
ನವದೆಹಲಿ: ಪಾಕಿಸ್ತಾನದಲ್ಲಿ ಈಗ ಸರ್ವಾಧಿಕಾರ ಇಲ್ಲದಿದ್ದರೂ, ಅಲ್ಲಿನ ಅತ್ಯಂತ ಶಕ್ತಿಶಾಲಿ ವ್ಯಕ್ತಿ ಪ್ರಧಾನಿಯಲ್ಲ, ಸೇನಾ ಮುಖ್ಯಸ್ಥ. ಪಾಕಿಸ್ತಾನದಲ್ಲಿ ಸೇನಾ ಮುಖ್ಯಸ್ಥರ ಸೂಚನೆ ಮೇರೆಗೆ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ. ಪ್ರಸ್ತುತ ಈ ಹುದ್ದೆಯನ್ನು ಹೊಂದಿರುವ ಜನರಲ್ ಅಸಿಮ್ ಮುನೀರ್ ಈ ವಿನಾಶಕಾರಿ ಶಕ್ತಿಯ ಕೇಂದ್ರಬಿಂದುವಾಗಿದ್ದಾರೆ. ಇಲ್ಲಿ ಸೇನೆಯೇ ದೇಶವನ್ನು ಮುನ್ನಡೆಸುತ್ತದೆ. ಜನರಲ್ ಅಸಿಮ್ ಮುನೀರ್ ಎರಡು ವರ್ಷಗಳ ಹಿಂದೆ ಪಾಕಿಸ್ತಾನದ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡು, ಅಂದಿನಿಂದ ಅತ್ಯಂತ ಕೆಳಮಟ್ಟದಲ್ಲಿ ಉಳಿದುಕೊಂಡು ಸೇನೆಯ ಮೇಲೆ ಬಿಗಿಯಾದ ಹಿಡಿತವನ್ನು ಕಾಯ್ದುಕೊಂಡಿದ್ದಾರೆ. ಸೇನೆಯ ಮೇಲೆ ಮಾತ್ರವಲ್ಲದೆ ನ್ಯಾಯಾಂಗ ಮತ್ತು ರಾಜಕೀಯ ನೀತಿಗಳ ಮೇಲೂ ಪರೋಕ್ಷವಾಗಿ ಪ್ರಭಾವ ಬೀರಿದ್ದಾರೆ ಎಂದು ವರದಿಯಾಗಿದೆ.
ಇಮಾಮ್‌ರ ಮಗ ಆಸಿಂ ಮುನೀರ್
ಜನರಲ್ ಮುನೀರ್ ಇಮಾಮ್‌ರ ಮಗ. ಆಸಿನ್ ಮುನಿರ್ ಕುಟುಂಬ ಸಹ ಭಾರತದಿಂದ ಪಾಕಿಸ್ತಾನಕ್ಕೆ ವಲಸೆ ಬಂದಿತ್ತು. ಅಧಿಕೃತ ತರಬೇತಿ ಕೇಂದ್ರದ ಮೂಲಕ ಸೈನ್ಯವನ್ನು ಪ್ರವೇಶಿಸಿ ಕ್ರಮೇಣ ಉನ್ನತ ಹುದ್ದೆಗಳಿಗೆ ಏರಿದರು. 2016ರಲ್ಲಿ, ಅವರು ಮಿಲಿಟರಿ ಗುಪ್ತಚರ ವಿಭಾಗದ ಮುಖ್ಯಸ್ಥರಾದರು.ಮುನೀರ್ 2018 ರಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ISI (ಇಂಟರ್-ಸರ್ವೀಸ್ ಇಂಟೆಲಿಜೆನ್ಸ್) ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಅವರು ಆ ಹುದ್ದೆಯಲ್ಲಿ ಹೆಚ್ಚು ಕಾಲ ಉಳಿಯಲಿಲ್ಲ. ಅಧಿಕಾರ ವಹಿಸಿಕೊಂಡ ಎಂಟು ತಿಂಗಳ ನಂತರ, ಆಗಿನ ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್ ಅವರ ಆದೇಶದ ಮೇರೆಗೆ ಮುನೀರ್ ಅವರ ಸ್ಥಾನಕ್ಕೆ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಅವರನ್ನು ನೇಮಿಸಲಾಯಿತು.
ಇಮ್ರಾನ್ ಖಾನ್ ಅವರನ್ನು ಅಧಿಕಾರದಿಂದ ತೆಗೆದುಹಾಕಿದ ನಂತರ ಮುನೀರ್ ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ಮಾಡಲಾಯಿತು. ಅವರ ಸೇನಾ ವೃತ್ತಿಜೀವನ 1986 ರಲ್ಲಿ ಪ್ರಾರಂಭವಾಯಿತು. ಮಂಗಳಾದಲ್ಲಿರುವ ಆಫೀಸರ್ಸ್ ಟ್ರೈನಿಂಗ್ ಸ್ಕೂಲ್ (ಒಟಿಎಸ್) ನಿಂದ ಪದವಿ ಪಡೆದ ನಂತರ ಮತ್ತು ಪ್ರತಿಷ್ಠಿತ ಸ್ವೋರ್ಡ್ ಆಫ್ ಆನರ್ ಗೆದ್ದ ನಂತರ, ಮುನೀರ್ ಅವರಿಗೆ ಫ್ರಂಟಿಯರ್ ಫೋರ್ಸ್ ರೆಜಿಮೆಂಟ್‌ನ 23 ನೇ ಬೆಟಾಲಿಯನ್‌ನಲ್ಲಿ ನಿಯೋಜನೆ ದೊರೆಯಿತು. 2022 ರಲ್ಲಿ ಪ್ರಧಾನಿ ಶಹಬಾಜ್ ಷರೀಫ್ ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ನೇಮಿಸಿದರು.
ಭಾರತದ ಬಗೆಗಿನ ಮುನೀರ್ ನಿಲುವು
ಆಸಿಮ್ ಮುನಿರ್ ಓರ್ವ ಮತಾಂಧ ಅನ್ನೋದು ಅವರ ಹೇಳಿಕೆಗಳಿಂದಲೇ ದೃಢಪಟ್ಟಿದೆ. ಭಾರತ ಮತ್ತು ಪಾಕಿಸ್ತಾನದ ಸಂಘರ್ಷದ ಮೂಲ ಕಾರಣ ಆಸಿಮ್ ಮುನಿರ್ ಎಂದು ಹೇಳಲಾಗುತ್ತದೆ. ನಮ್ಮ ಧರ್ಮಗಳು, ಸಂಸ್ಕೃತಿಗಳು, ಸಿದ್ಧಾಂತಗಳು ಮತ್ತು ಗುರಿಗಳು ವಿಭಿನ್ನವಾಗಿವೆ ಎಂಬ ಹೇಳಿಕೆಯನ್ನು ಮುನಿರ್ ಇತ್ತೀಚೆಗೆ ನೀಡಿದ್ದರು. ಪಾಕಿಸ್ತಾನದಲ್ಲಿ ರಾಷ್ಟ್ರೀಯತಾವಾದಿ ಭಾವನೆಗಳು ಭುಗಿಲೆದ್ದಿದ್ದು, "ನಾವು ನಮ್ಮ ಸೈನ್ಯದೊಂದಿಗೆ ನಿಲ್ಲುತ್ತೇವೆ" ಎಂಬಂತಹ ಘೋಷಣೆಗಳು ಮೊಳಗುತ್ತಿವೆ. ಇಮ್ರಾನ್ ಖಾನ್ ಮೇಲಿನ ಕಠಿಣ ಕ್ರಮ ಮತ್ತು ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಂದ ಅವರ ವರ್ಚಸ್ಸಿಗೆ ಆಗಿರುವ ಹೊಡೆತವನ್ನು ಸರಿಪಡಿಸಿಕೊಳ್ಳಲು ಮುನಿರ್ ಪ್ರಯತ್ನಿಸಿರೋದು ಕಂಡು ಬಂದಿತ್ತು
ಪಾಕಿಸ್ತಾನದ ಸೇನೆ ಬಳಿಯಲ್ಲಿವೆ 100ಕ್ಕೂ ಹೆಚ್ಚು ಕಂಪನಿಗಳು
ಭಾರತದಲ್ಲಿ ಟಾಟಾ, ಬಿರ್ಲಾ ಮತ್ತು ಅದಾನಿ, ಅಂಬಾನಿಗಳ ವ್ಯಾಪಾರ ಸಾಮ್ರಾಜ್ಯಗಳಂತೆ, ಪಾಕಿಸ್ತಾನದಲ್ಲಿ ಸೇನೆಯ ಬಳಿ 100ಕ್ಕೂ ಹೆಚ್ಚು ಕಂಪನಿಗಳಿವೆ. ಸೇನಾ ಮುಖ್ಯಸ್ಥ ಆಸಿಂ ಮುನೀರ್ ತಮ್ಮ ಸೈನಿಕರ ನಾಯಕತ್ವದ ಜೊತೆಗೆ ಯಾವುದೇ ಸಿಇಒ ರೀತಿಯಲ್ಲಿ 100ಕ್ಕೂ ಹೆಚ್ಚು ಕಂಪನಿಗಳನ್ನು ನಡೆಸುತ್ತಾರೆ.
ಪಾಕಿಸ್ತಾನಿ ಸೇನೆಯನ್ನು ಹೆಚ್ಚಾಗಿ ಪಾಕಿಸ್ತಾನದ ಅತಿದೊಡ್ಡ ವ್ಯಾಪಾರ ಗುಂಪು ಎಂದು ಕರೆಯಲಾಗುತ್ತದೆ. ವರದಿಗಳ ಪ್ರಕಾರ, ಪಾಕಿಸ್ತಾನದ ಸೇನೆ 100ಕ್ಕೂ ಹೆಚ್ಚು ಕಂಪನಿಗಳನ್ನು ನಡೆಸುತ್ತದೆ. ಇವುಗಳಿಂದ ಕೋಟಿಗಟ್ಟಲೆ ರೂಪಾಯಿ ಲಾಭ ಬರುತ್ತದೆ. ಪಾಕಿಸ್ತಾನ ಬಡವಾಗಿದ್ದರೂ, ಅದರ ಪ್ರಧಾನಿ ಇತರ ದೇಶಗಳಿಗೆ ಹೋಗಿ ಸಾಲ ಕೇಳುತ್ತಿದ್ದರೂ, ಅದರ ಸೇನೆ ಮತ್ತು ಸೇನೆಯ ಹಿರಿಯ ಅಧಿಕಾರಿಗಳು ಮಾತ್ರ ಕೋಟಿ ಕೋಟಿ ಹಣ ಸಂಪಾದಿಸುತ್ತಿದ್ದಾರೆ.
ಪಾಕಿಸ್ತಾನದ ಸೇನೆ ನಡೆಸುವ 100ಕ್ಕೂ ಹೆಚ್ಚು ಕಂಪನಿಗಳಿಂದ ಸೇನಾ ಮುಖ್ಯಸ್ಥರಂತಹ ಉನ್ನತ ಅಧಿಕಾರಿಗಳಿಗೆ ಭಾರಿ ಆದಾಯ ಬರುತ್ತದೆ. ಪಾಕಿಸ್ತಾನದಲ್ಲಿ ಸೇನಾ ಮುಖ್ಯಸ್ಥರಾಗುವುದು ಕೇವಲ ಸೇನಾ ಕೆಲಸವಲ್ಲ. ಇದು ದೊಡ್ಡ ನಿಗಮದ ಸಿಇಒ ಆಗುವಂತೆಯೇ ಇರುತ್ತದೆ. ಪಾಕಿಸ್ತಾನದ ಸೇನೆಯ ವ್ಯಾಪ್ತಿ ರಕ್ಷಣೆಗಿಂತ ಹೆಚ್ಚು ವಿಸ್ತಾರವಾಗಿದೆ. ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ತನ್ನದೇ ಆದ ನಿಯಂತ್ರಣವನ್ನು ಪಾಕಿಸ್ತಾನದ ಸೇನೆ ಹೊಂದಿರುತ್ತದೆ. ಇದು ಫೌಜಿ ಫೌಂಡೇಶನ್, ಆರ್ಮಿ ವೆಲ್ಫೇರ್ ಟ್ರಸ್ಟ್, ಶಾಹೀನ್ ಫೌಂಡೇಶನ್ ಮತ್ತು ಬಹರಿಯಾ ಫೌಂಡೇಶನ್‌ನಂತಹ ಹಲವು ದೊಡ್ಡ ಸಂಸ್ಥೆಗಳನ್ನು ನಡೆಸುತ್ತದೆ. ಇವುಗಳನ್ನು ಕಲ್ಯಾಣ ಸಂಸ್ಥೆಗಳು ಎಂದು ಕರೆಯಲಾಗುತ್ತದೆಯಾದರೂ, ಇವು ವ್ಯಾಪಾರ ನಿಗಮಗಳಂತೆ ಕಾರ್ಯನಿರ್ವಹಿಸುತ್ತವೆ.
8.42 ಲಕ್ಷ ಕೋಟಿ ರೂ. ಆಗಿರಬಹುದು ಪಾಕಿಸ್ತಾನಿ ಸೇನೆಯ ವ್ಯಾಪಾರ
ಪಾಕಿಸ್ತಾನಿ ಲೇಖಕಿ ಆಯಿಷಾ ಸಿದ್ದಿಕಾ ತಮ್ಮ 'ಮಿಲಿಟರಿ ಇಂಕ್: ಇನ್ಸೈಡ್ ಪಾಕಿಸ್ತಾನ್ಸ್ ಮಿಲಿಟರಿ ಎಕಾನಮಿ' ಪುಸ್ತಕದಲ್ಲಿ ಸೇನೆಯ ವ್ಯಾಪಾರದ ಬೇರುಗಳು ಎಷ್ಟು ಆಳವಾಗಿವೆ ಎಂದು ವಿವರಿಸಿದ್ದಾರೆ. ಸಿಮೆಂಟ್ ಮತ್ತು ಬ್ಯಾಂಕಿಂಗ್‌ನಿಂದ ಹಿಡಿದು ಡೈರಿ, ಸಾರಿಗೆ ಮತ್ತು ರಿಯಲ್ ಎಸ್ಟೇಟ್‌ವರೆಗೆ, ಸೇನೆಯ ಕೈ ಹಲವು ಕ್ಷೇತ್ರಗಳಲ್ಲಿದೆ. ಕರಾಚಿ, ಲಾಹೋರ್ ಮತ್ತು ಇಸ್ಲಾಮಾಬಾದ್‌ನಂತಹ ನಗರಗಳಲ್ಲಿ ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಪಡೆದ ಭೂಮಿಯನ್ನು ಲಾಭದಾಯಕ ವಸತಿ ಯೋಜನೆಗಳಾಗಿ ಪರಿವರ್ತಿಸಲಾಗಿದೆ.
ಸೇನೆ ನಡೆಸುತ್ತಿರುವ ಅತ್ಯಂತ ಪ್ರಸಿದ್ಧ ರಿಯಲ್ ಎಸ್ಟೇಟ್ ಬ್ರ್ಯಾಂಡ್ ಡಿಫೆನ್ಸ್ ಹೌಸಿಂಗ್ ಅಥಾರಿಟಿ (ಡಿಎಚ್‌ಎ)ಯ ಮೌಲ್ಯ ಶತಕೋಟಿ ಡಾಲರ್‌ಗಳಲ್ಲಿದೆ. ಅಂದಾಜಿನ ಪ್ರಕಾರ ಸೇನೆಯ ವ್ಯಾಪಾರದ ಒಟ್ಟು ಮೌಲ್ಯ 40 ರಿಂದ 100 ಶತಕೋಟಿ ಅಮೇರಿಕನ್ ಡಾಲರ್ (3.37 ರಿಂದ 8.42 ಲಕ್ಷ ಕೋಟಿ ರೂ.) ನಡುವೆ ಇರಬಹುದು. ಪಾಕಿಸ್ತಾನಿ ಸೇನಾ ಮುಖ್ಯಸ್ಥ ಆಸಿಂ ಮುನೀರ್ ಅವರ ಆಸ್ತಿಯ ಬಗ್ಗೆ ಹೇಳುವುದಾದರೆ, ಅಧಿಕೃತವಾಗಿ ಸುಮಾರು 6.7 ಕೋಟಿ ರೂ. ಇದೆ. ಆದಾಗ್ಯೂ, ಅವರ ನಿಜವಾದ ಆಸ್ತಿ ಇದಕ್ಕಿಂತ ಹೆಚ್ಚಾಗಿರಬಹುದು ಎಂದು ಅಂದಾಜಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ