ಅರುಣಾಚಲದ ಹೊಟೇಲ್‌ನಲ್ಲಿ ಕೇರಳದ ವೈದ್ಯ ದಂಪತಿ, ಮಹಿಳೆ ನಿಗೂಢ ಸಾವು: ಸಾವಿನ ಸುತ್ತ ಹಲವು ಅನುಮಾನ

By Anusha KbFirst Published Apr 3, 2024, 10:49 AM IST
Highlights

ಕೇರಳ ಮೂಲದ ಆಯುರ್ವೇದ ವೈದ್ಯ  ದಂಪತಿ ಹಾಗೂ ಅವರ ಅವಿವಾಹಿತ ಸ್ನೇಹಿತೆ ಅರುಣಾಚಲ ಪ್ರದೇಶದ ಜಿರೋ ನಗರದ ಹೊಟೇಲೊಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಘಟನೆ ನಡೆದಿದ್ದು, ಈ ಸಾವಿನ ಹಿಂದೆ ಹಲವು ಅನುಮಾನಗಳು ಮೂಡಿವೆ.  

ತಿರುವನಂತಪುರ: ಕೇರಳ ಮೂಲದ ಆಯುರ್ವೇದ ವೈದ್ಯ  ದಂಪತಿ ಹಾಗೂ ಅವರ ಅವಿವಾಹಿತ ಸ್ನೇಹಿತೆ ಅರುಣಾಚಲ ಪ್ರದೇಶದ ಜಿರೋ ನಗರದ ಹೊಟೇಲೊಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಘಟನೆ ನಡೆದಿದ್ದು, ಈ ಸಾವಿನ ಹಿಂದೆ ಹಲವು ಅನುಮಾನಗಳು ಮೂಡಿವೆ.  ಪ್ರಾಥಮಿಕ ವರದಿಯ ಪ್ರಕಾರ,  ಮೃತರ ಕೈ ಮಣಿಕಟ್ಟಿನಲ್ಲಿ ಹರಿತವಾದ ಆಯುಧಗಳಿಂದ ಕತ್ತರಿಸಿಕೊಂಡ ಗುರುತುಗಳಿದ್ದು, ರಕ್ತಸ್ರಾವವಾಗಿ ಸಾವನ್ನಪ್ಪಿದಂತೆ ಭಾಸವಾಗುತ್ತಿದೆ.

ಮೃತರನ್ನು  ನವೀನ್ ಥಾಮಸ್ (35) ಮತ್ತು ಅವರ ಪತ್ನಿ ದೇವಿ (35) ಹಾಗೂ ಇವರ ಜೊತೆಗೆ ಸಾವನ್ನಪ್ಪಿದ ಸ್ನೇಹಿತನನ್ನು ಆರ್ಯ ಬಿ ನಾಯರ್ (29) ಎಂದು ಗುರುತಿಸಲಾಗಿದೆ. ಇದರಲ್ಲಿ ದಂಪತಿಯಾದ ನವೀನ್ ಥಾಮಸ್ ಹಾಗೂ ದೇವಿ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಆಯುರ್ವೇದ ವೈದ್ಯರಾಗಿದ್ದರು.  ಹಾಗೆಯೇ ಆರ್ಯ ಬಿ, ನಾಯರ್ ತಿರುವನಂತಪುರ ನಿವಾಸಿಯಾಗಿದ್ದು, ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.

ಸುಶಾಂತ್‌ ಸಿಂಗ್‌ ಸಾವಿಗಾಗಿ ಗರ್ಲ್‌ಫ್ರೆಂಡ್ ರಿಯಾ ಚಕ್ರವರ್ತಿ ಮಾಟ-ಮಂತ್ರ ಮಾಡಿದ್ರಾ? 

ನಾಪತ್ತೆ ಪ್ರಕರಣ ದಾಖಲಿಸಿದ ಆರ್ಯ ಕುಟುಂಬದವರು

ಅರುಣಾಚಲ ಪ್ರದೇಶದ ಲೋವರ್ ಸುಬನ್ಸಿರಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕೇನಿ ಬಾಗ್ರಾ ಅವರ ಪ್ರಕಾರ, ಈ ಮೂವರು ಮಾರ್ಚ್ 28 ರಂದು ಅರುಣಾಚಲದ ಹೋಟೆಲ್‌ಗೆ ಆಗಮಿಸಿದ್ದರು ಮತ್ತು ಅಂದಿನಿಂದಲೂ ಒಂದು ಕೊಠಡಿಯನ್ನು ಹಂಚಿಕೊಂಡಿದ್ದರು. ಆದರೆ ಇವರಲ್ಲಿ ಅವಿವಾಹಿತರಾಗಿದ್ದ ಆರ್ಯ ಅವರ ಮದುವೆಯನ್ನು ಮುಂದಿನ ತಿಂಗಳು ನಿಗದಿಪಡಿಸಲಾಗಿದೆ ಎಂದು ಮಾರ್ಚ್ 27 ರಂದು  ವರದಿ ಮಾಡಲಾಗಿದ್ದು, ಈ ಮಧ್ಯೆ ಆರ್ಯ ಅವರ ಸಂಬಂಧಿಕರು ತಿರುವನಂತಪುರಂ ಪೊಲೀಸ್ ಠಾಣೆಯಲ್ಲಿ ಅವರು ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದರು. ಆ ದೂರನ್ನು ಬೆನ್ನತ್ತಿ ತನಿಖೆ ನಡೆಸಿದಾಗ ಆರ್ಯ ಅವರು ಅರುಣಾಚಲ ಪ್ರದೇಶದಲ್ಲಿ ಸಾಯುವುದಕ್ಕೂ ಮೊದಲು  ನವೀನ್ ಥಾಮಸ್ ಮತ್ತು ದೇವಿಯೊಂದಿಗೆ ಗುವಾಹಟಿಗೆ ಹೋಗಿದ್ದರು ಎಂದು ಕೇರಳದ ಪೊಲೀಸರು ತಿಳಿಸಿದ್ದಾರೆ.

ಮೂವರೂ ಅರುಣಾಚಲ ಪ್ರದೇಶದಲ್ಲಿರುವ ಜಿರೋದಲ್ಲಿರುವ ಹೋಟೆಲ್‌ಗೆ ಬಂದ ನಂತರ, ಇವರು ಅನುಮಾನಾಸ್ಪದವಾಗಿ ಹೋಟೆಲ್ ಆವರಣದಲ್ಲಿ ಮಾರ್ಚ್ 31 ರವರೆಗೆ ಸುತ್ತಾಡುವುದನ್ನು ಹೊಟೇಲ್‌ ಸಿಬ್ಬಂದಿ ನೋಡುತ್ತಲೇ ಇದ್ದರು ಎಂಬುದು ವಿಚಾರಣೆ ವೇಳೆ ತಿಳಿದಿದೆ ಎಂದು ಎಸ್‌ಪಿ ಕೇನಿ ಬಾಗ್ರಾ ಹೇಳಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ ಪುತ್ರನ ವಿರುದ್ಧ ವಾಮಾಚಾರ: ಪುನುಗುಬೆಕ್ಕು ಕೊಂದು ಹೂತಿಟ್ಟ ಕೊಳ್ಳೇಗಾಲ ಮಾಂತ್ರಿಕರು

ಆದರೆ ಏಪ್ರಿಲ್ 1 ರಂದು ಈ ಮೂವರಲ್ಲಿ ಯಾರನ್ನೂ ಕೂಡ ಹೊಟೇಲ್ ಸಿಬ್ಬಂದಿ ನೋಡಲಿಲ್ಲ. ಹೀಗಾಗಿ ಮಂಗಳವಾರ (ಏಪ್ರಿಲ್ 2) ಬೆಳಗ್ಗೆ ಹೊಟೇಲ್ ಸಿಬ್ಬಂದಿ ಅವರಿದ್ದ ಕೋಣೆಯನ್ನು ಪರೀಕ್ಷಿಸಲು ಪ್ರಯತ್ನಿಸಿದರು. ಇದಕ್ಕಾಗಿ ಮೊದಲಿಗೆ ಅವರ ಕೋಣೆಗೆ ಕರೆ ಮಾಡಿದ್ದಾರೆ. ಆದರೆ ಕರೆಗೆ ಯಾರೂ ಉತ್ತರಿಸಿಲ್ಲ. ನಂತರ ಕೋಣೆಯ ಬಳಿ ಹೋಗಿ ಬಾಗಿಲು ಬಡಿದಿದ್ದಾರೆ ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಕೋಣೆಯ ಬೀಗ ಮುರಿದು ನೋಡಿದಾಗ ಅವರು ಶವವಾಗಿ ಪತ್ತೆಯಾಗಿರುವುದು ಕಾಣಿಸಿದೆ. ನಂತರ ಹೊಟೇಲ್ ಸಿಬ್ಬಂದಿ ಬೆಳಗ್ಗೆ 10.30ಕ್ಕೆ ಪೊಲೀಸ್ ಠಾಣೆಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ ಎಂದು ಎಸ್ಪಿ ಹೇಳಿದ್ದಾರೆ.

ಮೃತರಲ್ಲಿ ದೇವಿ ಎಂಬುವವರು ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಬಾಲನ್ ಮಾಧವನ್ ಎಂಬುವವರ ಪುತ್ರಿಯಾಗಿದ್ದಾರೆ. ನಿನ್ನೆ ಮಧ್ಯಾಹ್ನದ ನಂತರ ಕೇರಳದ ಸಾಂಸ್ಕೃತಿಕ ಕಾರ್ಯಕರ್ತ ಸೂರ್ಯ ಕೃಷ್ಣಮೂರ್ತಿ ಎಂಬುವವರು ಈ ಘಟನೆ ಬಗ್ಗೆ ಮಾತನಾಡಿದ್ದು, ದೇವಿ ಅವರ ತಂದೆ ಬಾಲನ್ ಮಾಧವನ್ ಅವರು ಹೇಳುವ ಪ್ರಕಾರ, ಈ ಮೂವರು ಕ್ಷುದ್ರ ವಿದ್ಯೆಯ ತಂತ್ರದ ಪ್ರಯೋಗಕ್ಕೆ(ಮಾಟಮಂತ್ರ) ಬಲಿಯಾಗಿದ್ದಾರೆ ಎಂದಿದ್ದಾರೆ. 

ಯಾರೋ ಮಾಟಮಂತ್ರ ಮಾಡಿಸಿದ್ದಾರೆಂದು ಬೆಚ್ಚಿದ್ದೀರಾ? ಹೀಗೆ ನಿಮ್ಮನ್ನು ರಕ್ಷಿಸಿಕೊಳ್ಳಿ..

ಕ್ಷುದ್ರವಿದ್ಯೆಗೆ ಬಲಿಯಾದ್ರಾ ವೈದ್ಯ ದಂಪತಿ?

ಸಾವಿಗೀಡಾದ ಮೂವರು ಕೂಡ ಸುಶಿಕ್ಷಿತರಾಗಿದ್ದು, ಮೂವರ ಕುಟುಂಬದ ಹಿನ್ನೆಲೆಯೂ  ಚೆನ್ನಾಗಿದೆ. ನಾನು ಬಾಲನ್ ಮಾಧವನ್ ಜೊತೆ ಮಾತನಾಡಿದ್ದೆ, ಈ ವೇಳೆ ಅವರು ಈ ಮೂವರು ಮಾಟಮಂತ್ರಕ್ಕೆ ಬಲಿಯಾಗಿದ್ದಾರೆ ಎಂದು ಹೇಳಿದ್ದಾರೆ ಎಂದ ಸೂರ್ಯ ಕೃಷ್ಣಮೂರ್ತಿ,  ವಿದ್ಯಾವಂತರೂ ಕೂಡ ಇಂತಹ ಕ್ಷುದ್ರ ವಿದ್ಯೆಗೆ ಬಲಿಯಾಗಿರುವುದು ದುರಾದೃಷ್ಟಕರ ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಕುಟುಂಬಕ್ಕೆ ಪರಿಚಿತರಾದ ಕೊಟ್ಟಾಯಂನ ಮೀನಾಡೊಮ್ ಪಂಚಾಯತ್ ಅಧ್ಯಕ್ಷ ಮೋನಿಚನ್ ಕಿಝಕ್ಕೆಡಮ್ ಅವರು ಈ ಬಗ್ಗೆ ಮಾತನಾಡಿದ್ದು,  13 ವರ್ಷಗಳ ಹಿಂದೆ  ದೇವಿ ಹಾಗೂ ನವೀನ್ ಥಾಮಸ್ ವಿವಾಹವಾದರು ಮತ್ತು ಒಂದು ವರ್ಷದ ಹಿಂದಷ್ಟೇ ಇವರು ತಮ್ಮ ಆಯುರ್ವೇದ ಅಭ್ಯಾಸವನ್ನು ನಿಲ್ಲಿಸಿ ಆನ್‌ಲೈನ್‌ನಲ್ಲಿ ವ್ಯಾಪಾರವನ್ನು ಮಾಡಲು ಪ್ರಾರಂಭಿಸಿದರು.

ಈಗ, ದಂಪತಿಗಳು ಮಾಟ ಮಂತ್ರಕ್ಕೆ ಬಲಿಯಾಗಿದ್ದಾರೆ ಎಂದು ನಮಗೆ ತಿಳಿದು ಬಂದಿದೆ. ದಂಪತಿಗಳು ತಮ್ಮ ಹೆತ್ತವರೊಂದಿಗೆ ವಾಸಿಸುತ್ತಿದ್ದರೂ ನವೀನ್ ಥಾಮಸ್ ಆ ಪ್ರದೇಶದ ಜನರೊಂದಿಗೆ ಹೆಚ್ಚು ಬೆರೆಯುತ್ತಿರಲಿಲ್ಲ, ಇಬ್ಬರೂ ನಿವೃತ್ತ ಸರ್ಕಾರಿ ನೌಕರರಾಗಿದ್ದು, ದೇವಿ ಅವರು ಅಲ್ಪಾವಧಿಗೆ ತಿರುವನಂತಪುರದ ಖಾಸಗಿ ಶಾಲೆಯಲ್ಲಿ ಜರ್ಮನ್ ಭಾಷೆಯನ್ನು ಕಲಿಸುತ್ತಿದ್ದರು. ಇದೇ ವೇಳೆ ಅವರಿಗೆ ಆರ್ಯಾ ಜೊತೆ ಸ್ನೇಹ ಬೆಳೆದಿತ್ತು ಎಂದು ಮೋನಿಚನ್ ಹೇಳಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ನವೀನ್ ಥಾಮಸ್ ಅವರ ಇಬ್ಬರು ಸಂಬಂಧಿಕರು ಮಂಗಳವಾರ ಅರುಣಾಚಲ ಪ್ರದೇಶಕ್ಕೆ ತೆರಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಅರುಣಾಚಲ ಪ್ರದೇಶದ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರ ಕೊಠಡಿಯಿಂದ ವಶಕ್ಕೆ ಪಡೆದ ನೋಟ್‌ನಲ್ಲಿ ಫೋನ್ ನಂಬರ್‌ಗಳಿದ್ದು, ಕರೆ ಮಾಡಲು ಸೂಚಿಸಲಾಗಿತ್ತು ಅಲ್ಲಿನ ಪೊಲೀಸರು ಈ ಸಂಖ್ಯೆಗೆ ಕರೆ ಮಾಡಿದಾಗ ಅದು ದಂಪತಿಯ ಕುಟುಂಬಕ್ಕೆ ಸಂಪರ್ಕ ಕಲ್ಪಿಸಿತು  ಎಂದು ಎಸ್ಪಿ ಕೇನಿ ಬಾಗ್ರಾ ಹೇಳಿದ್ದಾರೆ. ಇಲ್ಲಿ ಅವರ ಚಟುವಟಿಕೆಗಳು ತಿಳಿದಿಲ್ಲ. ಅವರು ಪ್ರವಾಸಿಗರಂತೆ ಇಲ್ಲಿಗೆ ಬಂದಿದ್ದರು. ಅವರು ಇಲ್ಲಿ ಏನು ಮಾಡುತ್ತಿದ್ದಾರೆ ಎಂಬುದು ತನಿಖೆಯ ವಿಚಾರವಾಗಿದೆ ಮತ್ತು ನಾವು ಇಲ್ಲಿ ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಿದ್ದೇವೆ ಎಂದು ಬಾಗ್ರಾ ಹೇಳಿದ್ದಾರೆ.

ಕೇರಳದಿಂದ ಪೊಲೀಸ್ ತಂಡ ಅರುಣಾಚಲಕ್ಕೆ

ಘಟನೆ ಹಿನ್ನೆಲೆಯಲ್ಲಿ ಕೇರಳದಿಂದ ಒಂದು ತಂಡವನ್ನು ತನಿಖೆಗೆ ಅರುಣಾಚಲ ಪ್ರದೇಶಕ್ಕೆ ಕಳುಹಿಸಲಾಗುವುದು ಎಂದು ಹೇಳಿದ್ದಾರೆ. ಅಲ್ಲದೇ ಮಾಟಮಂತ್ರದಿಂದಾಗಿ ಈ ಸಾವು ನಡೆದಿದೆ ಎಂಬ ಊಹಾಪೋಹಾ ಹಬ್ಬಿದ್ದು ಅದರಿಂದಲೇ ಘಟನೆ ನಡೆದಿದೆ ಎಂದು ಸದ್ಯಕ್ಕೆ ಹೇಳಲಾಗದು ಎಂದು ಪೊಲೀಸರು ಹೇಳಿದ್ದಾರೆ.  ಮೃತರಾದ ವಿವಾಹಿತ ದಂಪತಿ ಮತ್ತು ಅವರ ಸ್ನೇಹಿತೆ  ಈ ಮೂವರ ನಡವಳಿಕೆ ವಿಲಕ್ಷಣವಾಗಿತ್ತು ಎಂದು ವರದಿ ಆಗಿದ್ದರೂ ಅವರ ಮೊಬೈಲ್ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಪರಿಶೀಲಿಸುವವರೆಗೆ ಯಾವುದನ್ನೂ ನಿರ್ಣಾಯಕವಾಗಿ ಹೇಳಲಾಗುವುದಿಲ್ಲ ಎಂದು ತಿರುವನಂತಪುರಂ ನಗರ ಪೊಲೀಸ್ ಕಮಿಷನರ್ ಸಿ ನಾಗರಾಜು ಹೇಳಿದ್ದಾರೆ.

click me!