
ನವದೆಹಲಿ: ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿರುವ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ, ಭಾರತದಿಂದ ಪರಾರಿಯಾಗಿ ಮಲೇಷ್ಯಾದಲ್ಲಿ ಆಶ್ರಯ ಪಡೆದಿರುವ ವಿವಾದಾತ್ಮಕ ಇಸ್ಲಾಮಿಕ್ ಧರ್ಮೋಪದೇಶಕ ಝಾಕಿರ್ ನಾಯಕ್‌ನ ಹಸ್ತಾಂತರದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಿರುವುದಾಗಿ ದೃಢಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆಸಿದ ದ್ವಿಪಕ್ಷೀಯ ಸಭೆಯ ನಂತರ ಮಾತನಾಡಿದ ಅನ್ವರ್ ಇಬ್ರಾಹಿಂ, ಖಾಸಗಿ ಕಾರ್ಯಕ್ರಮಗಳಲ್ಲಿ ಇಂತಹ ವಿಷಯಗಳ ಕುರಿತು ಮಾತುಕತೆಗಳು ಮುಂದುವರಿಯುತ್ತವೆ. ಎರಡೂ ರಾಷ್ಟ್ರಗಳ ರಾಜತಾಂತ್ರಿಕ ಹಿತಾಸಕ್ತಿಗಳನ್ನು ಕಾಯುವ ನಿಟ್ಟಿನಲ್ಲಿ ಈ ವಿಷಯವನ್ನು ಅತ್ಯಂತ ಖಾಸಗಿಯಾಗಿ ಇರಿಸುವುದು ಸೂಕ್ತ. ಆದರೆ, ಉಭಯ ದೇಶಗಳ ನಡುವಿನ ಪರಸ್ಪರ ವಿಶ್ವಾಸ ಮತ್ತು ಮೈತ್ರಿ ಸಂಬಂಧವನ್ನು ಬಲಪಡಿಸಲು ಈ ವಿಷಯವನ್ನು ಆದ್ಯತೆಯ ಪಟ್ಟಿಯಲ್ಲಿ ಇರಿಸಿದ್ದೇವೆ ಎಂದು ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಆದರೂ ಗಡಿಪಾರು ಪ್ರಕ್ರಿಯೆಯ ಕುರಿತು ಮಾತನಾಡಿ ಭಾರತದ ಹಸ್ತಾಂತರ ಬೇಡಿಕೆಯ ಬಗ್ಗೆ ನಮಗೆ ಅರಿವಿದೆ. ಆದರೆ ಮಲೇಷ್ಯಾದ ಕಾನೂನು ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ. ದ್ವಿಪಕ್ಷೀಯ ಬಾಂಧವ್ಯ ಹಾಗೂ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಗೌರವಿಸಿ ಈ ವಿಷಯದಲ್ಲಿ ಕಟ್ಟುನಿಟ್ಟಿನ ಹಾಗೂ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾಗಿದೆ" ಎಂದು ಸ್ಪಷ್ಟಪಡಿಸಿದರು.
ಮುಂಬೈ ಮೂಲದ ಇಸ್ಲಾಮಿಕ್ ಟೆಲಿವಿಂಜೆಲಿಸ್ಟ್ ಆಗಿರುವ ಝಾಕಿರ್ ನಾಯಕ್, ತನ್ನ 'ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್' (IRF) ಹಾಗೂ ಅಂತರರಾಷ್ಟ್ರೀಯ ಉಪಗ್ರಹ ಚಾನೆಲ್ 'ಪೀಸ್ ಟಿವಿ' ಮೂಲಕ ಧಾರ್ಮಿಕ ದ್ವೇಷವನ್ನು ಉತ್ತೇಜಿಸುವ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದಾನೆ ಮತ್ತು ಅಕ್ರಮ ಹಣ ವರ್ಗಾವಣೆ ನಡೆಸಿದ್ದಾನೆ ಎಂದು ಭಾರತೀಯ ತನಿಖಾ ಸಂಸ್ಥೆಗಳು ಆರೋಪಿಸಿವೆ.
2016 ರ ಢಾಕಾ ಕೆಫೆ ಭಯೋತ್ಪಾದಕ ದಾಳಿ ಸೇರಿದಂತೆ ಜಾಗತಿಕ ಮಟ್ಟದ ಹಲವು ಉಗ್ರ ಕೃತ್ಯಗಳಿಗೆ ಆತನ ಭಾಷಣಗಳೇ ಪ್ರೇರಣೆ ಎಂಬ ಆರೋಪಗಳು ಕೇಳಿಬಂದ ಬೆನ್ನಲ್ಲೇ ಭಾರತೀಯ ಅಧಿಕಾರಿಗಳು ಆತನ ಜಾಲದ ವಿರುದ್ಧ ತನಿಖೆ ತೀವ್ರಗೊಳಿಸಿದರು. ಇದರಿಂದಾಗಿ ನಾಯಕ್ 2016 ರಲ್ಲಿ ಭಾರತದಿಂದ ಪಲಾಯನ ಮಾಡಿ ಮಲೇಷ್ಯಾಕ್ಕೆ ತೆರಳಿದನು. ಅಲ್ಲಿ ಆತನಿಗೆ ಶಾಶ್ವತ ನಿವಾಸಿ ಅರ್ಹತೆ ನೀಡಲಾಯಿತು.
2017 ರಲ್ಲಿ ಭಾರತ ಸರ್ಕಾರವು ಝಾಕಿರ್ ನಾಯಕ್‌ನ ಪಾಸ್‌ಪೋರ್ಟ್ ರದ್ದುಗೊಳಿಸಿ, ಆತನನ್ನು 'ಘೋಷಿತ ಅಪರಾಧಿ' ಎಂದು ಪ್ರಕಟಿಸಿತು. ಆತನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಮಲೇಷ್ಯಾ ಸರ್ಕಾರಕ್ಕೆ ಔಪಚಾರಿಕ ವಿನಂತಿಗಳನ್ನು ಸಲ್ಲಿಸಲಾಯಿತು. ಆದರೆ, ಆತನ ವಿರುದ್ಧ ದೃಢ ಹಾಗೂ ವಿಶ್ವಾಸಾರ್ಹ ಸಾಕ್ಷ್ಯಾಧಾರಗಳನ್ನು ಒದಗಿಸಿದರೆ ಮಾತ್ರವೇ ಸ್ಥಾಪಿತ ಕಾನೂನು ಮಾರ್ಗಗಳ ಮೂಲಕ ಸಹಕರಿಸುವುದಾಗಿ ಮಲೇಷ್ಯಾ ವಾದಿಸುತ್ತಾ ಬಂದಿದೆ. ಸಾಕಷ್ಟು ಆಧಾರಗಳ ಕೊರತೆಯನ್ನು ಉಲ್ಲೇಖಿಸಿ ಇಂಟರ್‌ಪೋಲ್ ಸಹ ಹಿಂದೆ ಆತನ ವಿರುದ್ಧ 'ರೆಡ್ ಕಾರ್ನರ್ ನೋಟಿಸ್' ಹೊರಡಿಸಲು ನಿರಾಕರಿಸಿತ್ತು.
ಝಾಕಿರ್ ನಾಯಕ್ ತನ್ನ ಪ್ರಚೋದನಕಾರಿ ಹೇಳಿಕೆಗಳಿಂದ ಮಲೇಷ್ಯಾ ಸರ್ಕಾರಕ್ಕೂ ಮುಜುಗರ ಉಂಟುಮಾಡಿದ್ದಾನೆ. 2019 ರಲ್ಲಿ ಮಲೇಷ್ಯಾದಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತ ಚೀನಿ ಹಾಗೂ ಭಾರತೀಯ ಮೂಲದ ನಾಗರಿಕರ ವಿರುದ್ಧ ಜನಾಂಗೀಯವಾಗಿ ಸೂಕ್ಷ್ಮ ಹೇಳಿಕೆಗಳನ್ನು ನೀಡಿ ತೀವ್ರ ಸಾರ್ವಜನಿಕ ಮತ್ತು ರಾಜಕೀಯ ಆಕ್ರೋಶಕ್ಕೆ ಗುರಿಯಾಗಿದ್ದನು. ತದನಂತರ ಆತ ತನ್ನ ಹೇಳಿಕೆಗಳಿಗಾಗಿ ಮಲೇಷ್ಯಾ ಜನತೆಯಲ್ಲಿ ಕ್ಷಮೆಯಾಚಿಸಿದ್ದರೂ, ಮಲೇಷ್ಯಾ ಅಧಿಕಾರಿಗಳು ಆತನಿಗೆ ಸಾರ್ವಜನಿಕ ಭಾಷಣ ಮಾಡದಂತೆ ಹಲವು ರಾಜ್ಯಗಳಲ್ಲಿ ತಾತ್ಕಾಲಿಕ ನಿಷೇಧ ಹೇರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ