ತು.
ಇದು ಗೊತ್ತಾದ ಬಳಕ, ಮ್ಯಾನೇಜ್‌ಮೆಂಟ್‌ಗೆ ಉಳಿದವರಿಗೆ ನೀಡುವ ರೀತಿಯಲ್ಲೇ ನನಗೂ ವೇತನ ನೀಡಿ ಎಂದು ಬೇಡಿಕೆ ಇಟ್ಟಿದ್ದರು. 'ಮ್ಯಾನೇಜ್‌ಮೆಂಟ್ ಇದಕ್ಕೆ ಇಲ್ಲ' ಎಂದು ಹೇಳಿತ್ತು ಎಂದು ರೆಡ್ಡಿಟ್ ಪೋಸ್ಟ್‌ನಲ್ಲಿ ಅವರು ಬರೆದುಕೊಂಡಿದ್ದಾರೆ. 'ಆದ್ದರಿಂದ ನಾನು ಅದಕ್ಕೆ ತಕ್ಕಂತೆ ಸರಿದೂಗಿಸಿದೆ ಮತ್ತು ಕಡಿಮೆ ಕೆಲಸ ಮಾಡಲು ಪ್ರಾರಂಭಿಸಿದೆ. 'ಪ್ರಮುಖ ಸಮಯ'ಗಳನ್ನು ಪರಿಗಣಿಸದೆ ನನ್ನ ಸ್ವಂತ ಸಮಯದಲ್ಲಿ ಮಾತ್ರವೇ ಕೆಲಸ ಮಾಡಲು ಪ್ರಾರಂಭಿಸಿದೆ' ಎಂದು ಬರೆದುಕೊಂಡಿದ್ದಾರೆ.
ಸ್ವಲ್ಪ ಸಮಯದ ನಂತರ, ಹೊಸ ನಿರ್ದೇಶಕರು ತಮ್ಮ ಮ್ಯಾನೇಜರ್ ಬದಲಿಗೆ ಈ ಸ್ಥಾನಕ್ಕೆ ಬಂದಿದ್ದರು. ಎಂಜಿನಿಯರ್ ಸಾಂಪ್ರದಾಯಿಕ ಸಮಯಗಳಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಗೊತ್ತಾದ ಬಳಿಕ ಪ್ರಶ್ನೆ ಮಾಡಲು ಆರಂಭಿಸಿದರು. ಈ ವೇಳೆ ಇಂಜಿನಿಯರ್ ಇದು ಸತ್ಯ ಎಂದು ಹೇಳಿದ್ದಲ್ಲದೆ, ಇದಕ್ಕೆ ಕಾರಣವೇನು ಅನ್ನೋದನ್ನು ತಿಳಿಸಿದ್ದರು. ಆದರೆ, ಅದರ ನಂತರ ಆಗಿದ್ದು ಶಾಕಿಂಗ್ ಆಗಿತ್ತು.
"ನಾನು ಕಾರಣಗಳನ್ನು ವಿವರಿಸಿದೆ. ಒಂದು ತಿಂಗಳ ನಂತರ ನಿರ್ದೇಶಕರು ನನ್ನನ್ನು ಕೆಲಸದಿಂದ ತೆಗೆದುಹಾಕಿದರು. ಅವರ ಮಾನವ ಸಂಪನ್ಮೂಲ ವ್ಯವಸ್ಥೆಯಲ್ಲಿ ನನ್ನನ್ನು 'ಕೆಲಸ ತ್ಯಜಿಸುವಿಕೆ' ಪ್ರಕರಣವೆಂದು ಗುರುತಿಸಲಾಗಿದೆ ಎಂದು ಅವರು ನನಗೆ ಹೇಳಿದರು" ಎಂದು ಬರೆದುಕೊಂಡಿದ್ದಾರೆ.
ಕಥೆ ಅಲ್ಲಿಗೆ ಮುಗಿಯಲಿಲ್ಲ. ಇತ್ತೀಚೆಗೆ, ಇಂಜಿನಿಯರ್ ಒಬ್ಬ ಮಾಜಿ ಸಹೋದ್ಯೋಗಿಯನ್ನು ಭೇಟಿಯಾಗಿದ್ದರು. ಈ ವೇಳೆ ತಾವು ಕೆಲಸದಿಂದ ಹೊರಬಿದ್ದ ಬಳಿಕ ಅಲ್ಲೇನಾಯಿತು ಎಂದು ತಿಳಿಸಿದ್ದಾರೆ. ನಾನು ಒಬ್ಬನೇ ಮಾಡುತ್ತಿದ್ದ ಕೆಲಸವನ್ನು ನಿರ್ವಹಿಸಲು ಕಂಪನಿ 6 ಜನರನ್ನು ನೇಮಿಸಿಕೊಂಡಿತ್ತು. ಅದರೊಂದಿಗೆ ನನಗೆ ಬೇರ್ಪಡಿಕೆ ವೇತನವನ್ನೂ ನೀಡುತ್ತಿತ್ತು. ಆಗ ಅಕ್ಷರಶಃ, ಇಡೀ ಕೆಲಸವನ್ನು ನಿರ್ವಹಿಸುವ ಒಬ್ಬ ವ್ಯಕ್ತಿಯ ಬದಲಿಗೆ ಏಳು ಜನರು ಕೆಲಸ ಮಾಡಿದಂತಾಗಿತ್ತು.
ಹಣೆಬರಹಕ್ಕೆ ಸಾಫ್ಟ್‌ವೇರ್ ಈಗ ಹೆಚ್ಚು ದೋಷಗಳಿಂದಲೇ ಕೂಡಿತ್ತು. ಸಾಕಷ್ಟು ಗ್ರಾಹಕರನ್ನು ಕಳೆದುಕೊಂಡ ಬಳಿಕ ಹೂಡಿಕೆದಾರರ ವಿಶ್ವಾಸ ಕೂಡ ಕುಗ್ಗಿತು ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಇದರ ಪರಿಣಾಮ ಕೇವಲ ಉತ್ಪನ್ನದ ಮೇಲೆ ಮಾತ್ರವೇ ಆಗಲಿಲ್ಲ.ಸಾಫ್ಟ್‌ವೇರ್ ಇಂಜಿನಿಯರ್‌ನನ್ನು ಕೆಲಸದಿಂದ ತೆಗೆದುಹಾಕಿದ್ದ ನಿರ್ದೇಶಕ ಮತ್ತು ಆ ನಿರ್ದೇಶಕರನ್ನು ನೇಮಿಸಿದ್ದ ಉಪಾಧ್ಯಕ್ಷರಿಗೂ ಸಹ ಮ್ಯಾನೇಜ್‌ಮೆಂಟ್ ಗೇಟ್‌ಪಾಸ್ ನೀಡಿತು. ಒಂದು ದೊಡ್ಡ ಕಾರಣವೇನೆಂದರೆ, ಆ ಇಂಜಿನಿಯರ್ ಅನ್ನು ಹೊರಹಾಕುವ ಅವರ ನಿರ್ಧಾರವು ಭಾರಿ ಪ್ರಮಾಣದಲ್ಲಿ ಕಂಪನಿಯ ಮೇಲೆ ಪರಿಣಾಮ ಬೀರಿತು. ಇದು ಕಂಪನಿಯ ಸಮಯ, ಹಣ ಮತ್ತು ಮೌಲ್ಯ ಕುಸಿಯಲು ಕಾರಣವಾಯಿತು.
"ನನಗೆ ಕೇವಲ ಶೇ. 10 ರಷ್ಟು ವೇತನ ಹೆಚ್ಚಳ ನೀಡುವ ಮೂಲಕ ಇದನ್ನೆಲ್ಲ ಸುಲಭವಾಗಿ ತಪ್ಪಿಸಬಹುದಿತ್ತು..." ಎಂದು ಅವರು ಬರೆದಿದ್ದಾರೆ. ಆಗಿರುವ ಘಟನೆಗಳನ್ನು ನೋಡಿ ನನಗೆ ನು ತಡೆಯಲಾಗಲಿಲ್ಲ. "ಹೇಗಾದರೂ, ಈ ಜಗತ್ತಿನಲ್ಲಿ ಇನ್ನೂ ಸ್ವಲ್ಪ ನ್ಯಾಯ ಉಳಿದಿದೆ ಎಂದು ಇದು ತೋರಿಸುತ್ತದೆ ಎಂದು ನಾನು ಭಾವಿಸುತ್ತೇನೆ. ನನಗೆ ಖಂಡಿತವಾಗಿಯೂ ಇದರಿಂದ ನಗು ಬಂತು!" ಎಂದು ಅವರು ಬರೆದಿದ್ದಾರೆ.