
ದೆಹಲಿಯಲ್ಲಿ ಬ್ರಿಕ್ಸ್ (BRICS) ಶೃಂಗಸಭೆ ನಡೆಯುತ್ತಿದೆ. ಚೀನಾದ ಅಧ್ಯಕ್ಷ ಶೀ ಜಿನ್‌ಪಿಂಗ್ ಕೂಡ ಭಾರತಕ್ಕೆ ಏಳು ವರ್ಷಗಳ ಬಳಿಕ ಕಾಲಿಟ್ಟಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿರುವ ವಿಚಾರ ಏನೆಂದ್ರೆ ಜಿನ್‌ಪಿಂಗ್ ತಮ್ಮ ಪೋರ್ಟಬಲ್ ಶೌಚಾಲಯವನ್ನೂ ಭಾರತದ ಪ್ರವಾಸದ ವೇಳೆ ತೆಗೆದುಕೊಂಡು ಬರುತ್ತಾರೆ ಅನ್ನೋದು. ಹಾಗಂತ ಈ ಕೆಲಸವನ್ನು ಜಿನ್‌ಪಿಂಗ್ ಮಾತ್ರವಲ್ಲ. ವಿಶ್ವದ ಅನೇಕ ನಾಯಕರು ತಮ್ಮ ಪ್ರವಾಸದ ವೇಳೆ ಪೋರ್ಟಬಲ್ ಶೌಚಾಲಯವನ್ನು ತೆಗೆದುಕೊಂಡೇ ಓಡಾಡುತ್ತಾರೆ.
ವಿಶ್ವದ ಪ್ರಮುಖ ನಾಯಕರ ಇಂಥ ನಿರ್ಧಾರಗಳಿಗೆ ಪ್ರಮುಖ ಎರಡು ಕಾರಣಗಳಿರುತ್ತವೆ. ಒಂದು ವೈದ್ಯಕೀಯ ಸೂಕ್ಷ್ಮ ಮಾಹಿತಿಯ ರಕ್ಷಣೆ. ಇನ್ನೊಂದು ಸಂಭಾವ್ಯ ಬೇಹುಗಾರಿಕೆ ತಡೆಗಟ್ಟುವಿಕೆ. ಅಂದರೆ ಜೈವಿಕ ತ್ಯಾಜ್ಯಗಳನ್ನ ಸಂಗ್ರಹಿಸುವ ಕಾಳಜಿಗಳಲ್ಲಿ ಅದರಲ್ಲಿರುವ ಸೂಕ್ಷ್ಮ ಮಾಹಿತಿ. ಮಾನವ ತ್ಯಾಜ್ಯವು ವ್ಯಕ್ತಿಯ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತದೆ. ಒಬ್ಬ ಗಣ್ಯ ವ್ಯಕ್ತಿಯ ಆರೋಗ್ಯ ವಿಚಾರವು ತುಂಬಾನೇ ಸುಕ್ಷ್ಮವಾಗಿರೋದ್ರಿಂದ ಅದು ಬಹಿರಂಗವಾಗಬಾರದು. ಅಂದರೆ ಹಿರಿಯ ನಾಯಕರ ಭದ್ರತೆಗೆ ಇಂತಹ ಮಾಹಿತಿ ನಿರ್ಣಾಯಕವಾಗಬಹುದು ಎಂಬ ಸಾಧ್ಯತೆಯಲ್ಲಿ ಇಂಥ ವ್ಯವಸ್ಥೆ ಮಾಡಿಕೊಳ್ತಾರೆ.
ಕೆಲವು ಗುಪ್ತಚರ ಸಂಸ್ಥೆಗಳು ಗಂಭೀರ ಕಾಯಿಲೆಗಳು, ಔಷಧಿಗಳು ಅಥವಾ ನಾಯಕನ ವೈದ್ಯಕೀಯ ಸ್ಥಿತಿಯ ಇತರ ಅಂಶಗಳ ಬಗ್ಗೆ ಸುಳಿವುಗಳನ್ನು ಪತ್ತೆಹಚ್ಚುವ ಸಾಧ್ಯತೆ ದಟ್ಟವಾಗಿರುತ್ತದೆ. ಹೀಗಾಗಿಯೇ ಹೆಚ್ಚಿನ ಭದ್ರತೆ ಹೊಂದಿರುವ ನಾಯಕರು ವಿದೇಶ ಪ್ರವಾಸಗಳ ಸಂದರ್ಭದಲ್ಲಿ ತಮ್ಮ ಜೈವಿಕ ಮಾದರಿಗಳನ್ನು ಬಿಡದಂತೆ ಎಚ್ಚರ ವಹಿಸುತ್ತಾರೆ.
ಇನ್ನೊಂದು ಪ್ರಮುಖ ಉದ್ದೇಶ ಏನಂದ್ರೆ ಪರಿಚಯವೇ ಇಲ್ಲದ ಸ್ಥಳಗಳಲ್ಲಿ ಕಣ್ಗಾವಲು ಸಾಧ್ಯತೆ ಇರುತ್ತದೆ. ಹೋಟೆಲ್, ಸ್ನಾನಗೃಹಗಳು ಸೇರಿದಂತೆ ನೆಲೆವಸ್ತುಗಳು ಮತ್ತು ಎಲೆಕ್ಟ್ರಾನಿಕ್ ವ್ಯವಸ್ಥೆಗಳನ್ನ ಹೊಂದಿರಬಹುದು ಎಂಬ ಭಯ ಇರುತ್ತದೆ. ಯಾಕೆಂದರೆ ಭದ್ರತಾ ತಂಡವು ಅವು ಸುರಕ್ಷಿತವಾಗಿದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.
ನಾಯಕರ ಜೈವಿಕ ತ್ಯಾಜ್ಯವನ್ನು ವಿದೇಶಿ ಸ್ಥಳದಲ್ಲಿ ಬಿಡದಂತೆ ನೋಡಿಕೊಳ್ಳಲು ಅದನ್ನು ವಿನ್ಯಾಸ ಮಾಡಲಾಗುತ್ತದೆ. ಅದಕ್ಕಾಗಿಯೇ ಮೀಸಲಾಗಿರುವ ಭದ್ರತಾ ತಂಡವು ಆ ಶೌಚಾಲಯವನ್ನು ಸಿದ್ಧಪಡಿಸುತ್ತದೆ. ಪೋರ್ಟಬಲ್ ಶೌಚಾಲಯಗಳನ್ನು ಬಳಸಿದ ನಂತರ ಅದನ್ನು ಸುಲಭವಾಗಿ ಸಂಗ್ರಹಿಸುವ ವ್ಯವಸ್ಥೆಯನ್ನೂ ಮಾಡಿರುತ್ತಾರೆ. ಆ ವಸ್ತುವನ್ನು ಭದ್ರತಾ ತಂಡದ ಮೇಲ್ವಿಚಾರಣೆಯಲ್ಲಿ ಸುರಕ್ಷಿತಗೊಳಿಸಿ ಸ್ವದೇಶಕ್ಕೆ ಸಾಗಿಸಲಾಗುತ್ತದೆ.
ಎಲ್ಲಾ ದೇಶಗಳಲ್ಲೂ ಸಾಮಾನ್ಯ ಜನರಿಗೆ ಹೋಟೆಲ್ ಸ್ನಾನಗೃಹವನ್ನು ಬಳಸುವುದು ಸಾಮಾನ್ಯ ಸಂಗತಿ. ಆದರೆ ಒಂದು ರಾಷ್ಟ್ರದ ಮುಖ್ಯಸ್ಥರಿಗೆ, ಅತ್ಯಲ್ಪವೆಂದು ತೋರುವ ವೈಯಕ್ತಿಕ ಮಾಹಿತಿಯು ಸಹ ಗುಪ್ತಚರ ಮೂಲವಾಗಬಹುದು. ಸೈದ್ಧಾಂತಿಕವಾಗಿ ಒಂದು ಜೈವಿಕ ಮಾದರಿಯು ನಾಯಕನೊಬ್ಬ ವಿದೇಶಿ ಏಜೆನ್ಸಿಗಳು ಪ್ರವೇಶಿಸಲು ಬಯಸದ ಮಾಹಿತಿಯನ್ನು ಬಹಿರಂಗಪಡಿಸುವ ಸಾಧ್ಯತೆ ಹೆಚ್ಚಿರುತ್ತದೆ. ಸುರಕ್ಷಿತ ಸ್ನಾನಗೃಹಗಳ ಕೊರತೆಯು ಕಣ್ಗಾವಲುಗೆ ಅವಕಾಶಗಳನ್ನು ನೀಡುತ್ತದೆ. ಕೆಲವು ನಾಯಕರಿಗೆ, ಭದ್ರತಾ ಕ್ರಮಗಳು ಅಂಗರಕ್ಷಕರು, ಗುಂಡು ನಿರೋಧಕ ವಾಹನಗಳು ಮತ್ತು ಸುರಕ್ಷಿತ ಮಾರ್ಗಗಳನ್ನು ಮೀರಿ ಹೋಗುತ್ತವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ