
ಅಮೆರಿಕದಲ್ಲಿ ಕೋಟಿ ರೂಪಾಯಿ ಸಂಬಳ, ಪ್ರತಿಷ್ಠಿತ ಉದ್ಯೋಗ, ಐಷಾರಾಮಿ ಜೀವನ... ಇವೆಲ್ಲವನ್ನೂ ಬಿಟ್ಟು ಒಬ್ಬ ಮೆಟಾ ಅಧಿಕಾರಿ ಕುಟುಂಬ ಸಮೇತ ಬೆಂಗಳೂರಿಗೆ ಮರಳಿದ್ದಾರೆ. ಅವರ ಈ ನಿರ್ಧಾರ ಈಗ ಸೋಶಿಯಲ್ ಮೀಡಿಯಾದಲ್ಲಿ ಸಾವಿರಾರು ಜನರ ಹೃದಯ ಗೆದ್ದಿದೆ.
ಮೆಟಾದ ಹಿರಿಯ ಎಂಜಿನಿಯರಿಂಗ್ ಅಧಿಕಾರಿ ಬಾಲಾಜಿ ಗುರುರಾಜನ್ ಸುಮಾರು 18 ವರ್ಷಗಳ ಕಾಲ ಅಮೆರಿಕದಲ್ಲಿ ವಾಸವಿದ್ದರು. ಈ ಅವಧಿಯಲ್ಲಿ ಅವರು ಮೈಕ್ರೋಸಾಫ್ಟ್, ಲಿಂಕ್ಡ್ಇನ್ ಮತ್ತು ಮೆಟಾ ಸೇರಿದಂತೆ ವಿಶ್ವದ ಪ್ರಮುಖ ಟೆಕ್ ಕಂಪನಿಗಳಲ್ಲಿ ಕೆಲಸ ಮಾಡಿ ಯಶಸ್ವಿ ವೃತ್ತಿಜೀವನ ಕಟ್ಟಿಕೊಂಡಿದ್ದರು. ಆದರೆ ಇವೆಲ್ಲವನ್ನು ಬಿಟ್ಟು ಅವರು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಅದಕ್ಕೆ ಅವರು ಹೇಳಿದ ಕಾರಣ ಅಚ್ಚರಿಯುಂಟು ಮಾಡ್ತಿದೆ.
ದೊಡ್ಡ ಡಿಗ್ರಿನೂ ಇಲ್ಲ, ಅನುಭವನೂ ಜೀರೋ: ಮೊದಲ ವರ್ಷದ ಪದವಿಯಲ್ಲೇ 50 ಲಕ್ಷ ಆದಾಯ ಗಳಿಸ್ತಿರೋ ಯುವಕನ ಸ್ಟೋರಿ ಕೇಳಿ
ಜನರು ಉತ್ತಮ ಸಂಬಳ, ಅಮೆರಿಕಾದಂತ ಶ್ರೀಮಂತ ದೇಶದಲ್ಲಿ ಸಿಗುವ ಸೌಲಭ್ಯ ಬಿಟ್ಟು ಭಾರತಕ್ಕೆ ವಾಪಸ್ ಆಗುವ ಮನಸ್ಸು ಮಾಡೋದಿಲ್ಲ. ಅದ್ರಲ್ಲೂ ತಂದೆ- ತಾಯಿ ನೋಡಿಕೊಳ್ಳುವ ಕಾರಣಕ್ಕೆ ಅಲ್ಲಿಂದ ವಾಪಸ್ ತವರಿಗೆ ಬರುವವರ ಸಂಖ್ಯೆ ಬಹಳ ಕಡಿಮೆ. ಆದರೆ ಬಾಲಾಜಿ ಗುರುರಾಜನ್, ಹಣ ಮತ್ತು ಹುದ್ದೆ ಮತ್ತೆ ಸಿಗಬಹುದು. ವಯಸ್ಸಾಗುತ್ತಿರುವ ತಂದೆ-ತಾಯಿಯೊಂದಿಗೆ ಕಳೆಯುವ ಸಮಯ ಮತ್ತು ನನ್ನ ಮಕ್ಕಳ ಬೆಳವಣಿಗೆಯನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ ಎಂಬ ಕಾರಣ ಇಟ್ಕೊಂಡು ಭಾರತಕ್ಕೆ ವಾಪಸ್ ಆಗಿದ್ದಾರೆ.
ಅಮೆರಿಕದಿಂದ ಬೆಂಗಳೂರಿಗೆ ವಾಪಸ್ ಬರುವಾಗ 12ಕ್ಕೂ ಹೆಚ್ಚು ಸೂಟ್ಕೇಸ್ಗಳೊಂದಿಗೆ ತೆಗೆದ ಅವರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಇನ್ನೂ ಕನಸಿನಂತೆ ಅನಿಸುತ್ತಿದೆ. ಅಮೆರಿಕ ನನಗೆ ವೃತ್ತಿಜೀವನ ಕೊಟ್ಟಿತು. ಆದರೆ ಮನೆ ನನಗೆ ಬದುಕಿನ ನಿಜವಾದ ಅರ್ಥವನ್ನು ನೆನಪಿಸಿತು ಎಂದು ಅವರು ಲಿಂಕ್ಡ್ಇನ್ನಲ್ಲಿ ಬರೆದುಕೊಂಡಿದ್ದಾರೆ.
ಬೆಂಗಳೂರುಗೆ ಬಂದ ನಂತರ ಮತ್ತೆ ಹೊಸ ಜೀವನ ಆರಂಭಿಸುವ ಸವಾಲು ಎದುರಾಯಿತು. ಮಕ್ಕಳಿಗೆ ಶಾಲೆ, ಹೊಸ ಮನೆ, ನಗರದ ಸಂಚಾರ, ದೈನಂದಿನ ಜೀವನ ಎಲ್ಲವನ್ನೂ ಮೊದಲಿನಿಂದಲೇ ಕಟ್ಟಿಕೊಳ್ಳಬೇಕಾಯಿತು. ಆದರೂ ಈ ಹೊಸ ಆರಂಭವೇ ನಿಜವಾದ ಸಂತೋಷ ನೀಡಿದೆ ಎಂದು ಅವರು ಬರೆದುಕೊಂಡಿದ್ದಾರೆ. ಇದರ ಜೊತೆಗೆ ಅವರು ಭವಿತ್ತ (Bhavitta) ಎಂಬ AI ಆಧಾರಿತ ಅಪ್ಲಿಕೇಶನ್ನ್ನೂ ಅಭಿವೃದ್ಧಿಪಡಿಸಿದ್ದಾರೆ. ಎರಡು ದೇಶಗಳ ಹಣಕಾಸು, ತೆರಿಗೆ ಮತ್ತು ನಿವೃತ್ತಿ ಯೋಜನೆಗಳನ್ನು ಸುಲಭವಾಗಿ ನಿರ್ವಹಿಸಲು ಇದು ಸಹಾಯ ಮಾಡುತ್ತದೆ.
ಸೋಶಿಯಲ್ ಮೀಡಿಯಾದಲ್ಲಿ ಅವರ ಪೋಸ್ಟ್ ಗೆ ಸಾಕಷ್ಟು ಕಮೆಂಟ್ ಬಂದಿದೆ. ಜನರು ಹಣ ಹಾಗೂ ಅಧಿಕಾರ ಯಾವಾಗ ಬೇಕಾದ್ರೂ ಬರಬಹುದು. ನಿಮ್ಮ ನಿರ್ಧಾರ ಮೆಚ್ಚುವಂತಹದ್ದು ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.