ಹಾಸ್ಯನಟ ಕುನಾಲ್ ಕಮ್ರಾ, ಏಕನಾಥ್ ಶಿಂಧೆ ವಿರುದ್ಧ ಅವಹೇಳನಕಾರಿ ಹಾಸ್ಯ ಮಾಡಿದ ಕಾರಣಕ್ಕೆ ನಿರೀಕ್ಷಣಾ ಜಾಮೀನು ಕೋರಿ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಮಹಾರಾಷ್ಟ್ರದಲ್ಲಿ ನಡೆದ ಪ್ರಕರಣಕ್ಕೆ ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೇಕೆ ಕಮ್ರಾ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಮಹಾರಾಷ್ಟ್ರ ಶಿವಸೇನೆ ನಾಯಕ, ಮಾಹಾರಾಷ್ಟ್ರ ಮಾಜಿ ಸಿಎಂ, ಸಚಿವ ಏಕನಾಥ್ ಶಿಂಧೆ ಸೇರಿದಂತೆ ಅನೇಕ ಗಣ್ಯರ ವಿರುದ್ಧ ಅವಹೇನಕಾರಿಯಾಗಿ ಹಾಸ್ಯ ಮಾಡಿ ಸಂಕಷ್ಟಕ್ಕೀಡಾಗಿರುವ ಕಾಮಿಡಿಯನ್ ಕುನಾಲ್ ಕಮ್ರಾ ಈಗ ನಿರೀಕ್ಷಣ ಜಾಮೀನು ಕೋರಿ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಕೆಲ ದಿನಗಳ ಹಿಂದೆ ಖ್ಯಾತ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಅವರು ಕಾರ್ಯಕ್ರಮವೊಂದರಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ದ್ರೋಹಿ ಎಂದು ಕರೆದಿದ್ದರು. ಇದರಿಂದ ಆಕ್ರೋಶಗೊಂಡ ಶಿವಸೇನೆ ಕಾರ್ಯಕರ್ತರು ಕುನಾಲ್ ಕಮ್ರಾ ಕಾರ್ಯಕ್ರಮ ನಡೆಸಿದ್ದ ಸ್ಟುಡಿಯೋವನ್ನು, ಸಭಾಂಗಣವನ್ನೇ ದಾಂಧಲೆ ನಡೆಸಿ ಧ್ವಂಸಗೊಳಿಸಿದ್ದರು.
ಪ್ರಸ್ತುತ ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರ ನಡೆಯುತ್ತಿದೆ. ಬಿಜೆಪಿ, ಶಿವಸೇನೆ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ(NCP) ದೊಂದಿಗೆ ಮೈತ್ರಿ ಸರ್ಕಾರ ನಡೆಯುತ್ತಿದೆ. ಬಿಜೆಪಿಯ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿಯೂ, ಶಿವಸೇನೆಯ ಏಕನಾಥ್ ಶಿಂಧೆ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಜಿತ್ ಪವಾರ್ ಉಪಮುಖ್ಯಮಂತ್ರಿಗಳಾಗಿಯೂ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರದಲ್ಲಿ ಹಾಸ್ಯನಟ ಕುನಾಲ್ ಕಮ್ರಾ ಇತ್ತೀಚೆಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಶಿವಸೇನೆಯನ್ನು ಒಡೆದು ಬಿಜೆಪಿ ಮೈತ್ರಿಕೂಟದಲ್ಲಿ ಏಕನಾಥ್ ಶಿಂಧೆ ಮುಖ್ಯಮಂತ್ರಿಯಾದದ್ದು ದ್ರೋಹ ಎಂದು ತೀವ್ರವಾಗಿ ಟೀಕಿಸಿದ್ದರು. ಈ ವಿಡಿಯೋ ವೈರಲ್ ಆಗಿ ಭಾರೀ ಸಂಚಲನ ಮೂಡಿಸಿತ್ತು.
ಕಮ್ರಾ ಹೇಳಿಕೆಯಿಂದ ಕುಪಿತಗೊಂಡ ಏಕನಾಥ್ ಶಿಂಧೆ ಅವರ ಶಿವಸೇನೆ ಕಾರ್ಯಕರ್ತರು ಆ ಕಾರ್ಯಕ್ರಮವನ್ನು ರೆಕಾರ್ಡ್ ಮಾಡಿದ ಸ್ಟುಡಿಯೋವನ್ನು ಧ್ವಂಸಗೊಳಿಸಿದರು. ನಂತರ ಮುಂಬೈ ಪೊಲೀಸರು ಕಮ್ರಾ ಅವರಿಗೆ ಎರಡು ಸಮನ್ಸ್ ಕಳುಹಿಸಿ ಮಾರ್ಚ್ 31 ರೊಳಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕುನಾಲ್ ಕಮ್ರಾ ಈಗ ಮದ್ರಾಸ್ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೇಕೆ?
ಕಮ್ರಾ ತಮಿಳುನಾಡಿನ ವಿಲ್ಲುಪುರಂನಲ್ಲಿ ಶಾಶ್ವತವಾಗಿ ವಾಸಿಸುತ್ತಿರುವುದರಿಂದ ಚೆನ್ನೈ ಹೈಕೋರ್ಟ್‌ನಲ್ಲಿ ಕುನಾಲ್ ಕಮ್ರಾ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿಯಲ್ಲಿ ತನ್ನ ಸ್ವಂತ ಊರು ವಿಲ್ಲುಪುರಂ ಎಂದು, ತಾನು ಮುಂಬೈಗೆ ಹೋದರೆ ಪೊಲೀಸರು ನನ್ನನ್ನು ಬಂಧಿಸುತ್ತಾರೆ, ಶಿವಸೇನೆ ಕಾರ್ಯಕರ್ತರಿಂದ ತನ್ನ ಜೀವಕ್ಕೆ ಅಪಾಯವಿದೆ ಹಾಗಾಗಿ ನನಗೆ ಇಲ್ಲಿ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿಯನ್ನು ತುರ್ತು ಪ್ರಕರಣವಾಗಿ ವಿಚಾರಣೆ ನಡೆಸಬೇಕು ಎಂದು ಅವರ ವಕೀಲರು ಚೆನ್ನೈ ಹೈಕೋರ್ಟ್ ನ್ಯಾಯಾಧೀಶ ಎಸ್. ಸುಂದರ್ ಮೋಹನ್ ಅವರಲ್ಲಿ ಮನವಿ ಮಾಡಿದರು.