
ಕೋಲ್ಕತಾ: ವಕ್ಫ್ ತಿದ್ದುಪಡಿ ಕಾಯ್ದೆ ಅಧಿಕೃತವಾಗಿ ದೇಶದಲ್ಲಿ ಜಾರಿಗೆ ತಂದ ಬೆನ್ನಲ್ಲೇ ‘ಪಶ್ಚಿಮ ಬಂಗಾಳದಲ್ಲಿ ವಕ್ಫ್ ಕಾಯ್ದೆಯನ್ನು ಜಾರಿ ಮಾಡುವುದಿಲ್ಲ’ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ.
ಜೈನ ಧರ್ಮೀಯರ ಸಭೆಯಲ್ಲಿ ಮಾತನಾಡಿದ ಅವರು, ‘ವಕ್ಫ್ ಕಾಯ್ದೆ ಜಾರಿಗೆ ಬಂದಿರುವುದರಿಂದ ನೀವೆಲ್ಲ ನೊಂದಿದ್ದೀರಿ ಎನ್ನುವುದು ಗೊತ್ತಿದೆ. ನಂಬಿಕೆ ಇಡಿ. ಬಂಗಾಳದಲ್ಲಿ ಒಡೆದು ಆಳುವಂಥದ್ದು ಏನೂ ನಡೆಯಲ್ಲ, ಎಲ್ಲರೂ ಒಟ್ಟಿಗೆ ಇರಬೇಕು ಎನ್ನುವ ಸಂದೇಶವನ್ನು ನೀವು ರವಾನಿಸುತ್ತೀರಿ.’ ಎಂದರು.
‘ಬಾಂಗ್ಲಾ ದೇಶದ ಗಡಿ ಪ್ರದೇಶಗಳಲ್ಲಿನ ಪರಿಸ್ಥಿತಿ ನೋಡಿ. ಈ ವಕ್ಫ್ ಮಸೂದೆ ಅಂಗೀಕಾರವಾಗಬಾರದಿತ್ತು. ಬಂಗಾಳದಲ್ಲಿ ಶೇ.33ರಷ್ಟು ಅಲ್ಪಸಂಖ್ಯಾತರಿದ್ದಾರೆ. ಅವರೊಂದಿಗೆ ನಾನು ಏನು ಮಾಡಲಿ? ಕೆಲವರು ನಿಮ್ಮನ್ನು ಹೋರಾಡಲು ಪ್ರಚೋದಿಸುತ್ತಾರೆ. ಆದರೆ ನೀವು ಅದನ್ನು ಮಾಡಬೇಡಿ. ನೆನಪಿಡಿ ದೀದಿ ನಿಮ್ಮನ್ನು, ನಿಮ್ಮ ಆಸ್ತಿಯನ್ನು ರಕ್ಷಿಸುತ್ತಾರೆ. ನೀವು ನನ್ನನ್ನು ಗುಂಡಿಕ್ಕಿ ಕೊಂದರೂ ಸಹ ನೀವು ನನ್ನನ್ನು ಏಕತೆಯಿಂದ ಬೇರ್ಪಡಿಸಲು ಸಾಧ್ಯವಾಗುವುದಿಲ್ಲ. ಎಲ್ಲ ಜಾತಿ, ಧರ್ಮಗಳು ಮಾನವೀಯತೆಗಾಗಿ ಪ್ರಾರ್ಥಿಸುತ್ತವೆ ಮತ್ತು ನಾನು ಅವರೆಲ್ಲರನ್ನೂ ಪ್ರೀತಿಸುತ್ತೇನೆ’ ಎಂದರು.
ಸಿಬಿಐ ತನಿಖೆ ರದ್ದತಿಗೆ ಸುಪ್ರೀಂ ಆದೇಶ
ಇತ್ತೀಚೆಗೆ ನೇಮಕಾತಿ ಅಕ್ರಮದ ಕಾರಣ ನೀಡಿ ಪ.ಬಂಗಾಳದ 25 ಸಾವಿರ ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಆದೇಶಿಸಿದ್ದ ಸುಪ್ರೀಂ ಕೋರ್ಟ್, ಮಂಗಳವಾರ ಮಮತಾ ಬ್ಯಾನರ್ಜಿ ಸರ್ಕಾರ ಕೊಂಚ ನಿರಾಳ ಆಗುವಂಥ ತೀರ್ಪು ಪ್ರಕಟಿಸಿದೆ. ವಜಾ ಆಗಿದ್ದ 25 ಸಾವಿರ ಶಿಕ್ಷಕರಿಗೆ ಮತ್ತೆ ನೌಕರಿ ನೀಡುವ ಉದ್ದೇಶದಿಂದ ಹೆಚ್ಚುವರಿ ತಾತ್ಕಾಲಿಕ ಹುದ್ದೆಗಳನ್ನು ಸೃಷ್ಟಿಸುವ ದೀದಿ ಸರ್ಕಾರದ ನಿರ್ಧಾರದ ಸಿಬಿಐ ಆರಂಭಿಸಿದ್ದ ತನಿಖೆಯನ್ನು ಕೋರ್ಟ್ ರದ್ದುಗೊಳಿಸಿದೆ.
ಇತ್ತೀಚೆಗೆ ಈ ಹೆಚ್ಚುವರಿ ಹುದ್ದೆ ಸೃಷ್ಟಿಸುವ ಮಮತಾ ಸಚಿವ ಸಂಪುಟದ ನಿರ್ಣಯದ ವಿರುದ್ಧ ಕಲ್ಕತ್ತಾ ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಮಮತಾ ಸುಪ್ರೀಂ ಮೆಟ್ಟಿಲೇರಿದ್ದರು. ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ನ್ಯಾ। ಸಂಜೀವ್ ಖನ್ನಾ ನೇತೃತ್ವದ ಪೀಠ, ‘ನ್ಯಾಯಾಲಯಗಳು ಸಂಪುಟ ನಿರ್ಧಾರಗಳನ್ನು ತನಿಖೆ ಮಾಡುವುದನ್ನು ನಿರ್ಬಂಧಿಸಲಾಗಿದೆ ಮತ್ತು ಆದೇಶವು ತಪ್ಪಾಗಿದೆ’ ಎಂದಿತು. ಈ ಹೆಚ್ಚುವರಿ ಹುದ್ದೆಗಳು ತಾತ್ಕಾಲಿಕವಾಗಿದ್ದು, ಕಾಯಂ ನೌಕರಿ ಸಿಗುವವರೆಗೆ ವಜಾ ಆದವರಿಗೆ ನೀಡಲು ಉದ್ದೇಶಿಸಲಾಗಿತ್ತು.
ಇದನ್ನೂ ಓದಿ: Waqf Bill 2025: ಕೈ, ಎಂಐಎಂ ಸಂಸದರ ಬೆನ್ನಲ್ಲೇ ವಕ್ಫ್ ಮಸೂದೆ ವಿರುದ್ಧ ಮತ್ತಿಬ್ಬರು ಸುಪ್ರೀಂಗೆ;! ಆಕ್ಷಪಣೆಗಳೇನು?
ರಾಹುಲ್ ಆಕ್ರೋಶ
ಇತ್ತೀಚೆಗೆ ಜಾರಿಗೆ ಬಂದ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ‘ಸಂವಿಧಾನ ವಿರೋಧಿ’ ಎಂದು ಕರೆದಿದ್ದಾರೆ. ಎಐಸಿಸಿ ಅಧಿವೇಶನದಲ್ಲಿ ಮಾತನಾಡಿದ ಅವರು, ‘ವಕ್ಫ್ ಕಾಯ್ದೆಯು ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದ್ದು, ಸಂವಿಧಾನ ವಿರೋಧಿಯೂ ಆಗಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಕ್ರೈಸ್ತರು, ಸಿಖ್ಖರು ಸೇರಿ ಅನ್ಯ ಅಲ್ಪಸಂಖ್ಯಾತರ ಹಕ್ಕುಗಳನ್ನು ಗುರಿಯಾಗಿಸಲಿದೆ’ ಎಂದು ವಾಗ್ದಾಳಿ ನಡೆಸಿದರು ಜೊತೆಗೆ, ಜಾತಿ ಗಣತಿ ನಡೆಸುವಂತೆಯೂ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಇದೇ ವೇಳೆ, ಅಮೆರಿಕದ ಹೇರಿರುವ ಪ್ರತಿತೆರಿಗೆಯ ಬಗ್ಗೆ ಮಾತನಾಡುತ್ತಾ, ‘ಟ್ರಂಪ್ ತೆರಿಗೆ ಘೋಷಿಸಿದಾಗ ಪ್ರಧಾನಿ ಮೋದಿ ಏನೂ ಮಾತಾಡಲಿಲ್ಲ. ಬದಲಿಗೆ ಜನರ ಗಮನವನ್ನು ಬೇರೆಡೆ ಸೆಳೆಯಲು ಸಂಸತ್ತಿನಲ್ಲಿ 2 ದಿನ ನಾಟಕ ಮಾಡಿದರು. ಅತ್ತ ಅಪಾಯಕಾರಿ ಹೇಳಿಕೆಗಳನ್ನು ನೀಡುವ ಬಾಂಗ್ಲಾ ನಾಯಕರೊಂದಿಗೇ ಕುಳಿತಿದ್ದಾರೆ’ ಎಂದು ಟೀಕಿಸಿದರು.
ವಕ್ಫ್ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಸಿಂದುತ್ವ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಅರ್ಜಿಗಳ ವಿಚಾರಣೆ ಏ.15ರಂದು ನಡೆಯುವ ಸಾಧ್ಯತೆಯಿದೆ.
ಇದನ್ನೂ ಓದಿ: ವಕ್ಫ್‌ಗೆ ಬೆಂಬಲಿಸೋದಾ ಬೇಡ್ವಾ? ಕಾಂಗ್ರೆಸ್ ಕಾರ್ಯಕರ್ತರಲ್ಲೇ ಗೊಂದಲ: ರಾಹುಲ್ ಭೇಟಿ ಬೆನ್ನಲೇ ಹೊಡೆದಾಟ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ