
ನವದೆಹಲಿ (ನವೆಂಬರ್ 21, 2023): ತಮಿಳುನಾಡಿನ ರಾಜ್ಯಪಾಲ ಆರ್.ಎನ್.ರವಿ ಅವರು ದೀರ್ಘ ಅವಧಿಯಿಂದ ಕೆಲ ಮಸೂದೆಗಳಿಗೆ ಸಹಿ ಮಾಡದೆ ಉಳಿಸಿಕೊಂಡಿರುವ ಕ್ರಮವನ್ನು ಮತ್ತೊಮ್ಮೆ ತೀವ್ರ ತರಾಟೆ ತೆಗೆದುಕೊಂಡಿರುವ ಸುಪ್ರೀಂಕೋರ್ಟ್, ‘ಮೂರು ವರ್ಷದಿಂದ ರಾಜ್ಯಪಾಲರು ಏನು ಮಾಡುತ್ತಿದ್ದರು’ ಎಂದು ಪ್ರಶ್ನಿಸಿದೆ.
ರಾಜ್ಯಪಾಲರು ಮಸೂದೆಗಳಿಗೆ ಸಹಿ ಮಾಡುವುದಕ್ಕೆ ವಿಳಂಬ ಮಾಡುತ್ತಿರುವುದನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಬಳಿಕ ಇತ್ತೀಚೆಗಷ್ಟೇ ಹತ್ತು ಮಸೂದೆಗಳನ್ನು ರಾಜ್ಯಪಾಲರು ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದರು. ಸಿಟ್ಟಿಗೆದ್ದ ತಮಿಳುನಾಡು ಸರ್ಕಾರ ಶನಿವಾರ ವಿಧಾನಸಭೆಯ ವಿಶೇಷ ಅಧಿವೇಶನ ನಡೆಸಿ ಎಲ್ಲಾ ಹತ್ತು ಮಸೂದೆಗಳನ್ನು ಮರು ಅಂಗೀಕಾರ ಮಾಡಿ ರಾಜ್ಯಪಾಲರಿಗೆ ಕಳುಹಿಸಿತ್ತು.
ಇದನ್ನು ಓದಿ: ಕೇಂದ್ರಕ್ಕೆ ಇಂದು ಸುಪ್ರೀಂ ಪರೀಕ್ಷೆ: ಕೇಂದ್ರ ಸರ್ಕಾರ, ರಾಜ್ಯಪಾಲರ ವಿರುದ್ಧ ಸಲ್ಲಿಸಿದ ಅರ್ಜಿ ವಿಚಾರಣೆ
ಈ ನಡುವೆ, ಸೋಮವಾರ ತಮಿಳುನಾಡಿನ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ‘ಈ ಮಸೂದೆಗಳು 2020ರಿಂದ ಬಾಕಿಯಿವೆ. 3 ವರ್ಷದಿಂದ ರಾಜ್ಯಪಾಲರು ಏನು ಮಾಡುತ್ತಿದ್ದರು? ವಿಧಾನಸಭೆ ಮತ್ತೆ ಈ ಮಸೂದೆಗಳನ್ನು ಅಂಗೀಕರಿಸಿ ರಾಜ್ಯಪಾಲರಿಗೆ ಕಳುಹಿಸಿದೆ. ರಾಜ್ಯಪಾಲರು ಏನು ಮಾಡುತ್ತಾರೋ ನೋಡೋಣ’ ಎಂದು ಕಟುವಾಗಿ ಹೇಳಿತು.
ಇದೇ ವೇಳೆ, ಪಂಜಾಬ್ ಹಾಗೂ ಕೇರಳ ಸರ್ಕಾರಗಳು ತಮ್ಮ ರಾಜ್ಯಪಾಲರ ವಿರುದ್ಧ ಸಲ್ಲಿಸಿರುವ ಇದೇ ರೀತಿಯ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ‘ರಾಜ್ಯಪಾಲರು ಮಸೂದೆಗಳಿಗೆ ಸಹಿ ಹಾಕದೆ, ಮರಳಿ ವಿಧಾನಸಭೆಗೂ ಕಳುಹಿಸದೆ ಹಾಗೇ ಬಾಕಿ ಇರಿಸಿಕೊಳ್ಳಬಹುದೇ’ ಎಂದು ಪ್ರಶ್ನಿಸಿತು.
ಇದನ್ನೂ ಓದಿ: ರಾಜ್ಯಪಾಲರು ರಾಜಕೀಯ ಮಾತನಾಡಬಾರದು: ತಮಿಳುನಾಡು ಗವರ್ನರ್ ವಿರುದ್ಧ ಅಣ್ಣಾಮಲೈ ಕಿಡಿ
ಕೇಂದ್ರ, ಕೇರಳ ಗೌರ್ನರ್‌ಗೆ ನೋಟಿಸ್:
ಈ ನಡುವೆ, ‘ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು, ಕೇರಳ ವಿಧಾನಸಭೆ ಅಂಗೀಕರಿಸಿರುವ ಹಲವಾರು ಮಸೂದೆಗಳಿಗೆ ಸಹಿ ಹಾಕದೆ ದೀರ್ಘಕಾಲದಿಂದ ಬಾಕಿಯುಳಿಸಿಕೊಂಡಿದ್ದಾರೆ’ ಎಂಬ ಕೇರಳ ಸರ್ಕಾರದ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಈ ಕುರಿತು ಪ್ರತಿಕ್ರಿಯೆ ಕೇಳಿ ಕೇಂದ್ರ ಸರ್ಕಾರ ಹಾಗೂ ಕೇರಳ ರಾಜ್ಯಪಾಲರ ಕಚೇರಿಗೆ ನೋಟಿಸ್ ಜಾರಿಗೊಳಿಸಿತು.
ಇದನ್ನೂ ಓದಿ: ತಮಿಳ್ನಾಡಲ್ಲಿ ಸರ್ಕಾರ vs ಗೌರ್ನರ್: ಸರ್ಕಾರ ಬರೆದುಕೊಟ್ಟ ಭಾಷಣ ಓದದ ರಾಜ್ಯಪಾಲರ ವಿರುದ್ಧ ನಿರ್ಣಯ..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ