ಕೇರಳದಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ್ದು, ಆಕೆಯ ಸಹಪಾಠಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣದ ಪ್ರಭಾವಕ್ಕೆ ಒಳಗಾಗುತ್ತಿರುವ ಮಕ್ಕಳು ಅಡ್ಡದಾರಿ ಹಿಡಿಯುತ್ತಿದ್ದು, ಪ್ರೀತಿ ಪ್ರೇಮದ ಹೆಸರಿನಲ್ಲಿ ತಮ್ಮ ಭವಿಷ್ಯದ ಮೇಲೆ ತಾವೇ ಚಪ್ಪಡಿ ಕಲ್ಲು ಎಳೆದುಕೊಳ್ಳುತ್ತಿದ್ದಾರೆ. ಹೀಗೆ ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕಿದ ಮಕ್ಕಳನ್ನು ನಿಯಂತ್ರಿಸಲಾಗದೇ ಪೋಷಕರು ವಯಸ್ಸು ಮೀರುವ ಮೊದಲೇ ಮದುವೆ ಮಾಡುತ್ತಿದ್ದಾರೆ. ಇದರಿಂದ ಬಾಲ್ಯ ವಿವಾಹಗಳ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ ಎಂಬ ವರದಿಯೊಂದು ಪ್ರಸಾರವಾಗಿತ್ತು. ಈ ವರದಿಯ ಬೆನ್ನಲ್ಲೇ ಈಗ ಕಾಲೇಜು ಓದುವ ಯುವತಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ ಪ್ರಕರಣವೊಂದು ಕೇರಳದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಸಹಪಾಠಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೇರಳದ ಆಲಪ್ಪುಳದಲ್ಲಿ ಈ ಘಟನೆ ನಡೆದಿದೆ. ಆಲಪ್ಪುಳ ನಗರದ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ಲಸ್ ಒನ್(ಪ್ರಥಮ ಪಿಯುಸಿ) ಓದುತ್ತಿದ್ದ ವಿದ್ಯಾರ್ಥಿನಿ ಕಳೆದ ತಿಂಗಳು ಗಂಡು ಮಗುವಿಗೆ ಜನ್ಮ ನೀಡಿದ್ದಳು. ಪ್ರೇಯಸಿ ಮಗುವಿಗೆ ಜನ್ಮ ನೀಡಿದ ವಿಚಾರ ತಿಳಿಯುತ್ತಿದ್ದಂತೆ ಗೆಳೆಯ ಪರಾರಿಯಾಗಿದ್ದ. ಇದಾದ ನಂತರ ಪ್ರಕರಣ ದಾಖಲಿಸಿಕೊಂಡ ಆಲಪ್ಪುಳ ಸೌತ್ ಪೊಲೀಸರು ಬಾಲಕಿಯ ಗೆಳೆಯನನ್ನು ಬಂಧಿಸಿದ್ದಾರೆ. ಬಾಲಕನೂ ಕೂಡ ಅಪ್ರಾಪ್ತನಾಗಿದ್ದು, ಆತನಿಗೆ 17 ವರ್ಷ ವಯಸ್ಸಾಗಿದೆ.
ಇತ್ತ ಆಲಪ್ಪುಳದ ಖಾಸಗಿ ಆಸ್ಪತ್ರೆಯಲ್ಲಿ ಪ್ಲಸ್ ವನ್ ವಿದ್ಯಾರ್ಥಿನಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಇದಾದ ನಂತರ ತಲೆಮರೆಸಿಕೊಂಡಿದ್ದ ಆಕೆಯ 17 ವರ್ಷ ಪ್ರಾಯದ ಗೆಳೆಯನನ್ನು ಪೋಕ್ಸೋ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿದ್ದಾರೆ. ಕೆಲ ತಿಂಗಳ ಹಿಂದೆ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್‌ನಲ್ಲಿಯೇ ಮಗುವಿಗೆ ಜನ್ಮ ನೀಡಿದ ಘಟನೆ ಕರ್ನಾಟಕದಲ್ಲಿ ನಡೆದಿತ್ತು.