ಯುವತಿಯೊಬ್ಬಳು ರೀಲ್ಸ್ ಮಾಡುತ್ತಿದ್ದಾಗ ಕೋತಿಯೊಂದು ಆಕೆಯ ಕೂದಲನ್ನು ಹಿಡಿದು ಎಳೆದಾಡಿದ ವಿಡಿಯೋ ವೈರಲ್ ಆಗಿದೆ. ಟ್ರೆಂಡಿಂಗ್ ಹಾಡಿಗೆ ರೀಲ್ಸ್ ಮಾಡಲು ಮುಂದಾದಾಗ ಈ ಘಟನೆ ನಡೆದಿದೆ.
ಇತ್ತೀಚೆಗೆ ರೀಲ್ಸ್ ಮಾಡುವವರ ಹಾವಳಿ ತೀವ್ರವಾಗಿದೆ. ಸಾರ್ವಜನಿಕ ಸ್ಥಳಗಳು, ದೇವಸ್ಥಾನ ಆಸ್ಪತ್ರೆ ರಸ್ತೆ ಹೀಗೆ ಎಲ್ಲೆಂದರಲ್ಲಿ ಸ್ಟ್ಯಾಂಡ್ ಹಾಕಿ ಕ್ಯಾಮರಾ ಇಟ್ಟು ರೀಲ್ಸ್ ಮಾಡುತ್ತಾರೆ. ಕೆಲ ದಿನಗಳ ಹಿಂದಷ್ಟೇ ಪೊಲೀಸ್ ಪೇದೆಯೊಬ್ಬರ ಪತ್ನಿ ಮಾಡಿದ ರೀಲ್ಸ್ ಅವಾಂತರದಿಂದಾಗಿ ಪೊಲೀಸ್ ಪೇದೆಗೆ ಅಮಾನತಿನ ಶಿಕ್ಷೆ ಸಿಕ್ಕಿದ ಘಟನೆ ನಡೆದಿತ್ತು. ಹೀಗಿರುವಾಗ ಇಲ್ಲೊಂದು ಕಡೆ ಕೋತಿಯೊಂದು ರೀಲ್ಸ್ ಮಾಡ್ತಿದ್ದ ಯುವತಿಯೊಬ್ಬಳ ಕೂದಲು ಹಿಡಿದು ಎಳೆದಾಡಿದ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟ್ವಿಟ್ಟರ್‌ನ ಘರ್ ಘರ್‌ಕೆ ಕಲೇಶ್ ಎಂಬ ಪೇಜ್‌ನಿಂದ ಈ ವೀಡಿಯೋ ವೈರಲ್ ಆಗಿದ್ದು, ವೀಡಿಯೋದಲ್ಲಿ ಯುವತಿಯೊಬ್ಬಳು ಮನೆಯ ಮಹಡಿಯ ಮೇಲೆ ಪ್ರಸ್ತುತ ಟ್ರೆಂಡಿಂಗ್‌ನಲ್ಲಿ ರಾಜಾ ಜೀ ಹಾಡಿಗೆ ರೀಲ್ಸ್ ಮಾಡಲು ಮುಂದಾಗಿದ್ದಾಳೆ. ಕಪ್ಪು ಟೀ ಶರ್ಟ್, ನೀಲಿ ಜೀನ್ಸ್ ಪ್ಯಾಂಟ್ ತೊಟ್ಟ ಆಕೆ ಡಾನ್ಸ್ ಮಾಡಲು ಶುರು ಮಾಡಿದ್ದರೆ, ಪಕ್ಕದಲ್ಲೇ ಕಟ್ಟೆ ಮೇಲೆ ಕೋತಿಯೊಂದು ಕುಳಿತಿದೆ. ಈಕೆ ಡಾನ್ಸ್ ಮಾಡಲು ಶುರು ಮಾಡುತ್ತಿದ್ದಂತೆ ಈ ಕೋತಿ ಆಕೆಯ ಕೂದಲನ್ನು ಹಿಡಿದು ಎಳೆದಾಡಿದೆ. ಏಪ್ರಿಲ್ 1 ರಂದು ಪೋಸ್ಟ್ ಆದ 13 ಸೆಕೆಂಡ್‌ಗಳ ಈ ವೀಡಿಯೋವನ್ನು 3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಮೊದಲಿಗೆ ಕೋತಿಯ ಜೊತೆ ಸ್ನೇಹಿತೆಯಂತೆ ಮಾತನಾಡಲು ಹೋದ ಹಾಕಿ ಎರಡು ಹೆಜ್ಜೆ ಹಾಕಿಕೊಂಡು ಕೋತಿಯತ್ತ ಕೈ ಬೀಸಿದ್ದಾಳೆ, ನೋಡುವಷ್ಟು ನೋಡಿದ ಕೋತಿ ಸೀದಾ ಆಕೆಯ ತಲೆಕೂದಲಿಗೆ ಕೈ ಹಾಕಿ ಹಿಡಿದೆಳೆದಿದೆ.
ಕೂಡಲೇ ಕೋತಿಯ ಕೈಯಿಂದ ಬಿಡಿಸಿಕೊಂಡು ಹುಡುಗಿ ದೂರ ಹೋಗಿದ್ದಾಳೆ.
ಈ ವೀಡಿಯೋ ನೋಡಿದ ನೆಟ್ಟಿಗರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಇನ್ನು ಸ್ವಲ್ಪ ಕುಣಿದಿದ್ದರೆ ಕೋತಿ ಈಕೆಗೆ ಹಿಡಿದ ದೆವ್ವ ಬಿಡಿಸುತ್ತಿತ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಬಹುಶ: ಆಕೆಯ ನೃತ್ಯ ಕೋತಿಗೆ ಇಷ್ಟವಾಗಿಲ್ಲದಿರಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಭಜರಂಗ ಬಲಿಗೂ ಈ ರೀಲ್ಸ್ ಮಾಡೋವರನ್ನ ನೋಡಿ ಸುಸ್ತಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.
Kalesh b/w a Monkey and a Reel Dancer: pic.twitter.com/IaPaHcHZ8w
— Ghar Ke Kalesh (@gharkekalesh)